ಉಚಿತ ಬೀಜ, ರಸಗೊಬ್ಬರ ನೀಡಲು ಜೆಡಿಎಸ್ ಒತ್ತಾಯ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಕ್ಷೀಣಿಸಿರುವುದರಿಂದ ಬಿತ್ತನೆ ಮಾಡಿರುವ ಬೆಳೆಗಳು ಸೊರಗಿ ಹೋಗಿವೆ. ವಾಣಿಜ್ಯ ಬೆಳೆಗಳು ನೆಲಕಚ್ಚಿದ್ದು, ನಷ್ಟಕ್ಕೊಳಗಾಗಿರುವ ರೈತರ ಬೆಳೆಸಾಲ ಮನ್ನಾ ಮಾಡಬೇಕು.
ಪರ್ಯಾಯ ಬೆಳೆ ಬೆಳೆಯಲು ಉಚಿತ ಬಿತ್ತನೆ ಬೀಜ ಮತ್ತು ರಸಗೊಬ್ಬರ ನೀಡಲು ಸರ್ಕಾರ ಮುಂದಾಗಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಚ್ದೇವರಾಜ್ ಒತ್ತಾಯಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಜನಪ್ರತಿನಿಧಿಗಳು ಈ ಕುರಿತು ದನಿ ಎತ್ತುತ್ತಿಲ್ಲ. ಜಿಲ್ಲೆಯಲ್ಲಿ ಹಲವು ಸಮಸ್ಯೆಗಳು ತಲೆದೋರಿದ್ದರೂ ಅವುಗಳನ್ನು ಬಗೆಹರಿಸಲು ಜಿಲ್ಲಾ ಉಸ್ತುವಾರಿ ಸಚಿವರು ವಿಫಲರಾಗಿದ್ದಾರೆ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಲೋಕಸಭಾ ಉಪ ಚುನಾವಣೆಯಲ್ಲಿ ಅಡಿಕೆ ಮತ್ತು ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸು ವುದಾಗಿ ಸಂಸದ ಜಯಪ್ರಕಾಶ್ಹೆಗ್ಡೆ ಭರವಸೆ ನೀಡಿ ಈಗ ಮರೆತು ಬಿಟ್ಟಿದ್ದಾರೆ. ಸಂಸದರು ನೀಡಿರುವ ಭರವಸೆಯನ್ನು ಈಡೇರಿಸ ಬೇಕು. ಕೇಂದ್ರ ಸರ್ಕಾರ ಗೋರಕ್ಸಿಂಗ್ ವರದಿಯನ್ನು ಜಾರಿಗೊಳಿಸಿ ರೈತರ ನೆರವಿಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಅಡಿಕೆ ಬೆಳೆಗಾರರ ಸಮಸ್ಯೆಗೆ ಸ್ಪಂದಿಸಲು ವಿಫಲವಾಗಿರುವ ಶೃಂಗೇರಿ ಕ್ಷೇತ್ರದ ಶಾಸಕರ ಕಾರ್ಯ ವೈಖರಿಯನ್ನು ಪಕ್ಷವು ಖಂಡಿ ಸಿದೆ ಎಂದು ತಿಳಿಸಿದರು.
ರೈತರ ಸಾಲ ವಸೂಲಾತಿಗೆ ಬ್ಯಾಂಕ್ಗಳು ಮುಂದಾದರೆ, ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕಿನ ಎದುರು ಧರಣಿ ನಡೆಸುವುದಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹೇಳಿಕೆ ನೀಡಿದ್ದಾರೆ. ಧರಣಿಗೆ ಅವರು ಮುಂದಾದರೆ ಪಕ್ಷವು ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಆಡಳಿತ ಯಂತ್ರ ಕುಸಿದಿದ್ದು, ಜಿಲ್ಲೆಯ ಸಮಸ್ಯೆಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿ ವಿಫಲವಾಗಿದ್ದಾರೆ ಎಂದು ಆರೋ ಪಿಸಿದ ಅವರು ಕೂಡಲೇ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ನಗರದಲ್ಲಿ ಇತ್ತೀಚೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಸಕರ ಸಂಬಂಧಿ ಮತ್ತು ಅವರ ಬೆಂಬಲಿಗರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಶಾಸಕರು ಈ ಕುರಿತು ಬೇಜಾವಾಬ್ದಾರಿ ಹೇಳಿಕೆ ನೀಡಿದ್ದಾರೆಂದು ದೂರಿದರು.
ಪಕ್ಷದ ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ, ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್.ಮಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಡಿ.ರಮೇಶ್, ಪರಿಶಿಷ್ಟಜಾತಿ ಮತ್ತು ಪಂಗಡದ ವಿಭಾಗದ ಜಿಲ್ಲಾಧ್ಯಕ್ಷ ಹಂಪಯ್ಯ ಹಾಜರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.