ಉಚ್ಚಿಲ: 10 ಜೋಡಿ ಹಸೆಮಣೆಗೆ

7

ಉಚ್ಚಿಲ: 10 ಜೋಡಿ ಹಸೆಮಣೆಗೆ

Published:
Updated:

ಉಚ್ಚಿಲ (ಪಡುಬಿದ್ರಿ): ಉಚ್ಚಿಲ ಮಹಾಲಕ್ಷ್ಮೀ ದೇವಳದ ಮಹಾಲಕ್ಷ್ಮೀ ಸಮಾಜ ಭವನದಲ್ಲಿ ಬುಧವಾರ ನಡೆದ ಉಚಿತ ಸರಳ ಸಾಮೂಹಿಕ ವಿವಾಹದಲ್ಲಿ 10ಜೋಡಿ ಶಾಸ್ತ್ರೋಕ್ತವಾಗಿ ಹಸೆಮಣೆ ಏರಿದರು.ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಉಡುಪಿ ಜಿಲ್ಲಾ ಮೊಗವೀರ ಯುವ ಸಂಘಟನೆ ಆಶ್ರಯದಲ್ಲಿ ನಡೆದ ಈ ಉಚಿತ ಸಾಮೂಹಿಕ ವಿವಾಹದಲ್ಲಿ ಈವರೆಗೆ ಒಟ್ಟು 105 ಜೋಡಿಗೆ ಉಚಿತ ಹಾಗೂ ವರದಕ್ಷಿಣೆ ರಹಿತ ವಿವಾಹ ನೆರವೇರಿತು.



ಉಚ್ಚಿಲ ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯರ ನೇತೃತ್ವದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಸಮಾಜದ ಸಂಪ್ರದಾಯದಂತೆ ಸಂಕಲ್ಪ, ಹಾರ ಬದಲಾವಣೆ, ಕನ್ಯದಾನ, ರಾಜ ಹೋಮ, ಸಪ್ತಪದಿ, ಮಾಂಗಲ್ಯಧಾರಣೆ, ಮುತ್ತೈದೆಯರಿಂದ ಆರತಿ, ಮಹಾಲಕ್ಷ್ಮೀ ದರ್ಶನ, ಆರತಕ್ಷತೆ ವಿಧಿವಿಧಾನಗಳು ನೆರವೇರಿದವು.



ವರನಿಗೆ ಕುರ್ತಾ, ಪೈಜಾಮ, ಪೇಟ, ಬೆಳ್ಳಿ ಕಾಲುಂಗುರ, ವಧುವಿಗೆ ರವಕೆ ಕಣ, ಸೀರೆ, 2 ಪವನ್ ತೂಕದ ಚಿನ್ನದ ಕರಿಮಣಿ ಸರ ಹಾಗೂ ಪ್ರತಿ ಜೋಡಿ ಯೊಂದಿಗೆ ತಲಾ 100ಕ್ಕೂ ಅಧಿಕ ಮಂದಿಗೆ ಮದುವೆಯಲ್ಲಿ ಭಾಗ ವಹಿಸಲು ಅವಕಾಶ ಕಲ್ಪಿಸಲಾಗಿತ್ತು.



ಈ ಸಂದರ್ಭ ಮಾತನಾಡಿದ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ  ಡಾ.ಜಿ.ಶಂಕರ್ ಸಮಾಜದ ವರದಕ್ಷಿಣೆ ಪಿಡುಗನ್ನು ತೊಲಗಿಸುವ ನಿಟ್ಟಿನಲ್ಲಿ ಈ ಸರಳ ವರದಕ್ಷಿಣೆ ರಹಿತ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು, ಬಡ ಕುಟುಂಬಗಳ ಮಾಹಿತಿ ಸಂಗ್ರಹಿಸಿ ಪ್ರತಿ ವಧು-ವರರ ಮನೆಗೆ ತೆರಳಿ ಅವಲೋಕಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದೆಲ್ಲೆಡೆ ಪ್ರತೀ ವರ್ಷ ಸಮಾಜ ಬಾಂಧವರಿಗಾಗಿ ವಿವಾಹ ನಡೆಸಲಾಗುವುದು ಎಂದಿದ್ದಾರೆ.



ನೂತನ ವಧು-ವರರ ಗ್ರಾಮ ಸಭೆಗಳ ಒಟ್ಟು 40 ಗುರಿಕಾರರಿಗೆ  ಡಾ.ಜಿ.ಶಂಕರ್ ಶಾಲು, ತಾಂಬೂಲದೊಂದಿಗೆ ಗೌರವಧನ ನೀಡಿ ಗೌರವಿಸಿದರು. ವಿವಾಹ ಸಮಾರಂಭದ ಯಶಸ್ವಿಗೆ ಶ್ರಮಿಸಿದ ದ.ಕ ಮೊಗವೀರ ಮಹಾಜನ ಸಂಘದ ಸುಧಾಕರ ಕರ್ಕೇರರನ್ನು ಸನ್ಮಾನಿಸಲಾಯಿತು.



ಕಾಪು ಶಾಸಕ ಲಾಲಾಜಿ. ಆರ್. ಮೆಂಡನ್, ಮಾಜಿ ಶಾಸಕ ಯು. ಆರ್. ಸಭಾಪತಿ, ಶಾಲಿನಿ ಶಂಕರ್, ಶ್ಯಾಮಿಲಿ ಶಂಕರ್, ದ.ಕ ಮೊಗವೀರ ಮಹಾಜನ ಸಂಘಧ ಅಧ್ಯಕ್ಷ ಬಿ. ಕೇಶವ ಕುಂದರ್, ಬಗ್ವಾಡಿ ಮೊಗವೀರ ಮಹಾಜನ ಸೇವಾ ಸಮಿತಿ ಅಧ್ಯಕ್ಷ ಎಂ.ಎಂ. ಸುವರ್ಣ, ಮೊಗವೀರ ಸಮಾಜದ ಮುಖಂಡರಾದ ಆನಂದ ಪಿ. ಸುವರ್ಣ ಕೊಡವೂರು, ಯತೀಶ್ ಬೈಕಂಪಾಡಿ, ಡಿ. ಮಂಜುನಾಥಯ್ಯ, ಅಪ್ಪಣ್ಣ ಶಿವಮೊಗ್ಗ, ಮಹಾಬಲರಾವ್ ಶಿವಮೊಗ್ಗ, ಆನಂದ ಮರಕಾಲ ಸಾಗರ, ರವೀಂದ್ರ ಬಜೆಮೇಲ್ಸಾಲ್, ಮೊಗವೀರ ಯುವ ಸಂಘಟನೆ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಪದಾಧಿಕಾರಿಗಳಾದ ಗಣೇಶ್ ಕಾಂಚನ್, ದೀಪಕ್‌ರಾಜ್ ಕಡೆಕಾರ್, ಶೈಲೇಶ್, ಶಿವರಾಮ್ ಕೆ., ಅಶೋಕ್ ಕುಂದರ್ ಮಂದಾರ್ತಿ, ದಯಾನಂದ ತಿಂಗಳಾಯ, ಕೃಷ ಮೊಗವೀರ, ಸತೀಶ್ ನಾಯಕ್, ಎಂ.ಎಸ್.ಸಂಜೀವ ಮತ್ತಿತರರು ಉಪಸ್ಥಿತರಿದ್ದರು.



ಸಹಾಯಧನ: ಸುರತ್ಕಲ್ ಮೊಗವೀರ ವ್ಯವಸ್ಥಾಪನಾ ಮಂಡಳಿ ವತಿಯಿಂದ ಈ ವಿವಾಹ ಸಮಾರಂಭಕ್ಕೆ ಮಂಡಳಿ ಅಧ್ಯಕ್ಷ ಯತೀಶ್ ಬೈಕಂಪಾಡಿ ರೂ. 1ಲಕ್ಷ ಸಹಾಯಧನ ನೀಡಿದರು.ಮುಂದಿನ ವರ್ಷ 101ಜೋಡಿ: ಮುಂದಿನ ವರ್ಷ ಏಪ್ರಿಲ್ ಮಧ್ಯ ಭಾಗದಲ್ಲಿ ಉಡುಪಿ ಶ್ಯಾಮಿಲಿ ಸಭಾಂಗಣದಲ್ಲಿ ಸಮಾಜದ ಬಡ ಕುಟುಂಬದ 101 ಜೋಡಿಗೆ ಉಚಿತ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಲಾಗಿದ್ದು, ಸಮಾಜ ಬಾಂಧವರು ಪ್ರೋತ್ಸಾಹ ನೀಡುವಂತೆ ಜಿ. ಶಂಕರ್ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry