ಶುಕ್ರವಾರ, ಅಕ್ಟೋಬರ್ 18, 2019
28 °C

ಈ ಮಂದಣ್ಣರಿಗೆ ಕರ್ವಾಲೊ ಬೇಕು!

Published:
Updated:
ಈ ಮಂದಣ್ಣರಿಗೆ ಕರ್ವಾಲೊ ಬೇಕು!

ಬೀದರ್ ನಗರದ ಹೊರವಲಯದಲ್ಲಿ ಇರುವ ಪಾಪನಾಶ ದೇವಾಲಯದ ಕೆರೆಯ ಸುತ್ತಲಿನ ಪ್ರದೇಶದಲ್ಲಿಯೇ ಬೆಳೆದ ಪಂಢರಿನಾಥ ಕಾಶಿನಾಥ ಒಳದೊಡ್ಡಿ (18) ಮತ್ತು ವಿವೇಕಾನಂದ ಬಾಬುರಾವ ಹಳ್ಳಿಖೇಡಕರ್ (19) ಎಂಬ ಈ ಇಬ್ಬರು ಹುಡುಗರು ಶಾಲೆಗೆ ಹೋಗಿ ಕಲಿತದ್ದಕ್ಕಿಂತ ನಿಸರ್ಗದ ಆವರಣದಲ್ಲಿ ಅರಿತದ್ದೇ ಹೆಚ್ಚು. ಹಕ್ಕಿಗಳು ಇವರಿಬ್ಬರಿಗೆ ಪ್ರಿಯವಾದ ಜೀವಿಗಳಾದರೂ ಹಾವು, ಚಿಟ್ಟೆ, ಹುಳುಗಳ ಬಗ್ಗೆಯೂ ಅವರಿಗೆ ಆಸಕ್ತಿ. ಅವರು ತಮ್ಮ ಬಳಿ ಇರುವ ಪುಟ್ಟಪೆಟ್ಟಿಗೆಯಂತಹ ಕ್ಯಾಮರಾದಿಂದ ಸೆರೆ ಹಿಡಿದ ಚಿತ್ರಗಳು ಅವರ ಪ್ರತಿಭೆಯ ಬಗ್ಗೆ ಮಾತನಾಡುತ್ತವೆ. `ಏಮ್ ಅಂಡ್ ಶೂಟ್~ ತರಹದ ಕ್ಯಾಮರಾ ಬಳಸಿ ಕ್ಲಿಕ್ಕಿಸಿದ ಚಿಟ್ಟೆ, ಹುಳುಗಳ ಚಿತ್ರಗಳು ಹೊಸಲೋಕವನ್ನೇ ಅನಾವರಣ ಗೊಳಿಸುತ್ತವೆ. ಹಕ್ಕಿಗಳ ಫೋಟೋ ತೆಗೆಯುವುದಕ್ಕಾಗಿ ಅಗತ್ಯವಿ ರುವ ಕ್ಯಾಮರಾ ಅವರ ಬಳಿ ಇಲ್ಲ. ಆದರೂ ಹಕ್ಕಿಪ್ರೀತಿ ಕಡಿಮೆಯಾಗಿಲ್ಲ.ಎಸ್‌ಎಸ್‌ಎಲ್‌ಸಿ ಪಾಸಾಗಿ ಪಿಯುಸಿ ಪೂರ್ಣಗೊಳಿಸದೇ ಇರುವ ಇಬ್ಬರಲ್ಲಿ ಒಬ್ಬ ಆಡು ಕಾಯುವ ಹುಡುಗ. ಮತ್ತೊಬ್ಬ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುವವ. ದಿನದ ಬಹುತೇಕ ಸಮಯ ಜೊತೆಯಲ್ಲಿಯೇ ಇವರಿಗೆ ಕೊರತೆ ಇಲ್ಲದೇ ದೊರೆತಿರುವುದು ಬಡತನ ಮಾತ್ರ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಇವರು ಪುಟ್ಟ ಕ್ಯಾಮರಾ ಬಳಸಿ ಕ್ಲಿಕ್ಕಿಸಿದ ಚಿತ್ರವೊಂದು ನ್ಯಾಷನಲ್ ಜಿಯಾಗ್ರಫಿ ಮ್ಯೋಗಜೀನ್‌ಗೆ ಆಯ್ಕೆಯಾಗಿದೆ. ಇವರಿಗೆ ಸಲಹೆ-ಸೂಚನೆ ನೀಡುವ, ಮಾರ್ಗದರ್ಶನ ಮಾಡುವ  ವ್ಯಕ್ತಿಗಳು ದೂರದ ಲಂಡನ್‌ನಲ್ಲಿ ಇರುತ್ತಾರೆ.`ಹೈಸ್ಕೂಲ್‌ನಲ್ಲಿ ಇದ್ದಾಗಿನಿಂದ ಪಕ್ಷಿ-ಪ್ರಾಣಿಗಳು ಅಂದರೆ ಭಾರೀ ಪ್ರೀತಿ. ಸಾಲಿ ಇದ್ರೂ ತಪ್ಪಿಸಿ ಆಡ ಕಾಯಾಕ ಹೋಗ್ತಿದ್ವಿ. ಪಂಢರಿ ಮನ್ಯಾಗ ನಲ್ವತ್ತೈವತ್ತು ಆಡ ಅದಾವ. ದಿನಾ ಪಂಢರಿ ತಮ್ಮ ಆಡ ಕಾಯತಿದ್ದ. ಅವ ತಪ್ಪಿಸಿದಾಗ ಪಂಢರಿ ಹೋಗಬೇಕಾಗುತ್ತಿತ್ತು. ನಾನು ಕೂಡ ಪಂಢರಿ ಜೊತೆಗೇ ಹೊಗ್ತಿದ್ದೆ. ಒಂದ ಕಡಿ ಆಡ ಕಾಯಲಿಕ್ಕ ಬಿಟ್ಟು ಸುತ್ತ ಮುತ್ತ ಇದ್ದ ಕಾಡು, ಪಕ್ಷಿ ನೋಡಕೋತ ಅದರ ಬಗ್ಗೆ ಮಾತಾಡಕೋತ ಕೂಡತಿದ್ದಿವಿ. ಆಡ ಕಾಯ್ಲಿಕ್ಕ ಹೋದಾಗ ಮಂದಿ ಗಿಡ ಕಡದಿರೋದು, ಕಡಿಯೋದು ನೋಡಿ ಬ್ಯಾಸರ ಆಗ್ತಿತ್ತು~ ಎಂದು ವಿವೇಕ್ ನೆನಪಿಸಿಕೊಳ್ಳುತ್ತಾನೆ.ಪಂಢರಿ ಮತ್ತು ವಿವೇಕ್ ಆಡು ಕಾಯುತ್ತಿದ್ದ ದಿನಗಳಲ್ಲಿ ಅಂದರೆ 2007ರಲ್ಲಿ ನವೆಂಬರ್‌ನಲ್ಲಿ ಬೀದರ್‌ನಲ್ಲಿದ್ದ ವಾಯುಪಡೆ ತರಬೇತಿ ಕೇಂದ್ರಕ್ಕೆ ಇಂಗ್ಲೆಂಡಿನಿಂದ ಬಂದ ಹಾಕ್ ಯುದ್ಧ ವಿಮಾನಗಳು ಸೇರ್ಪಡೆಯಾದವು. ಹೊಸದಾಗಿ ಭಾರತೀಯ ವಾಯುಪಡೆ ಸೇರಿದ ವಿಮಾನಗಳ ಬಗ್ಗೆ ಮಾಹಿತಿ ಮತ್ತು ಹಾರಾಟದ ತರಬೇತಿ ನೀಡುವುದಕ್ಕಾಗಿ ಬ್ರಿಟನ್‌ನ `ಬಿಎಇ ಸಿಸ್ಟಮ್ಸ~ನ ಕೆಲವು ತಂತ್ರಜ್ಞರು ಬೀದರ್‌ಗೆ ಬಂದರು. ಹೀಗೆ ಬಂದವರ ಪೈಕಿ ಮುಖ್ಯ ತರಬೇತುದಾರನಾಗಿದ್ದ ಇಯಾನ್ ಆ್ಯಸ್ಪ್ಲೀನ್‌ಗೆ ಹಕ್ಕಿಗಳ ಛಾಯಾಗ್ರಹಣ ಮಾಡುವ ಹವ್ಯಾಸ. ಹೆಗಲಿಗೆ ಕ್ಯಾಮರಾ ಕೈಯಲ್ಲಿ ಪಕ್ಷಿಗಳ ಪರಿಚಯಿಸುವ ಗೈಡ್ ಹಿಡಿದು ಹೊರ ನಡೆಯುತ್ತಿದ್ದ ಇಯಾನ್ ಆಡು ಕಾಯುತ್ತ ಕುಳಿತಿದ್ದ ಈ ಇಬ್ಬರು ಹುಡುಗರ ನೋಡಿದ. ಮುಖ ಪರಿಚಯ ಒಂದೆರದು ದಿನಗಳಲ್ಲಿ ಮಾತನಾಡಿಸಲು ಹಚ್ಚಿ ನಂತರ ಸ್ನೇಹಕ್ಕೆ ತಿರುಗಿತು. ಹುಡುಗರ ಆಸಕ್ತಿ-ಪ್ರೀತಿಯನ್ನು ಇಯಾನ್ ಅರಿತ. ಇವರನ್ನು ತನ್ನ ಜೊತೆ ಕರೆದುಕೊಂಡು ಅತಿಥಿಗೃಹಕ್ಕೆ ಕರೆದೊಯ್ದ ಇಯಾನ್ ತನ್ನ ಜೊತೆಯಲ್ಲಿಯೇ ಬಂದಿದ್ದ ಹೈಡ್ರೋಲಿಕ್ ಎಂಜಿನಿಯರ್ ಜಾನ್ ಬೇರ್‌ಪಾರ್ಕ್ ಮತ್ತಿತರ ಸ್ನೇಹಿತರಿಗೆ ಪರಿಚಯಿಸಿದ. ಪೇಂಟಿಂಗ್ ಮಾಡುವ ಆಸಕ್ತಿ ಇರುವ ಕಲಾವಿದ ಜಾನ್‌ಗೆ ಕ್ಯಾಮರಾ ಜೊತೆಗೂ ಒಡನಾಟ ಇತ್ತು.  ಇಯಾನ್ ಮತ್ತು ಜಾನ್ ಈ ಇಬ್ಬರು ಹುಡುಗರನ್ನು ಕರೆದುಕೊಂಡು ಕೆರೆಯ ಸುತ್ತಲಿನ ಪ್ರದೇಶದಲ್ಲಿ ಓಡಾಡುತ್ತಿದ್ದರು. ಅವರಿಗೆ ಹಕ್ಕಿಗಳು- ಅವುಗಳು ಗೂಡು ಕಟ್ಟುವ ಬಗ್ಗೆ ವಿವರಿಸುವ ಕೆಲಸ ವಿವೇಕ್-ಪಂಢರಿ ಅವರದಾಗಿತ್ತು. ಆಗಲೇ  ಇಯಾನ್ ಆಗಾಗ ಪಕ್ಷಿಗಳ ಬಗ್ಗೆ ಅವುಗಳ ಛಾಯಾಗ್ರಹಣದ ಬಗ್ಗೆ ವಿವರಿಸತೊಡಗಿದ. ಜೊತೆಗೆ ಇಂಗ್ಲಿಷ್, ಕಂಪ್ಯೂಟರ್, ಇಂಟರ್‌ನೆಟ್ ಬಳಸುವುದು ಕೂಡ ಗೊತ್ತಾಯಿತು. ನಾಲ್ಕೈದು ತಿಂಗಳ ನಂತರ ಇಯಾನ್ ಮತ್ತು ಜಾನ್ ತನ್ನೂರಿಗೆ ಮರಳುವ ಕಾಲ ಬಂತು. ವಿವೇಕ್-ಪಂಢರಿ ಹಣ ಸ್ವೀಕರಿಸಲು ನಿರಾಕರಿಸಿದಾಗ ಜಾನ್‌ಗೆ ಅಚ್ಚರಿಯೋ ಅಚ್ಚರಿ. ಹಣದ ಬದಲಿಗೆ ಒಂದು ಕ್ಯಾಮರಾ ನೀಡಿದರೆ ಚೆನ್ನಾಗಿರುತ್ತದೆ ಎಂದದ್ದರಿಂದ ಅಷ್ಟು ಮೊತ್ತದ ಪುಟ್ಟ `ಸೀ ಅಂಡ್ ಶೂಟ್~ (ಫ್ಯೂಜಿ ನೂನ್ 2ಮೆಗಾಪಿಕ್ಸೆಲ್) ಕ್ಯಾಮರಾ ಕೊಡಿಸಿದ. ಜೊತೆಗೆ ತನ್ನ ಬಳಿ ಇದ್ದ `ಆಕ್ಸ್‌ಫರ್ಡ್ ಪಾಕೆಟ್ ಗೈಡ್ ಟು ದ ಬರ್ಡ್ಸ್ ಆಫ್ ಇಂಡಿಯನ್ ಸಬ್‌ಕಾಂಟಿನೆಂಟ್~ ಪುಸ್ತಕವನ್ನು ನೀಡಿದ. ಸರಿಸುಮಾರು 1300 ಪ್ರಬೇಧಗಳಿಗೆ ಸೇರಿದ ಹಕ್ಕಿಗಳ ಪರಿಚಯ  ಆ ಪುಸ್ತಕದಲ್ಲಿದೆ. ಹೀಗೆ ವಿವೇಕ್-ಪಂಢರಿ ಅವರ ಛಾಯಾಗ್ರಹಣದ ಕಥೆ ಆರಂಭವಾಯಿತು.ಪುಟ್ಟ ಕ್ಯಾಮರಾದಲ್ಲಿ ದೂರದಲ್ಲಿ ಇರುವ ಹಕ್ಕಿಗಳನ್ನು ಸೆರೆ ಹಿಡಿಯುವುದು ಸಾಧ್ಯವಿರಲಿಲ್ಲ. ಆಗ ತಮ್ಮ ಬಳಿ ಇದ್ದ ಕ್ಯಾಮರಾ ಬಳಸಿ ಮ್ಯಾಕ್ರೋ ಫೋಟೋಗ್ರಫಿ ಆರಂಭಿಸಿದರು. ಆಗ ಜೇನುಹುಳು,  ಹೂ- ಚಿಟ್ಟೆ, ಹಾವು, ಹುಳುಗಳು ಇವರ ಕ್ಯಾಮರಾದಲ್ಲಿ ದಾಖಲಾದವು.ಇಬ್ಬರೂ ಸೇರಿ ಕ್ಲಿಕ್ಕಿಸಿದ ಹಾವಿನ ಚಿತ್ರವೊಂದನ್ನು ನೋಡಿದ ಇಯಾನ್ ಕ್ಯಾಮರಾ (ಕ್ಯಾಸಿಯೋ ಎಕ್ಸಿಲಿಮ್ 7.2 ಮೆಗಾಪಿಕ್ಸೆಲ್) ನೀಡಿದ. ಹಾಗೆಯೇ ಹುಡುಗರ ಆಸಕ್ತಿ ಗೊತ್ತಾದ ಅಜಯ್‌ಶೆಟ್ಟಿ ಎಂಬ ಎಂಜಿನಿಯರಿಂಗ್ ಓದುತ್ತಿದ್ದ ಯುವಕ ತನ್ನ ಬಳಿ ಇದ್ದ ಹ್ಯಾಂಡಿಕ್ಯಾಮ್ (ಕ್ಯಾನನ್ ಲೆಗ್ರಿಯಾ ಎಫ್ 3305) ಕೊಟ್ಟ. ಜೂಮ್ ಸೌಲಭ್ಯ ಇದ್ದದ್ದರಿಂದ ಹಕ್ಕಿಗಳ ಚಲನವಲನ ಅರಿಯುವುದಕ್ಕೆ ಹ್ಯಾಂಡಿಕ್ಯಾಮ್ ಸಹಾಯಕವಾಗಿತ್ತು. ಹಕ್ಕಿಗಳಿಗೆ ತೊಂದರೆ ಆಗದಂತೆ ಅವುಗಳ ಬದುಕನ್ನು ಹ್ಯಾಂಡಿಕ್ಯಾಮ್‌ನಲ್ಲಿ ದಾಖಲಿಸಿಕೊಳ್ಳುತ್ತ ಹೋದರು. ಹಾಗೆಯೇ ಪುಟ್ಟ ಸ್ಟಿಲ್ ಕ್ಯಾಮರಾಗಳನ್ನು ಬಳಸಿ ಚಿಟ್ಟೆ, ಹೂ, ಹುಳುಹುಪ್ಪಡಿ ಕ್ಲಿಕ್ಕಿಸಿದರು.2010ರಲ್ಲಿ ತಮ್ಮ ಬಳಿ ಇರುವ ಚಿತ್ರಗಳನ್ನು ಬೀದರ್ ಉತ್ಸವದಲ್ಲಿ ಪ್ರದರ್ಶಿಸಲು ಹೊರಟು ಹಲವು ಗಣ್ಯರ ಮನೆ-ಕಚೇರಿಗಳ ಬಾಗಿಲಿಗೆ ಎಡತಾಕಿದರು. ಇವರ ಬಳಿ ಇದ್ದ ಆಟಿಕೆಗಳಂಥ ಕ್ಯಾಮೆರಾ ನೋಡಿದವರು `ಇಂಟರ್‌ನೆಟ್‌ನಿಂದ ಡೌನ್‌ಲೋಡ್ ಮಾಡಿ ಪ್ರಿಂಟ್ ಹಾಕಿಸಿಕೊಂಡು ಬಂದಿದ್ದೀರಿ~ ಎಂದು ಹೇಳಿ ಸಾಗಹಾಕತೊಡಗಿದರು.ಬೇಸರಿಸಿಕೊಳ್ಳದೇ ಒಂದೆಡೆಯಿಂದ ಮತ್ತೊಂದೆಡೆಗೆ ಓಡಾಡುತ್ತಿದ್ದ ಈ ಇಬ್ಬರನ್ನು ನೋಡಿದ ಒಬ್ಬರು ವಾರ್ತಾಧಿಕಾರಿಯನ್ನು ಭೇಟಿ ಮಾಡುವಂತೆ ಸೂಚಿಸಿದರು. ವಾರ್ತಾಧಿಕಾರಿ ಶಫಿ ಸಾದುದ್ದೀನ್‌ಗೆ ಯಾಕೋ ಹುಡುಗರ ಪ್ರಯತ್ನ ಸುಳ್ಳಲ್ಲ ಅನ್ನಿಸಿತು.ಬೀದರ್ ಉತ್ಸವ ನಡೆಯುತ್ತಿರುವ ದಿನಗಳಲ್ಲಿಯೇ ಕೋಟೆಯ ಆವರಣದಲ್ಲಿಯೇ ಚಿತ್ರಗಳ ಪ್ರದರ್ಶನ ಏರ್ಪಡಿಸಲು ವ್ಯವಸ್ಥೆ ಮಾಡಿದರು. ಪ್ರದರ್ಶನಕ್ಕೆ ಭೇಟಿ ನೀಡಿದ ಶಾಸಕ ಬಂಡೆಪ್ಪಾ ಕಾಶೆಂಪೂರ್ ಟ್ರೈಪಾಡ್ ಸಮೇತ ಕ್ಯಾಮರಾ ಕೊಡಿಸಿದರು. ಟೌನ್ ಪೊಲೀಸ್ ಇನ್ಸ್‌ಪೆಕ್ಟರ್ ಸತೀಶ್‌ಕುಮಾರ್ ತಮ್ಮ ಬಳಿ ಇದ್ದ ಡೆಸ್ಕ್‌ಟಾಪ್ ಕೊಟ್ಟಿದ್ದಾರೆ.ಬೀದರ್ ಸುತ್ತಮುತ್ತಲಿನ ಜೀವಿಪರಿಸರದ ಕುರಿತಂತೆ ಇವರಿಗಿರುವ ಜ್ಞಾನ ತೇಜಸ್ವಿಯವರ ಕರ್ವಾಲೋ ಕಾದಂಬರಿಯ ಮಂದಣ್ಣನನ್ನು ನೆನಪಿಸುತ್ತವೆ. `ಪಾಪನಾಶ ಕೆರೆಯ ಸುತ್ತಲಿನ ಪ್ರದೇಶದಲ್ಲಿ ಸುಮಾರು 200 ವಿವಿಧ ಬಗೆಯ ಹಕ್ಕಿಗಳು ನೋಡಲು ಸಿಗುತ್ತವೆ ಎಂದು ಫಾರೆಸ್ಟ್ ಡಿಪಾರ್ಟಮೆಂಟ್‌ನವರು ಹೇಳ್ತಾರ‌್ರಿ. ಆದ್ರ ಅಲ್ಲಿ 265 ಬಗೆಯ ಹಕ್ಕಿಗಳಿವೆ.ನಾವು ಎಲ್ಲವನ್ನೂ ಗುರುತು ಹಿಡಿತಿವ್ರಿ. ಸ್ವಲ್ಪ ಫಾರೆಸ್ಟ್‌ನವರಿಗೆ ಹೇಳಿ ಲೆಕ್ಕ ಸರಿಮಾಡಿಸಬೇಕರಿ~ ಎಂದು ವಿವೇಕ್ ಫಾರೆಸ್ಟ್‌ನವರನ್ನೇ ತಿದ್ದಬೇಕು ಅಂತ ಹೊರಟರೆ ವಯಸ್ಸಿನಲ್ಲಿ ಅವನಿಗಿಂತ ಒಂದು ವರ್ಷ ಕಿರಿಯವನಾದ ಪಂಢರಿ `ಅವ ತೋಲ್ ಮಾತಾಡ್ತಾನ್ರಿ. ಅದರಿಂದ ಸುಮ್ಮನೆ ಕಿರಿಕಿರಿ~ ಎಂದು ಎರಡೇ ಶಬ್ದದ ನಂತರ ಮೌನಕ್ಕೆ ಶರಣಾಗುತ್ತಾನೆ.ಹಾರ್ನ್‌ಬಿಲ್ ಜಾತಿಯ ವಲಸೆ ಪಕ್ಷಿಯ ಜೋಡಿಯೊಂದು ಕೆರೆಯ ನಡುವಿನ ಮರದಲ್ಲಿ ಗೂಡು ಕಟ್ಟಿದವು. ಮೊಟ್ಟೆ ಒಡೆದು ಮರಿ ಹೊರಬಂದು ಕಣ್ಣು ಬಿಟ್ಟ ಕ್ಷಣದಿಂದ ಹಿಡಿದು ತಂದೆ-ತಾಯಿಯಿಂದ ಹಾರಲು ತರಬೇತಿ ಪಡೆಯುವ ಅಮೂಲ್ಯ ಘಳಿಗೆಯವರೆಗಿನ ಎಲ್ಲ ಅಂಶಗಳು ಇವರ ಹ್ಯಾಂಡಿಕ್ಯಾಂನಲ್ಲಿ ದಾಖಲಾಗಿವೆ. ಮೊದಲಿಗೆ ಕೇಳಿದ ಎಲ್ಲರಿಗೂ ತಮ್ಮ ಜೀವಿಪರಿಸರ ಜ್ಞಾನವನ್ನು ಹಂಚಿಕೊಳ್ಳುತ್ತಿದ್ದ ಈ ಗೆಳೆಯರು ಈಗ ಆ ವಿಷಯದಲ್ಲಿ ಬಹಳ ಎಚ್ಚರವಹಿಸುತ್ತಾರೆ. ಇದಕ್ಕೆ ಕಾರಣ ವಿವೇಕ್ ಹೇಳುವಂತೆ `ಹಕ್ಕಿಗಳು ಕಟ್ಟಿದ ಗೂಡು ಫೋಟೊಗ್ರಾಫರ್‌ಗಳಿಗಿ ತೋರಸಬಾರದ್ರಿ. ಫೋಟೊ ತಗದ ಮ್ಯಾಲ ಅದು ಮತ್ತೊಬ್ಬರಿಗೆ ಸಿಗಬಾರದು ಅಂತ ಮರಿಸಮೇತ ಗೂಡನ್ನೇ ನಾಶ ಮಾಡ್ತಾರ‌್ರಿ~.`ಕ್ಯಾಮರಾದಿಂದ ಮದವಿ, ಫಂಕ್ಷನ್ ಫೋಟೊ ತೆಗೆಯಬೇಕು. ಅದಕ್ಕಾಗಿ ಒಂದು ಸ್ಟುಡಿಯೋ ತೆರೆಯಬೇಕು. ಅದರಿಂದ ಸ್ವಲ್ಪ ದುಡ್ಡು ಬರ‌್ತದೆ. ಜೀವನಕ್ಕೊಂದು ದಾರಿ ಆಗ್ತದೆ~ ಎಂಬುದು ವಿವೇಕ್‌ನ ಅಭಿಪ್ರಾಯ. ಆದರೆ, ಪಂಢರಿ ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಾನೆ. `ನಾವು ಫೋಟೋಗ್ರಫಿ ಆರಂಭಿಸಿದ್ದು ಬದುಕುವ ದಾರಿ ಕಂಡುಕೊಳ್ಳಲಿಕ್ಕೆ ಅಂತ ಅಲ್ಲ. ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ. ಮೂಲ ಉದ್ದೇಶನೇ ಬಿಟ್ಟು ಬ್ಯಾರೆ ಕೆಲಸ ಶುರು ಮಾಡಿದ್ರ ಹೆಂಗರಿ?~ ಎಂದು ಪ್ರಶ್ನೆ ಅವನದು.ವಯಸ್ಸಿನಲ್ಲಿ ಪಂಢರಿಗಿಂತ ಒಂದು ವರ್ಷ ಹಿರಿಯವನಾದ ವಿವೇಕ್ ಪ್ರಾಥಮಿಕ ಶಾಲೆಯಲ್ಲಿ ಡುಮಕಿ ಹೊಡೆದು ಪಂಢರಿಯ ಕ್ಲಾಸ್‌ಮೇಟ್ ಆದ. ಇಬ್ಬರು ಓದಿದ್ದೂ ಬೇರೆ ಬೇರೆ ಶಾಲೆ- ಕಾಲೇಜು. ಪಂಢರಿಗೆ ಚೆನ್ನಾಗಿ ಓದಿ ಡಿಗ್ರಿ ಮಾಡಿ, ಅಧ್ಯಯನದ ಜೊತೆ ಹವ್ಯಾಸ ಮುಂದುವರೆಸುವ ಬಯಕೆ. ಎಸ್‌ಎಸ್‌ಎಲ್‌ಸಿ ಪಾಸಾದ ನಂತರ ಮೊದಲ ವರ್ಷದ ಪಿ.ಯು.ಸಿ. (ವಿಜ್ಞಾನ)ಗೆ ಬೀದರ್‌ನ ಕರ್ನಾಟಕ ಕಾಲೇಜು ಸೇರಿದ. ನಿತ್ಯ ತಪ್ಪದೇ ಕಾಲೇಜಿಗೆ ಹೋಗುತ್ತಿದ್ದ. ಮೊದಲ ಟೆಸ್ಟ್‌ನಲ್ಲಿ ಗಣಿತದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದ.

ಮಧ್ಯಂತರ ಪರೀಕ್ಷೆ ಬರೆಯುತ್ತಿರುವ ಸಂದರ್ಭದಲ್ಲಿಯೇ ಅವರ ಕಾಲೇಜಿನ ಪ್ರಾಂಶುಪಾಲರಿಂದ ಕರೆ ಬಂತು. ಚೇಂಬರ್‌ಗೆ ಹೋದ ಪಂಢರಿಗೆ `ನೀನು ಎಸ್‌ಎಸ್‌ಎಲ್‌ಸಿ ಓದಿದಿ ಹೈಸ್ಕೂಲ್‌ನಿಂದ ಟಿ.ಸಿ. ತಂದುಕೊಟ್ಟಿಲ್ಲ. ಅದು ತಂದುಕೊಡದಿದ್ದರೆ ನಿನ್ನ ಅಡ್ಮಿಷನ್ ಕ್ಯಾನ್ಸಲ್ ಆಗುತ್ತದೆ. ಟಿ.ಸಿ. ತರದಿದ್ದರೆ ನಾಳೆಯಿಂದ ಎಕ್ಸಾಮ್‌ಗೆ ಬರಬೇಡ~ ಎಂದು ಪ್ರಾಂಶುಪಾಲರು ಗದರಿದರು. ಒಂದರೆಕ್ಷಣ ಗಲಿಬಿಲಿಯಾದ ಪಂಢರಿ ನಂತರ ಸಾವರಿಸಿಕೊಂಡು ತಾನು ಹೈಸ್ಕೂಲ್‌ಗೆ ಹೋಗಿ ಟಿ.ಸಿ. ಕೊಡುವಂತೆ ಮನವಿ ಮಾಡಿದರೆ `ನಿನಗ ಟಿ.ಸಿ. ಕೊಡಬೇಕು ಅಂದರ ನಮ್ಮ ಸಾಲಿಗಿ ಒಂದು ಕುರ್ಚಿ ಕೊಡಸಬೇಕು. ಒಂದು ಕುರ್ಚಿ ತಗೊಂಡ ಬಂದ ಟಿ.ಸಿ. ತಗೊಂಡ ಹೋಗು~ ಎಂದು ಕಡ್ಡಿ ಮುರಿದಂತೆ ಹೇಳಿದರು. ಪಾಪನಾಶ ದೇವಸ್ಥಾನದ ಆವರಣ ಸ್ವಚ್ಧಗೊಳಿಸುತ್ತ ಬರುವ ಅಲ್ಪ ಆದಾಯದಿಂದ ಬದುಕು ನಡೆಸುತ್ತಿದ್ದ ಪಂಢರಿಯ ತಂದೆಯನ್ನು ಅರ್ಚಕ ಕೆಲಸದಿಂದ ತೆಗೆದುಹಾಕಿದ್ದ.  ಅಸಹಾಯಕನಾಗಿದ್ದ ತಂದೆಯ ಹತ್ತಿರ ಕುರ್ಚಿಗೆ ಹಣ ಕೇಳಲು ಆಗಲಿಲ್ಲ. ಕಾಲೇಜಿಗೆ ಹೋದರೆ `ನಿನ್ನ ಅಡ್ಮಿಷನ್ ಕ್ಯಾನ್ಸಲ್ ಆಗಿದೆ. ಬರಬೇಡ~ ಎಂದು ಗುಮಾಸ್ತ ಹೇಳಿದ. ಪಂಢರಿ ಮೊದಲ ವರ್ಷ ಫೇಲ್ ಆಗಿದ್ದ. ವಿವೇಕ್‌ನದು ಕತೆ ಮತ್ತೊಂದು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಈತ ತಾಯಿಯ ಮಡಿಲಲ್ಲಿ ಅಣ್ಣಂದಿರ ಆಸರೆಯೊಂದಿಗೆ ಬೆಳೆದವ. ಇಬ್ಬರು ಅಣ್ಣಂದಿರು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇದ್ದಾರೆ. ಅವರ ಜೊತೆ ಕೈ ಜೋಡಿಸಿದರೆ ನಿತ್ಯದ ಜಂಜಾಟಕ್ಕೆ ಒಂದಷ್ಟು ಸಹಾಯ ಆಗುತ್ತದೆ ಎಂದು ವಿವೇಕ್ ಸೈಬರ್‌ಕೆಫೆಯೊಂದರಲ್ಲಿ ಅಟೆಂಡರ್ ಆಗಿ ಸೇರಿದ. ಅದಕ್ಕಾಗಿ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಬೇಕಾಯಿತು. ಕಾಲೇಜಿಗೇ ಹೋಗುವುದಿಲ್ಲ ಎಂದಾದ ಮೇಲೆ ಫೀಸ್ ಯಾಕೆ ಕಟ್ಟಬೇಕು? ಎಂದುಕೊಂಡ. ಫೀ ಕಟ್ಟಿಲ್ಲ, ಓದಿಲ್ಲ ಎಂದು ಪಿ.ಯು.ಸಿ. ಮೊದಲ ವರ್ಷದ ಪರೀಕ್ಷೆಯ ಕಡೆಗೂ ತಲೆ ಹಾಕಲಿಲ್ಲ.ಫಲಿತಾಂಶ ಬಂದ ಮೇಲೆ ಅವನ ಸ್ನೇಹಿತನೊಬ್ಬ ಪಾಸಾಗಿರುವ ಬಗ್ಗೆ ತಿಳಿಸಿದ. ಹೋಗಿ ನೋಡಿದರೆ ಕಾಲೇಜಿನ ನೋಟಿಸ್ ಬೋರ್ಡ್‌ನಲ್ಲಿ ಪಾಸಾದವರ ಪಟ್ಟಿಯಲ್ಲಿ ವಿವೇಕ್‌ನ ಹೆಸರಿತ್ತು. `ಅಡ್ಮಿಷನ್ ಮಾಡಿಸಿದ ಹುಡುಗರ ಪೈಕಿ ಫೇಲಾದವರ ಸಂಖ್ಯೆ ಹೆಚ್ಚಿದ್ದರೆ ಸುಮ್ಮನೆ ಕಿರಿಕಿರಿ ಆಗುತ್ತದೆ. ಅನುದಾನಕ್ಕೆ ಕತ್ತರಿ ಬಿಳಬಹುದು ಎಂಬ ಆತಂಕಕ್ಕೆ ಒಳಗಾದ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆ ಎಲ್ಲ ವಿದ್ಯಾರ್ಥಿಗಳನ್ನೂ ಪಾಸು ಮಾಡುವ ನಿರ್ಧಾರಕ್ಕೆ ಬಂದಿತ್ತು. ಅದರ ಫಲ (?) ವಿವೇಕ್‌ನಿಗೆ ದೊರಕಿತ್ತು. ಕಾಲೇಜಿಗೆ ಹೋದ ಪಂಢರಿ ಪಾಸಾಗದೇ ಇದ್ದದ್ದು ವಿವೇಕ್‌ನ ಹಿಡಿಸಲಿಲ್ಲ. `ನಾ ಓದೇ ಇಲ್ರಿ. ಅದರಾಗ ಏನ್‌ಅದ ಅಂತ ಗೊತ್ತೇ ಇಲ್ರಿ. ಪಾಸಾಗಿನಿ. ಪಂಢರಿ ಪಾಪ ಓದಿದ್ದ, ಸಬ್ಜೆಕ್ಟು ಗೊತ್ತದ. ಆದ್ರ ಫೇಲಾದ~ ಎಂದು ವಿವೇಕ್ ಬೇಸರಿಸಿಕೊಳ್ಳುತ್ತಾನೆ. ಸದ್ಯ ವಿವೇಕ್ ಎರಡನೇ ವರ್ಷದ ಪಿ.ಯು.ಸಿ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರೆ ಪಂಢರಿ ಪಿಯುಸಿ ಒಂದನೇ ವರ್ಷದ ಪರೀಕ್ಷೆ ತಯಾರಾಗುತ್ತಿದ್ದಾನೆ. ಎಲ್ಲ ಮಿತಿಗಳ ನಡುವೆಯೂ ಪಾಪನಾಶ ಕೆರೆಯ ಸುತ್ತಲಿನ ಅರೆಕಾಡಿನಲ್ಲಿ ಪಕ್ಷಿ, ಚಿಟ್ಟೆ, ಹುಳು, ಹಾವು,ಚೇಳುಗಳ ಹುಡುಕುತ್ತಿರುತ್ತಾರೆ. ಪರಿಸರದ ಬಗ್ಗೆ ಆಸಕ್ತಿ, ಕಾಳಜಿ ಮುಂದುವರೆಸಿದ್ದಾರೆ.

Post Comments (+)