ಉಗುಳಿನಿಂದ ಮುಕ್ತ ಮಿನಿವಿಧಾನಸೌಧ

7

ಉಗುಳಿನಿಂದ ಮುಕ್ತ ಮಿನಿವಿಧಾನಸೌಧ

Published:
Updated:

ಹುಬ್ಬಳ್ಳಿ: ಅನೇಕ ಸರ್ಕಾರಿ ಕಚೇರಿಗಳ ಗೋಡೆಗಳು, ಮೆಟ್ಟಿಲುಗಳು ತಂಬಾಕು ತಿಂದು ಉಗುಳಿದ್ದರಿಂದ ನಕಾಶೆಗಳನ್ನು ಬಿಡಿಸಿದಂತಿರುತ್ತವೆ. ಆದರೆ ನಗರದ ಮಿನಿವಿಧಾನಸೌಧ ಉದ್ಘಾಟನೆಗೊಂಡು ಕಳೆದ ತಿಂಗಳಿಗೆ (ಜನವರಿ 12) ಎರಡು ವರ್ಷವಾದರೂ ತಂಬಾಕು ಉಗುಳಿನಿಂದ ದೂರ.ತಹಸೀಲ್ದಾರ ಕಚೇರಿಯ ಸಿಬ್ಬಂದಿಯೊಬ್ಬರು ಮೂರಂತಸ್ತಿನ ಮಿನಿವಿಧಾನಸೌಧವನ್ನು ಸುತ್ತತ್ತಲೇ ಇರುತ್ತಾರೆ. ಯಾರಾದರೂ ಉಗುಳಿದ್ದು ಕಂಡು ಬಂದರೆ ತಕ್ಷಣ ಅವರನ್ನು ತಹಸೀಲ್ದಾರ ಎಸ್.ಎಸ್. ಬಿರಾದಾರ ಎದುರು ನಿಲ್ಲಿಸುತ್ತಾರೆ. ಅಲ್ಲಿಂದ ಅವರನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಕೂಡಿಸಲಾಗುತ್ತದೆ. ನಂತರ ‘ಮಿನಿವಿಧಾನಸೌಧದ ಆವರಣದಲ್ಲಿ ಉಗುಳಿ ಗಲೀಜು ಮಾಡಿದ ಹಿನ್ನೆಲೆಯಲ್ಲಿ 500 ರೂಪಾಯಿ ದಂಡಕ್ಕೆ ಪಾತ್ರನಾಗಿದ್ದೇನೆ’ ಎನ್ನುವ ರಸೀದಿಗೆ ಸಹಿ ಹಾಕಿ 500 ರೂಪಾಯಿ ಕೊಡಬೇಕು.‘ಹೀಗೆ ವಸೂಲಾದ ದಂಡ ಎರಡು ವರ್ಷಗಳಲ್ಲಿ ರೂ. 12 ಸಾವಿರಕ್ಕೂ ಅಧಿಕ. ಈ ಮೊತ್ತವನ್ನು ಮಿನಿವಿಧಾನಸೌಧ ನಿರ್ವಹಣೆಗೆ ಬಳಸಲಾಗುತ್ತದೆ’ ಎನ್ನುವ  ಬಿರಾದಾರ, ‘ಎರಡು ವರ್ಷಗಳ ಹಿಂದೆ ಉದ್ಘಾಟನೆಗೊಂಡ ಹೊಸ ಕಟ್ಟಡ ಹೊಲಸಾಗಬಾರದು. ಉಗುಳಿನಿಂದ ಕಲೆಯಾಗಿ ಅಂದಗೆಡಬಾರದು ಎನ್ನುವ ಕಾರಣಕ್ಕೆ ತಂಬಾಕು ತಿಂದು ಉಗುಳುವುದನ್ನು ನಿಷೇಧಿಸಿದೆವು. ನಮ್ಮ ಮನೆಯ ಹಾಗೆ ನಾವು ಕೆಲಸ ನಿರ್ವಹಿಸುವ ಕಚೇರಿ ಕೂಡಾ ಇರಬೇಕು ಎಂದು ಇಡೀ ಕಟ್ಟಡದ ಗೋಡೆಗಳ ಮೇಲೆ ಬರೆಸಿದೆವು.ಜೊತೆಗೆ ಉಗುಳಿದವರಿಗೆ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಿದೆವು’ ಎನ್ನುತ್ತಾರೆ ಅವರು.ಮಿನಿವಿಧಾನಸೌಧದಲ್ಲಿ ತಹಸೀಲ್ದಾರ ಕಚೇರಿ, ತಾಲ್ಲೂಕು ಪಂಚಾಯಿತಿ ಕಚೇರಿ, ಗ್ರಾಮೀಣ ಪೊಲೀಸ್ ಠಾಣೆ, ಹಿರಿಯ ಉಪನೋಂದಣಿ ಕಚೇರಿ, ನಗರ ಭೂಮಾಪನಾ ಕಚೇರಿ, ವಾರ್ತಾ ಮತ್ತು ಪ್ರಚಾರ ಇಲಾಖೆ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಕಚೇರಿ, ಗೇಲ್ ಇಂಡಿಯಾ ಲಿಮಿಟೆಡ್ ಕಚೇರಿ, ಸಚಿವ ಜಗದೀಶ ಶೆಟ್ಟರ, ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಕಚೇರಿ, ಮೂರು ಸಭಾಭವನ ಜೊತೆಗೆ ಜಿಲ್ಲಾ ಖಜಾನೆ ಕಚೇರಿ ಇದ್ದು ಕನಿಷ್ಠ 500 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಈ ಎಲ್ಲ ಕಚೇರಿಗಳಿಗೆ ನಿತ್ಯ ಸಾವಿರಾರು ಸಾರ್ವಜನಿಕರು ಭೇಟಿ ನೀಡುತ್ತಾರೆ.‘ಹೀಗಿದ್ದಾಗ ತಂಬಾಕು ತಿಂದು ಎಲ್ಲೆಂದರಲ್ಲಿ ಉಗುಳುವುದು ಸಾಮಾನ್ಯ. ಇದನ್ನು ತಪ್ಪಿಸಲು ಜೊತೆಗೆ ದಂಡ ಹಾಕುವುದರಿಂದ ಜನರು ಎಚ್ಚೆತ್ತುಕೊಂಡಿದ್ದಾರೆ. ದಂಡ ಹಾಕಬೇಡಿ. ಅಂವ ನಮ್ಮವ ಎಂದು ಇದುವರೆಗೆ ಯಾರೂ ಪ್ರಭಾವ ಬೀರಲು ಬಂದಿಲ್ಲ’ ಎನ್ನುವ ಬಿರಾದಾರ ಅವರಿಗೆ ಇದನ್ನು ಯಾವಾಗಲೂ ನಿರ್ವಹಿಸಿಕೊಂಡು ಹೋಗುವ ಹಂಬಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry