ಉಚ್ಚಂಗೆಮ್ಮ ನಿನ್ನಾಲ್ಕು ಉಧೋ...ಉಧೋ...

7

ಉಚ್ಚಂಗೆಮ್ಮ ನಿನ್ನಾಲ್ಕು ಉಧೋ...ಉಧೋ...

Published:
Updated:

ಹರಪನಹಳ್ಳಿ: ಮಧ್ಯ ಕರ್ನಾಟಕ ಐತಿಹಾಸಿಕ ಪ್ರಸಿದ್ಧಿಯ ಶಕ್ತಿದೇವತೆಯ ಕೇಂದ್ರವಾಗಿರುವ, ರಾಜ್ಯ ಹಾಗೂ ಹೊರರಾಜ್ಯಗಳಲ್ಲಿನ ಅಸಂಖ್ಯಾತ ಭಕ್ತರನ್ನು ಹೊಂದಿರುವ ಉಚ್ಚಂಗಿದುರ್ಗದ ಉತ್ಸವಾಂಬಾ ದೇವಿಯ ಸನ್ನಿಧಿಯಲ್ಲಿ ಮಂಗಳವಾರ ಭಾರತ ಹುಣ್ಣಿಮೆಯನ್ನು ಅತ್ಯಂತ ಶ್ರದ್ಧಾಭಕ್ತಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸುವ ಮೂಲಕ ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದೆದ್ದರು.ಯುಗಾದಿಯ ಸಂದರ್ಭದಲ್ಲಿ ನಡೆಯುವ ದೇವಿಯ ಜಾತ್ರೆ ಹೊರತುಪಡಿಸಿದರೆ, ಉಳಿದ ಬಹುತೇಕ ಎಲ್ಲಾ ಹುಣ್ಣಿಮೆಗಳಿಗಿಂತಲೂ ಭಾರತ ಹುಣ್ಣಿಮೆಯ ಆಚರಣೆ ಭಕ್ತರ ಪಾಲಿಗೆ ಅತ್ಯಂತ ಪಾವಿತ್ರ್ಯದ ದಿನ. ಹೀಗಾಗಿ, ನಾಡಿನ ದಶದಿಕ್ಕುಗಳಿಂದ ಹರಿದು ಬರುವ ಲಕ್ಷಾಂತರ ಭಕ್ತರ ದಂಡು ಉಚ್ಚಂಗಿದುರ್ಗದ ಬೆಟ್ಟದಲ್ಲಿ ಹುಣ್ಣಿಮೆಯ ದಿನದಂದು ಭಕ್ತಿಯ ಭಾವಸಂಗಮದಲ್ಲಿ ಸಮಾಗಮವಾದರು.ಭಕ್ತರ ಹರಕೆ-ಅಭೀಷ್ಟೆಯನ್ನು ಈಡೇರಿಸುವ ಶಕ್ತಿದೇವತೆಯಾದ ಉತ್ಸವಾಂಬೆ ಈ ಭಾಗದ ಜನರ ಆರಾಧ್ಯ ದೈವ. ಹೀಗಾಗಿ, ಪವಿತ್ರ ಹುಣ್ಣಿಮೆಯೆಂದೇ ಕರೆಯಲಾಗುವ ಭಾರತ ಹುಣ್ಣಿಮೆಗೆ  ಹರಕೆಹೊತ್ತ ಭಕ್ತರು, ಬೇವಿನ ಉಡುಗೆ, ಪಡ್ಲಗಿ ತುಂಬಿಸುವುದು ಸೇರಿದಂತೆ ವಿವಿಧ ಸೇವೆಗಳನ್ನು ದೇವಿಗೆ ಸಮರ್ಪಿಸಿದರು. ಭಾರತ ಹುಣ್ಣಿಮೆಯನ್ನು ಮುತ್ತೈದೆ ಹುಣ್ಣಿಮೆಯಂತಲೂ ಭಕ್ತರು ಕರೆಯುವುದು ವಾಡಿಕೆ. ಬನದ ಹುಣ್ಣಿಮೆಯ ಸಂದರ್ಭದಲ್ಲಿನ ಬಳೆಗಳನ್ನು ತೆಗೆದ ಜೋಗತಿಯರು, ಭಾರತ ಹುಣ್ಣಿಮೆಯ ಪವಿತ್ರ ದಿನವಾದ ಹೊಸಬಳೆ ಹಾಗೂ ಹೊಸ ಪಡ್ಲಗೆಯನ್ನು ಧರಿಸುವುದು ತಲತಲಾಂತರಗಳಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.`ಉಚ್ಚಂಗೆಮ್ಮ ನಿನ್ನಾಲ್ಕು ಉಧೋ...ಉಧೋ...~ ಎಂಬ ಭಕ್ತಿಯ ಭಾವದೊಂದಿಗೆ ಗುಡ್ಡ ಏರುವ ಭಕ್ತರು ಆನೆಹೊಂಡದಲ್ಲಿ ಹರಕೆಯ ಸ್ನಾನ ತೀರಿಸಿದರು. ಆನೆಹೊಂಡದ ಸುತ್ತಲೂ, ಹೋಳಿಗೆ ಅಡುಗೆ ತಯಾರಿಸಿ ಪಡ್ಲಗಿ ತುಂಬಿಸಿದರು. ಬಳಿಕ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಮಾಡಿದರು.ದೇವಿಯ ಹೆಸರಿನಲ್ಲಿ ಯುವತಿಯರಿಗೆ  `ಮುತ್ತು ಕಟ್ಟಿಸುವ~ ಮೂಢನಂಬಿಕೆ ಅನೇಕ ತಲೆಮಾರಿನಿಂದಲೂ ನಡೆದು ಬಂದಿರುವ ಅನಿಷ್ಠ ಸಂಪ್ರದಾಯ. ಪ್ರತಿವರ್ಷದ ಜಾತ್ರೆ ಹಾಗೂ ಭಾರತ ಹುಣ್ಣಿಮೆಯ ಸಂದರ್ಭದಲ್ಲಿ ಇಂತಹ ಅನಿಷ್ಠ ಪರಂಪರೆ ನಡೆಯುತ್ತದೆ ಎಂದು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಿದೆ. ತಹಶೀಲ್ದಾರ್ ಡಾ.ವೆಂಕಟೇಶಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿದ್ದೇಶಪ್ಪ ಹಾಗೂ ದೇವದಾಸಿ ಮಹಿಳೆಯರ ಪುನರ್‌ವಸತಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮೋಕ್ಷಪತಿ ಸೇರಿದಂತೆ ವಿವಿಧ ಅಧಿಕಾರಿಗಳು ಉಚ್ಚಂಗಿದುರ್ಗದಲ್ಲಿ ಬೀಡುಬಿಟ್ಟಿದ್ದು, ಈ ಸಂಪ್ರದಾಯಕ್ಕೆ ನಿಯಂತ್ರಣಕ್ಕೆ ಮುಂದಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry