ಶನಿವಾರ, ಮಾರ್ಚ್ 6, 2021
20 °C

ಈ ಸಮಯ ಸಂಗೀತಮಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಸಮಯ ಸಂಗೀತಮಯ

ಇಂದು ವಿಶ್ವ ಸಂಗೀತ ದಿನ. ಎಲ್ಲ ರೀತಿ ಸಂಗೀತ ಪ್ರಕಾರಗಳು, ಸಂಗೀತ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿರುವ ಬೆಂಗಳೂರಿನಲ್ಲಿ ಈ ದಿನಕ್ಕೆ ಸಹಜವಾಗಿಯೇ ಮಹತ್ವ.ಮೂರು ನಾಲ್ಕು ದಶಕಗಳ ಹಿಂದೆ ಬೆಂಗಳೂರಿನ ಬೀದಿ, ಬೀದಿಗಳಲ್ಲಿ ಕರ್ನಾಟಕ ಸಂಗೀತದ ರಾಗಗಳು ಅನುರಣಿಸುತ್ತಿದ್ದವು. ಕನ್ನಡಿಗರ ಮನೆಯ ಹೆಣ್ಣು ಮಕ್ಕಳು ಕನಿಷ್ಠ ಸುಗಮ ಸಂಗೀತ ಕಲಿಯಲಾದರೂ ಸಂಗೀತ ಶಾಲೆಗೆ ಸೇರಿಕೊಳ್ಳುತ್ತಿದ್ದರು.ಆದರೆ, ಈಗ ಹಾಗಿಲ್ಲ. ಕರ್ನಾಟಕ ಸಂಗೀತದಂತೆ ಹಿಂದುಸ್ತಾನಿ ಸಂಗೀತವೂ ಇಲ್ಲಿ ಬೇರು ಬಿಡುತ್ತಿದೆ. ಮೊದಲ ತಲೆಮಾರಿನ ಹಿಂದುಸ್ತಾನಿ ಗಾಯಕಿಯರಾದ ಶ್ಯಾಮಲಾ ಭಾವೆ, ಲಲಿತಾ ಉಭಯಕರ್ ಮುಂತಾದವರ ಜೊತೆ ಈಗ ಹಿಂದುಸ್ತಾನಿ ಸಂಗೀತಕ್ಕೆ ಹೊಸ ನೀರು ಬರಲಾರಂಭಿಸಿದೆ. ಉತ್ತರ ಕರ್ನಾಟಕದವರೇ ಹೆಚ್ಚಿರುವ ಬಸವೇಶ್ವರ ನಗರ, ರಾಜಾಜಿನಗರ, ಮಲ್ಲೇಶ್ವರಗಳಲ್ಲಿ ಹಿಂದುಸ್ತಾನಿ ಸಂಗೀತ ಕಲಾ ಶಾಲೆ, ಸಂಗೀತಗಾರರು ಹೆಚ್ಚಿದ್ದಾರೆ.ಹಳೆಯ ದಂಡು ಪ್ರದೇಶವಾದ ಕಾಕ್ಸ್‌ಟೌನ್, ಬೆನ್ಸ್‌ನ್ ಟೌನ್, ಬ್ರಿಗೇಡ್ ರಸ್ತೆ, ಲಿಂಗರಾಜಪುರ, ಶಾಂತಿನಗರ ಆಸುಪಾಸು ಪಾಶ್ಚಾತ್ಯ ಸಂಗೀತ ಶಾಲೆಗಳ ಭರಾಟೆ.

ಅಷ್ಟೇ ಏಕೆ. ವಿಶ್ವವಿಖ್ಯಾತ ರಾಕ್, ಪಾಪ್ ಗಾಯಕರು ಬೆಂಗಳೂರಿನಲ್ಲಿ ಕಛೇರಿ ನಡೆಸದೇ ತಮ್ಮ ಭಾರತ ಪ್ರವಾಸ ಮುಗಿಸುವುದಿಲ್ಲ.ವಿಶ್ವ ಸಂಗೀತ ದಿನದ ಹಿನ್ನೆಲೆಯಲ್ಲಿ ನಗರದಲ್ಲಿ ಮಂಗಳವಾರ ಹಲವು ಕಾರ್ಯಕ್ರಮಗಳು ನಡೆಯಲಿವೆ.ಆಚರಣೆ ಏಕೆ? ಹೇಗೆ?: ವಿಶ್ವ ಸಂಗೀತ ದಿನಾಚರಣೆ ಹುಟ್ಟಿದ್ದು ಹೇಗೆ? ಜೂನ್ 21ರಂದೇ ಈ ದಿನ ಆಚರಿಸುವುದು ಏಕೆ ಎಂಬುದು ಕುತೂಹಲಕರ.ಉತ್ತರಾರ್ಧ ಗೋಳದಲ್ಲಿ  ಜೂನ್ 21 ವರ್ಷದ ಅತಿ ದೀರ್ಘ ಹಗಲು. ಅಂದು ಸೂರ್ಯನ ಬೆಳಕು ಬಹುಹೊತ್ತಿನವರೆಗೆ ಭೂಮಿ ತಲುಪುತ್ತಿರುತ್ತದೆ. 1976ರಲ್ಲಿ ಅಮೆರಿಕದ ಸಂಗೀತಗಾರ ನ್ಯಾಷನಲ್ ಫ್ರೆಂಚ್ ರೇಡಿಯೋದ ಉದ್ಯೋಗಿ ಜೊಯೆಲ್ ಕೊಹೆನ್ ಈ ದಿನ ಅಹೋರಾತ್ರಿ ಸಂಗೀತ ಉತ್ಸವ ಆಚರಿಸುವ ಪ್ರಸ್ತಾಪ ಮುಂದಿಟ್ಟಿದ್ದ. 1981ರಲ್ಲಿ ಫ್ರಾನ್ಸ್‌ನ ಸಂಗೀತ ಮತ್ತು ನೃತ್ಯ ನಿರ್ದೇಶಕ ಮಾರಿಸ್ ಫ್ಲುರೆಟ್ ಅವರು ಕೊಹೆನ್‌ನ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರು. 1982ರಲ್ಲಿ ಮೊದಲ ಬಾರಿ ಫ್ರಾನ್ಸ್‌ನಲ್ಲಿ ವಿಶ್ವ ಸಂಗೀತ ದಿನ ಆಚರಿಸಲಾಯಿತು.ಈಗ ಭಾರತ ಸೇರಿದಂತೆ ಆಸ್ಟ್ರೇಲಿಯಾ, ಬೆಲ್ಜಿಯಂ, ಬ್ರಿಟನ್, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್, ಚೀನಾ, ಲೆಬನಾನ್, ಮಲೇಷ್ಯಾ, ಪಾಕಿಸ್ತಾನ ಮತ್ತಿತರ ದೇಶಗಳಲ್ಲೂ ವಿಶ್ವ ಸಂಗೀತ ದಿನ ಆಚರಿಸಲಾಗುತ್ತದೆ. 2007ರಲ್ಲಿ ಮೊದಲ ಬಾರಿಗೆ ನ್ಯೂಯಾರ್ಕ್‌ನಲ್ಲಿ ಈ ದಿನ ಆಚರಿಸಲಾಯಿತು.ಪಾಶ್ಚಿಮಾತ್ಯ ದೇಶಗಳಲ್ಲಿ ಇದೊಂದು ದಿನ ಉದಯೋನ್ಮುಖ ಸಂಗೀತಗಾರರು ಮತ್ತು ಹಿರಿಯ ಕಲಾವಿದರು ಬೀದಿಯಲ್ಲೂ ಕಾರ್ಯಕ್ರಮ ನೀಡುತ್ತಾರೆ. ಹಲವು ಸಂಗೀತ ಕಛೇರಿಗಳನ್ನು ಉಚಿತವಾಗಿ ಏರ್ಪಡಿಸಲಾಗುತ್ತದೆ.ಸಂಗೀತ ಸ್ಪರ್ಧೆ, ರಸಪ್ರಶ್ನೆ, ಸಂಗೀತ ವಾದ್ಯಗಳ ಪ್ರದರ್ಶನ, ಮಾರಾಟ ನಡೆಯುತ್ತದೆ. ಆ ದಿನ ಎಷ್ಟೇ ಜೋರಾಗಿ ಹಾಡಿದರೂ, ವಾದ್ಯ ನುಡಿಸಿದರೂ ಶಾಂತಿ ಭಂಗವಾಯಿತು ಎಂದು ನೆರೆಮನೆಯವರು ಪೊಲೀಸರಿಗೆ ದೂರು ನೀಡುವಂತಿಲ್ಲ.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.