ಶನಿವಾರ, ನವೆಂಬರ್ 16, 2019
21 °C

`ಈ ಲೋಕವೇ ಭಗವಂತನ ಮಹಾಮನೆ'

Published:
Updated:

ಧಾರವಾಡ: `ಈ ಲೋಕ ಭಗವಂತನ ಮಹಾಮನೆ ಇದ್ದಂತೆ. ಇಲ್ಲಿ ಲಕ್ಷಕೋಟಿ ಜನ ನೆಲೆಸಿದ್ದಾರೆ. ಈ ಜನ ಹಾಳಾಗಬಾರದು ಎಂಬ ಉದ್ದೇಶದಿಂದ ಒಳ್ಳೆಯ ಸಂದೇಶಗಳನ್ನು ನೀಡಲು ಭಗವಂತ ಬಸವಣ್ಣನನ್ನು ಭೂಮಿಗೆ ಕಳುಹಿಸಿದ' ಎಂದು ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.ಇಲ್ಲಿಯ ಹುರಕಡ್ಲಿ ಅಜ್ಜ ಕಾನೂನು ಕಾಲೇಜಿನ ಆವರಣದಲ್ಲಿ ಬಸವ ಜಯಂತಿ ಶತಮಾನೋತ್ಸವದ ಅಂಗ ವಾಗಿ ಶುಕ್ರವಾರ ಪ್ರಾರಂಭಗೊಂಡ ಬಸವ ದರ್ಶನ ಪ್ರವಚನ ಕಾರ್ಯ ಕ್ರಮದಲ್ಲಿ ಅವರು ಉಪನ್ಯಾಸ  ನೀಡಿದರು.`ಬಸವಣ್ಣನವರು ಕನ್ನಡ ನಾಡಿನ ಅಪೂರ್ವ ಚೇತನ. ಭಾರತದ ಸ್ವತಂತ್ರ ವಿಚಾರವಾದಿ, ಪ್ರಪಂಚದ ಮಹಾ ಮಾನವತಾವಾದಿ. ಆತ್ಮ ಕಲ್ಯಾಣ ಮತ್ತು ಲೋಕಕಲ್ಯಾಣದ ಜವಾಬ್ದಾರಿಯನ್ನು ಹೊತ್ತು ಈ ನಾಡಿನಲ್ಲಿ ಅವತರಿಸಿದ ಪುಣ್ಯ ಪುರುಷ. ಸಾತ್ವಿಕ ವ್ಯಕ್ತಿತ್ವದಿಂದ ಹೊಸದೊಂದು ಮಾನವ ಲೋಕವನ್ನು ಹುಟ್ಟು ಹಾಕಿದ ಮಹಾತ್ಮ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದವರು ಬಸವಣ್ಣನವರು.ಹನ್ನೆರಡನೇ ಶತಮಾನದ ಕನ್ನಡ ನಾಡಿನ ಸಾಂಸ್ಕೃತಿಕ ಇತಿಹಾಸದಲ್ಲಿ ಯುಗ ಪರಿವರ್ತನೆ ಕಾಲವಾಗಿದ್ದ ಅಂದು, ಕನ್ನಡ ನಾಡಿನಲ್ಲಿ ಪ್ರಪಂಚವೇ ಜ್ವಾಲೆಯಾಗಿ ಪರಿಣಮಿಸಿ ಅಜ್ಞಾನ ಅಂಧಕಾರ, ಅಸಮಾನತೆ, ಅತಿರೇಕಗಳೆಂಬ ಕಸಕಡ್ಡಿ ಕಾಡು ಮೇಡುಗಳನ್ನು ಸುಟ್ಟು ಹಾಕಿ ಅರಿವಿನ ಉಜ್ವಲ ಬೆಳಕನ್ನು ಬೀರಿತು. ನವಜಾಗೃತಿಯ ನಾಂದಿಯನ್ನು ಹಾಡಿತು. ಆ ಬೆಳಕಿನ ಪುತ್ಥಳಿಯೇ ಬಸವಣ್ಣನವರಾಗಿದ್ದರು' ಎಂದು ಅವರು ಹೇಳಿದರು.ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಸ್ವಾಮೀಜಿ, ಬಸವ ಕೇಂದ್ರದ ಅಧ್ಯಕ್ಷ ರಾಜು ಮರಳಪ್ಪ ನವರ, ಕರ್ನಾಟಕ ವಿಶ್ವವಿದ್ಯಾಲಯ ಬಸವ ಅಧ್ಯಯನ ಪೀಠದ ಅಧ್ಯಕ್ಷ ಡಾ.ವೀರಣ್ಣ ರಾಜೂರ, ಸಿ.ಎಸ್. ಪಾಟೀಲ ಕುಲಕರ್ಣಿ, ಗಿರಿಜಕ್ಕಾ ಮಟ್ಟಿ ಇದ್ದರು.

ಪ್ರತಿಕ್ರಿಯಿಸಿ (+)