ಮಂಗಳವಾರ, ನವೆಂಬರ್ 12, 2019
28 °C

ಈ ಬಾವಿಯಲ್ಲಿ ಬತ್ತದ ಸಿಹಿನೀರು

Published:
Updated:

ಸಂತೇಬೆನ್ನೂರು: ಬರಗಾಲದ ಬವಣೆ, ಎಲ್ಲೆಡೆ ನೀರಿಗಾಗಿ ಹಪಾಹಪಿ, ಅಂತರ್ಜಲ ಪಾತಾಳ ಕಂಡ ಭೀಕರ ಸ್ಥಿತಿ, ಕುಡಿಯುವ ನೀರಿಗೆ ತತ್ವಾರ ಪ್ರಸ್ತುತ ಹರಿದಾಡುವ ಸುದ್ದಿ. ಇದಕ್ಕೆ ವ್ಯತಿರಿಕ್ತ ಎಂಬಂತೆ ಇಲ್ಲಿನ ಬಾವಿಯೊಂದರಲ್ಲಿ ಬಿರು ಬೇಸಗೆಯಲ್ಲೂ ಸಮೃದ್ಧ ಅಂತರ್ಜಲದಿಂದ ತುಂಬಿ ಆಶ್ಚರ್ಯ ಉಂಟುಮಾಡಿದೆ. ಇಲ್ಲಿನ ಸಾರ್ವಜನಿಕರಿಗೆ ಇದು `ವ್ಯವಸಾಯದ ಬಾವಿ' ಎಂದು ಚಿರಪರಿಚಿತ. ಇದರ ಆಳ ಕೇವಲ 60 ಅಡಿ. ಈಗಲೂ 40 ಅಡಿಯಷ್ಟು ನೀರು ತುಂಬಿದೆ.50 ವರ್ಷಗಳಿಗಿಂತ ಹಿಂದಿನಿಂದಲೂ ಗ್ರಾಮದ ನೀರಿನ ಆಸರೆ. ಅದು 70ರ ದಶಕದ ಮಧ್ಯಭಾಗ ಭೀಕರ ಬರಗಾಲ. ಗ್ರಾಮದ ಕೆರೆ-ಕಟ್ಟೆ, ಬಾವಿ, ಪುಷ್ಕರಣಿ ಒಣಗಿ ನಿಂತು ನೀರಿಗಾಗಿ ಬವಣೆ. ಕೊಳವೆ ಬಾವಿಗಳಲ್ಲಿ ಫ್ಲೋರೈಡ್‌ಯುಕ್ತ ಉಪ್ಪು ನೀರು. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಗ್ರಾಮದ ಕುಡಿಯುವ ನೀರಿನ ಆಸರೆಯಾಗಿತ್ತು. ಈ ಸಿಹಿನೀರಿನ ಬಾವಿ. ಮುಂಜಾನೆ 4 ಗಂಟೆಗೆ ಜನ ಜಂಗುಳಿ. ಹಗ್ಗ ಹಾಕಿ ನೀರೆಳೆದು ಹೊತ್ತು ತರುವ ಕಾಲ.ಬೆಳಿಗ್ಗೆ 8ರ ವೇಳೆಗೆ ಬಾವಿಯನ್ನು ಇಳಿದು ನೀರು ಮೊಗೆದು ಕೊಡ ತುಂಬಿಸಿಕೊಳ್ಳುತ್ತಿದ್ದ ದೃಶ್ಯ ಇಂದಿಗೂ ಕಣ್ಣ ಮುಂದೆ ಇದೆ. ಭೀಕರ ಪರಸ್ಥಿತಿಯಲ್ಲಿಯೂ ಕುಡಿಯುವ ಫ್ಲೋರೈಡ್ ಮುಕ್ತ ನೀರಿನ ಏಕೈಕ ಸೆಲೆ. ಸದ್ಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿದೆ. ಗ್ರಾಮದಲ್ಲಿ ಓವರ್‌ಹೆಡ್ ಟ್ಯಾಂಕ್‌ನಲ್ಲಿ ವ್ಯವಸ್ಥೆ, ಬೋರ್‌ವೆಲ್‌ಗಳು, ಸೂಳೆಕೆರೆ ನೀರು ಬಂದ ನಂತರ ಇದರ ಬಳಕೆ ತುಂಬಾ ಕಡಿಮೆ. ಪಕ್ಕದ ಬಡಾವಣೆಯ ಸಾರ್ವಜನಿಕರು, ಹೋಟೆಲ್ ಮಾಲೀಕರು ಇಂದಿಗೂ ಕುಡಿಯುವ ನೀರಿಗಾಗಿ ಬಳಕೆ ಮಾಡುತ್ತಾರೆ ಎನ್ನುತ್ತಾರೆ ಗ್ರಾಮದ ಪಿ.ಡಿ. ಮಂಜುನಾಥ್.ಬಾವಿ ಸುರಕ್ಷತೆ ನಿರ್ಲಕ್ಷ್ಯ: ಬಾವಿಯ ಕಟ್ಟಡ ಸದೃಢವಾಗಿದೆ. ಹಗ್ಗ ಜಗ್ಗಿ ನೀರು ಎಳೆಯುವ ಗಡಗ ವ್ಯವಸ್ಥೆ ಸರಿಪಡಿಸಬೇಕಿದೆ. ಬಾವಿಯ ವ್ಯಾಸ ಅಂದಾಜು 20 ಅಡಿಯ ವಿಸ್ತಾರದ ಹರವು. ಕಟ್ಟಡದ ಮೇಲೆ ಅರಳಿ ಮರದ ಪೊದೆಗಳು ಬೆಳೆದು ಕಟ್ಟಡ ಶಿಥಿಲಗೊಳ್ಳುತ್ತಿದೆ. ಹಕ್ಕಿ-ಪಕ್ಷಿಗಳ ತ್ಯಾಜ್ಯ ಬಾವಿಗೆ ಬೀಳುತ್ತಿದೆ. ಹಳೆ ಪ್ಲಾಸ್ಟಿಕ್ ಕೊಡಗಳು, ಬಾಟಲ್‌ಗಳು ತೇಲುತ್ತಿವೆ. ಕಸ ಕಡ್ಡಿ ಸೇರಿ ಕೊಳೆತು ನೀರಿನಲ್ಲಿ ಕಲ್ಮಶ ಹೆಚ್ಚುತ್ತಿದೆ. ಅಪರೂಪದ ಇಂತಹ ಜೀವಂತ ಬಾವಿಯ ಸುರಕ್ಷತೆಗೆ ಮುಂದಾಗಬೇಕು ಎನ್ನುತ್ತಾರೆ ಗ್ರಾಮದ ಹನುಮಂತಪ್ಪ, ಚಂದ್ರ ಶೇಖರ್.ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಬಾವಿ ನೀರಿಗೆ ಕ್ಲೋರಿನೇಷನ್ ಮಾಡಲಾಗಿದೆ. ಬಾವಿ ಸ್ವಚ್ಛತೆಗೆ ಗ್ರಾಮ ಪಂಚಾಯ್ತಿ ಮುಂದಾಗಬೇಕು. ಆ ನಂತರ ಬಾವಿ ಮೇಲ್ಭಾಗದಲ್ಲಿ ತ್ಯಾಜ್ಯ ಸೇರದಂತೆ ಜಾಲರಿ ಅಳವಡಿಸುವ ಉದ್ದೇಶವಿದೆ. ಆಸ್ಪತ್ರೆಯ ಅಕ್ವಾಗಾರ್ಡ್ ಮೂಲಕ ನೀರು ಹರಿಸಿದಲ್ಲಿ ಅತ್ಯಂತ ಸುಲಭ, ಸರಳವಾದ ಶುದ್ಧ ನೀರು ವೈದ್ಯರು, ಸಿಬ್ಬಂದಿ ಹಾಗೂ ಒಳ, ಹೊರರೋಗಿಗಳಿಗೆ ಸಿಗಲಿದೆ. ಸ್ವಚ್ಛತೆಗಾಗಿ ಸದ್ಯದಲ್ಲಿಯೇ ಗ್ರಾಮ ಪಂಚಾಯ್ತಿಗೆ ಮನವಿ ಸಲ್ಲಿಸಲಾಗುವುದು ಎನ್ನುತ್ತಾರೆ ಡಾ.ಗೋಪಾಲ ಕೃಷ್ಣ.

 

ಪ್ರತಿಕ್ರಿಯಿಸಿ (+)