ಸೋಮವಾರ, ಜೂನ್ 21, 2021
28 °C

ಈ ರ‍್ಯಾಂಪ್ ಮೇಲೆ ‘ಅವರ’ ಪೆಂಪು

–ಸುರೇಖಾ ಹೆಗಡೆ Updated:

ಅಕ್ಷರ ಗಾತ್ರ : | |

ಬಹುಆಯ್ಕೆಯ ನಗರ ಬೆಂಗಳೂರು ಫ್ಯಾಷನ್‌ ಕ್ಷೇತ್ರದಲ್ಲೂ ಮುಂದೆ ಇದೆ. ಬಣ್ಣದ ಬದುಕಿನ ಬಗ್ಗೆ ಪ್ರೀತಿ ಬೆಳೆಸಿಕೊಂಡು ಹುಟ್ಟಿಕೊಳ್ಳುತ್ತಿರುವ ಹಲವಾರು ಮಾಡೆಲ್‌ಗಳಿಗೆ ಆ ಕ್ಷೇತ್ರ ಅವಕಾಶಗಳ ಮಹಾಪೂರವನ್ನೇ ಹರಿಸುತ್ತಿದೆ. ಜೊತೆಗೆ ಅನೇಕ ವಿದೇಶಿ ಮಾಡೆಲ್‌ಗಳೂ ನಗರದಲ್ಲಿ ಗರಿಗೆದರುತ್ತಿದ್ದಾರೆ. ಸಿಕ್ಕ ಅವಕಾಶಗಳಿಗೆ ರೆಕ್ಕೆ ಕಟ್ಟಿಕೊಂಡು ಹಾರಾಡುತ್ತಿದ್ದಾರೆ ಈ ಬೆಡಗಿಯರು.ನಗರದಲ್ಲಿ ಕೆಲವೇ ಕೆಲವು ವಿದೇಶಿ ಮಾಡೆಲ್‌ಗಳು ನೆಲೆಸಿದ್ದಾರೆ. ಆದರೆ ಬೆಂಗಳೂರಿನಲ್ಲಿ ಅನೇಕ ಫೋಟೊಶೂಟ್‌ಗಳು, ಜಾಹೀರಾತು ಚಿತ್ರೀಕರಣ, ಫ್ಯಾಷನ್‌ ಷೋಗಳು ನಡೆಯುವುದರಿಂದ ದೆಹಲಿ, ಮುಂಬೈನಲ್ಲಿ ನೆಲೆಸಿರುವ ಅನೇಕ ವಿದೇಶಿ ಮಾಡೆಲ್‌ಗಳು ಇಲ್ಲಿಗೆ ಆಗಮಿಸುತ್ತಾರೆ. ಭಾರತೀಯರಿಗಿಂತ ಆಕರ್ಷಕವಾದ ಬಣ್ಣ, ಸೆಳೆಯುವ ಕಣ್ಣುಗಳು, ಎತ್ತರದ ನಿಲುವು, ತೆಳ್ಳಗೆ ಬಳುಕುವ ದೇಹ, ಕಠಿಣ ಪರಿಶ್ರಮ, ಎಲ್ಲ ಥರದ ಉಡುಗೆ ಧರಿಸುವ ಮನಸ್ಥಿತಿ... ಇಂಥ ಹಲವು ಗುಣಗಳಿಂದಲೇ ವಿದೇಶಿ ರೂಪದರ್ಶಿಗಳಿಗೆ ಭಾರತೀಯ ನೆಲದಲ್ಲೂ ಅವಕಾಶಗಳು ಲಭ್ಯವಾಗುತ್ತಿವೆ ಎಂಬುದು ಅನೇಕ ಫ್ಯಾಷನ್‌ ತಜ್ಞರ ಅಭಿಪ್ರಾಯ.ಅಂತರರಾಷ್ಟ್ರೀಯ ಉತ್ಪನ್ನಗಳು ಹಾಗೂ ವೆಬ್‌ ಜಾಹೀರಾತುಗಳಿಗೆ ಹೆಚ್ಚಾಗಿ ಈ ವಿದೇಶಿ ಬೆಡಗಿಯರನ್ನು ಬಳಸಿಕೊಳ್ಳಲಾಗುತ್ತದೆ. ಫ್ಯಾಷನ್‌ ಷೋ ವಿಭಿನ್ನವಾಗಿರಬೇಕು ಎನ್ನುವ ಕಾರಣಕ್ಕೆ ಕೆಲ ವಿನ್ಯಾಸಕರು ಒಂದಿಬ್ಬರು ವಿದೇಶಿ ರೂಪದರ್ಶಿಗಳಿಗೆ ಮಣೆ ಹಾಕುತ್ತಿದ್ದಾರೆ. ತಮ್ಮ ಬ್ರಾಂಡ್‌ಗಳಿಗೆ ಅಂತರರಾಷ್ಟ್ರೀಯ ‘ಲುಕ್‌ ಹಾಗೂ ಫೀಲ್‌’ ಕೊಡಬೇಕು ಎಂಬ ಕಾರಣಕ್ಕೆ ವಿದೇಶೀಯರಿಗೆ ದೇಸೀ ನೆಲದಲ್ಲೂ ಅವಕಾಶದ ಬಾಗಿಲು ತೆರೆಯಲಾಗುತ್ತಿದೆ.ವರ್ಣಭೇದದ ಮತ್ತೊಂದು ರೀತಿ

ವಿನ್ಯಾಸಕಿ ಹಾಗೂ ಸಂಯೋಜಕಿಯಾಗಿರುವ ಶಿಲ್ಪಿ ಚೌಧರಿ ಅವರ ಪ್ರಕಾರ ಬೆಂಗಳೂರಿನಲ್ಲಿ ಅವಕಾಶಗಳು ಸಾಕಷ್ಟಿವೆ. ಆದರೆ ಹೆಚ್ಚಿನ ಪ್ರದರ್ಶಕರು ಉತ್ಪನ್ನಗಳನ್ನು ಜಾಹೀರುಗೊಳಿಸಲು ವಿದೇಶಿ ರೂಪದರ್ಶಿಯರನ್ನೇ ಆಯ್ಕೆ ಮಾಡುತ್ತಾರೆ. ಇದಕ್ಕೆ ಮುಖ್ಯ ಕಾರಣ ಅವರ ಚರ್ಮದ ಬಣ್ಣ ಹಾಗೂ ಎಲ್ಲಾ ರೀತಿಯ ದಿರಿಸು ಧರಿಸುವ ಅವರ ಮನೋಭಾವ. ಯಾವಾಗಲೂ ಶ್ವೇತವರ್ಣದ ಮಾಡೆಲ್‌ಗಳಿಗೆ ಇಲ್ಲಿ ಅವಕಾಶಗಳು ಹೆಚ್ಚು.ಬಿಳಿ ಬಣ್ಣಕ್ಕೆ ಹೆಚ್ಚು ಪ್ರಾಧಾನ್ಯ ನೀಡುವ ಕ್ರೀಂಗಳನ್ನು ನಿಷೇಧಿಸಬೇಕು. ಈ ಧೋರಣೆ ವರ್ಣಭೇದ ಮನೋಭಾವವನ್ನು ಕೆರಳಿಸುತ್ತದೆ ಎನ್ನುತ್ತಾರೆ ಅವರು.ಶೂಟ್‌ಗಾಗಿ ಬರುತ್ತಾರೆ

‘ಬೆಂಗಳೂರಿನಲ್ಲೇ ನೆಲೆಸಿರುವ ವಿದೇಶಿ ರೂಪದರ್ಶಿಗಳು ನಾಲ್ಕೈದು ಜನ ಇರಬಹುದು ಅಷ್ಟೇ. ಆದರೆ ಇಲ್ಲಿ ನಡೆಯುವ ಫ್ಯಾಷನ್‌ ಸಂಬಂಧಿ ಕಾರ್ಯಕ್ರಮಗಳಿಗೆ ಗೋವಾ, ದೆಹಲಿ, ಮುಂಬೈನಿಂದ ವಿದೇಶಿ ರೂಪದರ್ಶಿಗಳನ್ನು ಕರೆಸಲಾಗುತ್ತಿದೆ. ಹಾಗಂದ ಮಾತ್ರಕ್ಕೆ ನಗರದ ರೂಪದರ್ಶಿಗಳಿಗೆ ಅವಕಾಶ ಕಡಿಮೆಯಾಗಿದೆ ಎಂದರ್ಥವಲ್ಲ. ಕಾರ್ಯಕ್ರಮ ವೈವಿಧ್ಯವಾಗಿರಬೇಕು ಎಂಬ ಕಾರಣಕ್ಕೆ ಅವರೂ ವೇದಿಕೆ ಏರುತ್ತಾರೆ.ಅವರ ತ್ವಚೆ, ಕಣ್ಣು, ಕೂದಲು, ದೇಹಾಕೃತಿ ಎಲ್ಲವೂ ವಿಶಿಷ್ಟವಾದ್ದರಿಂದ ಮೆಚ್ಚುಗೆಯಾಗುತ್ತಾರೆ. ಕೆಲವರು ವಿದ್ಯಾಭ್ಯಾಸಕ್ಕಾಗಿ ಬಂದು ಮಾಡೆಲ್‌ಗಳಾದರೆ, ಇನ್ನು ಕೆಲವರು ಇದನ್ನೇ ವೃತ್ತಿಯಾಗಿಸಿಕೊಳ್ಳುತ್ತಿದ್ದಾರೆ. ಅಂತರರಾಷ್ಟ್ರೀಯ ಗಾಂಭೀರ್ಯ ನೀಡಬೇಕು ಎನ್ನುವ ಕಾರಣಕ್ಕೆ ವಿದೇಶಿ ರೂಪದರ್ಶಿಗಳನ್ನು ದೇಸಿ ನೆಲಕ್ಕೆ ಕರೆತರುತ್ತಿದ್ದಾರೆ’ ಎನ್ನುತ್ತಾರೆ ಫ್ಯಾಷನ್‌ ಸಂಯೋಜಕ ಎಂ.ಎಸ್‌.ಶ್ರೀಧರ್‌.ಇರಾನಿನ ಕೆಲವು ಬೆಡಗಿಯರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಹೆಚ್ಚಿನವರು ಭಾರತದ ವಿವಿಧ ಭಾಗಗಳಿಂದ ಕಾರ್ಯಕ್ರಮದ ವೇಳೆ ಬರುತ್ತಾರೆ. ಕೆಲವು ದೊಡ್ಡ ಷೋಗಳಿಗಾದರೆ ವಿದೇಶಗಳಿಂದಲೇ ಮಾಡೆಲ್‌ಗಳನ್ನು ಕರೆಸುತ್ತಾರೆ. ಹಾಗೆ ನೋಡಿದರೆ ದುಬೈನಲ್ಲಿ ಶೇ 90ರಷ್ಟು ವಿದೇಶಿ ಮಾಡೆಲ್‌ಗಳದ್ದೇ ಕಾರುಬಾರು. ನಗರದಲ್ಲಿ ಶೇ 25ರಷ್ಟು ಬೆಡಗಿಯರು ಮಾತ್ರ ವಿದೇಶೀಯರು ಎನ್ನುತ್ತಾರೆ ಫ್ಯಾಷನ್‌ ಸಂಯೋಜಕ ಪ್ರಸಾದ್ ಬಿದಪ್ಪ.ಈ ಕ್ಷೇತ್ರದಲ್ಲಿ ಅನುಭವವೇ ಎಲ್ಲವನ್ನೂ ಕಲಿಸುತ್ತದೆ. ವಿದೇಶಿ ರೂಪದರ್ಶಿಗಳು ಯಾವುದೇ ವಿಷಯದಲ್ಲೂ ಹಿಂದೆ ಬಿದ್ದಿಲ್ಲ. ಚೆನ್ನಾಗಿ ನಡೆಯುತ್ತಾರೆ, ಹೇಳಿದ್ದನ್ನು ಪಾಲಿಸುತ್ತಾರೆ. ಅವರಿಂದ ಕಿರಿಕಿರಿ, ದೂರುಗಳು ಬರುವುದು ತೀರಾ ಕಡಿಮೆ. ಅದೂ ಅಲ್ಲದೆ ಅಂದದ ಮೈಮಾಟ, ಸುಂದರ ವದನ ಹೊಂದಿರುವ ಅವರಿಗೆ ಎಲ್ಲಾ ರೀತಿಯ ಉಡುಗೆ ಒಪ್ಪುತ್ತದೆ. ಅವರ ಇನ್ನೊಂದು ವಿಶೇಷತೆ ಎಂದರೆ ಎತ್ತರವಾದ ನಿಲುವು. ವಿದೇಶಿ ಬೆಡಗಿಯರು ಎಂಬ ಕಾರಣಕ್ಕೆ ಅವರಿಗೆ ನೀಡುವ ಸಂಬಳ ದುಬಾರಿಯೇನಲ್ಲ. ಭಾರತೀಯ ಸೂಪರ್‌ ಮಾಡೆಲ್‌ಗಳೇ ಷೋ ಒಂದಕ್ಕೆ ಕನಿಷ್ಠ ರೂ.50 ಸಾವಿರ ಹಣ ಕೇಳುತ್ತಾರೆ. ವಿದೇಶೀಯರಿಗೆ ರೂ.15 ಸಾವಿರದಿಂದ ರೂ.20 ಸಾವಿರ ಮಾತ್ರ ನೀಡಲಾಗುತ್ತದೆಯಂತೆ.‘ವಿದೇಶಿ ಪ್ರತಿಭೆಗಳಿಗೆ ಹೋಲಿಸಿದರೆ ಭಾರತೀಯ ಮಾಡೆಲ್‌ಗಳೇ ರ‍್ಯಾಂಪ್‌ ಮೇಲೆ ಚೆನ್ನಾಗಿ ಹೆಜ್ಜೆ ಹಾಕುತ್ತಾರೆ. ಭಾರತೀಯ ಮನೋಧರ್ಮದ ಹಾಗೂ ಇಲ್ಲಿಯವರಿಂದ ತರಬೇತಿ ಪಡೆದವರಿಗೆ ಸ್ಥಳೀಯ ಅಗತ್ಯಗಳ ಬಗ್ಗೆ ಚೆನ್ನಾಗಿ ತಿಳಿದಿರುತ್ತದೆ. ವಿದೇಶಿಯರು ಬಂದಾಗ ಹೊಸದಾಗಿ ಎಲ್ಲವನ್ನೂ ಹೇಳಿಕೊಡಬೇಕು. ಕೆಲವರಿಗೆ ಆಂಗ್ಲಭಾಷೆ ಕೂಡ ಬರುವುದಿಲ್ಲ. ಅಂಥವರಿಗೆ ಹೇಳಿಕೊಡುವುದಕ್ಕೆ ಸಮಯ ತುಂಬಾ ಬೇಕಾಗುತ್ತದೆ. ಇತ್ತೀಚೆಗೆ ಪ್ರದರ್ಶಕರೇ ಆಯ್ಕೆಯಲ್ಲಿ ಹೆಚ್ಚು ನಾಜೂಕಾಗಿರುವುದೂ ವಿದೇಶಿ ಮಾಡೆಲ್‌ಗಳಿಗೆ ಅವಕಾಶ ದೊರೆಯಲು ಮುಖ್ಯ ಕಾರಣ’ ಎನ್ನುತ್ತಾರೆ ಪ್ರಸಾದ್ ಬಿದಪ್ಪ.ಸಂಸ್ಕೃತಿಪ್ರಿಯರು ನಾವು

‘ಯಾವುದೇ ವಿಷಯವಾದರೂ ಮನುಷ್ಯನ ಮನಸ್ಥಿತಿ ಹೊಸತನವನ್ನು ಬೇಡುತ್ತಿರುತ್ತದೆ. ಹೀಗಾಗಿಯೇ ಫ್ಯಾಷನ್‌ ಲೋಕದಲ್ಲೂ ವಿಭಿನ್ನ ಶೈಲಿಯ ರೂಪದರ್ಶಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇಲ್ಲಿನ ಫ್ಯಾಷನ್‌ ಲೋಕ ಕೂಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಜ್ಜಾಗುತ್ತಿದೆ. ಮುಖ್ಯವಾಗಿ ವೆಬ್‌ಸೈಟ್‌ಗೆ ಸಂಬಂಧಿಸಿದ ಜಾಹೀರಾತಾದರೆ ಅದಕ್ಕೆ ವಿದೇಶಿ ರೂಪದರ್ಶಿಯರೇ ಬೇಕು. ಎಷ್ಟೇ ಆದರೂ ಭಾರತೀಯರು ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದವರು. ಮೈಮುಚ್ಚುವ ವಸ್ತ್ರಗಳಿಗೇ ಹೆಚ್ಚು ತೆರೆದುಕೊಳ್ಳುತ್ತಾರೆ. ವಿದೇಶೀಯರಾದರೆ ಎಲ್ಲಾ ರೀತಿಯ ಉಡುಗೆಗಳನ್ನು ಧರಿಸಲು ತಯಾರಿರುತ್ತಾರೆ ಹಾಗೂ ಫೋಟೊ ಶೂಟ್‌ಗಳಲ್ಲಿ ಅಗತ್ಯ ಪೋಸ್‌ ನೀಡಲು ಹಿಂದುಮುಂದು ನೋಡುವುದಿಲ್ಲ. ವೃತ್ತಿಪರತೆಯ ವಿಷಯಕ್ಕೆ ಬಂದರೆ ವಿದೇಶೀಯರು ಹೆಚ್ಚು ಪರಿಶ್ರಮದಿಂದ ಕೆಲಸ ಮಾಡುತ್ತಾರೆ. ಅವರು ನಿರೀಕ್ಷಿಸುವ ಸಂಬಳವೂ ನ್ಯಾಯಯುತವಾಗಿರುತ್ತದೆ’ ಎನ್ನುತ್ತಾರೆ ಪ್ರಸಾದ್ ಬಿದಪ್ಪ ಮಾಡೆಲ್‌ ಮ್ಯಾನೇಜ್‌ಮೆಂಟ್‌ ಮುಖ್ಯಸ್ಥ ಜೋಹೆಬ್‌ ಯೂಸುಫ್‌.ದೊಡ್ಡ ಅವಕಾಶಗಳು ಕೈತಪ್ಪುತ್ತವೆ

ಬೆಂಗಳೂರಿನಲ್ಲಿ ಇರಾನಿ ಮಾಡೆಲ್‌ಗಳಿಗೆ ಹೆಚ್ಚು ಅವಕಾಶವಿದೆ. ಅವರ ಎತ್ತರ, ತ್ವಚೆಯ ಬಣ್ಣ, ಆಕರ್ಷಕ ಮೈಕಟ್ಟು ಎಲ್ಲರಿಗೂ ಮೆಚ್ಚುಗೆಯಾಗುತ್ತದೆ. ಅನೇಕ ವಿನ್ಯಾಸಕರು ವಿದೇಶದಿಂದ ಉತ್ತಮ ರೂಪದರ್ಶಿಗಳನ್ನು ಕರೆಸಿಕೊಳ್ಳುತ್ತಾರೆ. ಹೀಗಾಗಿ ದೊಡ್ಡ ದೊಡ್ಡ ಕಾರ್ಯಕ್ರಮಗಳು ವಿದೇಶಿ ಮಾಡೆಲ್‌ಗಳ ಪಾಲಾಗುತ್ತಿರುವುದು ನಿಜ. ಇಲ್ಲಿಯ ಮಾಡೆಲ್‌ಗಳಿಗೆ ಇದರಿಂದ ಅವಕಾಶ ತುಸು ಕಡಿಮೆಯಾಗುತ್ತದೆ. 

ಮಾಧುರಿ ಮನೋಹರ್‌,  ಮಾಡೆಲ್‌ತಪ್ಪೇನೂ ಇಲ್ಲ

ವಿದ್ಯಾಭ್ಯಾಸ ಇಲ್ಲವೇ ವೃತ್ತಿಯ ಬೆನ್ನುಹತ್ತಿ ಅನೇಕ ವಿದೇಶಿಯರು ನಗರದಲ್ಲಿ ವಾಸವಾಗಿದ್ದಾರೆ. ಸೀರೆ ತೊಡುವುದರಿಂದ ಹಿಡಿದು ಭಾರತೀಯ ಸಂಸ್ಕೃತಿಗೆ ಸಂಬಂಧಿಸಿದ ಎಲ್ಲವನ್ನೂ ಅವರು ಕಲಿತಿದ್ದಾರೆ. ನಾವು ವಿದೇಶದಲ್ಲಿ ಅವಕಾಶ ಅರಸಿದಂತೆ ಅವರಿಗೂ ಇಲ್ಲಿ ಅವಕಾಶ ನೀಡುವುದರಲ್ಲಿ ತಪ್ಪೇನೂ ಇಲ್ಲ.

ರಮೇಶ್‌ ದೆಂಬ್ಲಾ, ವಿನ್ಯಾಸಕ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.