ಭಾನುವಾರ, ಜೂನ್ 20, 2021
28 °C

ಉಗುರಲಿ ಕೆರೆದರೆ ಡಾಂಬರ್ ಹೋಗಿ ಮಣ್ಣು ಬರುತ್ತಿದೆ

ಪ್ರಜಾವಾಣಿ ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಸಿಂಧನೂರು: ಇದು ಸಿಂಧನೂರು ತಾಲ್ಲೂಕಿನ ದೇವರಗುಡಿ ರಸ್ತೆಯ ದಯನೀಯ ಸ್ಥಿತಿ. ಹತ್ತಾರು ವರ್ಷಗಳಿಂದ ತಮ್ಮ ಗ್ರಾಮಕ್ಕೆ ರಸ್ತೆ ನಿರ್ಮಿಸಬೇಕೆಂದು ಹೋರಾಟ ಮಾಡಿದ ಪ್ರತಿಫಲವಾಗಿ ಶಾಸಕ ವೆಂಕಟರಾವ್ ನಾಡಗೌಡ ನಬಾರ್ಡ್ ಯೋಜನೆಯಲ್ಲಿ ಸೇರ್ಪಡೆ ಮಾಡಿರುವುದರಿಂದ ಈ ರಸ್ತೆ ನಿರ್ಮಾಣ ಕಾರ್ಯ ನಡೆದಿದೆ.ಎರಡು ವರ್ಷದ ಹಿಂದೆ ಉಂಟಾದ ನೆರೆಹಾವಳಿಯಿಂದ ಗ್ರಾಮದ ಪಕ್ಕದಲ್ಲಿರುವ ಎರಡು ಹಳ್ಳಗಳು ತುಂಬಿ ಗ್ರಾಮ ಜಲಾವೃತಗೊಂಡಿತ್ತು. ಸೇತುವೆ ಕಿತ್ತು ತಿಂಗಳುಗಟ್ಟಲೆ ಗ್ರಾಮಕ್ಕೆ ಸಾರ್ವಜನಿಕ ಸಂಚಾರವೇ ಸ್ಥಗಿತಗೊಂಡಿತ್ತು. ಅದರ ಗಂಭೀರತೆ ಪರಿಗಣಿಸಿ ಪಂಚಾಯತ್‌ರಾಜ್ ಇಲಾಖೆಯಿಂದ ಕೈಗೊಂಡಿರುವ ರಸ್ತೆ ಸುಧಾರಣಾ ಕಾರ್ಯ ಗ್ರಾಮಸ್ಥರಲ್ಲಿ ತೀವ್ರ ಅಸಂತೃಪ್ತಿ ಸೃಷ್ಟಿಸಿದೆ.ಇಲಾಖೆಯಿಂದ ಪ್ರಮಾಣೀಕರಿಸಲ್ಪಟ್ಟ ಕ್ವಾರಿಯಿಂದ ಮರಂ ಹಾಕದೆ ಸ್ಥಳೀಯ ಹೊಲಗಳಲ್ಲಿಯೇ ಕೆರೆ ತೋಡಿ ರಸ್ತೆಗೆ ಮಣ್ಣು ಹಾಕಲಾಗಿದೆ. ಅದರ ಮೇಲೆ ಒಂದು ಇಂಚು ಸಹ ಡಾಂಬರ್ ಹಾಕಿರುವುದಿಲ್ಲ. ಉಗುರಿನಿಂದ ಕೆರೆದರೆ ಸಾಕು ಡಾಂಬರ್ ಹೋಗಿ ಮಣ್ಣು ಕಾಣಿಸಿಕೊಳ್ಳುತ್ತಿದೆ. ಬಂಡಿ ಗಾಲಿಗೆ ಡಾಂಬರ್ ಹತ್ತಿ ಕಿತ್ತು ಹೋಗತೊಡಗಿದೆ.

 

ಸೈಕಲ್ ಮೋಟಾರ್ ತಿರುಗಾಡಿದರೂ ಗಾಲಿಗೆ ಡಾಂಬರ್ ಮೆತ್ತಿ ಬರಿ ಮಣ್ಣು ಮಾತ್ರ ಉಳಿಯತೊಡಗಿದೆ. ಇಷ್ಟೊಂದು ಕಳಪೆ ಮಟ್ಟದಲ್ಲಿ ಕಾಮಗಾರಿ ನಡೆದಿದ್ದರೂ ಇಲಾಖೆಯ ಅಧಿಕಾರಿಗಳು ಮೌನವಾಗಿರುವ ಬಗ್ಗೆ ದೇವರಗುಡಿ ಗ್ರಾಮದ ವಿರುಪಣ್ಣ ಸೇರಿದಂತೆ ಹಲವಾರು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ದೇವರಗುಡಿಯಿಂದ ಸಿಂಧನೂರಿಗೆ ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಸಹ ರಸ್ತೆ ಕಳಪೆಯಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಬಹು ದಿನದಿಂದ ಕಂಡ ರಸ್ತೆಯ ಕನಸು ನನಸಾಗದೆ ಪುನಃ ಶಾಪವಾದಂತಾಗಿದೆ ಎಂದು ವಿದ್ಯಾರ್ಥಿಗಳಾದ ಸುರೇಶ, ಯಮನೂರ, ದೇವರಾಜ, ಬಸವರಾಜ, ನರಸರೆಡ್ಡಿ ಮತ್ತಿತರರು ರಸ್ತೆಯನ್ನು ಪುನರ್ ನಿರ್ಮಾಣ ಮಾಡಬೇಕು ಹೇಳಿದ್ದು, ಕಳಪೆಮಟ್ಟದ ಕಾಮಗಾರಿ ನಿರ್ವಹಿಸಿರುವ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಶಾಸಕರ ಮೌನ: ರಸ್ತೆ ಕಳಪೆಯಾಗುತ್ತಿರುವ ಬಗ್ಗೆ ಶಾಸಕರಿಗೆ ದೂರು ನೀಡಿ ಸ್ಥಳಕ್ಕೆ ಕರೆದುಕೊಂಡು ಹೋದರೂ ಅವರು ಮೌನವಾಗಿದ್ದಾರೆ. ಗುತ್ತಿಗೆದಾರರು ಮತ್ತು ಅಧಿಕಾರಿಗಳ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅವರ ಉದ್ದೇಶವೇ ಅರ್ಥವಾಗುತ್ತಿಲ್ಲವೆಂದು ಗ್ರಾಮಸ್ಥರು ನೊಂದು ಹೇಳುತ್ತಾರೆ.ಶಾಸಕರು ಕಾಮಗಾರಿ ಮಂಜೂರು ಮಾಡಿಸಿರುವ ಬಗ್ಗೆ ತಮಗೆ ಗೌರವವಿರುವುದಾಗಿ ಹೇಳುವ ಅವರು ಗುತ್ತಿಗೆದಾರರು ಅತ್ಯಂತ ಕಳಪೆಯಾಗಿ ಕಾಮಗಾರಿ ನಿರ್ವಹಿಸುತ್ತಿದ್ದರೂ ಅಧಿಕಾರಿಗಳಿಗೆ ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸೂಚಿಸುವ ಬದಲಾಗಿ ಸಣ್ಣಪುಟ್ಟ ಕೆಲಸಗಳಿಗೆಲ್ಲಾ ಅಡೆತಡೆ ಮಾಡಬಾರದು ಎಂದು ತಮಗೆ ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.