ಮಂಗಳವಾರ, ಮೇ 11, 2021
24 °C

ಉಗ್ರರಿಂದ ವಿಮಾನ ಅಪಹರಣ ಸಂಚು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಉಗ್ರರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ವಿಮಾನ ಅಪಹರಣಕ್ಕೆ ಯತ್ನಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ನಿಲ್ದಾಣಕ್ಕೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ.ಕಳೆದ ಒಂದು ವಾರದಿಂದ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ನಿಲ್ದಾಣದ ಭದ್ರತಾ ಸಿಬ್ಬಂದಿ ಜೊತೆಗೆ 50ಕ್ಕೂ ಹೆಚ್ಚು ಪೊಲೀಸರೂ ಕಾವಲು ಕಾಯುತ್ತಿದ್ದಾರೆ. ವಿಮಾನ ಆಗಮನ ಹಾಗೂ ನಿರ್ಗಮನದ ಒಂದು ತಾಸಿಗೆ ಮುನ್ನ ಪ್ರಯಾಣಿಕರನ್ನಷ್ಟೇ ಒಳಗೆ ಬಿಡಲಾಗುತ್ತಿದೆ. ಉಳಿದ ಸಮಯದಲ್ಲಿ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಇದಲ್ಲದೇ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳವನ್ನೂ ಭದ್ರತೆಗಾಗಿ ನಿಯೋಜಿಸಲಾಗಿದೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಚಟುವಟಿಕೆಗಳ ಮೇಲೂ ಪೊಲೀಸರು ನಿಗಾ ಇರಿಸಿದ್ದಾರೆ.ಉಗ್ರರು ಮುಂಬೈ ವಿಮಾನ ನಿಲ್ದಾಣದಲ್ಲಿ ಸ್ಫೋಟ ನಡೆಸುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ. ಇದಕ್ಕಾಗಿ ಹುಬ್ಬಳ್ಳಿಯಿಂದ ಮುಂಬೈಗೆ ಹೋಗುವ ವಿಮಾನದ ಅಪಹರಣಕ್ಕೆ ಯತ್ನ ನಡೆಯಲಿದೆ ಎಂದು ವದಂತಿ ಹಬ್ಬಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಸೂಕ್ತ ಭದ್ರತೆ ಒದಗಿಸುವಂತೆ ಕೇಂದ್ರ ಗುಪ್ತಚರ ಮೂಲಗಳು ಸೂಚಿಸಿವೆ ಎನ್ನಲಾಗಿದೆ.

ಬಿಗಿ ಭದ್ರತೆ: ಪೊಲೀಸ್ ಆಯುಕ್ತ
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಉಗ್ರರು ದುಷ್ಕೃತ್ಯ ಎಸಗುವ ಸಾಧ್ಯತೆಗಳ ಕುರಿತು ವಿವಿಧ ಮೂಲಗಳಿಂದ ಮಾಹಿತಿ ಬಂದ ಹಿನ್ನೆಲೆಯಲ್ಲಿ ನಿಲ್ದಾಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಡಾ. ಕೆ. ರಾಮಚಂದ್ರರಾವ್ ತಿಳಿಸಿದರು.ನಿಲ್ದಾಣದ ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಹೆಚ್ಚಿನ ಸಿಬ್ಬಂದಿ ಜೊತೆಗೆ ಶ್ವಾನದಳ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನೂ ನಿಯೋಜಿಸಲಾಗಿದೆ. ನಿಲ್ದಾಣಕ್ಕೆ ತಂತಿಬೇಲಿ ರಕ್ಷಣೆ ಇದ್ದು, ಅದರ ಸುತ್ತ ಪೊಲೀಸರನ್ನು ನಿಯೋಜಿಸಲಾಗಿದೆ. ಅಗತ್ಯವಿರುವ ತನಕ ಭದ್ರತೆ ಮುಂದುವರಿಸಲಾಗುವುದು ಎಂದು ಆಯುಕ್ತರು ಹೇಳಿದರು.ಸದ್ಯ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಖಾಸಗಿ ವಿಮಾನ ಸಂಸ್ಥೆಯೊಂದರ ಲಘು ವಿಮಾನವೊಂದು ನಿತ್ಯ ಹಾರಾಟ ನಡೆಸುತ್ತಿದೆ. ಮಂಬೈನಿಂದ ಹೊರಟು ಸಂಜೆ 7.30ಕ್ಕೆ ಹುಬ್ಬಳ್ಳಿಗೆ ಆಗಮಿಸುವ ಈ ವಿಮಾನವು ನಂತರ ಬೆಂಗಳೂರಿಗೆ ತೆರಳುತ್ತದೆ. ಬೆಂಗಳೂರಿನಿಂದ ಬೆಳಿಗ್ಗೆ 9ಕ್ಕೆ ಹುಬ್ಬಳ್ಳಿಗೆ ಆಗಮಿಸುವ ವಿಮಾನ ಮುಂಬೈಗೆ ಹೋಗಲಿದೆ. ಈ ವಿಮಾನದ ಅಪಹರಣಕ್ಕೇ ಸಂಚು ನಡೆದಿದೆ ಎನ್ನಲಾಗಿದೆ. ಹೀಗಾಗಿ ವಿಮಾನದ ಆಗಮನ, ನಿರ್ಗಮನದ ವೇಳೆ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

 ಈ ಕುರಿತು ವಿಮಾನ ನಿಲ್ದಾಣದ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಲು ಸಿದ್ಧರಿಲ್ಲ. ಇದೆಲ್ಲ ಕೇವಲ ವದಂತಿ ಎನ್ನುವುದು ಅವರ ಸಮಜಾಯಿಷಿ. ಆದರೆ ಕಳೆದ ಒಂದು ವಾರದಿಂದ ವಿಮಾನ ನಿಲ್ದಾಣದ ಭದ್ರತೆ ಹೆಚ್ಚಿಸಿರುವುದನ್ನು ಅವರೇ ಒಪ್ಪಿಕೊಳ್ಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.