ಶುಕ್ರವಾರ, ನವೆಂಬರ್ 22, 2019
23 °C

ಉಜಳಂಬ: ನೀರಿನ ಭೀಕರ ಸಮಸ್ಯೆ

Published:
Updated:

ಬಸವಕಲ್ಯಾಣ: ತಾಲ್ಲೂಕಿನ ಉಜಳಂಬದಲ್ಲಿ ಕುಡಿಯುವ ನೀರಿನ ಭೀಕರ ಸಮಸ್ಯೆ ಉದ್ಭವವಾಗಿದ್ದು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಥರಿಂದ ಮನವಿ ಸಲ್ಲಿಸಲಾಗಿದೆ.ಇದು ಗ್ರಾಮ ಪಂಚಾಯಿತಿ ಕೇಂದ್ರವಾಗಿದ್ದು ಇಲ್ಲಿ 8 ಸಾವಿರ ಜನಸಂಖ್ಯೆ ಇದೆ. ನೀರು ಸರಬರಾಜು ಯೋಜನೆಯ ನಳಗಳಿಗೆ ನೀರು ಪೋರೈಸುವ ಎರಡು ಕೊಳವೆ ಬಾವಿಗಳು ಬತ್ತಿದ್ದರಿಂದ ಕುಡಿಯುವ ನೀರಿನ ತೀವ್ರ ಸಮಸ್ಯೆಯಾಗಿದೆ.ಈಚೆಗೆ ಧಾಮುರಿ ರಸ್ತೆಯಲ್ಲಿ ಕೊಳವೆ ಬಾವಿ ಕೊರೆಯಲಾಗಿದ್ದರೂ ಅದರ ನೀರು ಸಹ ಯಾತಕ್ಕೂ ಸಾಕಾಗುತ್ತಿಲ್ಲ. ಆದ್ದರಿಂದ ನಳಗಳ ಎದುರು ಕೊಡಗಳನ್ನು ಸಾಲಿನಲ್ಲಿ ಇಟ್ಟು ಕಾಯಬೇಕಾದ ಪರಿಸ್ಥಿತಿ ಇದೆ. ಹೊಲಗಳಲ್ಲಿಯ ಬಾವಿಗಳಲ್ಲಿಯೂ ನೀರಿಲ್ಲದ್ದರಿಂದ ಪರದಾಡಬೇಕಾಗುತ್ತಿದೆ.ಆದ್ದರಿಂದ ಗ್ರಾಮದಲ್ಲಿ ಹೊಸದಾಗಿ 5 ಕೊಳವೆ ಬಾವಿಗಳನ್ನು ಕೊರೆಯಬೇಕು ಎಂದು ಗ್ರಾಮಸ್ಥರಾದ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಾಳಿದಾಸ ಜಾಧವ ಮನವಿ ಮಾಡಿದ್ದಾರೆ.ಇದಲ್ಲದೆ ಪಂಚಾಯಿತಿ ವ್ಯಾಪ್ತಿಯಲ್ಲಿನ ಹೊನ್ನಾಳಿ, ಏಕಂಬಾ, ಜೋಗೆವಾಡಿ, ನವಚಂದವಾಡಿ, ಬೇಡರವಾಡಿ, ಫೂಲದಾರವಾಡಿಗಳಲ್ಲಿ ಸಹ ಒಂದೊಂದು ಕೊಳವೆ ಬಾವಿಯನ್ನು ಕೊರೆಯಬೇಕು ಎಂದಿದ್ದಾರೆ. ಒಂದುವೇಳೆ ಸಮಸ್ಯೆಯನ್ನು ತಕ್ಷಣ ಬಗೆಹರಿಸದಿದ್ದರೆ ತಹಸೀಲ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.

ಪ್ರತಿಕ್ರಿಯಿಸಿ (+)