ಉಕ್ಕು: ಬೆಲೆ ಏರಿಕೆ, ಹೆಚ್ಚಿದ ಬೇಡಿಕೆ

7

ಉಕ್ಕು: ಬೆಲೆ ಏರಿಕೆ, ಹೆಚ್ಚಿದ ಬೇಡಿಕೆ

Published:
Updated:

ಮುಂಬೈ (ಪಿಟಿಐ): ಜಾಗತಿಕ ಮಟ್ಟದಲ್ಲಿ ಆರ್ಥಿಕ ಅಸ್ಥಿರತೆಯ ಪ್ರತಿಕೂಲ ಪರಿಣಾಮ ಇದ್ದರೂ, ಪ್ರಸಕ್ತ ಹಣಕಾಸು ವರ್ಷದಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಉಕ್ಕು ಸಾಮಗ್ರಿಗೆ ಬೇಡಿಕೆ ಶೇ 7.5ರಿಂದ ಶೇ 8ರಷ್ಟು ಹೆಚ್ಚಲಿದೆ ಎಂದು ಅಧ್ಯಯನವೊಂದು ತಿಳಿಸಿದೆ.ಮೂಲಸೌಕರ್ಯ ವಲಯದ ಅಭಿವೃದ್ಧಿ ಕಾಮಗಾರಿಗಳಿಂದ ದೇಶದಲ್ಲಿ ಉಕ್ಕು ಬೇಡಿಕೆ ಶೇ 8ರಷ್ಟು ಹೆಚ್ಚುವ ನಿರೀಕ್ಷೆ ಇದೆ. ಪ್ರಸಕ್ತ ವರ್ಷ ಉತ್ಪಾದನೆಯೂ ಗಣನೀಯವಾಗಿ ಹೆಚ್ಚಿದೆ ಎಂದು `ಜೆಎಸ್‌ಡಬ್ಲ್ಯು ಸ್ಟೀಲ್ಸ್~ ಮಾರುಕಟ್ಟೆ ನಿರ್ದೇಶಕ ಜಯಂತ್ ಆಚಾರ್ಯ ಭಾನುವಾರ ಹೇಳಿದ್ದಾರೆ.ದೇಶದಲ್ಲಿ ಉಕ್ಕು ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕ ಕಂಪೆನಿಗಳು ಈ ವಲಯದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿವೆ. ಅರ್ಸೆಲ್ ಮಿತ್ತಲ್, ಫೋಸ್ಕೊದಂತಹ ಕಂಪೆನಿಗಳು ತಮ್ಮ ಘಟಕ ಆರಂಭಿಸಲು ಉತ್ಸಾಹ ತೋರಿಸುತ್ತಿರುವುದು ಇದೇ ಕಾರಣಕ್ಕೆ ಎನ್ನುತ್ತಾರೆ ಆಚಾರ್ಯ.ಸದ್ಯ ದೇಶದಲ್ಲಿ ವಾರ್ಷಿಕ 80 ದಶಲಕ್ಷ ಟನ್‌ಗಳಷ್ಟು ಉಕ್ಕು ತಯಾರಾಗುತ್ತದೆ. `ಪ್ರಸಕ್ತ ವರ್ಷ ಜಾಗತಿಕ ಉಕ್ಕು ಬೇಡಿಕೆಯೂ ಹೆಚ್ಚುವ ನಿರೀಕ್ಷೆ ಇದೆ~ ಎನ್ನುತ್ತಾರೆ ಟಾಟಾ ಸ್ಟೀಲ್‌ನ ಮುಖ್ಯ ಹಣಕಾಸು ಅಧಿಕಾರಿ ಕೌಶಿಕ್ ಚಟರ್ಜಿ.

ಬೆಲೆ ಏರಿಕೆ

ದೇಶೀಯ ಉಕ್ಕು ತಯಾರಿಕೆ ಕಂಪೆನಿಗಳು ಉಕ್ಕಿನ ಮೌಲ್ಯವರ್ಧಿತ ಉತ್ಪನ್ನಗಳ ದರವನ್ನು ಕಳೆದ ಎರಡು ವರ್ಷಗಳಲ್ಲಿ ಶೇ 32ರಷ್ಟು ಹೆಚ್ಚಿಸಿವೆ. ಮಾರ್ಚ್ ಅಂತ್ಯಕ್ಕೆ ಚೆನ್ನೈನಲ್ಲಿ ರೂಫಿಂಗ್ ಮತ್ತು ವಾಹನಗಳ ಬಿಡಿಭಾಗಗಳನ್ನು ತಯಾರಿಸಲು ಬಳಸುವ  `ಜಿ.ಪಿ ಉಕ್ಕು ಹಾಳೆ~ಗಳ ದರ ಟನ್‌ಗೆ ರೂ60,150ಕ್ಕೆ ಏರಿತ್ತು. 2010ರ ಮಾರ್ಚ್‌ನಲ್ಲಿ ಇದು ರೂ 45,720ರಷ್ಟಿತ್ತು.  ಕೋಲ್ಕತ್ತದಲ್ಲಿ ಕೂಡ ಕಳೆದೊಂದು ವರ್ಷದಲ್ಲಿ ಉಕ್ಕಿನ ಬೆಲೆ ಪ್ರತಿ ಟನ್‌ಗೆ ರೂ12,490ರಿಂದ ರೂ55,680ಕ್ಕೆ ಏರಿಕೆ ಕಂಡಿದೆ. ದೆಹಲಿಯಲ್ಲಿಯೂ ಧಾರಣೆ ಟನ್‌ಗೆ ರೂ8,710ರಷ್ಟು ಹೆಚ್ಚಳವಾಗಿದೆ.   ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸುವ ಸಿ.ಆರ್ ಕಾಯಿಲ್ಸ್ (0.63 ಎಂ.ಎಂ) ದರವೂ ಪ್ರತಿ ಟನ್‌ಗೆ ರೂ52,490ರಷ್ಟಾಗಿದ್ದು, ರೂ11,280 ಏರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry