ಸೋಮವಾರ, ಮಾರ್ಚ್ 1, 2021
28 °C
ಸಿರಿಯಾದ ಡೆಯಿರ್‌ ಎಲ್‌–ಜೋರ್‌ ನಗರ ಬಹುತೇಕ ಐಎಸ್‌ ವಶ *ಹತ್ಯಾಕಾಂಡದ ಭೀತಿಯಲ್ಲಿ ಜನ

ಉಗ್ರರ ಉಪಟಳ: ಆಹಾರಕ್ಕಾಗಿ ಹಾಹಾಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಗ್ರರ ಉಪಟಳ: ಆಹಾರಕ್ಕಾಗಿ ಹಾಹಾಕಾರ

ಬೈರೂತ್‌ (ಎಪಿ/ಎಎಫ್‌ಪಿ): ಆಂತರಿಕ ಸಂಘರ್ಷ ಮತ್ತು ಐಎಸ್‌ ಉಗ್ರರ ಉಪಟಳದಿಂದ ಸಂಕಷ್ಟಕ್ಕೆ ಸಿಲುಕಿರುವ ಸಿರಿಯಾದ ಡೆಯಿರ್‌ ಎಲ್‌–ಜೋರ್‌ ನಗರದ ಜನರು, ಈಗ ಆಹಾರಕ್ಕಾಗಿ ತಮ್ಮ ಮನೆ, ಒಡವೆ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಮಾರುತ್ತಿದ್ದಾರೆ. ಸರ್ಕಾರದ ಪಡೆಗಳು ಮತ್ತು ಐಎಸ್‌ ಉಗ್ರರು ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲು ಮುಂದಾಗುತ್ತಿರುವುದೂ ಇದಕ್ಕೆ ಮತ್ತೊಂದು ಕಾರಣ.ಜನರು ಹಸಿವಿನಿಂದ ಕಂಗೆಟ್ಟಿರುವ ಮಡಾಯ ನಗರವು ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆದಿದೆ. ಈ ನಡುವೆಯೇ ಡೆಯಿರ್‌ ಎಲ್‌–ಜೊರ್‌ ಕೂಡ ಇಂಥದ್ದೇ ಸಂಕಷ್ಟಕ್ಕೆ ಸಿಲುಕಿದೆ. ಒಂದು ಕಾಲದಲ್ಲಿ ತೈಲ ಸಂಪನ್ಮೂಲದ ಕಾರಣ ಶ್ರೀಮಂತ ನಗರವಾಗಿದ್ದ ಡೆಯಿರ್‌ ಎಲ್‌–ಜೊರ್‌ನಲ್ಲಿ, ಜನರು ಚಹಾಕ್ಕೂ ಹೆಣಗಬೇಕಾಗಿದೆ.ತೀವ್ರ ಪ್ರಮಾಣದಲ್ಲಿ ಆಹಾರ, ನೀರು ಮತ್ತು ತೈಲದ ಕೊರತೆ ಉಂಟಾಗಿದೆ. ಕಳೆದ 10 ತಿಂಗಳಿಂದಲೂ ನಗರ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲಲ್ಲಿ ಮುಳುಗಿದೆ. ನಲ್ಲಿಗಳಲ್ಲಿ ವಾರದಲ್ಲಿ ಒಮ್ಮೆ ಅಪರೂಪಕ್ಕೆ ಸ್ವಲ್ಪ ಹೊತ್ತು ನೀರು ಪೂರೈಕೆಯಾಗುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳು ಶಾಲೆಗಳಿಗೆ ಹಾಜರಾಗುತ್ತಿಲ್ಲ. ಉಗ್ರರ ದಾಳಿಗಳ ಬಳಿಕ ಉಳಿದಿರುವ ಏಕೈಕ ನಾಗರಿಕ ಆಸ್ಪತ್ರೆಯಲ್ಲಿ ಔಷಧ ಮತ್ತು ವೈದ್ಯರ ಕೊರತೆ ಇದೆ. ಅಪೌಷ್ಟಿಕತೆಯಿಂದ ಇದುವರೆಗೂ ಸುಮಾರು 27 ಮಂದಿ ಮೃತಪಟ್ಟ ವರದಿಯಾಗಿದೆ. ನಗರವನ್ನು ಸುತ್ತುವರಿದಿರುವ ಐಎಸ್‌ ಉಗ್ರರು, ಕೃಷಿಭೂಮಿಗಳಿಂದ ಉತ್ಪನ್ನಗಳನ್ನು ನಗರದ ಜನತೆಗೆ ಪೂರೈಸಲು ಅವಕಾಶ ನೀಡುತ್ತಿಲ್ಲ. ಅತ್ತ ನಗರದ ಕೆಲವು ಭಾಗ ಮತ್ತು ವಿಮಾನನಿಲ್ದಾಣಗಳಲ್ಲಿ ನಿಯಂತ್ರಣ ಇರಿಸಿಕೊಂಡಿರುವ ಸಿರಿಯಾ ಸರ್ಕಾರವು  ವೈಮಾನಿಕ ಮಾರ್ಗದ ಮೂಲಕ ಆಹಾರ ಪೂರೈಸಲು ಅನುಮತಿ ನೀಡುತ್ತಿಲ್ಲ. ಜನರು ನಗರದಿಂದ ಹೊರಬರಲಿ ಎಂದು ಅದು ಹೇಳುತ್ತಿದೆ. ನಗರದ ಉತ್ತರ ಭಾಗದಲ್ಲಿ ಶನಿವಾರದಿಂದ ನಡೆದ ಸಂಘರ್ಷಗಳಲ್ಲಿ ಸುಮಾರು 12ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.ಹತ್ಯಾಕಾಂಡದ ಭೀತಿ (ಡಮಾಸ್ಕಸ್‌ ವರದಿ): ಸಿರಿಯಾದ ಪೂರ್ವದಲ್ಲಿರುವ ಡೆಯಿರ್‌ ಎಲ್‌–ಜೊರ್‌ ನಗರದ ಬಹುತೇಕ ಭಾಗವು ಐಎಸ್‌ ಉಗ್ರರ ನಿಯಂತ್ರಣಕ್ಕೆ ಸಿಲುಕಿದ್ದು,  ಉಗ್ರರಿಂದ ಭಾರಿ ಪ್ರಮಾಣದಲ್ಲಿ ಹಿಂಸೆ, ಹತ್ಯಾಕಾಂಡಗಳು ನಡೆಯುವ ಕುರಿತು ನಾಗರಿಕರಲ್ಲಿ ಭಯ ಉಂಟಾಗಿದೆ.ಅಂದಾಜು 2 ಲಕ್ಷ ನಾಗರಿಕರು ನೆಲೆಸಿರುವ ಡೆಯಿರ್‌ ಎಲ್‌–ಜೊರ್‌ ನಗರದ ಶೇ 60ರಷ್ಟು ಭಾಗ ಈಗಾಗಲೇ ಉಗ್ರರ ವಶವಾಗಿದೆ. ನಗರಕ್ಕೆ ಆಹಾರ ಉತ್ಪಾದನೆಯ ಮೂಲವಾದ ಹೊರವಲಯದಲ್ಲಿರುವ ಅಲ್ ಬಾಗಾಲಿಯೆ ಪ್ರದೇಶವನ್ನು ಕೂಡ ಐಎಸ್‌ ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.ನಗರದಲ್ಲಿರುವ ಜನರಲ್ಲಿ ಶೇ 70ರಷ್ಟು ಮಹಿಳೆಯರು ಮತ್ತು ಮಕ್ಕಳೇ ಇದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಒಂದು ವೇಳೆ ಸಂಪೂರ್ಣ ನಗರ ಐಎಸ್‌ ಕೈವಶವಾದರೆ ಭಾರಿ ಪ್ರಮಾಣದಲ್ಲಿ ಸಾಮೂಹಿಕ ಹತ್ಯಾಕಾಂಡ ನಡೆಯಲಿದೆ ಎಂಬ ಭೀತಿ ಜನರಲ್ಲಿ ಮೂಡಿದೆ.270 ಅಪಹೃತ ನಾಗರಿಕರ ಬಿಡುಗಡೆ (ಬೈರೂತ್ ವರದಿ): ಪೂರ್ವ ಸಿರಿಯಾದ ಡೆಯಿರ್‌ ಎಲ್‌–ಜೊರ್ ನಗರದ ಮೇಲೆ ದಾಳಿ ನಡೆಸಿ ಅಪಹರಿಸಿದ್ದ 400ಕ್ಕೂ ಹೆಚ್ಚು ನಾಗರಿಕರ ಪೈಕಿ 270 ಮಂದಿಯನ್ನು ಇಸ್ಲಾಮಿಕ್ ಸ್ಟೇಟ್‌ (ಐಎಸ್‌) ಮಂಗಳವಾರ ಬಿಡುಗಡೆ ಮಾಡಿದೆ.

ಬಿಡುಗಡೆಯಾದವರಲ್ಲಿ ಮಹಿಳೆಯರು, 14 ವರ್ಷದ ಒಳಗಿನ ಮಕ್ಕಳು ಮತ್ತು ವೃದ್ಧರು ಇದ್ದಾರೆ. ಆದರೆ, ಐಎಸ್ ವಶದಲ್ಲಿ ಇನ್ನೂ 130 ನಾಗರಿಕರಿದ್ದಾರೆ. ಅವರಲ್ಲಿ ಯುವಕರು ಮತ್ತು ಮಧ್ಯವಯಸ್ಕ ಪುರುಷರೇ ಹೆಚ್ಚು ಎಂದು ಸಿರಿಯಾ ಮಾನವಹಕ್ಕುಗಳ ಕಾವಲು ಸಮಿತಿ ಮುಖ್ಯಸ್ಥ ರಮಿ ಅಬ್ದೆಲ್‌ ರಹಮಾನ್‌  ಮಾಹಿತಿ ನೀಡಿದ್ದಾರೆ.

ಅಪಹೃತ ನಾಗರಿಕರಿಗೆ ಸರ್ಕಾರದೊಂದಿಗೆ ಸಂಬಂಧ ಹೊಂದಿರುವ ಬಗ್ಗೆ ಐಎಸ್‌ ಜಿಹಾದಿಗಳು ಪ್ರಶ್ನಿಸುತ್ತಿದ್ದು, ಸಿರಿಯಾದ ಜತೆ ಯಾವುದೇ ನಂಟು ಇಲ್ಲದವರನ್ನು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು ರಹಮಾನ್ ತಿಳಿಸಿದ್ದಾರೆ.ಐಎಸ್‌ ಬ್ಯಾಂಕ್ ಧ್ವಂಸ (ವಾಷಿಂಗ್ಟನ್‌ನಿಂದ ಪಿಟಿಐ ವರದಿ): ಮತ್ತೊಂದೆಡೆ, ಇರಾಕ್‌ನ ಮೊಸುಲ್ ನಗರದಲ್ಲಿರುವ ಐಎಸ್‌ ಉಗ್ರರಿಗೆ ಸೇರಿದ ಬೃಹತ್‌ ಬ್ಯಾಂಕ್ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕದ ಯುದ್ಧ ವಿಮಾನಗಳು ಅಂದಾಜು ₹30 ಕೋಟಿ (45 ಮಿಲಿಯನ್ ಅಮೆರಿಕನ್ ಡಾಲರ್) ಹಣವನ್ನು ನಾಶಪಡಿಸಿದ್ದಾರೆ.

ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಐಎಸ್‌ಗೆ ಇದು ಭಾರಿ ಹೊಡೆತ ನೀಡಲಿದೆ ಎನ್ನಲಾಗಿದೆ.ಮಂಗಳವಾರ ರಾತ್ರಿ ದಾಳಿ ನಡೆಸಿದ ಅಮೆರಿಕದ ಯುದ್ಧ ವಿಮಾನಗಳು ಮೊಸುಲ್‌ನಲ್ಲಿರುವ ಇಸ್ಲಾಮಿಕ್ ಸ್ಟೇಟ್‌ ಬ್ಯಾಂಕ್‌ಅನ್ನು ಧ್ವಂಸಗೊಳಿಸಿವೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.