ಮಂಗಳವಾರ, ನವೆಂಬರ್ 12, 2019
28 °C

ಈ ರಾಮನವಮಿಯಂದು ಆ ನೆನಪು

Published:
Updated:

ಒಂದು ವರ್ಷದ ಹಿಂದಿನ ಮಾತು. ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದ ನಾನು ಬೆಂಗಳೂರಿಗೆ ಬಂದವನೇ ಸಂಜೆ ಬಾಲ್ಯದ ಸ್ನೇಹಿತನನ್ನು ಕಾಣಲು ಹನುಮಂತನಗರದ ಕಡೆಯ ಬಸ್ ಏರಿದೆ. ಮುಕ್ಕಾಲು ಗಂಟೆ ಪ್ರಯಾಣದ ಬಳಿಕ ಬಸ್ ಇಳಿಯುತ್ತಿದ್ದಂತೆ ಕೈಕುಲುಕಿದ ಸ್ನೇಹಿತ `ಒಳ್ಳೇ ದಿನಾನೇ ಬಂದಿದ್ದಿ... ಇವತ್ತು ರಾಮನವಮಿ. ನಡಿ ಇಲ್ಲೇ ಆಂಜನೇಯ ಗುಡಿ ಇದೆ. ಪ್ರಸಾದ ತಿನ್ನೋಣ' ಅಂತ ನನ್ನ ಪ್ರತಿಕ್ರಿಯೆಗೂ ಕಾಯದೇ ಎಳೆದೊಯ್ದ. ಪೂಜೆ ಮುಗಿದಿದ್ದೇ ತಡ ಮೊದಲೇ ಇದ್ದ `ಪಾನಕ'ದ ಭಕ್ತರ ಸಾಲನ್ನು ಲೆಕ್ಕಿಸದೇ ನೂಕುನುಗ್ಗುಲಿನಲ್ಲಿ ತೂರಿಕೊಂಡು ಹೋಗಿ ಪಾನಕ, ಕೋಸಂಬರಿ ತಿಂದು ಸಂಭ್ರಮಿಸಿದೆವು.ತುಸು ದೂರದಲ್ಲೇ ಇದ್ದ ಗಣಪತಿ ದೇವಸ್ಥಾನ ಮತ್ತು ವೆಂಕಟರಮಣ ದೇವಸ್ಥಾನದಲ್ಲೂ ರಾಮನವಮಿ ಸಂಭ್ರಮ, ಪ್ರಸಾದ ವಿತರಣೆ ಜೋರಾಗೇ ಇತ್ತು. ಜತೆಗೆ ಬೀದಿಯಲ್ಲಿ ಎಲ್ಲಿ ನೋಡಿದರೂ ಪಾನಕ, ಕೋಸಂಬರಿ ಸೇವೆ! ಅದಂತೂ ನಂಗೆ ನಮ್ಮೂರಿನ ಬಾಲ್ಯದ ದಿನಗಳ `ರಾಮನವಮಿ'ಹಬ್ಬದ ಸಂಭ್ರಮವನ್ನು ನೆನಪಿಸಿತು. ಬೆಲ್ಲದ ಪಾನಕ ಮತ್ತು ಕೋಸಂಬರಿಗಾಗಿ ಸ್ನೇಹಿತರೊಂದಿಗೆ ಊರಿನ ರಾಮದೇವರ ಮತ್ತು ಆಂಜನೇಯ ಗುಡಿಗೆ ಓಡುತ್ತಿದ್ದ ನೆನಪಿನ ಬುತ್ತಿ ಬಿಚ್ಚಿಕೊಂಡಿತು.ಮೂಡಿಗೆರೆಯ ಬಿಳಗುಳ ಗ್ರಾಮದಲ್ಲಿ ಹುಡುಗರೆಲ್ಲಾ ಸೇರಿ ಒಂದು ಕ್ರಿಕೆಟ್ ತಂಡ ಕಟ್ಟಿಕೊಂಡಿದ್ದೆವು. ಆಡುವುದರಿಂದ ಹಿಡಿದು ಎಲ್ಲಾ ಕೆಲಸಗಳಲ್ಲೂ ನಾವು ತಂಡವಾಗೇ ಇರುತ್ತಿದ್ದೆವು. ಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ರಾಮನವಮಿ ಬಂತೆಂದರೆ ಬೆಲ್ಲದ ಪಾನಕ, ಕೋಸಂಬರಿ ತಿನ್ನಲು ಎಲ್ಲರೂ ತುದಿಗಾಲಲ್ಲಿ ನಿಲ್ಲುತ್ತಿದ್ದೆವು.ಒಮ್ಮೆ ರಾಮನವಮಿಯ ಹಿಂದಿನ ದಿನ ಎಲ್ಲರೂ ಸ್ಕೂಲಿನ ಆಟದ ಮೈದಾನದಲ್ಲಿ ಸೇರಿ ಯಾವ ದೇವಸ್ಥಾನದಲ್ಲಿ ಎಷ್ಟು ಹೊತ್ತಿಗೆ ಪೂಜೆ, ಯಾವ ಬೀದಿಯಲ್ಲಿ ಪಾನಕ, ಕೋಸಂಬರಿ ವಿತರಣೆ ಇದೆ ಎಂಬ ವಿವರಗಳನ್ನು ಕಲೆ ಹಾಕಿದೆವು. ಎಲ್ಲರಿಗೂ ನಮ್ಮ ಮನೇಲಿ ಮಾಡುತ್ತಿದ್ದ ಕಪ್ಪು ಬೆಲ್ಲದ ಪಾನಕದ ರುಚಿ ಹತ್ತಿತ್ತು. ಅದರಲ್ಲೂ ಇಬ್ಬರು ಮುಸ್ಲಿಂ ಹುಡುಗರಿಗಂತೂ ಪಾನಕವೆಂದರೆ ಪಂಚಪ್ರಾಣ. ಹಾಗಾಗಿ ಮೊದಲು ನಮ್ಮ ಮನೆಗೆ ಹೋಗುವ ಬಗ್ಗೆ ಹೆಚ್ಚು ಬಹುಮತ ಬಂತು. ಆದ್ರೆ ನಂಗೆ ಇಕ್ಕಟ್ಟಿನ ಪರಿಸ್ಥಿತಿ. ಒಂದೆಡೆ ಆಚಾರ-ವಿಚಾರ ಅಂತ ಕಟ್ಟುನಿಟ್ಟಾಗಿರುತ್ತಿದ್ದ ನಮ್ಮಜ್ಜ, ಇನ್ನೊಂದೆಡೆ ನಮ್ಮ ಮನೆಗೇ ಮೊದಲು ಬರುವುದಾಗಿ ಜಿದ್ದಿಗೆ ಬಿದ್ದ ಸ್ನೇಹಿತರು.ಕೊನೆಗೆ ಒಂದು ತೀರ್ಮಾನಕ್ಕೆ ಬಂದೆ. ಅವರಿಬ್ಬರನ್ನೂ ಕರೆದು, `ನಮ್ಮನೇಲಿ ನೀವು ಮಾತಾಡ್ಬಾರ‌ದ್ರು, ಯಾರಾದ್ರೂ ಹೆಸ್ರು ಕೇಳಿದ್ರೆ ನೀನು ರಾಮು, ನೀನು ರಾಜು ಅಂತ ಹೇಳ್ಬೇಕು' ಅಂತ ಕಟ್ಟುನಿಟ್ಟಾಗಿ ಸೂಚಿಸಿದೆ. ಮನಸ್ಸಿಲ್ಲದಿದ್ದರೂ ಪಾನಕದ ಆಸೆಗಾಗಿ ಒಪ್ಪಿಕೊಂಡ್ರು.ಇನ್ನೇನು ಮಂಗಳಾರತಿ ಮುಗಿಬೇಕು ಎನ್ನುವ ಹೊತ್ತಿಗೆ ಸರಿಯಾಗಿ ಮನೆಗೆ ಬಂದಿದ್ದಕ್ಕೆ ನಂಗೂ ಅಮ್ಮನಿಂದ ಮಂಗಳಾರತಿ ಆಯ್ತು. ಬಳಿಕ ಎಲ್ಲರೂ ಹರಟೆ ಹೊಡೆಯುತ್ತಾ ಪಾನಕ, ಕೋಸಂಬರಿ ಮೆಲ್ಲತ್ತಿರುವಾಗ ಅಜ್ಜನನ್ನು ಕಂಡು ಸುಮ್ಮನಾದೆವು. ಹತ್ತಿರ ಬಂದವರೇ `ಯಾರೀ ಹುಡುಗ್ರು? ಅಂದ್ರು. `ಇವ್ರೆಲ್ಲಾ ನನ್ ಫ್ರೆಂಡ್ಸ್ ಅಜ್ಜಾ' ಅಂದೆ. ಎಲ್ಲರನ್ನೂ ಸೂಕ್ಷ್ಮವಾಗಿ ನೋಡಿದ ಅಜ್ಜನ ಕಣ್ಣುಗಳು ಒಮ್ಮೆಲೇ ರಾಮು, ರಾಜುವಿನ ಬಳಿ ನೆಟ್ಟಿತು. ಏನ್ ನಿಮ್ ಹೆಸ್ರು? ಯಾರ್ ಮಕ್ಳು ಅಂತ ಕೇಳಿದ್ರು. ಗಾಬರಿಗೊಂಡ ಅವರು `ರಹೀಮ್, ಅಜ್ಮಲ್' ಅಂದ್ರು ಒಂದೇ ಉಸ್ರಿಗೆ. ಮುಗೀತು ನನ್ ಕಥೆ ಅಂದ್ಕೊಂಡೆ ಕ್ಷಣಕ್ಕೆ. ಆದ್ರೆ ಅಜ್ಜ ಮಾತ್ರ `ಓಹೋ, ರಾಮನವಮಿಗೆ ರಹೀಮ ಬಂದ್ಬಿಟ್ಟಿದಾನೆ' ಅಂತ ನಕ್ಕರು. `ನಂಗೊಂಚೂರು ಕೆಲ್ಸ ಇದೆ ಹೊರಗ್ಹೋಗ್ತಿನಿ, ಪ್ರಸಾದ ಕೊಡು ಅಂತ ಹೇಳುತ್ತಾ, `ಕೊಟ್ಟೆ' ಅನ್ನೋ ನನ್ನ ಉತ್ತರಕ್ಕೂ ಕಾಯದೇ ಅಲ್ಲಿಂದ ಹೊರಟ್ರು. ಅಜ್ಜನ ವರ್ತನೆಯಿಂದ ಹೋದ ಜೀವ ವಾಪಸ್ ಬಂದಂತಾಗಿ ಆಶ್ಚರ್ಯಗೊಂಡೆ.ಸಂಜೆ ಹತ್ತಿರದಲ್ಲಿದ್ದ ರಾಮನ ದೇವಸ್ಥಾನಕ್ಕೆ ಹೋದೆವು. ನಾವು ಕೈಮುಗಿದು ಶಾಸ್ತ್ರಕ್ಕೆರಡು ರಾಮನಾಮ ಜಪಿಸಿದರೆ, ಅವರಿಬ್ಬರೂ ಕಣ್ಮುಚ್ಚಿ , ಕೈಮುಗಿದು ಏನೋ ಹೇಳತೊಡಗಿದರು. ನನ್ನ ಬಳಿಯೇ ನಿಂತಿದ್ದ ಸ್ನೇಹಿತನೊಬ್ಬ `ನೋಡು ಪಾನಕ, ಕೋಸಂಬರಿ ಆಸೆಗೆ ಹೇಗೆ ನಾಟ್ಕ ಮಾಡ್ತಿದಾರೆ. ಅವ್ರ ನಿಜವಾಗ್ಲೂ ರಾಮನಾಮ ಜಪಿಸ್ತಿದಾರೋ ಇಲ್ಲಾ ರಹೀಮನನ್ನೋ?' ಅಂದ. `ನಿಧಾನಕ್ಕೆ ಮಾತಾಡು, ಯಾರಾದ್ರೂ ಕೇಳಿಸಿಕಂಡ್ರೆ ಅಷ್ಟೆ...' ಅಂತ ಇನ್ನೊಬ್ಬ ಅವನ್ ತಲೆಗೆ ಮೊಟಕಿದ.ಅಷ್ಟೊತ್ತಿಗೆ ಪೂಜೆ ಮುಗಿದು ಪ್ರಸಾದ ವಿತರಣೆ ಶುರುವಾಯ್ತು. ಸರತಿ ಸಾಲಿನಲ್ಲಿ ನಿಂತು ಪಾನಕ, ಕೋಸಂಬರಿ ಪಡೆದು ಅಲ್ಲಿಂದ  ಮನೆಗಳತ್ತ ಹೆಜ್ಜೆ ಹಾಕಿದೆವು.

 

ಪ್ರತಿಕ್ರಿಯಿಸಿ (+)