ಶನಿವಾರ, ಮಾರ್ಚ್ 6, 2021
21 °C
ವಿಧಾನಸೌಧದಲ್ಲಿ ಅಣಕು ಪ್ರದರ್ಶನ ನಡೆಸಿದ ಎನ್‌ಎಸ್‌ಜಿ–ಗರುಡ ಪಡೆ

ಉಗ್ರರ ದಮನ, ‘ಒತ್ತೆಯಾಳು’ಗಳ ರಕ್ಷಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಗ್ರರ ದಮನ, ‘ಒತ್ತೆಯಾಳು’ಗಳ ರಕ್ಷಣೆ

ಬೆಂಗಳೂರು: ಅದು ಬುಧವಾರ ಸಂಜೆ 5 ಗಂಟೆ ಸಮಯ. ಕಾರಿನಲ್ಲಿ ಬಂದ ಇಬ್ಬರು ‘ಉಗ್ರ’ರು ಸೀದಾ ವಿಧಾನಸೌಧದ ಆವರಣದೊಳಗೆ ನುಗ್ಗಿದರು. ಗುಂಡಿನ ದಾಳಿ ನಡೆಸುತ್ತಲೇ ಕೊಠಡಿ ಸಂಖ್ಯೆ 106 ಹಾಗೂ 334ಕ್ಕೆ (ಸಭಾಂಗಣ) ನುಗ್ಗಿ ಗಣ್ಯ ವ್ಯಕ್ತಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡರು.ಕೆಲವೇ ಕ್ಷಣಗಳಲ್ಲಿ ನಡೆದ ಈ ಎಲ್ಲ ವಿದ್ಯ­ಮಾನವನ್ನು ಕಟ್ಟಡದ ಹೊರಗೆ ನಿಂತಿದ್ದ ವಿಧಾನಸೌಧದ ನೌಕರರು ಆತಂಕದ ಬದಲಾಗಿ ಬಲು ಕುತೂಹಲದಿಂದ ವೀಕ್ಷಿಸಿದರು. ಏಕೆಂದರೆ, ಅದೊಂದು ಅಣಕು ಪ್ರದರ್ಶನ­ವಾಗಿತ್ತು.ಭಯೋತ್ಪಾದನಾ ದಾಳಿಗಳು ನಡೆದಾಗ ಅದನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಜಾಗೃತಿ ಮೂಡಿಸಲು ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಹಾಗೂ ಆಂತರಿಕ ಭದ್ರತಾ ವಿಭಾಗದ ಗರುಡ ಪಡೆ ಕಮಾಂಡೊಗಳು ಬುಧವಾರ ವಿಧಾನಸೌಧದಲ್ಲಿ ಅಣಕು ಪ್ರದರ್ಶನ ನಡೆಸಿಕೊಟ್ಟರು.ರಾತ್ರಿ 9 ಗಂಟೆ ಸುಮಾರಿಗೆ ಆ ಕೊಠಡಿಗಳಿಗೆ ನುಗ್ಗುವಲ್ಲಿ ಯಶಸ್ವಿಯಾದ ಎನ್‌ಎಸ್‌ಜಿ ಕಮಾಂಡೊಗಳು, ಗುಂಡಿನ ಮಳೆಗೈದು ಆ ನಕಲಿ ಉಗ್ರರನ್ನು ಹತ್ಯೆಗೈದರು. ನಂತರ ಒಳಗಿದ್ದ ‘ಒತ್ತೆ­ಯಾಳು’­ಗಳನ್ನು ಬಿಡಿಸಿ ಸುರಕ್ಷಿತವಾಗಿ ಹೊರತಂದಾಗ ಆವರಣದಲ್ಲಿದ್ದ ನೌಕರರು ಅವರಿಗೆ ಚಪ್ಪಾಳೆಗಳ ಮೂಲಕ ಅಭಿನಂದನೆ ಸಲ್ಲಿಸಿದರು.ಹೇಗಿತ್ತು ಪ್ರದರ್ಶನ: ಭಯೋತ್ಪಾದಕ ಪಾತ್ರಧಾರಿಗಳು ಒಳ ನುಗ್ಗುತ್ತಿ­ದ್ದಂತೆ ನೌಕರರು ವಿಧಾನಸೌಧ ಠಾಣೆಗೆ ವಿಷಯ ತಿಳಿಸಿದರು. ತಕ್ಷಣವೇ ಅಲ್ಲಿಗೆ ಬಂದ ಪೊಲೀಸರು, ಗರುಡ ಪಡೆಯನ್ನು ಸ್ಥಳಕ್ಕೆ ಕರೆಸಿದರು. ಕೂಡಲೇ ತುರ್ತು ಸಭೆ ನಡೆಸಿದ ಅಧಿಕಾರಿಗಳು ಕಾರ್ಯಾಚರಣೆಗೆ ಯೋಜನೆ ಸಿದ್ಧಪಡಿಸಿಕೊಂಡರು. ‘ಒತ್ತೆಯಾಳುಗಳನ್ನು ಸುರಕ್ಷಿತವಾಗಿ ಹೊರ ತರಬೇಕು’ ಎಂಬ ಪಣ ತೊಟ್ಟರು.ವಿಧಾನಸೌಧ ಕಟ್ಟಡದ ವಿನ್ಯಾಸ, ಉಗ್ರರು ಅಡಗಿರುವ ಕೊಠಡಿಗಳು ತೆರಳಲು ಇರುವ ಎಲ್ಲ ಮಾರ್ಗಗಳ ಬಗ್ಗೆ ಗರುಡ ಪಡೆ ಸಿಬ್ಬಂದಿ ಮಾಹಿತಿ ಪಡೆದುಕೊಂಡರು. ನಂತರ ಶಸ್ತ್ರಾಸ್ತ್ರಗಳೊಂದಿಗೆ ಒಳ ನುಗ್ಗಲು ಯತ್ನಿಸಿದ ಗರುಡ ಪಡೆ, ‘ಒಳ ಬಂದರೆ ಒತ್ತೆಯಾಳುಗಳನ್ನು ಹತ್ಯೆ ಮಾಡುತ್ತೇವೆ’ ಎಂದು ಉಗ್ರರು ಘೋಷಿಸಿದ್ದರಿಂದ ಕಾರ್ಯಾಚರಣೆ ಹಿಂಪಡೆಯಿತು.ನಂತರ ಪೊಲೀಸರು ಎನ್‌ಎಸ್‌ಜಿಗೆ ಮಾಹಿತಿ ನೀಡಿದರು. ಕೂಡ್ಲು ಬಳಿ ಉಳಿದಿದ್ದ ಎನ್‌ಎಸ್‌ಜಿ  ಸಿಬ್ಬಂದಿ, ರಕ್ಷಣಾ ವಾಹನಗಳಲ್ಲಿ ಸ್ಥಳಕ್ಕೆ ದೌಡಾಯಿಸಿದರು. ಸ್ವಲ್ಪ ಸಮಯದಲ್ಲೇ ಯಲಹಂಕ ವಾಯುನೆಲೆಯಿಂದ ಒಂದು ಹೆಲಿಕಾಪ್ಟರ್‌  ಸಹ ವಿಧಾನಸೌಧ ಆವರಣಕ್ಕೆ ಬಂದಿಳಿಯಿತು. ಮತ್ತೊಂದು ಸುತ್ತಿನ ಸಭೆ ನಡೆಸಿ ಕಟ್ಟಡದ ರಚನೆ ಬಗ್ಗೆ ವಿವರ ಪಡೆದ ಎನ್ಎಸ್‌ಜಿ ಕಮಾಂಡೊಗಳು, ಒಳ ನುಗ್ಗಿ ಉಗ್ರರ ಮೇಲೆ ಗುಂಡು ಹಾರಿಸಿ ಒತ್ತೆಯಾಳುಗಳನ್ನು ರಕ್ಷಿಸಿದರು.ಅಣಕು ಪ್ರದರ್ಶನದ ಉಸ್ತುವಾರಿಯನ್ನು ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ಎಚ್‌.ಡಿ.ಅನಿಲ್‌ಕುಮಾರ್ ವಹಿಸಿಕೊಂಡಿದ್ದರು. ಗರುಡ ಪಡೆಯ 110 ಹಾಗೂ ಎನ್‌ಎಸ್‌ಜಿಯ 200 ಸಿಬ್ಬಂದಿ ಪಾಲ್ಗೊಂಡಿದ್ದರು. ಒಳಗೆ ಗುಂಡಿನ ಚಕಮಕಿ ನಡೆದ ಸದ್ದು ಕೇಳಿದ ದಾರಿಹೋಕರು, ಕ್ಷಣ ಕಾಲ ಆತಂಕಕ್ಕೆ ಒಳಗಾದರು. ಅದು ಅಣಕು ಪ್ರದರ್ಶನ ಎಂಬುದು ಗೊತ್ತಾದ ಮೇಲೆ ನಿರಾಳರಾದರು.

ಮೊದಲ ಸಲ

‘ವಿಧಾನಸೌಧದಲ್ಲಿ ಇದೇ ಮೊದಲ ಬಾರಿಗೆ ಗರುಡ ಪಡೆ ಹಾಗೂ ಎನ್‌ಎಸ್‌ಜಿ ಕಮಾಂಡೊಗಳು ಅಣಕು ಪ್ರದರ್ಶನ ನಡೆಸಿದ್ದಾರೆ. ಪ್ರತಿಷ್ಠಿತ ಹೋಟೆಲ್‌ಗಳು ಸೇರಿದಂತೆ ಇನ್ನಿತರೆ ಸೂಕ್ಷ್ಮ ಪ್ರದೇಶಗಳಲ್ಲೂ ಗುರುವಾರ ಅಣಕು ಪ್ರದರ್ಶನ ನಡೆಯಲಿದೆ. ಎನ್‌ಎಸ್‌ಜಿ ಕಮಾಂಡಗೊಳಿಗೆ ಕೂಡ್ಲು ಬಳಿ ವಸತಿ ವ್ಯವಸ್ಥೆ ಮಾಡಲಾಗಿದೆ’ ಎಂದು ಡಿಸಿಪಿ ಎಚ್‌.ಡಿ. ಅನಿಲ್‌ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ರಾಜ್ಯದ ‘ಗರುಡ’ ಪಡೆಗೆ ತರಬೇತಿ: ಸಚಿವ ಪರಮೇಶ್ವರ್‌

ಬೆಂಗಳೂರು:
‘ಭಯೋತ್ಪಾದಕರ ದಾಳಿಗೆ ಒಳಗಾಗಬಹುದು ಎಂದು ಅಂದಾಜಿಸಿರುವ 300 ಪ್ರಮುಖ ಸ್ಥಳಗಳು ರಾಜ್ಯದಲ್ಲಿವೆ. ಇವುಗಳಲ್ಲಿ ರಕ್ಷಣಾ ಸಂಸ್ಥೆಗಳು, ಜಲಾಶಯಗಳು, ಶಿಕ್ಷಣ ಸಂಸ್ಥೆಗಳೂ ಸೇರಿವೆ’ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಬುಧವಾರ ಇಲ್ಲಿ ತಿಳಿಸಿದರು.

ಭಯೋತ್ಪಾದಕ ದಾಳಿಗಳನ್ನು ಸಮರ್ಥವಾಗಿ ಎದುರಿಸುವ ಉದ್ದೇಶದಿಂದ ರಾಜ್ಯದ ‘ಗರುಡ’ ಪಡೆಗೆ ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ತರಬೇತಿ ಕೊಟ್ಟಿದೆ. ಅದರ  ಕಾರ್ಯಕ್ಷಮತೆಯ ಅಣಕು ಪ್ರದರ್ಶನ ವಿಧಾನಸೌಧದಲ್ಲಿ ಆರಂಭವಾಗುವುದಕ್ಕೂ ಮುನ್ನ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ರಾಜ್ಯದಲ್ಲಿನ ಪ್ರಮುಖ ಸ್ಥಳಗಳ ರಕ್ಷಣೆಗೆ ಎನ್‌ಎಸ್‌ಜಿ ಮಾದರಿಯಲ್ಲಿ ಗರುಡ ಪಡೆ ಇದೆ. ತುರ್ತು ಸಂದರ್ಭಗಳಲ್ಲಿ ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಪೂರ್ಣ ಪಾಠ ಎಲ್ಲರಿಗೂ ಗೊತ್ತಾಗಲಿ ಎಂದು ಈ ಅಣಕು ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಅವರು ಹೇಳಿದರು.

‘ರಾಜ್ಯದ ನಾಲ್ಕೈದು ಕಡೆ ಇಂತಹ ಅಣಕು ಪ್ರದರ್ಶನಗಳು ನಡೆಯಲಿವೆ. ಇದೊಂದು ಮಾಮೂಲಿ ಪ್ರಕ್ರಿಯೆ’ ಎಂದು ಸಚಿವ ಪರಮೇಶ್ವರ್‌ ವಿವರಿಸಿದರು.

ಹೈದರಾಬಾದ್‌ನ ಎನ್‌ಎಸ್‌ಜಿ ಕಮಾಂಡರ್‌ ಬ್ರಿಗೇಡಿಯರ್‌ ಗಂಗೂಲಿ ಜತೆ ಕೆಲಹೊತ್ತು ಗೃಹ ಸಚಿವರು ಮಾತುಕತೆ ನಡೆಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.