ಈ ಹೋಂವರ್ಕ್ ಬರೀ ಕಿರಿಕ್...!

7

ಈ ಹೋಂವರ್ಕ್ ಬರೀ ಕಿರಿಕ್...!

Published:
Updated:
ಈ ಹೋಂವರ್ಕ್ ಬರೀ ಕಿರಿಕ್...!

`ಕಿಶನ್, ಮೂರೊತ್ತೂ ಬರೀ ಆಟಾನೇ! ಹೋಂವರ್ಕ್ ಮಾಡು ಬಾರೋ!~`ನಿಧಿ! ಹತ್ತು ನಿಮಿಷ ಹೋಂವರ್ಕ್ ಮಾಡೋಕೆ ಗಂಟೆಗಟ್ಟಲೆ ಕೂಗಬೇಕಲ್ಲೆ ನಿನ್ನ? ಸಾಕಾಗಿ ಹೋಯ್ತು~ಇದು ಮನೆ ಮನೆಗಳಲ್ಲಿ ಮಕ್ಕಳಿಗೆ ಹೋಂವರ್ಕ್ ಮಾಡಿಸಲು ಹೆಣಗುವ ಅಮ್ಮಂದಿರ ಗಲಾಟೆ. ಹೌದು, ಹೋಂವರ್ಕ್ ವಿಷಯವಾಗಿ ಅಮ್ಮ - ಮಕ್ಕಳ ನಡುವೆ ದೊಡ್ಡ ಯುದ್ಧವೇ ನಡೆಯುವುದುಂಟು. ಇಡೀ ದಿನ ಶಾಲೆಯಲ್ಲಿ ಓದಿ ಬರೆದು ದಣಿದ ಮಕ್ಕಳಿಗೆ, ಮನೆಯಲ್ಲಿ ಹೋಂವರ್ಕ್ ಎಂದು ಹಿಂಸಿಸುವ ಅಮ್ಮಂದಿರು ಖಳನಾಯಕಿಯರು! ಅಮ್ಮಂದಿರಿಗೆ, ಆಟ - ಟಿವಿ ಎಂದು ಇಡೀ ಸಂಜೆ ವ್ಯರ್ಥವಾಗಿ ಕಳೆಯುತ್ತಾ, ತಮ್ಮನ್ನು ನಾನಾ ರೀತಿಯಲ್ಲಿ ಕಾಡುವ ಮಕ್ಕಳು ಪುಟ್ಟ ರಾಕ್ಷಸರಾಗಿ ಕಾಣುತ್ತಾರೆ!ಮಕ್ಕಳಿಗೂ - ಅಮ್ಮಂದಿರಿಗೂ ಹೋಂವರ್ಕ್ ಬಲು ದೊಡ್ಡ ಕಿರಿಕ್! ಇದರಲ್ಲಿ ಯಾರದ್ದು ಸರಿ? ಯಾರದ್ದು ತಪ್ಪು? ಮಕ್ಕಳು ಮಕ್ಕಳೇ! ಅಮ್ಮ ಅಮ್ಮನೇ! ಪ್ರಶ್ನೆ ಹೋಂವರ್ಕ್ ಬೇಕೆ - ಬೇಡವೇ ಮತ್ತು ಬೇಕಿದ್ದರೆ ಹೇಗೆ ಮಾಡಿಸಬೇಕು ಎಂಬುದು.ಮಕ್ಕಳ ಶಿಕ್ಷಣದಲ್ಲಿ ಹೋಂವರ್ಕ್ ಎಂಬುದು ಅನೇಕ ಕಾರಣಗಳಿಂದ ಮುಖ್ಯವಾದುದು ಹೋಂವರ್ಕ್ ಮಕ್ಕಳಿಗೆ ಹೊರೆಯಾಗಬಾರದು ಎಂಬುದು ನಿಜವಾದರೂ ಸರಿಯಾದ ರೀತಿಯ ಹೋಂ ವರ್ಕ್ ಮಕ್ಕಳ ವಿದ್ಯಾಭ್ಯಾಸದಲ್ಲಿ ಮಾತ್ರವಲ್ಲ ಜೀವನದಲ್ಲೂ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ.* ಶಾಲೆಯಲ್ಲಿ ಕಲಿತಿರುವುದನ್ನು ಪುನರ್ ಮನನ

* ಪೋಷಕರಿಗೆ ಮಕ್ಕಳ ಕಲಿಕೆ ಯಾವ ಮಟ್ಟದಲ್ಲಿದೆ ಎಂಬ ಕುರಿತು ಸ್ಪಷ್ಟ ಅರಿವು

* ನಿಯಮಿತ - ನಿಗದಿತ ಪರಿಶ್ರಮ, ಪರೀಕ್ಷೆಯಲ್ಲಿ ಮಾತ್ರವಲ್ಲ ಜೀವನದಲ್ಲೂ ಯಶಸ್ಸಿಗೆ ಕಾರಣ ಎಂಬ ತಿಳಿವಳಿಕೆ

* ಸದುಪಯೋಗ ಮತ್ತು ಒತ್ತಡ ನಿರ್ವಹಣೆ

* ಯೋಚಿಸಲು ಪ್ರೇರೇಪಿಸುವುದು

* ಜವಾಬ್ದಾರಿಯುತವಾಗಿ ವರ್ತಿಸುವುದು

ಆದರೆ ಹೋಂವರ್ಕ್ ಎಂಬುದು ಪುಟಗಟ್ಟಲೆ ಬರೆಯುವುದು, ಗಂಟೆಗಟ್ಟಲೆ ಓದುವುದಕ್ಕಷ್ಟೇ ಸೀಮಿತವಾಗಿರಬಾರದು. ಮಕ್ಕಳಲ್ಲಿ ಅಧ್ಯಯನಶೀಲತೆ ಬೆಳೆಸುವಂತಿರಬೇಕು. ಕಲಿತ ವಿಷಯವನ್ನು ಮನದಟ್ಟು ಮಾಡಿಸುವಂತಿರಬೇಕು. ಶಿಕ್ಷೆ ಅನ್ನಿಸುವ ಬದಲು ಶಿಸ್ತನ್ನು ಬೆಳೆಸಬೇಕು. ಮಕ್ಕಳಿಗೆ ಅಗತ್ಯಕ್ಕೆ ಸರಿಯಾಗಿ ಊಟ - ಆಟ - ನಿದ್ದೆಯಿದ್ದಂತೆ ಪಾಠ - ಹೋಂವರ್ಕ್ ಕೂಡಾ ಬೇಕು.ಹೋಂವರ್ಕ್‌ಗಾಗಿ ತಾಯಿ - ಮಕ್ಕಳ ಕಾದಾಟ - ಹೆಣಗಾಟ ತಪ್ಪಿಸಲು ಕೆಲವು ಸಲಹೆಗಳು ಹೀಗಿವೆ.* ಮಕ್ಕಳು ಶಾಲೆಯಿಂದ ಬಂದ ತಕ್ಷಣ `ಹೋಂವರ್ಕ್ ಏನಿದೆ, ಮಾಡು~ ಎಂಬ ಕಿರಿಕಿರಿ ಆರಂಭಿಸಬೇಡಿ. ಇಡೀ ದಿನ ದಣಿದು ಬಂದ ಮಕ್ಕಳಿಗೆ ಸುಧಾರಿಸಿಕೊಳ್ಳಲು ಸ್ವಲ್ಪ ಸಮಯವಾದರೂ ಬೇಕು. ಲಘು ತಿಂಡಿ - ಹಾಲು ಮತ್ತು ಚಿಕ್ಕ ವಿಶ್ರಾಂತಿಗೆ ಅವಕಾಶ ಬೇಕು. ಇದರ ನಂತರವೇ ಹೋಂವರ್ಕ್.* ಶಾಲೆಯಲ್ಲಿ ಇರುವಂತೆ ಮನೆಯಲ್ಲೂ ಒಂದು ವೇಳಾಪಟ್ಟಿ ತಯಾರಿಸಿ, ನಾಲ್ಕರಿಂದ ನಾಲ್ಕೂವರೆ ತಿಂಡಿ - ಹಾಲು, ನಾಲ್ಕೂವರೆಯಿಂದ ಐದು ಕತೆ ಪುಸ್ತಕ, ಐದರಿಂದ ಆರು ಹೋಂವರ್ಕ್, ಆರರಿಂದ ಏಳು ಆಟ .... ಹೀಗೆ ಆದಷ್ಟೂ ಪ್ರತೀ ದಿನಾ ಒಂದೇ ಸಮಯಕ್ಕೆ ಹೋಂವರ್ಕ್ ಮಾಡಿಸುವುದನ್ನು ರೂಢಿ ಮಾಡಿಸಿ. ಮೊದಮೊದಲು ವಿರೋಧಿಸಿದರೂ ಕ್ರಮೇಣ ತಮಗರಿವಿಲ್ಲದೆ ಮಕ್ಕಳು ಅದಕ್ಕೆ ಹೊಂದಿಕೊಳ್ಳುವರು.* `ಹೋಂವರ್ಕ್ ಟೈಮ್~ ಎಂಬುದರ ಬದಲಾಗಿ  `ಸ್ಟಡಿ ಟೈಮ್~ ಎಂದು ಕರೆಯಿರಿ. ಇಲ್ಲದಿದ್ದಲ್ಲಿ ಮಕ್ಕಳ ರೆಡಿಮೇಡ್ ಉತ್ತರ `ನಂಗೆ ಇವತ್ತು ಹೋಂವರ್ಕ್ ಇಲ್ಲ~ ಅಥವಾ `ಶಾಲೆಯಲ್ಲೇ ಹೋಂವರ್ಕ್ ಮುಗಿಸಿದ್ದೇನೆ~. ಹೋಂವರ್ಕ್ ಇರಲಿ - ಇಲ್ಲದಿರಲಿ, ಶಾಲೆಯಲ್ಲಿ ಮುಗಿಸಲಿ - ಬಿಡಲಿ, ಮನೆಯಲ್ಲಿ ಅಧ್ಯಯನ ಕಡ್ಡಾಯ ಎಂಬ ನಿಯಮ ಜಾರಿಗೆ ತನ್ನಿ.* ಮಕ್ಕಳಿಗೆ ಓದಲು - ಬರೆಯಲು ಪ್ರತ್ಯೇಕ ಸ್ಥಳಾವಕಾಶ ಬೇಕು. ಹಾಗಂತ ಬೇರೆ ಕೋಣೆಯೇ ಆಗಬೇಕೆಂದಿಲ್ಲ. ಗಾಳಿ - ಬೆಳಕು ಚೆನ್ನಾಗಿ ಬೀಳುವ ಕೋಣೆಯ ಒಂದು ಮೂಲೆ ಆದರೂ ಸಾಕು. ಮಕ್ಕಳು ಹಾಸಿಗೆಯ ಮೇಲೆ ಮಲಗಿ/ ಆರಾಮ ಕುರ್ಚಿಯಲ್ಲಿ ಒರಗಿ ಓದುವುದು ಬೇಡ. ನೇರವಾಗಿ ಕುಳಿತು ಓದಿ - ಬರೆಯಲಿ. ಹೋಂವರ್ಕ್ ಮಾಡುವಾಗ ಗಾಳಿ - ಬೆಳಕು, ವಾತಾವರಣ, ಸರಿಯಾದ ಭಂಗಿ ಕೂಡಾ ಮುಖ್ಯ.* ಸಾಮಾನ್ಯವಾಗಿ ಓದಲು - ಬರೆಯಲು ಬೇಕಾದ ಎಲ್ಲಾ ವಸ್ತುಗಳನ್ನು (ಪೆನ್, ಪೆನ್ಸಿಲ್, ರಬ್ಬರ್, ಸ್ಕೇಲ್) ಎಲ್ಲವನ್ನೂ ಮೊದಲೇ ನೀಟಾಗಿ ಒಂದೆಡೆ ಜೋಡಿಸಿಟ್ಟುಕೊಳ್ಳಲು ಕಲಿಸಿ. ಅದೇ ರೀತಿ ನಿಗದಿತ ಸಮಯಕ್ಕೆ ಹತ್ತು ನಿಮಿಷ ಮುಂಚೆ ಅವರಿಗೆ ಎಚ್ಚರಿಕೆ ನೀಡಿ. `ಆರು ಗಂಟೆಗೆ ಹತ್ತು ನಿಮಿಷ ಇದೆ. ಆಟ ಮುಗಿಸಿ, ಬಾತ್‌ರೂಂಗೆ ಹೋಗಿ, ಕೈ-ಕಾಲು ತೊಳೆದು, ನೀರು ಕುಡಿದು, ಎಲ್ಲಾ ವಸ್ತು ಇದೆಯೇ ಎಂದು ನೋಡಿಕೊಳ್ಳಿ~. ಇಲ್ಲದಿದ್ದರೆ ಪದೇ ಪದೇ `ಅದು ಬೇಕು, ಇದಿಲ್ಲ, ನೀರು ಕುಡೀಬೇಕು~ ಎಂದು ನೆಪ ಹುಡುಕುತ್ತಾರೆ.* ಮಕ್ಕಳಿಗೆ ಟಿ.ವಿ. ನೋಡುತ್ತಾ ಹೋಂವರ್ಕ್ ಮಾಡುವ ಅಭ್ಯಾಸವಿರುತ್ತದೆ. ` ಹೇಗಾದರೂ ಹೋಂವರ್ಕ್ ಮುಗಿಸಲಿ~ ಎಂದು ಅಮ್ಮಂದಿರೂ ಇದಕ್ಕೆ ಹೂಂಗುಟ್ಟುತ್ತಾರೆ. ಇದು ಖಂಡಿತಾ ಬೇಡ. ಟಿ. ವಿ. ಯನ್ನು ಆಫ್ ಮಾಡಿಡಲೇಬೇಕು. ಹಾಗೆಯೇ ಅಮ್ಮ, ತಾನು ಸೋಫಾ ಮೇಲೆ ಕುಳಿತು ಧಾರಾವಾಹಿ ನೋಡುತ್ತಾ ಮಕ್ಕಳಿಗೆ ಮೂಲೆಯಲ್ಲಿ `ಸ್ಟಡಿ ಮಾಡೋ~ ಎಂದು ಹೇಳಿದರೆ??? ಅದರ ಬದಲು ತಾನೂ ಓದುವ, ನಿತ್ಯದ ಲೆಕ್ಕ ಬರೆಯುವ, ಅಡಿಗೆ ಕೆಲಸವನ್ನು ಅಥವಾ ಇನ್ನಾವುದಾದರೂ ಕೆಲಸವನ್ನು ಮಾಡುವುದು ಒಳ್ಳೆಯದು.* ಮಕ್ಕಳು ಹೋಂವರ್ಕ್ ಮಾಡುವಾಗ ದೊಡ್ಡವರ ಮೇಲ್ವಿಚಾರಣೆ ಬೇಕು. ಎಷ್ಟೋ ಬಾರಿ ಶಾಲೆಯಲ್ಲಿ ಕಲಿತಿದ್ದು ಅರ್ಥವಾಗದೇ ಇರಬಹುದು. ಕೆಲವೊಮ್ಮೆ ಸಮಸ್ಯೆಗಳು ಕಠಿಣವಾಗಿರಬಹುದು. ಮಕ್ಕಳಿಗೆ ಅರ್ಥವಾಗದ ವಿಷಯ ತಿಳಿ ಹೇಳಬೇಕು. ಸಮಸ್ಯೆ ಪರಿಹರಿಸಲು ನೆರವು ನೀಡಬೇಕು. ನೆರವು ನೀಡುವುದು ಅಂದ್ರೆ `ನಿಂಗೊತ್ತಾಗಲ್ಲ ಬಿಡು, ನಾನೇ ಮಾಡ್ತೀನಿ~ ಎಂದು ತಾವೇ ಮಾಡಿ ಮುಗಿಸುವುದಲ್ಲ. ಬದಲಿಗೆ ವಿಷಯ ತಿಳಿಸಿ, ಸಮಸ್ಯೆಗೆ ಹೇಗೆ ಪರಿಹಾರ ಕಂಡುಹಿಡಿಯಬಹುದು ಎಂಬುದನ್ನು ಸೂಚಿಸುವುದು ಅಷ್ಟೇ!* ಆರಂಭದಲ್ಲಿ ಮಕ್ಕಳು ಇದನ್ನೆಲ್ಲಾ ತೀವ್ರವಾಗಿ ವಿರೋಧಿಸಿದರೂ ತಾಳ್ಮೆಗೆಡಬೇಡಿ. ಮಕ್ಕಳನ್ನು ಬೆಳೆಸುವುದು ಎಲ್ಲರಿಗೂ ಕಷ್ಟದ ಕೆಲಸವೇ! ಪ್ರೀತಿಯ ಜತೆ ಸಹನೆ, ಶಿಸ್ತು ಮಕ್ಕಳಿಗೆ ಬೇಕು. ಅಮ್ಮನಾದವಳು ಸಹನೆಯಿಂದ ಶಿಸ್ತನ್ನು ಪಾಲಿಸಿದರೆ ಮಕ್ಕಳೂ ನಿಧಾನವಾಗಿ ಅದನ್ನು ಅನುಸರಿಸುತ್ತಾರೆ. ಎಲ್ಲವನ್ನೂ ಒಂದೇ ಸಲ ಮಾಡುವುದರ ಬದಲು ಹಂತಹಂತವಾಗಿ ರೂಢಿ ಮಾಡಿಸಿ.* ಚಿಕ್ಕ - ಪುಟ್ಟ ಪ್ರಯತ್ನಗಳನ್ನು ಹೊಗಳಿ. ದುಡ್ಡು - ಚಾಕೊಲೇಟ್ - ಐಸ್‌ಕ್ರೀಂ ಮುಂತಾದ ಆಮಿಷಗಳನ್ನು ಹೋಂವರ್ಕ್ ಮುಗಿಸಲು ನೀಡಬೇಡಿ. ಬದಲಿಗೆ `ಸರಿ ಟೈಂಗೆ ಓದೋಕೆ ಕೂತ್ಕೋತಾನೆ, ಜಾಣ ಮರಿ~, `ದಿನಾ ಬರೆದೂ ಬರೆದೂ ಅಕ್ಷರ ಚಂದ ಆಗ್ತಿದೆ~, `ಹೇಳಿದ್ ಕೆಲಸ ಚೆನ್ನಾಗಿ ಮಾಡ್ತಾನೆ~ ಎಂಬ ಆತ್ಮವಿಶ್ವಾಸ ಹೆಚ್ಚಿಸುವ ಪ್ರೋತ್ಸಾಹದ ಮಾತುಗಳನ್ನು ಆಡಿ.ಅದೇ ರೀತಿ ಹೋಂವರ್ಕ್ ಒಂದಕ್ಕೇ ತೀರಾ ಪ್ರಾಮುಖ್ಯತೆ ನೀಡದೆ ಆಟ - ಊಟ - ನಿದ್ದೆ - ಮೋಜು - ಮಜಾ ಎಲ್ಲದಕ್ಕೂ ಅವಕಾಶ ಕಲ್ಪಿಸಿಕೊಡಿ. ಮಕ್ಕಳಿಗೆ ಶಿಸ್ತು ಹೇಗೆ ಬೇಕೋ ಹಾಗೇ ಸ್ವಾತಂತ್ರ್ಯವೂ!!!ಹೀಗೆ ಮಾಡಿದರೆ ಹೋಂವರ್ಕ್ .... ಖಂಡಿತಾ ಕಿರಿಕ್ ಅಲ್ಲ !!!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry