ಸೋಮವಾರ, ಜುಲೈ 26, 2021
27 °C

ಉಗ್ರರ ಸಂಚು ಸಫಲವಾಗದು-ಸಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿಸ್ತ್‌ವಾರ್ (ಜಮ್ಮು- ಕಾಶ್ಮೀರ): ಭಯೋತ್ಪಾದನೆ ವಿರುದ್ಧ ದೇಶದ ಜನತೆ ಒಗ್ಗಟ್ಟಾಗಿದ್ದು, ಉಗ್ರರ ಸಂಚು ಯಶಸ್ವಿಯಾಗದು ಎಂದು ಪ್ರಧಾನ ಮಂತ್ರಿ ಮನಮೋಹನ ಸಿಂಗ್ ಹೇಳಿದ್ದಾರೆ.ಮಂಗಳವಾರ ಇಲ್ಲಿ ನಡೆದ 850 ಮೆಗಾ ವಾಟ್ ವಿದ್ಯುತ್ ಉತ್ಪಾದನಾ ಘಟಕಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, `ಶ್ರೀನಗರ ಹೊರವಲಯದ ಹೈದರಪುರದಲ್ಲಿ ಭಯೋತ್ಪಾದಕರ ವಿರುದ್ಧ ಸೋಮವಾರ ನಡೆದ ಹೋರಾಟದಲ್ಲಿ ತಮ್ಮ ಜೀವ ಕೊಟ್ಟ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವೆ' ಎಂದರು.ಅಭಿವೃದ್ಧಿ ಸಾಧಿಸಲು ಸುರಕ್ಷತೆಗೆ ಆದ್ಯತೆ ಕೊಡಲೇಬೇಕು ಎಂದು ಪ್ರತಿಪಾದಿಸಿದ ಪ್ರಧಾನಿ, ಸೋಮವಾರ ನಡೆದ ಉಗ್ರರ ದಾಳಿಯಂಥ ವಿಧ್ವಂಸಕ ಕೃತ್ಯಗಳು ರಾಜ್ಯವನ್ನು ಸಾಮಾನ್ಯ ಸ್ಥಿತಿಗೆ ತರಲು ನಡೆಸುತ್ತಿರುವ ಯತ್ನಗಳನ್ನು ತಡೆಯಲಾರವು ಎಂದು ಹೇಳಿದರು.ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ವ್ಯವಸ್ಥೆ ಗಮನಾರ್ಹವಾಗಿ ಸುಧಾರಿಸಿದೆ. 2012ರಲ್ಲಿ ಉಗ್ರಗಾಮಿ ಚಟುವಟಿಕೆ ತೀರಾ ಇಳಿಮುಖವಾಗಿದ್ದು, ಇದು ಕಳೆದ ಎರಡು ದಶಕಗಳಲ್ಲಿಯೇ ಅತ್ಯಂತ ಕಡಿಮೆ ಎಂದು ಪ್ರಧಾನಿ ನುಡಿದರು. `ಹಾಗಿದ್ದರೂ ದಾಳಿಯನ್ನು ತಡೆಯಲು ಸತತ ನಿಗಾ ವಹಿಸುವುದು ಅಗತ್ಯವಾಗಿದೆ' ಎಂದು ಸಲಹೆ ಮಾಡಿದರು.ಸುಸ್ಥಿರ ಹಾಗೂ ತೀವ್ರವಾಗಿ ರಾಜ್ಯ ಅಭಿವೃದ್ಧಿಯಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬದ್ಧವಾಗಿವೆ. ಎರಡೂ ಸರ್ಕಾರಗಳು ಸಮನ್ವಯದಿಂದ ನಡೆಸಿದ ಪ್ರಯತ್ನದ ಫಲವಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ತ್ವರಿತ ಗತಿಯಲ್ಲಿ ಪ್ರಗತಿ ಕಾಣುವಂತಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.ಸೋಮವಾರ ಉಗ್ರರ ಜತೆ ನಡೆದ ಘರ್ಷಣೆಯಲ್ಲಿ ಸಾವನ್ನಪ್ಪಿದ ಯೋಧರಿಗೆ ನಮನ ಸಲ್ಲಿಸಿದ ಮನಮೋಹನ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ಯೋಧರಿಗೆ ಸಾಂತ್ವನ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.