ಶನಿವಾರ, ಫೆಬ್ರವರಿ 27, 2021
30 °C

ಈ ‘ಮಾರುಕಟ್ಟೆ’ಗೆ ಮಾತೇ ಬಂಡವಾಳ

–ಹೇಮಾ ವೆಂಕಟ್ Updated:

ಅಕ್ಷರ ಗಾತ್ರ : | |

ಈ ‘ಮಾರುಕಟ್ಟೆ’ಗೆ ಮಾತೇ ಬಂಡವಾಳ

ನೀಟಾಗಿ ಡ್ರೆಸ್‌ ಮಾಡಿ, ಟೈಕಟ್ಟಿ ಮನೆಯ ಗೇಟ್‌ ಬಳಿ ನಿಂತು, ಗೇಟ್‌ ತೆರೆದಿದ್ದು, ನಾಯಿ ಇಲ್ಲದಿದ್ದರೆ ಮನೆ ಬಾಗಿಲಿನ ಕಾಲಿಂಗ್‌ ಬೆಲ್‌ ಒತ್ತಿ, ಬಾಗಿಲು ತೆರೆದವರು ಮತ್ತೆ ಡಬ್ಬನೆ ಬಾಗಿಲು ಹಾಕುವ ಮುನ್ನವೇ ‘ನೋಡಿದರೆ ಸಾಕು ಮೇಡಂ ತಗೋಬೇಕಾಗಿಲ್ಲ, ಕಂಪೆನಿ ಪ್ರಚಾರಕ್ಕಷ್ಟೇ ಬಂದಿದ್ದೇವೆ. ನೋಡಲು ಹಣ ಕೊಡಬೇಕಾಗಿಲ್ಲ. ಬನ್ನಿ ಮೇಡಂ. ಹೊಸಾ ಪ್ರಾಡಕ್ಟು’ ಎಂದು ಗೋಗರೆಯುವ ಯುವಕರು. ಅವರ ಗೋಳಾಟಕ್ಕೆ ಮರುಳಾಗಿ ಕೆಲವರು ಹೊರಬಂದು ಬೆಲೆ, ಕಂಪೆನಿ ಬಗ್ಗೆ ವಿಚಾರಿಸಿದರೆ ಸಾಕು ‘ಎಂಆರ್‌ಪಿಗಿಂತ ಕಡಿಮೆ ಬೆಲೆಗೆ ಕೊಡುತ್ತಿದ್ದೇವೆ. ಒಂದು ತೆಗೆದುಕೊಂಡರೆ ಇನ್ನೊಂದು ಉಚಿತ’ ಹೀಗೆ ಶುರುವಿಟ್ಟುಕೊಳ್ಳುತ್ತಾರೆ. ವಸ್ತು ಕೊಳ್ಳದಿದ್ದರೂ ಹೋಗುವಾಗ ಥ್ಯಾಂಕ್ಯೂ ಎನ್ನಲು ಮರೆಯುವುದಿಲ್ಲ. ಇವರು ಮಾರಾಟ ಪ್ರತಿನಿಧಿಗಳು.ಮಾರಾಟ ಪ್ರತಿನಿಧಿಗಳಾಗಿ ಕೆಲಸ ಮಾಡುವವರಲ್ಲಿ ಹೆಚ್ಚಿನವರು ಎಸ್ಸೆಸ್ಸೆಲ್ಸಿ, ಪಿಯುಸಿಗೆ ಓದು ನಿಲ್ಲಿಸಿದವರು. ಬಡತನ ಇನ್ನಿತರ ಸಮಸ್ಯೆಗಳಿಂದಾಗಿ ದುಡಿಮೆಗೆ ಬಂದವರು. ಇದಕ್ಕೆಂದೇ ಇರುವ ಕೆಲವು ಏಜೆನ್ಸಿಗಳ ಮೂಲಕ ಮಾರಾಟ ಪ್ರತಿನಿಧಿಗಳಾಗಿ ಕೆಲಸ ಮಾಡುತ್ತಾರೆ. ನಗರದ ರಸ್ತೆಗಳಲ್ಲಿ, ಬಡಾವಣೆಗಳಲ್ಲಿ ದೊಡ್ಡ ನೀಲಿ ಬಣ್ಣದ ಪ್ಲಾಸ್ಟಿಕ್‌ ಚೀಲಗಳಲ್ಲಿ ಏನೋ ತುಂಬಿಕೊಂಡು ಸಾಗುವ ಯುವಕರು ಕಣ್ಣಿಗೆ ಬೀಳದೇ ಇರುವುದಿಲ್ಲ. ಗೃಹಬಳಕೆಯ ವಸ್ತುಗಳನ್ನು ತುಂಬಿಕೊಂಡು ಯುವಕ –ಯುವತಿಯರ ತಂಡ  ಹೋಗುತ್ತದೆ.ಯಾವುದೋ ಕಂಪೆನಿಯ ಪರವಾಗಿ ರಿಯಾಯಿತಿ ದರದಲ್ಲಿ ವಸ್ತುಗಳನ್ನು ಮಾರಾಟ ಮಾಡಲು ಮನೆ ಮನೆಗೆ ತೆರಳುವ ಇವರಿಗೆ ಕಮಿಷನ್‌ ಆಧಾರದಲ್ಲಿ ವೇತನ ನೀಡಲಾಗುತ್ತದೆ. ಇಡೀ ದಿನ ಬಿಸಿಲಿನಲ್ಲಿ ನಡೆದು, ಸುತ್ತಾಡಿ ಗ್ರಾಹಕರ ಮನವೊಲಿಸಿ ವಸ್ತುಗಳನ್ನು ಮಾರಾಟ ಮಾಡಿದರೆ ಕೈಗೊಂದಿಷ್ಟು ಕಾಸು. ಇಲ್ಲದಿದ್ದರೆ ಇಲ್ಲ. ಸಂಜೆಯೊಳಗೆ ಮಾರಾಟವಾದರೆ ಭಾರ ಇಳಿಸಿಕೊಂಡ ಖುಷಿಯಿಂದ ಮರಳುತ್ತಾರೆ. ಇಲ್ಲದಿದ್ದರೆ ಬೇಸರದ ಜೊತೆಗೆ ಕೈಚೀಲದ ಭಾರವನ್ನೂ ಹೊತ್ತು ನಡೆಯುವ ಕರ್ಮ.ಹೀಗೆ ಮನೆಮನೆಗೆ ಮಾರಾಟ ಪ್ರತಿನಿಧಿಗಳಾಗಿ ಬರುವ ಇವರಲ್ಲಿ ಕೆಲವರು ನಾವು ಕಾಲೇಜು ವಿದ್ಯಾರ್ಥಿಗಳು, ಬಿಬಿಎಂ, ಎಂಬಿಎ ಕಲಿಯುತ್ತಿದ್ದೇವೆ. ಇದು ನಮ್ಮ ಕಲಿಕೆಯ ಭಾಗ ಎನ್ನುವುದೂ ಇದೆ. ಕೆಲವರು ರಜಾದಿನದಲ್ಲಿ ಓದಿಗೆ ಹಣ ಹೊಂದಿಸುವ ಸಲುವಾಗಿ ಈ ಕೆಲಸ ಮಾಡುತ್ತಿದ್ದೇವೆ ಎನ್ನುವುದೂ ಇದೆ. ಹೀಗೆ ಹೇಳಿ ಗ್ರಾಹಕರ ಮನ ಒಲಿಸುವುದು ಕೂಡಾ ಮಾರುಕಟ್ಟೆ ತಂತ್ರವೆಂದೇ ಹೇಳಬಹುದು. ಇವರ ಚೀಲದಲ್ಲಿ ಅಡುಗೆ ಮನೆಯ ಕಂಟೈನರ್‌ಗಳಿಂದ ಹಿಡಿದು ಇಲೆಕ್ಟ್ರಾನಿಕ್‌ ವಸ್ತುಗಳವರೆಗೂ ಜಾಗ ಪಡೆದಿರುತ್ತವೆ.ಹೆಜ್ಜೆ ಹೆಜ್ಜೆಗೂ ಸವಾಲು

ಹೇಗೋ ವಸ್ತುಗಳನ್ನು ಮಾರಾಟ ಮಾಡಿ ಬದುಕುತ್ತಿರುವ ಇವರ ಮುಂದಿರುವ ಸವಾಲು ಮಾತ್ರ ದೊಡ್ಡದು. ಇವರು ಶ್ರೀಮಂತರ ಬಡಾವಣೆಗಳಿಗೆ ಹೋದರೆ ಬರಿಗೈಲಿ ಬರಬೇಕು. ಇನ್ನು ಬಡವರಿಗೆ ಈ ವಸ್ತುಗಳ ಅಗತ್ಯವಿಲ್ಲ. ಮಧ್ಯಮವರ್ಗದವರು ಇರುವ ಬಡಾವಣೆಗಳೇ ಇವರ ಟಾರ್ಗೆಟ್‌. ಮಧ್ಯಮವರ್ಗದ ಬಹುತೇಕ ಮಹಿಳೆಯರು ದುಡಿಯುವ ಮಹಿಳೆಯರು. ಭಾನುವಾರ ಮಾತ್ರ ಇವರು ಮನೆಯಲ್ಲಿರುವುದು. ಕೆಲವರಿಗೆ ಅಂದೇ ಭರ್ಜರಿ ವ್ಯಾಪಾರ. ಇನ್ನು ಕೆಲವು ಮಾರುಕಟ್ಟೆ ಪ್ರತಿನಿಧಿಗಳಿಗೂ ಅಂದು ರಜಾದಿನ.ಇನ್ನು ನಗರದಲ್ಲಿ ಒಂಟಿ ಮಹಿಳೆಯರ ಕೊಲೆ, ದರೋಡೆ ನಡೆದಾಗಲೆಲ್ಲ ‘ಯಾರೇ ಅಪರಿಚಿತರು ಮನೆಗೆ ಬಂದರೂ ಬಾಗಿಲು ತೆರೆಯಬೇಡಿ. ವಸ್ತುಗಳನ್ನು ಮಾರುವ ನೆಪದಲ್ಲಿ ಕಳ್ಳರು ಬರುತ್ತಾರೆ ಎಚ್ಚರದಿಂದಿರಿ’ ಎಂದು ಪೊಲೀಸ್‌ ಇಲಾಖೆ ಎಚ್ಚರಿಸುವುದು ಸಾಮಾನ್ಯ. ಇದು ಹೀಗೆ ಪ್ರಾಮಾಣಿಕವಾಗಿ ವ್ಯಾಪಾರ ಮಾಡಿ ಬದುಕುವ ಯುವಕರ ಪಾಲಿಗೆ ಸವಾಲಾಗಿ ಪರಿಣಮಿಸಿದೆ. ಒಂಟಿಯಾಗಿ ಮನೆಯಲ್ಲಿರುವ ಮಹಿಳೆಯರು ಎಚ್ಚರ ವಹಿಸುವುದು ಕೂಡಾ ಅಷ್ಟೇ ಅಗತ್ಯ.

  ಆದರೆ ಮಹಿಳೆಯರನ್ನೇ ನಂಬಿ ನಡೆಯುವ ಇಂತಹ ವ್ಯಾಪಾರಗಳು ಮತ್ತು ಇದನ್ನೇ ನಂಬಿದ ಯುವಕರ ಬದುಕು ಡೋಲಾಯಮಾನ. ಕೆಲವು ಕಂಪೆನಿಗಳಲ್ಲಿ ಇಂಗ್ಲಿಷ್‌ ಭಾಷಾ ಜ್ಞಾನ ಇರಬೇಕಾದದ್ದು ಕಡ್ಡಾಯವಿರುತ್ತದೆ. ನಗರದ ಖಾಸಗಿ ಶಾಲೆಗಳಲ್ಲಿ ಓದಿದವರಿಗೆ ಇದು ಕಷ್ಟವೇನಲ್ಲ. ಆದರೆ ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಓದಿದ ಮತ್ತು ಗ್ರಾಮೀಣ ಪ್ರದೇಶದಿಂದ ಬಂದವರಿಗೆ ಬಿಸಿತುಪ್ಪ.ತರಬೇತಿ

ನೇರ ಮಾರುಕಟ್ಟೆ ವ್ಯವಹಾರ ಮಾಡುವ ಸಂಸ್ಥೆಗಳು ಮಾರುಕಟ್ಟೆ ಪ್ರತಿನಿಧಿಗಳಾಗಿ ಬರುವ ಆಸಕ್ತರಿಗೆ ತರಬೇತಿ ನೀಡುತ್ತದೆ. ಅವರ ನೈಪುಣ್ಯತೆ ನೋಡಿಕೊಂಡು ಬಡ್ತಿ ನೀಡುತ್ತದೆ. ಮೊದಲ ಹಂತ ತರಬೇತಿ ಪಡೆಯುವುದು. ನಂತರ ತಾವೇ ತರಬೇತಿ ನೀಡುವುದು. ಆನಂತರ ತಂಡದ ನಾಯಕತ್ವ ನೀಡಲಾಗುತ್ತದೆ. ಇಲ್ಲಿ ಯಶಸ್ವಿಯಾದವರು ಮ್ಯಾನೇಜರ್‌ ಹುದ್ದೆಗೇರುತ್ತಾರೆ. ಹೀಗೆ ಮಾರುಕಟ್ಟೆ ಪ್ರತಿನಿಧಿಗಳಾಗುವುದರ ಹಿಂದೆ ಒಂದಷ್ಟು ಪೂರ್ವ ಸಿದ್ಧತೆ ಇರುತ್ತದೆ.ಮಾಗಡಿ ಮುಖ್ಯರಸ್ತೆಯಲ್ಲಿರುವ ಆ್ಯಕ್ಟೀವ್‌ ಗ್ರೂಪ್‌ ಇಂಥ ಒಂದು ಸಂಸ್ಥೆ. ಇಲ್ಲಿ ಟಪ್ಪರ್‌ವೇರ್‌ಗಳನ್ನು ಮಾರಾಟ ಮಾಡಲಾಗುತ್ತದೆ. ನಗರದಲ್ಲಿ 40 ಶಾಖೆಗಳಿವೆ. ಇದರ ಸ್ಥಾಪಕ ಗೋಪಿಕೃಷ್ಣ. ಇಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಬಂದ ಯುವಕರು ತರಬೇತಿ ಪಡೆಯುತ್ತಿದ್ದಾರೆ. ಯುವಕರಿಗೆ ಮತ್ತು ಯುವತಿಯರಿಗೆ ಪ್ರತ್ಯೇಕ ವಸತಿ ವ್ಯವಸ್ಥೆ ಮಾಡಿದ್ದಾರೆ. ಬೆಳಗ್ಗೆ ಧ್ಯಾನ ಮಾಡಲು ಕಚೇರಿಯಲ್ಲೇ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10ರಿಂದ ತರಬೇತಿ ಶುರುವಾಗುತ್ತದೆ. ತರಬೇತಿಯ ಭಾಗವಾಗಿ ಟಪ್ಪರ್‌ವೇರ್‌ ಕಂಟೈನರ್‌, ಲಂಚ್‌ ಬಾಕ್ಸ್‌, ವಾಟರ್‌ ಬಾಟಲ್‌, ಅಡುಗೆ ಮನೆಯ ಸಂಬಾರ ಪದಾರ್ಥಗಳನ್ನು ತುಂಬಿಸುವ ಡಬ್ಬಗಳನ್ನು ತುಂಬಿದ ಚೀಲಗಳನ್ನು ಹಿಡಿದು ಮಾರಾಟಕ್ಕೆ ಹೊರಡುತ್ತಾರೆ. ಐದಾರು ಜನರ ತಂಡಕ್ಕೆ ಒಬ್ಬ ಲೀಡರ್‌ ಇರುತ್ತಾರೆ.‘ಹಣ ಮಾಡಬೇಕು ಎಂಬ ಗುರಿ ಇರುವ ಯುವಕರು ಇಲ್ಲಿಗೆ ಬರುತ್ತಾರೆ. ಹತ್ತನೇ ತರಗತಿ ಪಾಸಾಗಿರುವುದು ಕಡ್ಡಾಯ. ಇಲ್ಲಿಗೆ ಬಂದ ಮೇಲೆ ಅವರಿಗೆ ಗ್ರಾಹಕರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ಹೇಳಿಕೊಡುತ್ತೇವೆ. ಟ್ರೈನಿ, ಟ್ರೈನರ್‌, ಲೀಡರ್‌, ಅಸಿಸ್ಟೆಂಟ್‌ ಮ್ಯಾನೇಜರ್‌, ಮ್ಯಾನೇಜರ್‌ ಹುದ್ದೆಗಳಿರುತ್ತವೆ. ಮ್ಯಾನೇಜರ್‌ಗಳಾದವರು ಪ್ರತ್ಯೇಕ ಕಚೇರಿ ತೆರೆದು ಬೇರೆಯವರಿಗೆ ತರಬೇತಿ, ಉದ್ಯೋಗ ನೀಡುತ್ತಾರೆ.ಇಲ್ಲಿಂದ ಟಪ್ಪರ್‌ವೇರ್‌ ವಸ್ತುಗಳನ್ನು ಕೊಂಡು ಹೋಗಿ ಮಾರಾಟವಾಗಿ ಬಂದ ಹಣದಲ್ಲಿ ಶೇ 20 ಕಮಿಷನ್‌ ನೀಡಲಾಗುತ್ತದೆ. ಕೆಲವರು ತಿಂಗಳಿಗೆ 10ಸಾವಿರದವರೆಗೂ ದುಡಿಯುವುದೂ ಇದೆ’ ಎಂದು ಆ್ಯಕ್ಟೀವ್‌ ಗ್ರೂಪ್‌ನ ಶಿಲ್ಪಾ ಹೇಳುತ್ತಾರೆ.ಮೈಸೂರಿನ ಪ್ರಿಯಾ ಆರೇಳು ಜನರ ತಂಡದ ಲೀಡರ್. ತಂಡವನ್ನು ಮುನ್ನಡೆಸುವುದರ ಜೊತೆಗೆ ತಾನೂ ತಿಂಗಳಿಗೆ ಹತ್ತು ಸಾವಿರದಷ್ಟು ಕಮಿಷನ್‌ ಪಡೆಯುತ್ತಿದ್ದಾರೆ. ‘ಮನೆ ಮನೆಗೆ ತೆರಳುವಾಗ ಜನರ ಪ್ರತಿಕ್ರಿಯೆ ತುಂಬ ಚೆನ್ನಾಗಿದೆ. ಮೊದಲು ಸ್ವಲ್ಪ ಕಷ್ಟವಾಗುತ್ತಿತ್ತು. ಈಗ ನಮ್ಮ ಪರಿಚಯವಾಗಿದೆ. ಸ್ಥಿರ ಗ್ರಾಹಕರೂ ಇದ್ದಾರೆ. ಹಾಗಾಗಿ ದುಡಿಮೆಗೆ ಅಡ್ಡಿ ಇಲ್ಲ’ ಎನ್ನುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.