ಈ ವಾರದಲ್ಲಿ ವೇಳಾಪಟ್ಟಿ ಪ್ರಕಟ

7

ಈ ವಾರದಲ್ಲಿ ವೇಳಾಪಟ್ಟಿ ಪ್ರಕಟ

Published:
Updated:

ನವದೆಹಲಿ (ಪಿಟಿಐ): ಚುನಾವಣಾ ಆಯೋಗವು ತಮಿಳುನಾಡು ಮತ್ತು ಪಶ್ಚಿಮಬಂಗಾಳ ಸೇರಿದಂತೆ ಐದು ರಾಜ್ಯಗಳ ವಿಧಾನಸಭೆಗಳ ಚುನಾವಣೆಯ ವೇಳಾಪಟ್ಟಿಯನ್ನು ಈ ವಾರ ಪ್ರಕಟಿಸುವ ನಿರೀಕ್ಷೆ ಇದೆ. ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಕೂಡ ಚುನಾವಣೆ ನಡೆಯಬೇಕಿದೆ. ತಮಿಳುನಾಡಿನಲ್ಲಿ ಆಡಳಿತ ಡಿಎಂಕೆ ಪಕ್ಷವು ಜಯಲಲಿತಾ ನೇತೃತ್ವದ ಎಐಎಡಿಎಂಕೆ ಪಕ್ಷದಿಂದ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದು ವಿಜಯಕಾಂತ್ ನೇತೃತ್ವದ ಡಿಎಂಡಿಕೆಯೊಂದಿಗೆ ಮೈತ್ರಿಗೆ ಯತ್ನಿಸುತ್ತಿದೆ.ಎಡಪಕ್ಷಗಳು ಮತ್ತು ವೈಕೊ ನೇತೃತ್ವದ ಎಂಡಿಎಂಕೆ ಈಗಾಗಲೇ ಎಐಡಿಎಂಕೆ ಜತೆಗಿವೆ. ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಮಾತುಕತೆ ಮುಂದುವರಿದಿದೆ. 2ಜಿ ತರಂಗಾಂತರ ಹಂಚಿಕೆ ಹಗರಣದ ವಿವಾದದ ಮಧ್ಯೆ ಡಿಎಂಕೆ ಈಗ ಚುನಾವಣೆ ಎದುರಿಸಬೇಕಾಗಿದೆ. ಈ ವಿವಾದದಿಂದಾಗೇ ಡಿಎಂಕೆಯ ಎ. ರಾಜಾ ಅವರು ದೂರಸಂಪರ್ಕ ಸಚಿವ ಸ್ಥಾನವನ್ನು ತ್ಯಜಿಸಿದ್ದರು.ಪಶ್ಚಿಮಬಂಗಾಳದಲ್ಲಿ ಮೂರು ದಶಕಗಳವರೆಗೆ ಅಧಿಕಾರದಲ್ಲಿದ್ದ ಎಡರಂಗವು ಈಗ ತನ್ನ ಅತ್ಯಂತ ಕ್ಲಿಷ್ಟಕರ ರಾಜಕೀಯ ಹೋರಾಟವನ್ನು ಎದುರಿಸಬೇಕಾಗಿದೆ.ಮಮತಾ ಬ್ಯಾನರ್ಜಿ ಈ ಪಕ್ಷಕ್ಕೆ ತೀವ್ರ ಸ್ಪರ್ಧೆ ಒಡ್ಡುವ ನಿರೀಕ್ಷೆ ಇದೆ. ಕೇಂದ್ರದಲ್ಲಿ ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಂಚಿಕೊಂಡಿರುವ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲೂ ಆ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಪ್ರಕಟಿಸಿದೆ. ಅಸ್ಸಾಂನಲ್ಲಿ ಕಳೆದ ಎರಡು ಅವಧಿಗಳಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಂಭವ ಕಡಿಮೆ ಇದೆ. ಪ್ರತಿಪಕ್ಷ ಎಜಿಪಿ ಮತ್ತು ಬಿಜೆಪಿ ಚುನಾವಣೆಗೆ ಸಜ್ಜಾಗುತ್ತಿವೆ.ರಾಜ್ಯಸಭೆಯಲ್ಲಿ ಅಸ್ಸಾಂ ರಾಜ್ಯ ಪ್ರತಿನಿಧಿಸುವ ಪ್ರಧಾನಿ ಮನಮೋಹನ್‌ಸಿಂಗ್ ಈಗಾಗಲೇ ಕಳೆದ ತಿಂಗಳು ರಾಜ್ಯಕ್ಕೆ ಭೇಟಿ ನೀಡಿದ್ದು ಹಲವು ಅಭಿವೃದ್ಧಿ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಉಲ್ಫಾದೊಂದಿಗಿನ ಉದ್ದೇಶಿತ ಶಾಂತಿ ಮಾತುಕತೆ ಕೂಡ ಕಾಂಗ್ರೆಸ್‌ಗೆ ಉತ್ತೇಜನ ನೀಡುವ ಸಾಧ್ಯತೆ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ತೋರಿದ ಉತ್ತಮ ಸಾಧನೆ ಹಿನ್ನೆಲೆಯಲ್ಲಿ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್, ಸಿಪಿಎಂ ನೇತೃತ್ವದ ಆಡಳಿತ ಎಲ್‌ಡಿಎಫ್‌ಗೆ ತೀವ್ರ ಪ್ರತಿಸ್ಪರ್ಧೆ ಒಡ್ಡುವ ನಿರೀಕ್ಷೆಇದೆ. ಪುದುಚೇರಿಯಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದು ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಎಲ್ಲಾ ಯತ್ನ ಮಾಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry