ಉಚಿತ ಹಸು ವಿತರಣೆಯಲ್ಲಿ ವಂಚನೆ

7

ಉಚಿತ ಹಸು ವಿತರಣೆಯಲ್ಲಿ ವಂಚನೆ

Published:
Updated:

ದೇವದುರ್ಗ: ತಾಲ್ಲೂಕಿನ ಕೆ. ಇರಬಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಕೋತಿಗುಡ್ಡ ಗ್ರಾಮದ ಕೃಷಿ ಸಾಗೋವಳಿ ಮಾಡುವ ಪರಿಶಿಷ್ಟ ಪಂಗಡದ ರೈತರಿಗೆ ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಗಿರಿಜನ ಉಪಯೋಜನೆ, ಬೇಸಾಯ ಶಾಸ್ತ್ರ ವಿಭಾಗದ ವತಿಯಿಂದ ನೀಡಲಾದ ಉಚಿತ (ಓಂಗೋಲ ತಳಿ) ಹಸುಗಳ ವಿತರಣೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಯೋಜನೆಯ ನಿಯಮಗಳನ್ನು ಉಲ್ಲಂಘಿಸಿ ತಮ್ಮಗೆ ಬೇಕಾದ ವ್ಯಕ್ತಿಗಳಿಗೆ ಹಸುಗಳನ್ನು ವಿತರಣೆ ಮಾಡಿ ನಿಜವಾದ ಫಲಾನುಭವಿಗಳಿಗೆ ವಂಚನೆ ಮಾಡಿದ್ದಾರೆ ಎಂದು ಗ್ರಾಮದ ಅನೇಕ ಜನ ರೈತರು ಆರೋಪಿಸಿದ್ದಾರೆ.ಇದೇ ವಿಷಯಕ್ಕೆ ಸಂಬಂಧಿಸಿದ ಶನಿವಾರ ತಹಸೀಲ್ದಾರರ ಕಚೇರಿಗೆ ಆಗಮಿಸಿದ್ದ ಗ್ರಾಮದ ಸುಮಾರು 50 ಕ್ಕೂ ಹೆಚ್ಚು ಜನ ರೈತರು, ಫಲಾನುಭವಿಗಳ ಆಯ್ಕೆಯಲ್ಲಿ ಭಾರೀ ಮೋಸ ನಡೆದಿದ್ದು, ಇಲಾಖೆಯ ನಿಯಮಗಳನ್ನು ಪಾಲಿಸದೆ ಅಧಿಕಾರಿಗಳು ರಾಜಕೀಯ ಒತ್ತಡದಿಂದ ನಿಯಮಗಳನ್ನು ರಾಜರೋಷವಾಗಿ ಉಲ್ಲಂಘಿಸಿ ತಮ್ಮಗೆ ಬೇಕಾದ ವ್ಯಕ್ತಿಗಳಿಗೆ ಹಸುಗಳನ್ನು ವಿತರಣೆ ಮಾಡಿರುವುದು ದಾಖಲಾತಿಗಳಿಂದ ಬಹಿರಂಗಗೊಂಡಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ನೀಡಿದರು.ಆಯ್ಕೆ ವಿಧಾನ: ಒಂದು ಗ್ರಾಮಕ್ಕೆ ಸುಮಾರು 15 ಹಸುಗಳು ಮತ್ತು ಒಂದು ಹೋರಿಯನ್ನು ಉಚಿತವಾಗಿ ವಿತರಣೆ ಮಾಡಬೇಕಾದರೆ ಕೆಲವು ನಿಯಮಗಳು ಇದ್ದು, ಅವುಗಳ ಪೈಕಿ ಮೊದಲನೆದಾಗಿ ಆಯ್ಕೆಯಾದ ಗ್ರಾಮದ ಪಂಚಾಯಿತಿ ಕಟ್ಟೆಯಲ್ಲಿ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಗ್ರಾಮದಲ್ಲಿ ಎಷ್ಟೊ ಜನ ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳು ಇವೆ ಎಂಬುವುದರ ಬಗ್ಗೆ ಗುರುತಿಸಿ ಒಂದಲ್ಲಿ ಸೇರಿಸುವುದು ನಂತರ ಗುರುತಿಸಲಾದ ಕುಟುಂಬಗಳ ಪೈಕಿ ಎಷ್ಟೊ ಕುಟುಂಬಗಳು ಕೃಷಿ ಅವಲಂಬಿತ (ಸಾಗೋವಳಿ) ಇವೆ ಅವುಗಳನ್ನು ಗುರುತಿಸಿ ನಂತರ ಕೃಷಿ ಚಟುವಟಿಕೆ ಇರುವ ಕುಟುಂಬಗಳ ಹೆಸರುಗಳನ್ನು ಮಾತ್ರ ಚೀಟಿ ಮಾಡಿ ಗ್ರಾಮದ ಹಿರಿಯರಿಂದ ಚೀಟಿ ಎತ್ತಿಸಿ ಯೋಜನೆಯ ನಿಯಮಗಳ ಪ್ರಕಾರ ಕೇವಲ 15 ಜನ ಫಲಾನುಭವಿಗಳನ್ನು ಆಯ್ಕೆ ಮಾಡಬೇಕಾದ ಪದ್ಧತಿ ಇದ್ದರೂ ಅದನ್ನು ಉಲ್ಲಂಘಿಸಿ ತಮ್ಮಗೆ ಬೇಕಾದವರ ಮನೆಯಲ್ಲಿ ಕುಳಿತು ಆಯ್ಕೆಮಾಡಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ.ತನಿಖೆ: ಗ್ರಾಮದಲ್ಲಿ ಕೃಷಿ ವಿಶ್ವವಿದ್ಯಾಲಯದಿಂದ ನೀಡಲಾದ ಉಚಿತ ಹಸುಗಳ ವಿತರಣೆಯಲ್ಲಿ ಭಾರೀ ಮೋಸ ಮತ್ತು ಅವ್ಯವಹಾರ ನಡೆದಿದ್ದು, ನಿಜವಾದ ಫಲನುಭವಿಗಳಿಗೆ ಅನ್ಯಾಯವಾಗಿರುವುದರಿಂದ ಕೂಡಲೇ ತನಿಖೆ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಪ್ರಕಾರ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ವಿತರಣೆ ಮಾಡಲಾದ ಹಸುಗಳನ್ನು ಕೂಡಲೇ ವಾಪಸ್ ಪಡೆದು ಯೋಜನೆಯ ನಿಯಮಗಳ ಪ್ರಕಾರ ಹೊಸದಾಗಿ ಫಲಾನುಭವಿಗಳ ಆಯ್ಕೆ ಮಾಡಬೇಕೆಂದು ಗ್ರಾಮದ ವಾಲ್ಮೀಕಿ  ಸಂಘದ ಅಧ್ಯಕ್ಷ ಎಂ. ಚನ್ನಪ್ಪ ನಾಯಕ, ಮಾಜಿ ಗ್ರಾಪಂ. ಸದಸ್ಯ ಕೆ. ಹಾಜಿಬಾಬು, ಕನ್ನಡ ರಕ್ಷಣೆ ಪಡೆ ಜಿಲ್ಲಾ ಉಪಾಧ್ಯಕ್ಷ ಕೆ. ಚಿದಾನಂದಪ್ಪ, ವೀರಮದಕರಿ ನಾಯಕ ಸಂಘದ ಅಧ್ಯಕ್ಷ ಎಚ್. ಹನುಮಂತ್ರಾಯ ಹಾಗೂ ಇತರ 43 ಜನ ಗ್ರಾಮಸ್ಥರು ಸಹಿ ಮಾಡಿದ ಮನವಿ ಪತ್ರದಲ್ಲಿ ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry