ಶನಿವಾರ, ಡಿಸೆಂಬರ್ 7, 2019
22 °C

ಈ ಸಮಯ ಈರುಳ್ಳಿಮಯ...

Published:
Updated:
ಈ ಸಮಯ ಈರುಳ್ಳಿಮಯ...

ಒಂದೂರಲ್ಲಿ ಈರುಳ್ಳಿ ಅಂತ ಇತ್ತು. ಜನರು ಅದನ್ನು ಉಳ್ಳಾಗಡ್ಡೆ ಅಂತಲೂ ಕರೀತಾ ಇದ್ರು. ಸಾಂಬಾರಿಗೆ, ಬಜ್ಜಿಗೆ, ಮೊಸರು ಬಜ್ಜಿಗೆ, ಪಲ್ಯಕ್ಕೆ ಹೀಗೇ ತರಹೇವಾರಿ ಅಡುಗೆಗಳಿಗೆ ಅದನ್ನು ಬಳಸ್ತಾ ಇದ್ರು. ಉತ್ತರ ಭಾರತದಲ್ಲಂತೂ ಈರುಳ್ಳಿಯಿಲ್ಲದ ಅಡುಗೆ ಮನೆಯೇ ಇರ್ಲಿಲ್ಲ. ಆದರೂ ಸಂಪ್ರದಾಯಸ್ಥರು ಆಗಾಗ ಅದನ್ನು ಕಂಡ್ರೆ ಮೂಗು ಮುರೀತಾ ಇದ್ರು. ಅದು ತಾಮಸ ಆಹಾರ ಎಂಬುದು ಅವರು ಕೊಡುವ ಕಾರಣವಾಗಿತ್ತು. ಹೆಂಗಸರಂತೂ ಕಣ್ಣೀರಿಡುತ್ತಲೇ ಅದನ್ನು ಹೆಚ್ಚುತ್ತಿದ್ದರು.ಛೇ ತನ್ನ ಮೈಯಲ್ಯಾಕೆ ಇಂಥ ಘಾಟು ಎಂದು ಈರುಳ್ಳಿಯೂ ಬೇಸರ ಮಾಡಿಕೊಳ್ಳುತ್ತಿತ್ತು. ಪ್ರೇಮಿಗಳೂ ಪ್ರೇಮಿಗಳಾಗಿ ಇರುವವರೆಗೆ ಈರುಳ್ಳಿಯನ್ನು ದೂರ ಇಡುತ್ತಿದ್ದರು. ಆಗೆಲ್ಲ ಈರುಳ್ಳಿಗೆ ಬೇಸರವಾಗ್ತಾ ಇತ್ತು. ಕೆಲವೊಮ್ಮೆ ಮಾರುಕಟ್ಟೆಯಲ್ಲಿ ಬೆಲೆ ಬಿದ್ದು ಹೋದಾಗ ರೈತರು ಈರುಳ್ಳಿಯನ್ನು ತೆಗೆದು ಬೀದಿಗೆ ಎಸೆಯುತ್ತಿದ್ದರು. ಬೀದಿ ತುಂಬೆಲ್ಲ ಉಳ್ಳಾಡುತ್ತ ಕಂಡವರ ಕಾಲಿಂದ ತುಳಿಸಿಕೊಳ್ಳುತ್ತಿದ್ದ ಈರುಳ್ಳಿಯ ಗ್ರಹಗತಿ ಒಮ್ಮೆಲೇ ಬದಲಾಗಿ ಹೋಯಿತು.ಅದೇನಾಯಿತು ಎಂದರೆ ಈರುಳ್ಳಿಗೆ ಸಿಕ್ಕಾಪಟ್ಟೆ ಬೆಲೆ ಬಂದು ಬಿಟ್ಟಿತು. ಕಳ್ಳ ದಾಸ್ತಾನುದಾರರಿಂದ ಮಾರುಕಟ್ಟೆಗೆ ಈರುಳ್ಳಿ ಬರುವುದೇ ಕಡಿಮೆಯಾಗಿ ಇದ್ದ ಈರುಳ್ಳಿಗೆ ಒಮ್ಮೆಲೆ ಭಯಂಕರ ಬೆಲೆ ಬಂದು ಬಿಟ್ಟಿತು. ಅಬ್ಬಾ ಇಷ್ಟು ದಿನ ಕೋಲ್ಡ್ ಸ್ಟೋರೇಜ್‌ನಲ್ಲಿ ನಡುಗುತ್ತ ಕುಳಿತಿದ್ದೂ ಸಾರ್ಥಕವಾಯಿತು. ಈಗ ಜನ ನಾನೆಂದರೆ ಹೇಗೆ ಗೌರವ ಕೊಡುತ್ತಿದ್ದಾರೆ ಎಂದು ಈರುಳ್ಳಿಗೆ ಸಂತೋಷವಾಯಿತು. ದಿನಗಳು ಉರುಳಿದವು. ಈರುಳ್ಳಿಯ ಬೆಲೆ ಇನ್ನಷ್ಟು ಏರಿತು. ಎಲ್ಲೆಲ್ಲೂ ಈರುಳ್ಳಿಯದೇ ಮಾತು. ಅಷ್ಟು ದಿನ ಬೇಕಾಬಿಟ್ಟಿ ಇಡುತ್ತಿದ್ದ ಈರುಳ್ಳಿಯನ್ನು ಈಗ ಜೋಪಾನವಾಗಿ ಇಡತೊಡಗಿದರು.  ಈರುಳ್ಳಿಗೆ ಈರುಳ್ಳಿ ಮಾತ್ರ ಸಮ ಎನ್ನತೊಡಗಿದರು.ಇದೆಲ್ಲದರಿಂದ ಈರುಳ್ಳಿಗೆ ಸಿಕ್ಕಾಪಟ್ಟೆ ಡೌಲು ಬಂದು ಬಿಟ್ಟಿತು. ಜನರೆಲ್ಲ ಈರುಳ್ಳಿಯಿಂದಲೇ ಎಲ್ಲ ಎನ್ನತೊಡಗಿದ್ದರು!

ಈರುಳ್ಳಿಯನ್ನು ಜನ ಅಭಿಮಾನಿಸತೊಡಗಿದ್ದರು! ಹೇಗೆಂದರೆ, ಹೆಣ್ಣುಮಕ್ಕಳು ಕಿವಿಗೆ ಫ್ಯಾಶನ್ ರಿಂಗ್ ತೊಡುವ ಬದಲು ಈರುಳ್ಳಿಯನ್ನು ಧರಿಸತೊಡಗಿದರು! ಈರುಳ್ಳಿಯದೇ ಹಾರ, ಈರುಳ್ಳಿಯದೇ ಬಳೆ, ಈರುಳ್ಳಿಯದೇ ಡಿಸೈನ್ ಇರುವ ಅಂಗಿ, ಈರುಳ್ಳಿಯದೇ ಚಿತ್ತಾರವಿರುವ ಚಪ್ಪಲ್– ಹೀಗೆ ಎಲ್ಲವೂ ಈರುಳ್ಳಿಮಯ.ಇನ್ನು ಜನರಂತೂ ನೋಟಿನ ಬದಲು ಈರುಳ್ಳಿಯನ್ನೇ ಕೊಡತೊಡಗಿದರು. ಐದು ಕೇಜಿ ಈರುಳ್ಳಿಗೆ ಒಂದು ಜೊತೆ ಚಪ್ಪಲಿ. ಹತ್ತು ಕೇಜಿ ಈರುಳ್ಳಿಗೆ ಒಳ್ಳೆಯ ಬಟ್ಟೆ. ಒಂದು ಕೇಜಿ ಈರುಳ್ಳಿಗೆ ಒಂದು ಎಳನೀರು– ಹೀಗೆ ಈರುಳ್ಳಿಯನ್ನೇ ಎಲ್ಲದಕ್ಕೂ ಕೊಡುತ್ತಿದ್ದರು. ಇನ್ನು ಬಸ್ಸಿನಲ್ಲೂ ಅಷ್ಟೆ. ಕಂಡಕ್ಟರ್ ಈರುಳ್ಳಿ ತೆಗೆದುಕೊಂಡೇ ಟಿಕೆಟ್ ಕೊಡತೊಡಗಿದ.ದೂರದ ಪ್ರಯಾಣವಾದರೆ ಕೇಜಿಗಟ್ಟಲೆ ಈರುಳ್ಳಿ ಕೊಡಬೇಕಿತ್ತು. ಅಲ್ಲೇ ಹತ್ತಿರದ ಪ್ರಯಾಣಕ್ಕೆ ಅರ್ಧ ಈರುಳ್ಳಿ, ಎರಡು ತುಂಡು ಈರುಳ್ಳಿ ಹೀಗೆಲ್ಲ ತೆಗೆದುಕೊಳ್ಳುತ್ತಿದ್ದ. ಆಫೀಸ್‌ಗಳಲ್ಲಂತೂ ಈರುಳ್ಳಿ ಇಲ್ಲದೇ ವ್ಯವಹಾರವೇ ಇರಲಿಲ್ಲ. ಕಂಪ್ಯೂಟರ್, ಫೈಲ್, ಆಫೀಸ್ ಬಾಡಿಗೆ, ನೌಕರರ ಸಂಬಳ ಎಲ್ಲ ಈರುಳ್ಳಿ ಮೂಲಕವೇ ನಡೆಯತೊಡಗಿತು. ಯುವಕ, ಯುವತಿಯರು ಈರುಳ್ಳಿಯದೇ ಸುಗಂಧದ್ರವ್ಯ ಪೂಸಿಕೊಳ್ಳತೊಡಗಿದರು! ಜನರೆಲ್ಲ ಈರುಳ್ಳಿಗೆ ಮನಸೋತಿರುವುದು ನೋಡಿ ಸಿನಿಮಾದವರೂ ಈರುಳ್ಳಿ ಬಗ್ಗೆಯೇ ಸಿನಿಮಾ ಮಾಡತೊಡಗಿದರು.ನಾಯಕನಿಗೆ ಗಂಡೀರುಳ್ಳಿ ಎಂದು ಹೆಸರಿಟ್ಟರೆ ನಾಯಕಿಗೆ ಹೆಣ್ಣೀರುಳ್ಳಿ ಎಂದು ಹೆಸರಿಡುತ್ತಿದ್ದರು. ಸಾಹಿತಿಗಳು ಈರುಳ್ಳಿಯಿಲ್ಲದೇ ಕಥೆಯನ್ನೇ ಬರೆಯುತ್ತಿರಲಿಲ್ಲ. ಇನ್ನು ದೊಡ್ಡ ದೊಡ್ಡ ಅವಾರ್ಡ್ ಕೊಡುವಾಗಲೂ ‘ಈರುಳ್ಳಿ ಪರಾಕ್ರಮಿ’, ‘ಈರುಳ್ಳಿ ಬ್ರಹ್ಮ’, ‘ಈರುಳ್ಳಿ ವೀರ’, ‘ಈರುಳ್ಳಿ ಸರದಾರ’ ಎಂದೆಲ್ಲ ಕೊಡತೊಡಗಿದರು. ನಾಗರಿಕರೆಲ್ಲ ಈರುಳ್ಳಿಯನ್ನು ಕೊಂಡು ತಂದು ತಿಜೋರಿಯಲ್ಲಿ ಇರಿಸತೊಡಗಿದರು! ಕೆಡದಂತೆ ಒಣಗಿಸಿ ಅದಕ್ಕೇನೋ ರಾಸಾಯನಿಕ ಸಿಂಪಡಿಸಿ ಭದ್ರವಾಗಿ ಇಡತೊಡಗಿದರು. ಹೆಂಗಸರಂತೂ ಮೂಟೆಗಟ್ಟಲೇ ಈರುಳ್ಳಿ ತೆಗೆದುಕೊಂಡು ಹೋಗಿ ಚಿನ್ನಕೊಳ್ಳತೊಡಗಿದರು.ಇದನೆಲ್ಲ ನೋಡಿ ಈರುಳ್ಳಿಗೆ ಭಾರೀ ಡೌಲು ಬಂದುಬಿಟ್ಟಿತು. ನಾನೆಂದರೆ ಕಡಿಮೆಯೆ? ಜನ ನನಗಾಗಿ ಸಂತೋಷದಿಂದ ಕಣ್ಣೀರು ಸುರಿಸುತ್ತಿದ್ದಾರೆ. ನಾನಿಲ್ಲದಿದ್ದರೆ ಇವರಿಗೆ ಏನೂ ಕೊಂಡುಕೊಳ್ಳಲಾಗುವುದಿಲ್ಲ.  ಹುಡುಗಿಯರಿಗೆ ನಾನಿಲ್ಲದೇ ಅಲಂಕಾರವೇ ಆಗುವುದಿಲ್ಲ. ಹ ಹ್ಹಾ, ನಾನು ಎಲ್ಲರಿಗೂ ಬೇಕಾದವನು ಎಂದು ಜಂಬದಿಂದ ಬೀಗತೊಡಗಿತು.ಅಹಂಕಾರದ ಮದದಲ್ಲಿ ಅದಕ್ಕೆ ಏನು ಮಾಡಬೇಕೆಂದೇ ತೋಚಲಿಲ್ಲ. ತನ್ನ ಜನಪ್ರಿಯತೆ ಎಷ್ಟಿದೆ ನೋಡಬೇಕೆಂದು ಹೆಗಲಿಗೆ ವ್ಯಾನಿಟಿ ಬ್ಯಾಗ್ ಏರಿಸಿಕೊಂಡು, ಕೂಲಿಂಗ್ ಗ್ಲಾಸ್ ಧರಿಸಿ ಮಾಲ್‌ಗೆ ಹೋಯಿತು. ಈರುಳ್ಳಿಯನ್ನು ಕಾಣುತ್ತಿದ್ದಂತೆ ಜನ, ಆಟೋಗ್ರಾಫ್ ಕೇಳುತ್ತ ಬಂದು ಮುತ್ತಿಬಿಟ್ಟರು. ಕೆಲವರು ಅದನ್ನು ತೆಗೆದುಕೊಳ್ಳಲು ಪ್ರಯತ್ನಿಸಿದರೆ, ಕೆಲವರು ಅದನ್ನು ಕಿಸೆಗೆ ಹಾಕಿಕೊಳ್ಳಲು ನೋಡಿದರು. ಅದಕ್ಕೆ ಉಸಿರು ಕಟ್ಟಿದಂತಾಯಿತು.ಈರುಳ್ಳಿಗೆ ಅವಮಾನವಾದರೆ ತಮ್ಮ ಮಾಲ್‌ಗೆ ಕೆಟ್ಟ ಹೆಸರು ಎಂದು ತಿಳಿದ ಮಾಲಿಕ ಓಡಿ ಬಂದು ಈರುಳ್ಳಿಯನ್ನು ಅವರ ಕೈಯಿಂದ ತಪ್ಪಿಸಿ ಕರೆತಂದು ಕಾರು ಹತ್ತಿಸಿದ. ಜನರು ಹಾಗೆ ಮುಗಿಬಿದ್ದದ್ದೂ ಈರುಳ್ಳಿಗೆ ಒಳಗೊಳಗೇ ಖುಷಿ ತಂದಿತ್ತು. ಆದರೂ ತನಗೆ ಬೇಕೆಂದಾಗ ಹೊರ ಹೋಗುವಂತಿಲ್ಲವಲ್ಲ ಎಂದು ಬೇಸರವಾಗತೊಡಗಿತು. ಕೂಡಲೆ ಮನೆಗೆ ಬಂದು  ತನಗೆ ಈ ಕೂಡಲೇ ಗನ್‌ಮ್ಯಾನ್ ಸೆಕ್ಯುರಿಟಿ ಹಾಗೂ ಬುಲೆಟ್ ಪ್ರೂಫ್ ಕಾರು ಬೇಕೆಂದು ಕೇಂದ್ರ ಗೃಹಖಾತೆಗೆ ಪತ್ರ ಬರೆಯಿತು.ಈರುಳ್ಳಿ ಪತ್ರ ಕೈಸೇರುತ್ತಿದ್ದಂತೆ ದಡಬಡಾಯಿಸಿದ ಅಧಿಕಾರಿಗಳು ತಕ್ಷಣ ಅದು ಕೇಳಿದ್ದೆಲ್ಲವನ್ನೂ ಒದಗಿಸಿದರು. ಅಂದಿನಿಂದ ಈರುಳ್ಳಿ ಕಾರಲ್ಲಿ ಹೊರಟರೆ ಹಿಂದೆ ಮುಂದೆ ಹತ್ತು ಕಾರುಗಳಿರುತ್ತಿದ್ದವು. ಟ್ರಾಫಿಕ್ ಪೋಲಿಸರು ಮೊದಲೇ ಪ್ಲಾನ್ ಮಾಡಿ ರಸ್ತೆ ತೆರವು ಮಾಡುತ್ತಿದ್ದರು. ಎಲ್ಲೆಲ್ಲೂ ಈರುಳ್ಳಿಯದೇ  ಕಾರುಬಾರು. ಈರುಳ್ಳಿಯದೇ ಆರ್ಭಟ. ಈರುಳ್ಳಿಯದೇ ಗುಣಗಾನ.ಈರುಳ್ಳಿಯ ಮೆರೆದಾಟ ನೋಡಿ ನೋಟಂತೂ ಧರೆಗಿಳಿದು ಹೋಗಿತ್ತು. ನೋಟು ಬೆವರು ಒರೆಸಲೂ ಯೋಗ್ಯವಲ್ಲ ಎಂದು ತೀರ್ಮಾನಿಸಿ ಬಿಟ್ಟಿದ್ದರು ಜನ. ಛೇ, ಟಿಶ್ಯು ಪೇಪರಿಗಿರುವ ಗೌರವವೂ ತನಗಿಲ್ಲವಲ್ಲ ಎಂದು ನೋಟು ಬಿಕ್ಕಿ ಬಿಕ್ಕಿ ಅತ್ತಿತ್ತು. ಈರುಳ್ಳಿಯನ್ನು ಎದುರಿಸಿ ಮಾತಾಡುವವರು ಯಾರು?ಇದ್ದುದರಲ್ಲಿ ಚಿನ್ನಕ್ಕೆ ಮಾತ್ರ ಆ ಧೈರ್ಯವಿದ್ದಂತಿತ್ತು. ಒಂದು ದಿನ  ಈರುಳ್ಳಿ ಮನೆಗೆ ಬಂದ ಚಿನ್ನ, ‘ದಯವಿಟ್ಟು ನಮ್ಮ ಮೇಲೆ ಕರುಣೆ ತೋರಿಸು. ನಾನು, ನೋಟು ಇಬ್ಬರೂ ಶತಮಾನಗಳಿಂದ ಗೌರವ ಇಟ್ಟುಕೊಂಡು ಬಂದವರು. ಈಗ ನಿನ್ನ ಮೆರೆದಾಟದಿಂದ ನಾವು ಮೂರು ಕಾಸಿಗೆ ಇಳಿದಿದ್ದೇವೆ. ಹೀಗೆಲ್ಲ ಆಡಬೇಡ. ಇದು ಹೆಚ್ಚು ದಿನ ಉಳಿಯಲ್ಲ. ನಿನ್ನ ಸ್ಥಾನವಾದ ಅಡುಗೆ ಮನೆಯಲ್ಲೇ ನೀನು ಭದ್ರವಾಗಿರಬಲ್ಲೆ’ ಎಂದಿತು. ಆಗ ಈರುಳ್ಳಿಗೆ ವಿಪರೀತ ಕೋಪ ಬಂತು. ಛಿಲ್ಲನೆ ಮೈಯಿಂದ ಒಂದಷ್ಟು ಘಾಟು ರಸ ಚಿಮ್ಮಿಸಿ ಚಿನ್ನಕ್ಕೆ ಕಣ್ಣೀರು ಬರುವಂತೆ ಮಾಡಿತು. ಜನ ನಿಮ್ಮ ಚೆಲ್ಲಾಟದಿಂದ ರೋಸಿಹೋಗಿದ್ದಾರೆ. ಅದಕ್ಕೇ ನನ್ನ ಇಷ್ಟಪಡುತ್ತಿರುವುದು. ನಿಮ್ಮಂಥ ಯಕಃಶ್ಚಿತ್ತರ ಬಳಿ ನನಗೆ ಮಾತಾಡುವುದುಏನೂ ಇಲ್ಲ ಎಂದು ಕಳಿಸಿಬಿಟ್ಟಿತು.ಈ ನಡುವೆ ಹೊಸ ಸರ್ಕಾರ ಬಂತು. ಪ್ರಧಾನಿ ಹಾಗೂ ಎಲ್ಲ ಎಂಪಿಗಳೂ, ಈರುಳ್ಳಿಯ ಹೆಸರಿನಲ್ಲೇ ಪ್ರಮಾಣವಚನ ಸ್ವೀಕರಿಸಿದರು. ಈರುಳ್ಳಿಯನ್ನು ಎದುರಿಗಿಟ್ಟುಕೊಂಡೇ ಸರಕಾರ ರಚಿಸಿದರು. ಅದೇ ಸಮಯಕ್ಕೆ ಇನ್ನೊಂದು ವಿಚಿತ್ರ ಸಂಭವಿಸಿತು. ಅದೇನೆಂದರೆ ಈರುಳ್ಳಿಯೆದುರು ಡಾಲರ್ ಬೆಲೆ ಒಂದೇ ಸಮ ಬೀಳತೊಡಗಿತು. ಒಂದು ಕೇಜಿ ಈರುಳ್ಳಿ ಬೇಕೆಂದರೆ ೩೦೦ ಡಾಲರ್ ತೆರಬೇಕಿತ್ತು! ಇದರಿಂದ ಇನ್ನಷ್ಟು ಬೀಗಿದ ಈರುಳ್ಳಿ– ‘ಇನ್ನು ತಾನು ಯೋಚಿಸುವುದೇನಿದೆ? ತಾನು ದೇವರಿಗಿಂತ ಮಿಗಿಲು, ಇನ್ನು ಮುಂದೆ ಗಣೇಶನ ಬದಲು ತನಗೇ ಪ್ರಥಮ ಪೂಜೆ ಆಗಬೇಕೆಂದು ಬೇಡಿಕೆ ಇಡಬೇಕು’ ಎಂದು ಯೋಚಿಸತೊಡಗಿತು. ಇಷ್ಟು ದಿನ ಈರುಳ್ಳಿಯ ಮೆರೆದಾಟ ನೋಡಿ ಸುಮ್ಮನಿದ್ದ ಗಣೇಶನಿಗೆ ಈಗ ಒಳಗೊಳಗೇ ಭಯವಾಗತೊಡಗಿತು. ಮೊದಲೇ ಭೂಲೋಕದಲ್ಲಿ ಜನ ತನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ತಾನು ರೌಡಿ, ಕಟುಕ ಎಂದೆಲ್ಲ ಹೇಳುತ್ತಿದ್ದಾರೆ. ಇದರಿಂದ ಜನರಲ್ಲಿ ನಾಸ್ತಿಕತೆ ಬೆಳೆಯಬಹುದು.ಮೇಲಾಗಿ ಈ ಈರುಳ್ಳಿ ಬೇರೆ ಹೀಗೆಲ್ಲ ಕೇಳಿಬಿಟ್ಟರೆ ತನ್ನ ಕಥೆ ಮುಗಿದೇ ಹೋಯಿತು. ಜನ ತನ್ನ ದೇವಸ್ಥಾನದಲ್ಲೆಲ್ಲ ಈರುಳ್ಳಿಯನ್ನಿಟ್ಟೇ ಪೂಜಿಸತೊಡಗಿಬಿಡುತ್ತಾರೆ. ಇದಕ್ಕೇನಾದರೂ ಮಾಡಲೇಬೇಕು ಎಂದು ಆಲೋಚಿಸಿ ಈರುಳ್ಳಿಯ ಪಾಪದ ಕೊಡ ತುಂಬುವುದನ್ನೇ ಕಾಯತೊಡಗಿದ.

ಈರುಳ್ಳಿಗೆ ಮದವೇರಿ ಬಿಟ್ಟಿತ್ತು. ತಾನೇನು ಮಾಡುತ್ತಿದ್ದೇನೆ ಎಂಬ ಅರಿವಿಲ್ಲದೇ ಒಂದು ಆಜ್ಞೆ ಹೊರಡಿಸಿಬಿಟ್ಟಿತು. ಅದೇನೆಂದರೆ– ‘ಇನ್ನು ಮುಂದೆ ದೇಶದಲ್ಲಿ ಯಾರೂ ತನ್ನನ್ನು ಬಳಸಬಾರದು.ಯಾರ ಮನೆಯಲ್ಲೂ, ಯಾವ ಹೊಟೇಲುಗಳಲ್ಲೂ, ಯಾವ ಔಷಧಾಲಯಗಳಲ್ಲೂ ಅಡುಗೆಗಾಗಲೀ, ಇನ್ಯಾವುದಕ್ಕಾಗಲೀ ತನ್ನನ್ನು ಬಳಸಬಾರದು. ಈರುಳ್ಳಿ ಎಂದರೆ ಪರಮ ಶ್ರೇಷ್ಠ! ಇನ್ನು ಮುಂದೆ ದೇವರ ಪೀಠದಲ್ಲೇ ನನ್ನನ್ನು ಪ್ರತಿಷ್ಠಾಪಿಸಬೇಕು’ ಎಂದು ಆಜ್ಞೆ ಹೊರಡುವಂತೆ ಮಾಡಿತು. ಈ ಆಜ್ಞೆ ಹೊರಬೀಳುತ್ತಿದ್ದಂತೆ ದೇವಲೋಕದಲ್ಲಿದ್ದ ಗಣೇಶ ಮುಗುಳ್ನಕ್ಕ. ಸೋಜಿಗ ಎಂದರೆ ಆವತ್ತಿನಿಂದ ಈರುಳ್ಳಿ ಬೆಲೆ ಒಂದೇ ಸಮನೆ ಇಳಿಯತೊಡಗಿತು.ಎಷ್ಟು ಈರುಳ್ಳಿ ಕೊಟ್ಟರೂ ಯಾವ ಸಾಮಾನೂ ಬರುತ್ತಿರಲಿಲ್ಲ. ಈರುಳ್ಳಿ ಬೆಲೆ ನೋಡಿ ಅತಿಯಾಗಿ ಬೆಳೆದ ರೈತರೆಲ್ಲ  ಬೇಸತ್ತು ಈರುಳ್ಳಿಯನ್ನು ರಸ್ತೆಗೆ ಎಸೆಯತೊಡಗಿದರು. ಅಷ್ಟು ದಿನ ರಾಜವೈಭೋಗದಲ್ಲಿದ್ದ ಈರುಳ್ಳಿ ಒಂದೇ ಸಲಕ್ಕೆ ಬೀದಿಗೆ ಬಿದ್ದಿತು. ಅದರ ಮೇಲೆ ಬಸ್ಸು ಲಾರಿಗಳು ಹತ್ತಿ ಹೋದವು. ಕೆಲವು ಅಲ್ಲಲ್ಲೇ ಕೊಳೆತವು. ಈರುಳ್ಳಿಯ ಸುಗಂಧದ್ರವ್ಯ ಪೂಸಿಕೊಳ್ಳುತ್ತಿದ್ದ ಯುವಕ ಯುವತಿಯರು ಈಗ ವ್ಯಾಕ್ ಎನ್ನತೊಡಗಿದರು. ಇಡೀ ದೇಶವೇ ಈರುಳ್ಳಿ ನಾತದಿಂದ ಗಬ್ಬುನಾರುತ್ತಿರುವುದು ನೋಡಿ ಕಸದ ಲಾರಿಗಳು ಬಂದು ಅವನ್ನೆಲ್ಲ ಗುಡ್ಡೆ ಮಾಡಿ ತಿಪ್ಪೆ ಗುಂಡಿಗೆ ತಂದು ಎಸೆದವು. ತಿಪ್ಪೆಗುಂಡಿಯ ಕೆಟ್ಟ ವಾಸನೆ, ತನ್ನ ಮೈಯ ಕೊಳೆತ ನಾತ ಎಲ್ಲ ಸೇರಿ ಈರುಳ್ಳಿ ಸಹಿಸಲಾರದ ನೋವಿನಿಂದ ಕಣ್ಣೀರಿಟ್ಟಿತು. 

ಪ್ರತಿಕ್ರಿಯಿಸಿ (+)