ಈ ಶಿಕ್ಷಕರು ಗ್ರಾಮೀಣ ವಿದ್ಯಾರ್ಥಿಗಳ ಬಾಳಿನ ಬೆಳಕು!

7

ಈ ಶಿಕ್ಷಕರು ಗ್ರಾಮೀಣ ವಿದ್ಯಾರ್ಥಿಗಳ ಬಾಳಿನ ಬೆಳಕು!

Published:
Updated:

ಗಜೇಂದ್ರಗಡ: ರೋಣ ತಾಲ್ಲೂಕಿನ ಚಿಲ್‌ಝರಿ ಗ್ರಾಮದ ಮುಖ್ಯ ಶಿಕ್ಷಕ ಮುರ್ತುಜಾಸಾಬ್ ದಸ್ತಗಿರಸಾಬ್ ಸರಕಾವಸ್ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಹಿರಿಯ ಶಿಕ್ಷಕರು.ಬಾಲ್ಯದಲ್ಲಿ ತಮಗೆ ಎದುರಾದ ಸಂಕಷ್ಟಗಳು  ತಮ್ಮ ವಿದ್ಯಾರ್ಥಿಗಳಿಗೆ ಸುಳಿಯದಿರಲ್ಲಿ ಎಂಬ ದೃಷ್ಟಿಯಿಂದ ಇಪ್ಪತ್ತೆಂಟು ವರ್ಷಗಳ ಸುದೀರ್ಘ ಸೇವೆಯಲ್ಲಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಟೊಂಕಕಟ್ಟಿ ನಿಂತಿದ್ದಾರೆ.ಸಾವಿರಾರು ಮಕ್ಕಳಿಗೆ ಗುಣಾತ್ಮಕ ಪರಿಣಾಮಕಾರಿ ಶಿಕ್ಷಣದ ಜತೆಗೆ ಮಾನವೀಯತೆ, ತ್ಯಾಗ, ಸಹಾಯ, ಸಹಕಾರ, ಅಂತಃರಣ, ಉದಾರತೆ ಗುಣಗಳನ್ನು ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಕಲಿಸುತ್ತಿದ್ದಾರೆ. ಬಿ.ಎಡ್ ಪದವಿದರರಾದ ಸರಕಾವಸ್, 1984 ರಲ್ಲಿ ಧಾರವಾಡ ಜಿಲ್ಲೆಯ ನಲವಡಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಆರಂಭಿಸಿದರು.  ಅಂದಿನಿಂದ ಇಂದಿನವರೆಗೆ ಮಕ್ಕಳ ಶೈಕ್ಷಣಿಕ ಸರ್ವಾಂಗೀಣ ಅಭಿವೃದ್ಧಿಗೆ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಶ್ರಮಿಸುತ್ತಿದ್ದಾರೆ. ಶಾಲಾ ಮಕ್ಕಳಲ್ಲಿ ವರ್ಗಬೇಧಗಳನ್ನು ಮಾಡದೆ, ಜಾಣ-ದಡ್ಡ ಭೇದ-ಭಾವ ಎಣಿಸದೆ ಎಲ್ಲ ಮಕ್ಕಳಲ್ಲಿ ಸಮಾನತೆಯಿಂದ ಕಂಡವರು ಸರಕಾವಸ್. ಈ ಕಾರಣಕ್ಕಾಗಿ ಅವರು ವಿದ್ಯಾರ್ಥಿಗಳ, ಪಾಲಕರ ಅಚ್ಚುಮೆಚ್ಚಿನ ಶಿಕ್ಷಕರು.1988ರಲ್ಲಿ ರೋಣ ತಾಲ್ಲೂಕಿನ ಮುಶಿಗೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಲಕ್ಕಲಕಟ್ಟಿ ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಅಂಕೆಪ್ಪ ರಾಠೋಡ್ ಬಡತನದಿಂದ ಶಿಕ್ಷಣದಿಂದ ವಂಚಿತಗೊಂಡಿದ್ದನ್ನು ತಿಳಿದು ಎಂಟನೇ ತರಗತಿಯಿಂದ ಎಂ.ಡಿವರೆಗೆ ತಮ್ಮ ಜೇಬಿನ ಹಣವನ್ನು ನೀಡಿ ವಿದ್ಯಾರ್ಥಿ ರಾಠೋಡ್‌ನ ಭವಿಷ್ಯತ್ತಿನ ಕನಸು ಸಾಕಾರಗೊಳಿಸಿದರು.ಸದ್ಯ ಶಿಕ್ಷಕ ಸರಕಾವಸ್ ಅವರ ನೆರವಿನಿಂದ ಶಿಕ್ಷಣ ಪೊರೈಸಿದ ವಿದ್ಯಾರ್ಥಿ ಅಂಕೆಪ್ಪ ರಾಠೋಡ್ ಬೆಂಗಳೂರಿನ ಆಯುಷ್ ನಿರ್ದೇಶನಾಲಯದಲ್ಲಿ ಸಹಾಯಕ ಔಷಧ ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಶಿಕ್ಷಕ ಸರಕಾವಸ್ ಅವರು  ನನ್ನಂಥ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಬೆಳಗಿಸಿದ ಕೀರ್ತಿ ಸರಕಾವಸ್ ಅವರಿಗೆ ಸಲ್ಲಬೇಕು.   ನನ್ನ ಶೈಕ್ಷಣಿಕ ಪ್ರಗತಿಗೆ ಬೆನ್ನೆಲುಬಾಗಿ ನಿಲ್ಲದಿದ್ದರೆ ಇಂಥ ಉನ್ನತ ಹುದ್ಧೆ ಅಲಂಕರಿಸಲು ಸಾಧ್ಯವಾಗುತ್ತಿರಲಿಲ್ಲ' ಎನ್ನುತ್ತಾರೆ  ಹೇಮಂತಕುಮಾರ. ಆರ್ (ಅಂದು ಅಂಕೆಪ್ಪ ರಾಠೋಡ್).           ಅಂಕೆಪ್ಪವೊಬ್ಬನೇ ಅಲ್ಲ ಕುಮಾರಸ್ವಾಮಿ ಪುರಾಣಿಕಮಠ, ಜಯಶ್ರೀ ಪುರಾಣಿಕಮಠ, ಮಹ್ಮದ ಯೂಸುಫ್ ಬಾಗವಾನ, ಜಗದೀಶ ಬಡಿಗೇರ, ಗಂಗಾಧರ ಕಮ್ಮಾರ ರಂತಹ ನೂರಾರು ವಿದ್ಯಾರ್ಥಿಗಳಿದ್ದಾರೆ. ಗೋಗೇರಿ, ಕೊಟುಮಚಗಿ, ಗಜೇಂದ್ರಗಡ ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಸೇವೆ ಸಲ್ಲಿಸಿರುವ ಶಿಕ್ಷಕ ಸರಕಾವಸ್ ಸದ್ಯ ಗಜೇಂದ್ರಗಡದ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕನ್ನಡ, ಇಂಗ್ಲಿಷ್ ಹಾಗೂ ಇತಿಹಾಸ ವಿಷಯಗಳನ್ನು ಬೋಧಿಸುವ ಇವರು, ಮಕ್ಕಳ ಹಾಜರಾತಿ ಹೆಚ್ಚಳಕ್ಕೆ ವಿದ್ಯಾರ್ಥಿಗಳ ಪಾಲಕರಿಗೆ ಪತ್ರಗಳನ್ನು ಬರೆದು ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಕೋರುತ್ತಾರೆ. ಆದಾಗ್ಯೂ ವಿದ್ಯಾರ್ಥಿಗಳು ಶಾಲೆಗೆ ಬಾರದಿದ್ದರೆ ಸ್ವತಃ  ಅವರೇ ವಿದ್ಯಾರ್ಥಿಗಳ ಗ್ರಾಮ, ಮನೆಗಳಿಗೆ ತೆರಳಿ ಪಾಲಕರೊಂದಿಗೆ ಚರ್ಚಿಸಿ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ತಿಳಿ ಹೇಳುತ್ತಾರೆ.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry