ಉಂಡೆಗಳ ಸಿಹಿ ತಗ್ಗಿಸಿದ ಬೆಲೆ ಏರಿಕೆಯ ಕಹಿ

ಶಿವಮೊಗ್ಗ: ಉಂಡೆಗಳ ಹಬ್ಬವೆಂದೇ ಹೆಸರಾದ ನಾಗರ ಪಂಚಮಿಗೆ ಈ ಬಾರಿ ಸಿಹಿ ಕಡಿಮೆ; ಬೆಲೆ ಏರಿಕೆಯ ‘ಖಾರ’ವೇ ಹೆಚ್ಚು. ಆಹಾರ ಪದಾರ್ಥಗಳ ಬೆಲೆಗಳು ಗಗನಮುಖಿಯಾಗಿರುವುದೇ ಇದಕ್ಕೆ ಕಾರಣ.
ಮಹಿಳೆಯರ ಹಬ್ಬ ಎಂದೇ ಪರಿಗಣಿಸುವ ನಾಗರ ಪಂಚಮಿಗೆ ವಿವಿಧ ರೀತಿಯ ಉಂಡೆಗಳು ಹಾಗೂ ಸಿಹಿ ಪದಾರ್ಥ ತಯಾರಿಸಲಾಗುತ್ತದೆ. ಇಡೀ ತಿಂಗಳು ಶ್ರಾವಣ ಸಂಭ್ರಮದ ಅಂಗವಾಗಿ ವಿಶೇಷ ಪೂಜೆ, ಪುರಾಣ, ಪ್ರವಚನ, ವರಮಹಾಲಕ್ಷ್ಮೀ ವ್ರತ, ಭಜನೆ, ರಥೋತ್ಸವ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆಯು ತ್ತವೆ. ಶ್ರಾವಣ ಬಂತೆಂದರೆ ಆಹಾರ ಪದಾರ್ಥ, ಹೂವು–ಹಣ್ಣು ಇನ್ನಿತರೆ ವಸ್ತುಗಳ ಬೆಲೆಯಲ್ಲಿ ಕೊಂಚ ಏರಿಕೆ ಆಗುವುದು ಸಹಜ.
ನಾಗರ ಪಂಚಮಿಗೆ ಸಂಬಂಧಿಕರು, ಸ್ನೇಹಿತರ ಮನೆಗಳಿಗೆ ಸಿಹಿ ಪದಾರ್ಥ ನೀಡುವ ಉದ್ದೇಶಕ್ಕಾಗಿಯೇ ತರಹೇ ವಾರಿ ಉಂಡೆಗಳನ್ನು ಮಾಡುತ್ತಾರೆ. ಆದರೆ, ಈ ಬಾರಿ ಆಹಾರ ಪದಾರ್ಥ ಗಳ ಬೆಲೆಗಳಲ್ಲಿ ಸಾಕಷ್ಟು ಏರಿಕೆಯಾಗಿರುವ ಕಾರಣ ಅನೇಕರು ಉಂಡೆಗಳ ಸಹವಾಸವೇ ಬೇಡ ಎನ್ನುವಂತಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಪಂಚಮಿ ಹಬ್ಬಕ್ಕೆ ಉಪಯೋಗಿ ಸುವ ಅನೇಕ ಆಹಾರ ಪದಾರ್ಥಗಳ ದರ ದುಪ್ಪಟ್ಟಾಗಿದೆ.
ಹುರಿಕಡ್ಲೆ ₹ 140, ಕಡಲೆಬೇಳೆ ₹ 110, ಬೆಲ್ಲ ₹ 54 (ತಲಾ ಕೆ.ಜಿ.ಗೆ)... ಹೀಗೆ ಯಾವುದೇ ಪದಾರ್ಥಗಳ ಖರೀದಿಗೆ ಹೋದರೂ ದುಬಾರಿ. ಕೊಬ್ಬರಿ ಮಾತ್ರ ಒಂದಿಷ್ಟು ಇಳಿಕೆ ಕಂಡಿರುವ ಸಮಾಧಾನ ಬಿಟ್ಟರೆ ಉಳಿದೆಲ್ಲವುಗಳ ಬೆಲೆ ಏರಿಕೆಯಾಗಿದೆ. ಶ್ರಾವಣದಲ್ಲಿ ಸಹಜವಾಗಿಯೇ ಹೂವು ಗಳ ದರವೂ ಏರುವುದರಿಂದ ಅದರ ಬಿಸಿಯನ್ನೂ ತಡೆದುಕೊಳ್ಳುವುದು ಅನಿವಾರ್ಯ.
‘ಕಳೆದ ವರ್ಷ ರಾಜ್ಯದಾದ್ಯಂತ ಕಾಡಿದ ಬರ ಪರಿಸ್ಥಿತಿಯೂ ಹಲವು ಧಾನ್ಯ ಹಾಗೂ ಪದಾರ್ಥಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ. ಜನರಲ್ಲಿ ಹಬ್ಬ ಆಚರಣೆಗೆ ಸ್ವಲ್ಪಮಟ್ಟಿನ ನಿರಾಸಕ್ತಿ ಮೂಡಿರುವುದು ನಿಜ. ಆದರೆ, ಹಬ್ಬ ಮಾಡಲೇಬೇಕು ಎನ್ನುವ ಜನರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅಂಥವರು ಸಂತಸದಿಂದ ಖರೀದಿಗೆ ಮುಂದಾಗಿದ್ದಾರೆ’ ಎನ್ನುತ್ತಾರೆ ಗಾಂಧಿ ಬಜಾರ್ನ ವರ್ತಕ ಸತೀಶ್.
‘ಬೆಲೆ ಏರಿಕೆ ಕಾರಣ ಖರೀದಿ ಕಷ್ಟವಾಗಿದೆ. ಇದೇ ರೀತಿ ಬೆಲೆ ಏರುತ್ತಾ ಹೋದರೆ ಸಾಮಾನ್ಯ ಜನರು ಜೀವನ ನಡೆಸುವುದೇ ಕಷ್ಟವಾಗುತ್ತದೆ’ ಎನ್ನುತ್ತಾರೆ ಸೈಕಲ್ ಶಾಪ್ ಕಾರ್ಮಿಕ ರವಿಕುಮಾರ್.
‘ಪ್ರತಿವರ್ಷದಂತೆ ಈ ವರ್ಷವೂ ಪಂಚಮಿ ಆಚರಣೆಗೆ ಕಾಯುತ್ತಿದ್ದಾರೆ. ನಾಗದೇವರಿಗೆ ಹಾಲಿನ ಅಭಿಷೇಕ ಮಾಡಿದರೆ ಉತ್ತಮ ಮಳೆ, ಬೆಳೆ ಆಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಅದಕ್ಕೆ ಪುಷ್ಟಿ ನೀಡುವಂತೆ ಬುಧವಾರ ಆಶ್ಲೇಷ ಮಳೆಯೂ ಪ್ರಾರಂಭವಾಗಿದೆ’ ಎಂದು ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇಗುಲದ ಪ್ರಧಾನ ಅರ್ಚಕ ಸಂದೇಶ ಉಪಾಧ್ಯ ಸಂತಸ ವ್ಯಕ್ತಪಡಿಸಿದರು.
*
ಬೆಲೆ ಏರಿಕೆಯಾದರೂ ನಾಗರಿಕರು ಹಬ್ಬದ ಖರೀದಿಯಲ್ಲಿ ತೊಡಗಿದ್ದಾರೆ. ಶ್ರಾವಣ ಮಾಸ ಪೂರ್ತಿ ಹಬ್ಬಗಳು ಇವೆ. ಇದರಿಂದ ನಾಗರಿಕರ ಉತ್ಸಾಹ ಇಮ್ಮಡಿಗೊಂಡಿದೆ.
-ಎಚ್.ಎಂ. ಮಹಾರುದ್ರಪ್ಪ,
ವರ್ತಕ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.