`ಉ.ಕ. ಗುಡ್ಡಗಾಡು ಜಿಲ್ಲೆಯಾಗಲಿ'

7

`ಉ.ಕ. ಗುಡ್ಡಗಾಡು ಜಿಲ್ಲೆಯಾಗಲಿ'

Published:
Updated:

ಶಿರಸಿ: ಉತ್ತರ ಕನ್ನಡವನ್ನು ಗುಡ್ಡಗಾಡು ಜಿಲ್ಲೆಯೆಂದು ಘೋಷಿಸಿ ಶಿಕ್ಷಣ, ಅಭಿವೃದ್ಧಿ ಹಾಗೂ ವಿಶೇಷ ಅನುದಾನ ನೀಡಲು ಕಾರ್ಯ ಯೋಜನೆ ರೂಪಿಬೇಕು. ಆ ಮೂಲಕ ಹಾಲಕ್ಕಿ ಒಕ್ಕಲ, ಕುಂಬ್ರಿ ಮರಾಠಿ, ಕುಣಬಿ, ಕುಳವಾಡಿ ಮರಾಠಿ, ಗೌಳಿ, ಕರೆಒಕ್ಕಲ, ಗ್ರಾಮ ಒಕ್ಕಲ, ಅಟ್ಟೆ ಒಕ್ಕಲ ಮತ್ತಿತರ ಬುಡಕಟ್ಟು ಜನಾಂಗದ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಜಿಲ್ಲಾ ಅರಣ್ಯ ಅತಿಕ್ರಮಣದಾರರ ಹೋರಾಟಗಾರರ ವೇದಿಕೆಯ ಸಭೆ ಸರ್ಕಾರವನ್ನು ಆಗ್ರಹಿಸಿದೆ.ಅರಣ್ಯ ಅತಿಕ್ರಮಣದಾರರ ಸಮಸ್ಯೆಗೆ ಕಾಯಂ ಪರಿಹಾರಕ್ಕೆ ಆಗ್ರಹಿಸಿ ಇದೇ 23ರಿಂದ ಮುರ್ಡೇಶ್ವರದಿಂದ ಕಾರವಾರಕ್ಕೆ ಜನಜಾಗೃತಿ ಪಾದಯಾತ್ರೆ ಹಮ್ಮಿಕೊಳ್ಳುವ ಹಿನ್ನೆಲೆಯಲ್ಲಿ ಇಲ್ಲಿನ ವಿನಾಯಕ ಸಭಾಭವನದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ಸ್ವೀಕರಿಸಲಾಗಿದೆ. ಜಿಲ್ಲೆಯಲ್ಲಿ ಸುಮಾರು 60ಸಾವಿರ ಅರಣ್ಯ ಒತ್ತುವರಿ ಕುಟುಂಬಗಳಿದ್ದು, ಅತಿಕ್ರಮಣ ಸಮಸ್ಯೆ ಪರಿಹರಿಸುವ ಅಗತ್ಯವಿದೆ. 27-04-1978ರ ಪೂರ್ವದ ಅತಿಕ್ರಮಣ ಮಾಡಿದ್ದು ಮಂಜೂರಿಗೆ ಅರ್ಜಿ ಸಲ್ಲಿಸದೆ ಇರುವ ಪ್ರಕರಣಗಳನ್ನು ಬಿಟ್ಟು ಹೋಗಿರುವ ಪ್ರಕರಣಗಳೆಂದು ಪರಿಗಣಿಸಿ ಪುನ: ಅವುಗಳ ಮಂಜೂರಿಗೆ ಕ್ರಮ ಕೈಕೊಳ್ಳಬೇಕು.  ಬುಡಕಟ್ಟು ಮತ್ತು ಇತರೇ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕುಗಳ ಕಾಯಿದೆ ಅಡಿಯಲ್ಲಿ ಪಾರಂಪರಿಕ ಅರಣ್ಯವಾಸಿಗಳ ಹಕ್ಕು ಮಂಜೂರಿಗೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮಲ್ಲಂದೂರು ಗ್ರಾಮದಲ್ಲಿ ಅರಣ್ಯ ಹಕ್ಕು ನೀಡಿದ ಮಾನದಂಡ ಆಧಾರದಲ್ಲಿ ಜಿಲ್ಲೆಯಲ್ಲಿ ಅರಣ್ಯ ಹಕ್ಕು ನೀಡುವಂತಾಗಬೇಕು.ಸರ್ಕಾರದ ಅಧೀನದಲ್ಲಿರುವ ಕಂದಾಯ, ಗೋಮಾಳ ಇನ್ನಿತರ ಬಗೆಯ ಸರ್ಕಾರಿ ಜಮೀನನ್ನು ಒತ್ತುವರಿ ಕ್ಷೇತ್ರಕ್ಕೆ ಪರ್ಯಾಯವಾಗಿ ಅರಣ್ಯ ಪ್ರದೇಶಕ್ಕೆ ಮೀಸಲಿಡಲು ಬಿಡುಗಡೆ ಮಾಡಿ ಈ ಕ್ಷೇತ್ರದಲ್ಲಿ ಅರಣ್ಯೀಕರಣ ಮಾಡುವ ಭರವಸೆಯನ್ನು ಕೇಂದ್ರ ಸರ್ಕಾರ ಅಥವಾ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಭರವಸೆ ನೀಡಬೇಕು. ಕೇಂದ್ರ ಸರ್ಕಾರದ ಪುನರ್ ಒಪ್ಪಿಗೆ ಮೇರೆಗೆ ರಾಜ್ಯ ಸರ್ಕಾರವು ಯೋಗ್ಯ ಒತ್ತುದಾರರಿಗೆ ಒತ್ತುವರಿ ಅರಣ್ಯ ಭೂಮಿಯನ್ನು ಬಿಡುಗಡೆ ಮಾಡಬೇಕು ಎಂದು ಸಭೆ ಆಗ್ರಹಿಸಿತು.ಬುಡಕಟ್ಟು ಜಂಟಿ ಕ್ರಿಯಾ ವೇದಿಕೆ ಸಂಚಾಲಕ ಪುಟ್ಟು ಗೌಡ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಅಧ್ಯಕ್ಷ ಎ.ರವೀಂದ್ರ ನಾಯ್ಕ, ಜಿ.ಎನ್.ಹೆಗಡೆ ಮುರೇಗಾರ, ಲಕ್ಷ್ಮಣ ವಾಲ್ಮೀಕಿ ಮುಂಡಗೋಡ, ಉದಯರಾಜ ಮೇಸ್ತ ಹೊನ್ನಾವರ, ಸಂಪತ್ ಕುಮಾರ್ ಪಾಳಾ, ಎಮ್. ಆರ್. ನಾಯ್ಕ ಇಟಗುಳಿ, ಸಿದ್ದಾಪುರ ರೈತ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ಮಾತನಾಡಿದರು. ಇಬ್ರಾಹಿಂ ನಬೀಸಾಬ್ ಸ್ವಾಗತಿಸಿದರು. ದೇವರಾಜ ಮರಾಠಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry