ಸೋಮವಾರ, ನವೆಂಬರ್ 18, 2019
29 °C

ಉಂಗುರ ಬೆರಳಿಗೆ ಚುಕ್ಕೆ ಇಡಲು `ಮೈಸೂರು ಶಾಯಿ'

Published:
Updated:

ಮೈಸೂರು: ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಎಡಗೈ ಉಂಗುರ ಬೆರಳಿನ ಮೇಲೆ ತನ್ನ ಛಾಪು ಮೂಡಿಸಲು `ಮೈಸೂರು ಶಾಯಿ' ಸಿದ್ಧವಾಗಿದೆ.

ರಾಷ್ಟ್ರದ ಏಕೈಕ ಚುನಾವಣಾ ಶಾಯಿ ತಯಾರಿಕೆ ಕೇಂದ್ರವಾಗಿರುವ ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆಯಿಂದ (ಮೈಲ್ಯಾಕ್) ಈಗಾಗಲೇ 1.11 ಲಕ್ಷ ಸೀಸೆಗಳನ್ನು  (ಪ್ರತಿ ಸೀಸೆ 10 ಮಿಲಿಲೀಟರ್) 12 ದಿನಗಳ ಹಿಂದೆಯೇ ಮುಖ್ಯ ಚುನಾವಣಾ ಕಚೇರಿಗೆ ರವಾನೆಯಾಗಿದೆ.ಚುನಾವಣೆ ಘೋಷಣೆಯಾಗುವ ಮೂರು ತಿಂಗಳ ಮುನ್ನವೇ ಶಾಯಿ ತಯಾರಿಕೆ ಆರಂಭವಾಗಿತ್ತು. ಮತದಾನಕ್ಕೆ ಒಂದು ತಿಂಗಳು ಮುನ್ನವೇ ಶಾಯಿಯನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಒಟ್ಟು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಬಾರಿ ಶಾಯಿ ತಯಾರಾಗಿದೆ. ಪ್ರತಿ ಸೀಸೆಯೂ 142 ರೂಪಾಯಿ ಮೌಲ್ಯದ್ದಾಗಿದೆ. ಒಂದು ಸೀಸೆಯ ಶಾಯಿಯಿಂದ 500-600 ಮತದಾರರಿಗೆ ಗುರುತು ಹಾಕಬಹುದು.2008ರ ಚುನಾವಣೆಯಲ್ಲಿ 1.01 ಲಕ್ಷ ಸೀಸೆಗಳು ಇಲ್ಲಿ ತಯಾರಾಗಿದ್ದವು. ಈ ಚುನಾವಣೆಯಲ್ಲಿ ಮತದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ 10 ಸಾವಿರ ಸೀಸೆಗಳನ್ನು ಹೆಚ್ಚುವರಿಯಾಗಿ ತಯಾರಿಸಲಾಗಿದೆ. `2014ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ 20 ಲಕ್ಷ ಶಾಯಿ ಸೀಸೆಗಳನ್ನು ತಯಾರಿಸಿ ಕೊಡಲಾಗುತ್ತಿದೆ. 2009ರ ಸಂಸತ್ ಚುನಾವಣೆಯಲ್ಲಿ 16 ಲಕ್ಷ ಸೀಸೆಗಳನ್ನು ಸಿದ್ಧಪಡಿಸಲಾಗಿತ್ತು' ಎಂದು ಕಾರ್ಖಾನೆಯ ನಿರ್ದೇಶಕ ಎಂ.ವಿ. ಹೇಮಂತಕುಮಾರ್ ಹೇಳುತ್ತಾರೆ.1937ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದ ಈ ಕಾರ್ಖಾನೆಯನ್ನು 1947ರಲ್ಲಿ ಸರ್ಕಾರವು ತನ್ನ ಸ್ವಾಮ್ಯಕ್ಕೆ ತೆಗೆದುಕೊಂಡಿತು. 1962ರಿಂದ ದೇಶದಲ್ಲಿ ನಡೆದ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮೈಲ್ಯಾಕ್ ಶಾಯಿ ಸರಬರಾಜು ಮಾಡಿದೆ.  ವ್ಯಾಕ್ಸ್ ಸಿದ್ಧ: ವಿದ್ಯುನ್ಮಾನ ಮತಯಂತ್ರಗಳನ್ನು ಸೀಲ್ ಮಾಡಲು ವ್ಯಾಕ್ಸ್ ಅನ್ನು ಕೂಡ ಮೈಲ್ಯಾಕ್ ಒದಗಿಸುತ್ತಿದೆ.

ಪ್ರಸ್ತುತ ಚುನಾವಣೆಗೆ 15,500 ಸೀಲಿಂಗ್ ವ್ಯಾಕ್ಸ್ ಪ್ಯಾಕೆಟ್‌ಗಳನ್ನು ರವಾನೆ ಮಾಡಿದೆ. ಪ್ರತಿಯೊಂದು ಪೊಟ್ಟಣವೂ 450 ಗ್ರಾಂ ತೂಕದ್ದಾಗಿವೆ. ಮತದಾನ ಪ್ರಕ್ರಿಯೆ ಸಂಪೂರ್ಣವಾದ ನಂತರ ಈ ವ್ಯಾಕ್ಸ್ ಬಳಸಿ ಮತ ಯಂತ್ರಗಳನ್ನು ಸೀಲ್ ಮಾಡಲಾಗುತ್ತದೆ.

ಪ್ರತಿಕ್ರಿಯಿಸಿ (+)