ಭಾನುವಾರ, ಮೇ 16, 2021
22 °C

ಉಗ್ರರ ನಿಗ್ರಹ ಪಡೆ ನಿಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್/ವಾಷಿಂಗ್ಟನ್ (ಪಿಟಿಐ): ಅಲ್‌ಖೈದಾ ಉಗ್ರರು 9/11ರ ಭಯೋತ್ಪಾದನಾ ದಾಳಿಯ 10ನೇ ವರ್ಷಾಚರಣೆ ಸಂದರ್ಭದಲ್ಲಿ ಕಾರು ಅಥವಾ ಟ್ರಕ್ ಬಾಂಬ್ ಬಳಸಿ ಮತ್ತೆ ದಾಳಿ ನಡೆಸಬಹುದೆಂಬ ಅಮೆರಿಕ ಗುಪ್ತದಳ ಅಧಿಕಾರಿಗಳ ಎಚ್ಚರಿಕೆಯ ಹಿನ್ನೆಲೆಯಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದ ಭಯೋತ್ಪಾದಕ ನಿಗ್ರಹ ಪಡೆಗಳನ್ನು ಇಲ್ಲಿ ನಿಯೋಜಿಸಲಾಗಿದೆ.ಅಧಿಕಾರಿಗಳು ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪರಿಸ್ಥಿತಿಯನ್ನು ವಿವರಿಸಿದ ನಂತರ ಹೆಚ್ಚುವರಿ ಪೊಲೀಸ್ ಪಡೆಗಳನ್ನು ಹಾಕಲಾಗಿದೆ. ನ್ಯೂಯಾರ್ಕ್ ಮೇಯರ್ ಮೈಕೆಲ್ ಬ್ಲೂಂಬರ್ಗ್ ಉಗ್ರರ ಬೆದರಿಕೆಯನ್ನು ಬಹಿರಂಗಪಡಿಸಿದ್ದು, ಆದರೆ ಯಾವುದೇ ಸ್ಪಷ್ಟ ಸುಳಿವು ಸಿಕ್ಕಿರುವುದನ್ನು ಖಚಿತಪಡಿಸಿಲ್ಲ.ನಂಬಲರ್ಹ ಮತ್ತು ಖಚಿತವಲ್ಲದ ಈ ದಾಳಿಯನ್ನು ಎದುರಿಸಿ ವಿಫಲಗೊಳಿಸಲು ಅನುವಾಗುವಂತೆ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧ್ಯಕ್ಷರು ಉಗ್ರರ ನಿಗ್ರಹ ಪಡೆಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಈ ಬಗೆಗಿನ ಬೆದರಿಕೆ ಸಂದೇಶವು ಅಮೆರಿಕ ಗುಪ್ತಚರ ಸಂಸ್ಥೆಗೆ ಬುಧವಾರ ಬಂದಿದೆ. ಈ ಹಿನ್ನೆಲೆಯಲ್ಲಿ ಭದ್ರತಾ ಅಧಿಕಾರಿಗಳು ಆಫ್ಘಾನಿಸ್ತಾನದಿಂದ ಮೂರನೇ ರಾಷ್ಟ್ರವೊಂದರ ಮೂಲಕ ಕಳೆದ ತಿಂಗಳು ಅಮೆರಿಕವನ್ನು ಪ್ರವೇಶಿಸಿದ ಮೂವರು ವ್ಯಕ್ತಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.ಉಗ್ರರ ನಿಗ್ರಹ ಪಡೆ ಅಧಿಕಾರಿಗಳು ಈ ವರದಿಯನ್ನು ಅವಲೋಕಿಸುತ್ತಿದ್ದು, ನ್ಯೂಯಾರ್ಕ್ ಮತ್ತು ವಾಷಿಂಗ್ಟನ್‌ನಲ್ಲಿ ಬೆದರಿಕೆ ಮಟ್ಟ ಹೆಚ್ಚುತ್ತಿರುವುದರ ಬಗ್ಗೆಯೂ ಆಡಳಿತ ಪರಿಶೀಲನೆ ನಡೆಸಿದೆ.

 

ಇದಲ್ಲದೆ, ಕೊಲ್ಲಿ ರಾಷ್ಟ್ರಗಳ ಜೊತೆಗೂ ಸಂಪರ್ಕ ಸಾಧಿಸಿ, ಉಗ್ರರ ಸಂಚನ್ನು ವಿಫಲಗೊಳಿಸುವ ಪ್ರಯತ್ನಗಳು ಸಾಗಿವೆ ಎಂದು ಅಮೆರಿಕದ ಆಂತರಿಕ ಭದ್ರತಾ ಇಲಾಖೆ ವಕ್ತಾರರು ಹೇಳಿದ್ದಾರೆ.ಮಿಸ್ಸೋರಿಯ ಕಾನ್ಸಾಸ್ ನಗರದಲ್ಲಿ ಕಳ್ಳತನವಾಗಿರುವ ಕನಿಷ್ಠ ಎರಡು ಬಾಡಿಗೆ ಟ್ರಕ್‌ಗಳ ಪತ್ತೆಗೆ ಪೊಲೀಸರು ಅಮೆರಿಕದಾದ್ಯಂತ ಕಾರ್ಯಾಚರಣೆ ಕೈಗೊಂಡಿದ್ದಾರೆ.ಭಯೋತ್ಪಾದಕರು 2001ರ ಸೆಪ್ಟೆಂಬರ್ 11ರಂದು ನಾಲ್ಕು ವಿಮಾನಗಳನ್ನು ಅಪಹರಿಸಿ ಎರಡನ್ನು ನ್ಯೂಯಾರ್ಕ್‌ನ ವಿಶ್ವ ವಾಣಿಜ್ಯ ಕೇಂದ್ರವಿದ್ದ ಬಹುಮಹಡಿ ಅವಳಿ ಕಟ್ಟಡಕ್ಕೆ ಅಪ್ಪಳಿಸಿ, ಮೂರನೆಯದನ್ನು ಪೆಂಟಗಾನ್ ಮೇಲೆ ಹಾರಿಸಿ ಹಾಗೂ ನಾಲ್ಕನೆಯದನ್ನು ಪೆನ್ಸಿಲ್ವೇನಿಯಾದಲ್ಲಿ ಅಪಘಾತಕ್ಕೀಡು ಮಾಡಿ, ಸಾವಿರಾರು ಜನರ ಸಾವಿಗೆ ಕಾರಣವಾದ ದುರಂತದ 10ನೇ ವರ್ಷಾಚರಣೆ ಇದೇ ಭಾನುವಾರ ಇಲ್ಲಿ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಅಧ್ಯಕ್ಷ ಒಬಾಮ ಮತ್ತು ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಭಾಗವಹಿಸಿ, ಅಪಾರ ಜನಸಮುದಾಯವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ನಾಗರಿಕರ ರಕ್ಷಣೆಗಾಗಿ ಪೊಲೀಸರಿಗೆ ಹೆಚ್ಚುವರಿ ಸಂಪನ್ಮೂಲ ಒದಗಿಸಲಾಗಿದೆ ಎಂದು ಮೇಯರ್ ತಿಳಿಸಿದ್ದಾರೆ.ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕುವೊಮೊ ಹೇಳಿಕೆ ನೀಡಿ, ರಾಜ್ಯದ ಕಾನೂನು ಜಾರಿ ಸಂಸ್ಥೆಗಳು ಪೆಡರಲ್ ಮತ್ತು ಸ್ಥಳೀಯ ಸಂಸ್ಥೆಗಳೊಡನೆ ನಿರಂತರ ಸಂಪರ್ಕದಲ್ಲಿವೆ ಎಂದು ಹೇಳಿದ್ದಾರೆ. ಯಾರೂ ಭಯಭೀತರಾಗದೆ, ದಾಳಿಯ ಸ್ಮರಣೆಯಲ್ಲಿ ಭಾಗವಹಿಸುವಂತೆ ಅವರು ಸೂಚಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.