ಉಜ್ಜಯಿನಿ ಶ್ರೀ ನಿಧನಕ್ಕೆ ಸಂತಾಪ

7

ಉಜ್ಜಯಿನಿ ಶ್ರೀ ನಿಧನಕ್ಕೆ ಸಂತಾಪ

Published:
Updated:

ಹರಪನಹಳ್ಳಿ: ಪಟ್ಟಾಧಿಕಾರಿ ವಹಿಸಿಕೊಂಡ ಕೇವಲ 16ವರ್ಷಗಳ ಅಲ್ಪಾವಧಿಯಲ್ಲಿಯೇ ವೀರಶೈವ ಧರ್ಮ, ಸಂಸ್ಕೃತಿ ಮತ್ತು ಪರಂಪರೆ ಹಾಗೂ ಮನುಕುಲದ ಮಾರ್ಗದರ್ಶಕರಾಗಿ ತಮ್ಮನ್ನು ತೊಡಗಿಸಿಕೊಂಡಿದ್ದ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಮರುಳಸಿದ್ದರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಲಿಂಗೈಕ್ಯರಾಗಿರುವುದು ನೋವಿನ ಸಂಗತಿ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ತೀವ್ರ ಸಂತಾಪ ವ್ಯಕ್ತಪಡಿಸಿದರು.ಮಂಗಳವಾರ ಲಿಂಗೈಕ್ಯ ಜಗದ್ಗುರುಗಳ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಉಜ್ಜಯಿನಿಗೆ ತೆರಳುವ ಮಾರ್ಗಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರುಗಳು ತಮ್ಮ 46ನೇ ವಯಸ್ಸಿನಲ್ಲಿಯೇ ಶಿವಾಧೀನರಾಗಿರುವುದು ವಿಷಾದ ನೀಯ. ವೀರಶೈವ ತತ್ವಗಳ ಪರಿಪಾಲನೆ ಹಾಗೂ  ಧರ್ಮಪ್ರಸಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಅಲ್ಪಾವಧಿಯಲ್ಲಿಯೇ ಪೀಠದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ್ದರು ಎಂದು ಸ್ಮರಿಸಿದರು.ಜಗದ್ಗುರುಗಳ ಅಕಾಲಿಕ ಶಿವಾಧೀನದ ಹಿನ್ನೆಲೆಯಲ್ಲಿ ತೆರವಾಗಿರುವ ಪೀಠಾಧಿಪತಿ ಸ್ಥಾನಕ್ಕೆ ಸಮರ್ಥರನ್ನೇ ನೇಮಿಸಬೇಕಿದೆ. ವೈಯಕ್ತಿಕ ವಾಂಛೆಗಳನ್ನು ಬದಿಗಿರಿಸಿ, ಪೀಠದ ಉಜ್ವಲ ಭವಿಷ್ಯ ನಿರ್ಮಾಣಕ್ಕೆ ಶ್ರಮಿಸುವ ವಟು ಪೀಠಾಧಿಪತಿಯಾಗಿ ನೇಮಕವಾಗಬೇಕು. ಹಾಗಾದಾಗ ಮಾತ್ರ ಪಂಚಾಚಾರ್ಯರ ಸಂಸ್ಥಾಪಕ ಅಭಿನವ ರೇಣುಕಾಚಾರ್ಯರ ತತ್ವಾದರ್ಶಗಳನ್ನು ಹಾಗೂ ವೀರಶೈವರ ಧರ್ಮಾದರ್ಶಗಳನ್ನು ಎತ್ತಿ ಹಿಡಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಈಗಾಗಲೇ ಲಿಂಗೈಕ್ಯ ಜಗದ್ಗುರುಗಳು ಬೇರೊಬ್ಬರ ಪ್ರಭಾವ ಹಾಗೂ ಒತ್ತಡಕ್ಕೆ ಒಳಗಾಗಿ `ಮರಣ ಶಾಸನ~ (ವಿಲ್) ಬರೆದಿದ್ದಾರೆ ಎಂಬ ಮಾಹಿತಿಗಳು ತಮಗೆ ಲಭ್ಯವಾಗಿವೆ. ಆದರೆ, ಈ ವಿಷಯದಲ್ಲಿ ಲಿಂಗೈಕ್ಯ ಜಗದ್ಗುರು ಮರುಳಸಿದ್ದರಾಜ ದೇಶಿಕೇಂದ್ರ ಸ್ವಾಮೀಜಿ ಉಳಿದ ಪಂಚಪೀಠಗಳೊಂದಿಗೆ ಯಾವುದೇ ವಿಚಾರಗಳನ್ನು ಚರ್ಚಿಸಿಲ್ಲ. ಕನಿಷ್ಠ ಸೌಜನ್ಯಕ್ಕಾದರೂ ಪಂಚ ಪೀಠಗಳೊಂದಿಗೆ ಸಮಾಲೋಚನೆ ನಡೆಸದಿರುವುದು ತಮಗೆ ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಉಳಿದ ಪೀಠಗಳು ಮಧ್ಯಪ್ರವೇಶಿಸುವುದಿಲ್ಲ. ಆದರೆ, ಪೀಠದ ಆಡಳಿತ ಮಂಡಳಿ ಹಾಗೂ ಭಕ್ತಸಮೂಹ ಬಯಸಿದರೆ ಮಾತ್ರ ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದರು. ಶ್ರೀಮದ್ ಹಿಮಾವತ್ ಕೇದಾರ ರಾಹುಲ್ ಭೀಮಾಶಂಕರ ಜಗದ್ಗುರು ಉಪಸ್ಥಿತರಿದ್ದರು.ಚಂದ್ರಮೌಳೀಶ್ವರ ಶಿಚಾಚಾರ್ಯ ಸ್ವಾಮೀಜಿ ಕಂಬನಿ

ಸೋಮವಾರ ರಾತ್ರಿ ಅಕಾಲಿಕವಾಗಿ ಲಿಂಗೈಕ್ಯರಾದ ಉಜ್ಜಯಿನಿ ಸದ್ಧರ್ಮ ಪೀಠದ ಜಗದ್ಗುರು ಮರುಳಸಿದ್ದರಾಜ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅಗಲಿಕೆಗೆ ಸ್ಥಳೀಯ ತೆಗ್ಗಿನಮಠದ ಚಂದ್ರಮೌಳೀಶ್ವರ ಶಿಚಾಚಾರ್ಯ ಸ್ವಾಮೀಜಿ ಕಂಬನಿ ಮಿಡಿದಿದ್ದಾರೆ.ಅತ್ಯಂತ ಕಿರಿಯ ವಯಸ್ಸಿನಯಲ್ಲಿಯೇ ಪೀಠದ ಸಾರಥ್ಯ ವಹಿಸಿಕೊಳ್ಳುವ ಮೂಲಕ ಅಲ್ಪಾವಧಿಯಲ್ಲಿಯೇ ಅನ್ನ ಹಾಗೂ ಅಕ್ಷರ ದಾಸೋಹದ ಕ್ರಾಂತಿ ಮೊಳಗಿಸಿದರು. ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಈ ಸಂದರ್ಭದಲ್ಲಿ ಧರ್ಮ ಜಾಗೃತಿಗಾಗಿಯೇ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಸ್ವಾಮೀಜಿ ತಮ್ಮ ಸಂತಾಪ ಸೂಚಕ ಸಂದೇಶದಲ್ಲಿ ಸ್ಮರಿಸಿದ್ದಾರೆ.ಶ್ರದ್ಧಾಂಜಲಿ: ಸ್ಥಳೀಯ ಉಜ್ಜಯಿನಿ ಜಗದ್ಗುರು ಮರುಳಾರಾಧ್ಯ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಉಜ್ಜಯಿನಿ ಜಗದ್ಗುರು ಮರುಳಸಿದ್ದರಾಜ ದೇಶಿಕೇಂದ್ರ ಸ್ವಾಮೀಜಿ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪದವಿ ಹಾಗೂ ಪದವಿಪೂರ್ವ ಕಾಲೇಜುಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸ್ವಾಮೀಜಿ ನೀಡುತ್ತಿದ್ದ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ಕುರಿತು ಶ್ರದ್ಧಾಂಜಲಿ ಸಭೆಯಲ್ಲಿ ಸ್ಮರಿಸಲಾಯಿತು.ಪ್ರಾಂಶುಪಾಲ ಎಲ್. ಕೃಷ್ಣಾಸಿಂಗ್, ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಬಿ. ಮುದ್ದಿ, ಉಪನ್ಯಾಸಕ ಎಂ.ಪಿ.ಎಂ. ಶಾಂತವೀರಯ್ಯ, ಎಂ.ಪಿ.ಎಂ. ದಯಾನಂದಸ್ವಾಮಿ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡು ತೀವ್ರ ಸಂತಾಪ ವ್ಯಕ್ತಪಡಿಸುವ ಮೂಲಕ ಮಂಗಳವಾರ ಲಿಂಗೈಕ್ಯ ಸ್ವಾಮೀಜಿ ಗೌರವಾರ್ಥ ಉಭಯ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry