ಗುರುವಾರ , ಜೂನ್ 17, 2021
21 °C

ಈ ಶಾಲಾ ಕಟ್ಟಡಕ್ಕೆ ಮಕ್ಕಳ ದರ್ಶನವಿಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಣನೂರು: ತಾಲ್ಲೂಕಿನ ಹೆಣ್ಣೂರು ಕೊಂಗಳಲೆ ಗ್ರಾಮದ ಚೈತ್ರಬಾಲಾ ಕೆರೆ ಪಕ್ಕದ ಮೈದಾನದಲ್ಲಿ ಐದು ವರ್ಷದ ಹಿಂದೆ ನಿಮಾರ್ಣಗೊಂಡ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ಈವರೆಗೂ ಉಪಯೋಗಕ್ಕೆ ಬಾರದಾಗಿದ್ದು, ಉದ್ಘಾಟನೆಗೊಳ್ಳದೇ ಹಾಳು ಬಿದ್ದಿದೆ.ಮಲ್ಲಿಪಟ್ಟಣ ಹೋಬಳಿಯ ದೊಡ್ಡ ಬೆಮ್ಮತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹೆಣ್ಣೂರು ಕೊಂಗಳಲೆ ಹೊರ ಭಾಗದ ಕೆರೆ ಅಂಗಳಕ್ಕೆ ಹೊಂದಿ ಕೊಂಡಂತಿರುವ ವಿಶಾಲ ಮೈದಾನದಲ್ಲಿ ಎ.ಟಿ. ರಾಮಸ್ವಾಮಿ ಅವರು ಶಾಸಕರಾ ಗಿದ್ದಾಗ ಸರ್ಕಾರದ ವತಿಯಿಂದ ಹಣ ವ್ಯಯಿಸಿ ಕಟ್ಟಿಸಿರುವ ಈ ಶಾಲಾ ಕಟ್ಟಡವು ನಿರುಪಯುಕ್ತ ಎಂಬಂತಾಗಿದೆ.ಸುಂದರ ಪರಿಸರ ಇರುವ ಕೆರೆ ಪಕ್ಕದಲ್ಲಿ ಶಾಲೆಯು ತಲೆ ಎತ್ತುವುದರಿಂದ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂಬ ಸದುದ್ದೇಶ ಹೊಂದಲಾಗಿತ್ತು. ಹಾಗಾಗಿ ಕಟ್ಟಡ ಕಾಮಗಾರಿ ಸಹ ಪೂರ್ಣಗೊಂಡಿತು.ತದನಂತರ ಕಟ್ಟಡ ನಿರ್ಮಾಣವಾಗಿ ಅದು ಪ್ರಾರಂಭೋತ್ಸವ ಆಗುವ ಹೊತ್ತಿಗೆ ಅಪಶಕುನ ಎಂಬಂತೆ ಜನರ ಮನದಲ್ಲಿ ಬೇರೆಯದೇ `ಯೋಚನೆ~ ಹೊಳೆದು ಉದ್ಘಾಟನೆಗೆ ಅಡ್ಡಿಯಾಯಿತು.ಅದೇನೆಂದರೆ ಶಾಲೆಗೆ ನಿತ್ಯ ಬರುವ ಮಕ್ಕಳ ಆಟವಾಡಲು ಆಕಸ್ಮಿಕವಾಗಿ ಕೆರೆಗೆ ಇಳಿದು ಅನಾಹುತ ಸಂಭವಿಸಬಹುದು ಎಂಬ ಕಾರಣಕ್ಕಾಗಿ ಕಟ್ಟಡವು ಉದ್ಘಾಟನೆ ಭಾಗ್ಯ ಕಾಣಲಿಲ್ಲ.ಒಂದು ವೇಳೆ ಶಾಲಾ ಕಟ್ಟಡ ನಿರ್ಮಾಣಕ್ಕೂ ಮುಂಚೆಯೇ ಇಂತಹದ್ದೊಂದು ಒಳ್ಳೆಯ ಯೋಚನೆ ಮೂಡಿದ್ದರೆ ಸರ್ಕಾರದ ಹಣ ವ್ಯರ್ಥವಾಗುತ್ತಿರಲಿಲ್ಲ ಎನ್ನುತ್ತಾರೆ ಸ್ಥಳೀಯರು.ಗ್ರಾಮದಲ್ಲಿ 1ರಿಂದ 10ನೇ ತರಗತಿವರೆಗೆ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಇದೆ. ಈ ಶಾಲೆಗಳಿಗೆ ಕಟ್ಟಡದ ಕೊರತೆ ಇಲ್ಲವಾದರೂ ಇಕ್ಕಟ್ಟಾಗಿದೆ. ಆದರೆ,  ಮಕ್ಕಳ ಉಪಯೋಗಕ್ಕೆಂದೇ ಚೈತ್ರಬಾಲಾ ಕೆರೆ ಸನಿಹದ ವಿಶಾಲ ಮೈದಾನದಲ್ಲಿ ನಿರ್ಮಾಣವಾದ ಶಾಲಾ ಕಟ್ಟಡವು ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿರುವುದು ದುರಾದೃಷ್ಟಕರ.ಹಲವು ವರ್ಷಗಳಿಂದ ಪಾಳು ಬಿದ್ದಿರುವ ಉದ್ದೇಶಿತ ಶಾಲಾ ಕಟ್ಟಡದ ಆಸುಪಾಸಿನಲ್ಲಿ ವಾಸ ಮಾಡುವ ನಿವಾಸಿಗಳು ಒಂದು ಕೊಠಡಿಗೆ ತಂಬಾಕು ಮತ್ತಿತರು ವಸ್ತುಗಳನ್ನು ತುಂಬಿ ಕೊಂಡಿದ್ದಾರೆ.`ಇನ್ನೊಂದು ಕೊಠಡಿ ಒಳಗೆ ಮೆಣಸಿನ ಗಿಡ, ಟ್ಯೊಮ್ಯಾಟೋ ಸಸಿ ಮಡಿ ಬೆಳೆಸಲಾಗುತ್ತಿದೆ. ಸರ್ಕಾರಿ ಶಾಲಾ ಕಟ್ಟಡವನ್ನು ಗೋದಾಮು ಆಗಿ ಪರಿವರ್ತಿಸಿಕೊಂಡಿರುವುದಲ್ಲದೇ ಸ್ವಂತ ಬಳಕೆಗಾಗಿ ಏಕಸ್ವಾಮ್ಯ ಹೊಂದಲು ಇಬ್ಬರು ವ್ಯಕ್ತಿಗಳು ಪರಸ್ಪರ ಬಡಿದಾಡಿ ಕೊಂಡು ನಂತರ ಪ್ರತ್ಯೇಕವಾಗಿ ಒಂದೊಂದು ಕೊಠಡಿಗೆ ಬೀಗ ಹಾಕಿ ಇಟ್ಟುಕೊಂಡಿದ್ದಾರೆ~ ಎಂದು ಗ್ರಾಮದ ಕೆಲವರು ದೂರುತ್ತಾರೆ.ವಿದ್ಯಾರ್ಥಿಗಳ ಉಪಯೋಗಕ್ಕೆ ಬಾರದಾಗಿ ಪಾಳು ಬಿದ್ದಿರುವ ಕಟ್ಟಡವು ಈಗ ನಿರ್ವಹಣೆಯಿಲದೇ ಶಿಥಿಲಗೊಳ್ಳುತ್ತಿದೆ. ಬಿಸಿಲು- ಮಳೆಗೆ ಕಿಟಕಿ, ಬಾಗಿಲುಗಳು, ಕಬ್ಬಿಣದ ಸಲಾಖೆ ತುಕ್ಕು ಹಿಡಿಯುತ್ತಿವೆ. ಕಟ್ಟಡದ ಸುತ್ತಲೂ ಮುಳ್ಳಿನ ಗಿಡ- ಗಂಟಿ ಬೆಳೆದು ಹಾಳಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.