ಶನಿವಾರ, ಮಾರ್ಚ್ 6, 2021
32 °C
ರಾಯಚೂರು, ದೇವದುರ್ಗ, ಜಾಲಹಳ್ಳಿ, ಶಕ್ತಿನಗರಗಳಲ್ಲಿ ಸಂಚಾರ ಸ್ಥಗಿತ, ಬೆಳೆ ಹಾನಿ

ಉಕ್ಕಿದ ಕೃಷ್ಣೆ: ಹೊಲ, ದೇಗುಲ ಜಲಾವೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಕ್ಕಿದ ಕೃಷ್ಣೆ: ಹೊಲ, ದೇಗುಲ ಜಲಾವೃತ

ರಾಯಚೂರು: ಜಿಲ್ಲೆಯಲ್ಲಿ ಕೃಷ್ಣಾನದಿ ಉಕ್ಕು ಹರಿಯುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ. ಲಿಂಗಸುಗೂರು, ದೇವದುರ್ಗ ತಾಲ್ಲೂಕುಗಳಲ್ಲಿ ತಲಾ ಒಂದು ಸೇತುವೆ ಮುಳುಗಡೆಯಾಗಿದೆ. ನಡುಗಡ್ಡೆಯ ಜನರು ಸಂಪರ್ಕ ಕಡಿತಕೊಂಡು ಪರದಾಡುವಂತಾಗಿದೆ. ರಾಯಚೂರು ತಾಲ್ಲೂಕಿನ ದೇವಸುಗೂರು ಹೋಬಳಿಯಲ್ಲಿ ಹೊಲಗಳು ಜಲಾವೃತವಾಗಿವೆ.ಶಕ್ತಿನಗರ ವರದಿ: ಕೃಷ್ಣಾ ನದಿ ತುಂಬಿ ಹರಿಯುತ್ತಿರುವ ಕಾರಣ ಗುರ್ಜಾಪುರ  ಕರೇಕಲ್, ಅರಷಣಿಗಿ ಮತ್ತು ದೇವಸೂಗೂರು ಗ್ರಾಮಗಳ ಸುತ್ತಲಿನ ಹೊಲಗದ್ದೆಗಳು ಜಲಾವೃತಗೊಂಡಿವೆ. ಇದರಿಂದ ಸುಮಾರು ನೂರು ಎಕರೆಗಳಷ್ಟು ಜಮೀನಿನಲ್ಲಿ ಭತ್ತದ ಬೆಳೆ ಹಾನಿಯಾಗಿದೆ.ತಹಶೀಲ್ದಾರ್‌ ಶಹಾನೂರ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಶುಕ್ರವಾರ ಭೇಟಿ ನೀಡಿ, ನೀರು ಇಳಿಮುಖವಾಗುವವರೆಗೂ ನದಿ ದಂಡೆಗೆ ಯಾರೂ ಹೋಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಲಾಗಿದೆ.ಕೊರ್ತುಕುಂದಾದ ನಿವಾಸಿ ತಿಮ್ಮಪ್ಪ (45) ಅವರು ನಾಪತ್ತೆಯಾಗಿದ್ದಾರೆ. ಅವರು ಸಂಬಂಧಿಗಳನ್ನು ತೆಲಂಗಾಣದ ಮೂಡುಮಾಲದ ಸೀಮಾಂತರಕ್ಕೆ ಬಿಟ್ಟುಬರಲು ಹರಿಗೋಲು ಮೂಲಕ ಹೋಗಿ ಬರುವಾಗ ನಾಪತ್ತೆಯಾಗಿದ್ದಾರೆ.‘ದೋಣಿ (ಹರಿಗೋಲು) ಚಲಾಯಿಸಿಕೊಂಡು ಬರುತ್ತಿದ್ದೆ, ತಿರುಗಿ ನೋಡಿದರೆ, ತಿಮ್ಮಪ್ಪ ಕಾಣಲಿಲ್ಲ. ನಿಧಾನವಾಗಿ ಬರುತ್ತಿದ್ದಾನೆ ಎಂದುಕೊಂಡೆ, ಆದರೆ, ತಿಮ್ಮಪ್ಪ ನಂತರವೂ ಬರಲಿಲ್ಲ’ ಎಂದು ಇನ್ನೊಂದು ಹರಿಗೋಲು ಚಲಾಯಿಸುತ್ತಿದ್ದ ನರಸಪ್ಪ  ಎಂಬುವರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ದೇವದುರ್ಗ ವರದಿ: ಪಟ್ಟಣಕ್ಕೆ ಸಮೀಪದಲ್ಲಿ ಇರುವ ಹೂವಿನಹೆಡ್ಗಿ ಗ್ರಾಮದ ಮುಂದೆ ಹರಿಯುವ ಕೃಷ್ಣಾ ನದಿ ಗುರುವಾರ ರಾತ್ರಿಯಿಂದ ಶುಕ್ರವಾರ ಸಂಜೆವರೆಗೂ ಉಕ್ಕಿ ಹರಿಯುತ್ತಿರುವುದರಿಂದ ರಾಯಚೂರು–ಕಲಬುರ್ಗಿ ರಾಜ್ಯ ಹೆದ್ದಾರಿಯ ಸಂಚಾರ ಸ್ಥಗಿತಗೊಂಡಿದ್ದು, ನದಿ ಪಾತ್ರದ ಸುಮಾರು ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬೆಳೆಗಳು ಜಲಾವೃತ್ತಗೊಂಡ ಪ್ರಯುಕ್ತ ಲಕ್ಷಗಟ್ಟಲೇ ಹಾನಿ ಸಂಭವಿಸಿದೆ.ನಾರಾಯಣಪುರ ಆಣೆಕಟ್ಟೆಯಿಂದ ಹೆಚ್ಚುವರಿ ನೀರಿನ್ನು ಬುಧವಾರ ರಾತ್ರಿಯಿಂದಲೇ ಕೃಷ್ಣಾ ನದಿಗೆ ಹರಿಬಿಟ್ಟಿರುವುದರಿಂದ ಗುರುವಾರ ಮಧ್ಯಾಹ್ನದಿಂದಲೇ ನದಿ ಪಾತ್ರದಲ್ಲಿ ಪ್ರವಾಹ ಕಂಡು ಬಂದಿದೆ.ಗುರುವಾರ ಸಂಜೆಯಿಂದಲೇ ನದಿಯಲ್ಲಿ ಹರಿಯುವ ನೀರು ಹೆಚ್ಚಾಗಿರುವುದರಿಂದ ಸೇತುವೆಯ ಮೇಲೆ ನೀರು ಬಂದಿದೆ ಇದೇ ಕಾರಣಕ್ಕಾಗಿ  ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ ರಾಜ್ಯ ಸೇರಿದಂತೆ ಇತರ ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ಪೊಲೀಸ್‌ರು ಮುಂಜಾಗ್ರತವಾಗಿ ಪಟ್ಟಣದ ಶಾಹಪುರ ರಸ್ತೆಯಲ್ಲಿ ಗುರುವಾರ ಸಂಜೆಯಿಂದಲೇ ಸಂಚಾರವನ್ನು ಸ್ಥಗಿತಗೊಳಿಸಿದ್ದಾರೆ.

ಇದೇ ಮಾರ್ಗದಲ್ಲಿ ಸಂಚಾರಿಸಬೇಕಾಗಿದ್ದ ವಾಹನಗಳನ್ನು ಜಾಲಹಳ್ಳಿ ಮಾರ್ಗವಾಗಿ ತಿಂಥಿಣಿ ಬಿ್ರಜ್‌ ಮೂಲಕ ಸುರಪುರದಿಂದ ಹೋಗಬೇಕಾದ ಅನಿವಾರ್ಯತೆ ಬಂದಿದೆ. 35ಕಿ.ಮೀ ದೂರದ ಶಾಹಪುರಕ್ಕೆ ದೇವದುರ್ಗದಿಂದ 80ಕಿ.ಮೀ ಸುತ್ತುವರಿಯಬೇಕಾಗಿದ್ದು, ಪ್ರಯಾಣಿಕರಿಗೆ ಇನ್ನಿಲ್ಲದ ತೊಂದರೆ ಎದುರಾಗಿದೆ.ಸೇತುವೆ ನದಿಯಲ್ಲಿ ಮುಳುಗಡೆಯಾಗಿರುವುದು ಇದು ಹೊಸದೆನ್ನಲ್ಲ. ಸೇತುವೆ ನಿರ್ಮಿಸಿದಾಗಿನಿಂದಲೂ ಪ್ರತಿ ವರ್ಷ ಆಣೆಕಟ್ಟೆಯಿಂದ ಹೆಚ್ಚುವರಿ ನೀರು ಬಿಟ್ಟ ನಂತರ ಕನಿಷ್ಟ ಒಂದು ಬಾರಿಯಾದರೂ ಸೇತುವೆ ಮುಳುಗಡೆಯಾಗುವುದು ಸಾಮಾನ್ಯ ವಾಗಿದೆ. 2009ರಲ್ಲಿ ಬಿದ್ದ ಭಾರೀ ಮಳೆಯಿಂದಾಗಿ ನದಿಯಲ್ಲಿ ಪ್ರವಾಹ ಉಂಟಾಗಿ ಸುಮಾರು 10 ದಿನಗಳ ಕಾಲ ಸೇತುವೆ ನದಿಯಲ್ಲಿ ಮುಳುಗಿದ್ದ ಉದಾಹರಣೆ ಇದೆ.ನದಿ ದಂಡೆಯಲ್ಲಿ ಬರುವ ವೀರಗೋಟ, ಬಾಗೂರು, ಅಂಜಳ, ಅಂಚೆಸೂಗೂರು, ಗೋಪಾಳಪುರ, ವಗಡಂಬಳಿ, ಹೂವಿನಹೆಡ್ಗಿ, ಜೋಳದಹೆಡ್ಗಿ, ಕರ್ಕಿಹಳ್ಳಿ, ಕೋಣಚಪ್ಪಳಿ, ಮೇದರಗೋಳ, ಯಾಟಗಲ್‌, ಕೊಪ್ಪರ, ಹೇರೂರು, ಇಟಿಗಿ, ಗಾಗಲ್‌, ಗೂಗಲ್‌, ಹಿರೇರಾಯಕುಂಪಿ ಸೇರಿದಂತೆ ಇತರ ಗ್ರಾಮಗಳ ಜಮೀನು ಮತ್ತು ಭತ್ತದ ಗದ್ದಿಗಳಲ್ಲಿ ನೀರು ನುಗ್ಗಿರುವುದರಿಂದ ಬೆಳೆ ಹಾನಿಯಾಗಿರುವುದು ಕಂಡು ಬಂದಿದೆ.ನದಿಯ ಮೂಲಕ ನೀರವಾರಿ ಸೌಲಭ್ಯ ಪಡೆಯುತ್ತಿದ್ದ ಸಾವಿರಾರೂ ಜನ ರೈತರ ಪಂಪ್‌ಸೆಟ್‌ಗಳು ನದಿ ಪ್ರವಾಹದಲ್ಲಿ ಮುಳುಗಿದ್ದು, ರೈತರಿಗೆ ತೊಂದರೆ ಎದುರಾಗಿದೆ ಎಂದು ಹೂವಿನಹೆಡ್ಗಿ ಗ್ರಾಮದ ಬಸಲಿಂಗಪ್ಪಗೌಡ, ಬಸವರಾಜ, ಅಮರೇಗೌಡ  ತಿಳಿಸಿದರು.ನದಿ ದಂಡೆಯ ಕೊಪ್ಪರ ಗ್ರಾಮದ ಪ್ರಸಿದ್ಧ ಉಗ್ರ ನರಸಿಂಹ ದೇವಸ್ಥಾನದ ಸುತ್ತಲೂ ನೀರು ಹರಿಯುತ್ತಿರುವುದರಿಂದ ದೇವಸ್ಥಾನದ ದಾರಿ ಬಂದಾಗಿದೆ. ಗೂಗಲ್‌ ಗ್ರಾಮದ ಅಲ್ಲಮಪ್ರಭು ದೇವಸ್ಥಾನದ ಹತ್ತಿರ ನೀರು ಬಂದಿರುವುದರಿಂದ ದೇವಸ್ಥಾನದ ಹತ್ತಿರಕ್ಕೆ ಹೋಗದಂತೆ ಜನರನ್ನು ತಡೆಯಲಾಗಿದೆ.ನದಿ ಪ್ರವಾಹದಿಂದ ಜನರಿಗೆ ತೊಂದರೆ ಎದುರಾಗಬಾರದು ಎಂಬ ಕಾರಣಕ್ಕಾಗಿ ವಿವಿಧ ಇಲಾಖೆಯ ಅಧಿಕಾರಿಗಳನ್ನು ನದಿ ದಂಡೆಯ ಗ್ರಾಮಗಳಿಗೆ ಕಳಿಸಲಾಗಿದೆ ಎಂದು ತಹಶೀಲ್ದಾರ್‌ ಶಿವಶರಣಪ್ಪ ಕಟ್ಟೋಳಿ ತಿಳಿಸಿದ್ದಾರೆ.ಜಾಲಹಳ್ಳಿ ವರದಿ:  ಜಾಲಹಳ್ಳಿ ಭಾಗದ ಲಿಂಗದಹಳ್ಳಿ, ಬಾಗೂರು, ಏರುಹುಂಡಿ, ನಿಲವಂಜಿ, ವಿರಗೋಟ, ಮರಗೋಟ ಗ್ರಾಮಗಳಲ್ಲಿ ನದಿ ಪಾತ್ರದೊಳಗೆ ಬಿತ್ತನೆ ಮಾಡಿದ್ದ ಹೆಸರು, ಸೂರ್ಯಕಾಂತಿ, ಸಜ್ಜೆ, ತೊಗರಿ ಬೆಳೆಗಳಿಗೆ ಹಾನಿ  ಆಗಿದೆ.  ಜೊತೆಗೆ ನದಿಯಿಂದ ಹೊಲಗಳಿಗೆ ನೀರು ಪೂರೈಕೆ ಮಾಡಿಕೊಳ್ಳಲು ಅಳವಡಿಸಿದ್ದ ಮೋಟರ್‌ಗಳು ಮುಳುಗಿಹೋಗಿವೆ.‘ಬಸವಸಾಗರ ಅಣೆಕಟ್ಟೆ ಎತ್ತರ 492.252 ಮೀಟರ್‌ (ಸಮುದ್ರ ಮಟ್ಟದಿಂದ) ಇದ್ದು, 491.100 ಮೀಟರ್‌ವರೆಗೆ ನೀರು ಸಂಗ್ರಹ ಮಾಡಲಾಗುತ್ತಿದೆ. ಒಳಹರಿವು 2.10 ಲಕ್ಷ ಕ್ಯೂಸೆಕ್‌ ಇದ್ದು, ಹೊರ ಹರಿವು 2.08 ಲಕ್ಷ ಕ್ಯೂಸೆಕ್‌ ಇದೆ’ ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಘವೇಂದ್ರ ತಿಳಿಸಿದರು.

*

ಕೃಷ್ಣಾ ನದಿಯಲ್ಲಿ ಪ್ರವಾಹ ಬಂದಿರುವುದರಿಂದ  ನದಿ ದಂಡೆಯ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಕ್ರಮ ಕೈಗೊಳ್ಳಲಾಗಿದೆ.

-ಶಿವಶರಣಪ್ಪ ಕಟ್ಟೋಳಿ

ತಹಶೀಲ್ದಾರ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.