ಶನಿವಾರ, ಏಪ್ರಿಲ್ 17, 2021
24 °C

ಉಚಿತ ಮೇವು : ಸಿಎಂ ಜತೆ ಚರ್ಚಿಸಿ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ರೈತರ ದನಕರುಗಳಿಗೆ ಉಚಿತ ಮೇವು ಪೂರೈಕೆ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ  ಪೂರಕವಾದ ನಿರ್ಧಾರ ಕೈಗೊಳ್ಳಲು ಪ್ರಯತ್ನ ಮಾಡಲಾಗುವುದು ಎಂದು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಅಸ್ನೋಟಿಕರ್ ಹೇಳಿದರು.ಸಚಿವರಾದ ಬಳಿಕ ಸೋಮವಾರ ಜಿಲ್ಲೆಗೆ ಪ್ರಪ್ರಥಮ ಬಾರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಮೇವಿನ ಕೊರತೆ ಎಲ್ಲ ಕಡೆ ಇದೆ. ಮೇವು ಖರೀದಿಸಿ ಸಂಗ್ರಹಿಸಿ ವಿತರಣೆ ಮಾಡುವ ವ್ಯವಸ್ಥೆ ಸರ್ಕಾರ ಕೆಲ ಕಡೆ ಮಾಡಿದೆ. ಈ ಮೊದಲು ಪ್ರತಿ ಟನ್ ಮೇವು ಖರೀದಿಗೆ 4 ಸಾವಿರ ನಿಗದಿಪಡಿಸಲಾಗಿತ್ತು. ಆದರೆ ಈ ಮೊತ್ತ ಕನಿಷ್ಠವಾಗಿದ್ದು, ಮೇವು ದೊರಕುತ್ತಿಲ್ಲ ಎಂಬ ವಿಚಾರ ಗೊತ್ತಾದ ಬಳಿಕ ಸರ್ಕಾರವು ಪ್ರತಿ ಟನ್ ಮೇವು ಖರೀದಿಗೆ 6 ಸಾವಿರ ನಿಗದಿಪಡಿಸಿ ಆದೇಶ ಹೊರಡಿಸಿದೆ ಎಂದು ಹೇಳಿದರು.ಕೆಲ ಕಡೆ ಖರೀದಿ ಮಾಡಲಾದ ಮೇವನ್ನು ಮತ್ತೊಂದು ಕಡೆ ಸಾಗಿಸಲು ಸಾರಿಗೆ ವೆಚ್ಚ ಅನಿವಾರ್ಯ. ಸರ್ಕಾರದ ಈ ಮೊದಲಿನ ಆದೇಶದಲ್ಲಿ ಈ ಸಾರಿಗೆ ವೆಚ್ಚ ದೊರಕಿಸುವ ಅಂಶ ಇಲ್ಲ. ಇದು ಕೂಡಾ ಮೇವು ಸಂಗ್ರಹಿಸಿ ವಿತರಣೆ ಮಾಡಲು ತೊಂದರೆ ಆಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದು ಸಾರಿಗೆ ವೆಚ್ಚ ದೊರಕಿಸಲು ಕೋರಿದ್ದಾರೆ ಎಂದು ಹೇಳಿದರು.ಉಚಿತವಾಗಿ ಮೇವು ದೊರಕಿಸಬೇಕು ಎಂಬ ಬೇಡಿಕೆ ಎಲ್ಲ ಕಡೆಯಿಂದಲೂ ಕೇಳಿ ಬರುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಲಾಗುವುದು. ಈ ಸಮಸ್ಯೆ ಇಡೀ ರಾಜ್ಯಕ್ಕೆ ಸಂಬಂಧಿಸಿದ್ದು ಮುಖ್ಯಮಂತ್ರಿಗಳೇ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಹೀಗಾಗಿ ಉಚಿತ ಮೇವು ಕಲ್ಪಿಸುವ ಬಗ್ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು ಎಂದರು.25 ಕೋಟಿಯಲ್ಲಿ 7 ಕೋಟಿ ಬಿಡುಗಡೆ:
ಜಿಲ್ಲೆಯಲ್ಲಿ ಬರ ಪರಿಹಾರ ಕಾರ್ಯ ಕೈಗೊಳ್ಳಲು ಈಚೆಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. 25 ಕೋಟಿ ದೊರಕಿಸಲು ಮನವಿ ಸಲ್ಲಿಸಲಾಗಿದೆ. ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿಗಳು 25 ಕೋಟಿಯಲ್ಲಿ 7 ಕೋಟಿ ಈಗಾಗಲೇ ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.ಜಿಲ್ಲೆಯ ವಿದ್ಯುತ್ ಸಮಸ್ಯೆ ಹೋಗಲಾಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. 150 ಮೆಗಾವಾಟ್ ಜಿಲ್ಲೆಗೆ ದೊರಕಿಸಬೇಕು. ಆದರೆ ಈಗ ಕೇವಲ 60 ಮೆಗಾವಾಟ್ ಪೂರೈಕೆ ಇದೆ. ಬೇಡಿಕೆಗೂ ಪೂರೈಕೆಗೂ ಅಜಗಜಾಂತರ ವ್ಯತ್ಯಾಸವಿದೆ. ವಿಶೇಷವಾಗಿ ರಾಯಚೂರು ನಗರದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದೆ. ಈ ಎಲ್ಲ ಸಮಸ್ಯೆಗಳ ಹಿನ್ನೆಲೆಯಲ್ಲಿ ಸಮರ್ಪಕ ವಿದ್ಯುತ್ ಪೂರೈಕೆ ಬಗ್ಗೆ ಆದೇಶಿಸಲಾಗಿದೆ. ನಿರಂತರ ವಿದ್ಯುತ್ ಪೂರೈಕೆ ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು ಎಂದರು.ಇದೇ 16ರಂದು ಕೆಡಿಪಿ ಸಭೆ ನಡೆಸಲು ನಿರ್ಧರಿಸಲಾಗಿದೆ. ಆ ದಿನ ಜೆಸ್ಕಾಂ, ಲೋಕೋಪಯೋಗಿ ಇಲಾಖೆ ಹೀಗೆ ಬೇರೆ ಬೇರೆ ಇಲಾಖೆಗಳ ಸಭೆ ಪ್ರತ್ಯೇಕ ನಡೆಸಲಾಗುವುದು. ಅಂದಿನ ಸಭೆಗೆ ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನು ಆಹ್ವಾನಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.ರಾಯಚೂರು-ಮಂತ್ರಾಲಯ ಸಂಪರ್ಕ ಕಲ್ಪಿಸುವ ತುಂಗಭದ್ರಾ ಸೇತುವೆ ಮರು ನಿರ್ಮಾಣ ಪೂರ್ಣಗೊಂಡಿದೆ. ಉದ್ಘಾಟನೆ ದಿನಾಂಕ ಇನ್ನೂ ನಿಗದಿಯಾಗಿಲ್ಲ. ಆಗಸ್ಟ್ 15ರ ಬಳಿಕ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಈ ಸೇತುವೆ ಉದ್ಘಾಟನೆ ದಿನಾಂಕ ನಿಗದಿಪಡಿಸಲಾಗುವುದು ಎಂದು ಹೇಳಿದರು.

ಒಪೆಕ್ ಆಸ್ಪತ್ರೆ ಸಮಸ್ಯೆ ಜಟಿಲಗೊಂಡಿತ್ತು.ಈ ಭಾಗದ ಜನತೆಯ ಅಪೇಕ್ಷೆ, ಸಂಘಟನೆಗಳ ಆಶಯದಂತೆ  ಒಪೆಕ್ ಆಸ್ಪತ್ರೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರಾಜ್ಯ ಸರ್ಕಾರವು ಮುಂದುವರಿಸಲು ನಿರ್ಧರಿಸಿದೆ. ಬಡ ಜನತೆಗೆ ಈ ಆಸ್ಪತ್ರೆಯಿಂದ ದೊರಕಬೇಕಾದ ಎಲ್ಲ ರೀತಿಯ ಆರೋಗ್ಯ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರವು ಆಡಳಿತಾಧಿಕಾರಿಯನ್ನು ಒಪೆಕ್ ಆಸ್ಪತ್ರೆಗೆ ನೇಮಿಸಿ ಕಳುಹಿಸಿದೆ ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.