ಶುಕ್ರವಾರ, ಮೇ 14, 2021
29 °C

ಉಡಾಫೆ ಮನೋಭಾವ ಹೆಣ್ಣು ಶಿಶು ಹತ್ಯೆ ಮೂಲ:ಸಿ.ಮಂಜುಳಾ ಅಭಿಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂದರ್ಶನ

ಹೆಣ್ಣೆಂಬ ಕಾರಣಕ್ಕೆ ತಂದೆ ಉಮರ್ ಫಾರುಕ್‌ನಿಂದಲೇ ಹತ್ಯೆಗೀಡಾದ ನೇಹಾ ಆಫ್ರಿನ್ ಪ್ರಕರಣ ಸೇರಿದಂತೆ ಪ್ರಸ್ತುತ ನಡೆಯತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ `ಪ್ರಜಾವಾಣಿ~ಯೊಂದಿಗೆ ತಮ್ಮ  ನಿಲುವನ್ನು ವ್ಯಕ್ತಪಡಿಸಿದರು.* ಅಪ್ಪನೇ ಮೂರು ತಿಂಗಳ ಹಸುಗೂಸು ಆಫ್ರಿನ್‌ನ್ನು ಕೊಂದ ಪ್ರಕರಣವನ್ನು ಆಯೋಗ ಹೇಗೆ ಪರಿಗಣಿಸಿದೆ?ಇದನ್ನು ಗಂಭೀರ ಪ್ರಕರಣವೆಂದೇ ಪರಿಗಣಿಸಿದ್ದೇವೆ. ಕರಗುತ್ತಿರುವ ಹೆಣ್ಣು ಶಿಶುಗಳ ಬಗೆಗಿನ ಎಚ್ಚರಿಕೆ ಗಂಟೆ ಇದಾಗಿದೆ. ಮೃತ ನೇಹಾ ಆಫ್ರಿನ್ ತಾಯಿ, ರೇಷ್ಮಾ ಬಾನುವನ್ನು ಆಯೋಗ ಭೇಟಿ ಮಾಡಿ ಸಾಂತ್ವನ ಹೇಳಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ರೇಷ್ಮಾ ಬಾನುವಿಗೆ ಉದ್ಯೋಗ ದೊರಕಿಸಿಕೊಡುವತ್ತ ಪ್ರಯತ್ನ ನಡೆಸಲಿದ್ದೇವೆ. ಗಂಡ ಉಮ್ಮರ್ ಫಾರುಕ್ ವಿರುದ್ಧ ಕೌಟುಂಬಿಕ ದೌರ್ಜನ್ಯದಡಿ ದೂರು ದಾಖಲಿಸಿದ್ದೇವೆ. ಆತನಿಗೆ ಸೂಕ್ತ ಶಿಕ್ಷೆಯಾಗುವವರೆಗೂ ಆಯೋಗ ಪಟ್ಟುಬಿಡುವುದಿಲ್ಲ.*ಹೆಣ್ಣು ಶಿಶು ಹತ್ಯೆ ನಡೆಯುತ್ತಿರುವುದಕ್ಕೆ ಆಯೋಗ ಕಾರಣ ಕಂಡುಕೊಂಡಿದೆಯೇ?ಏನು ಮಾಡಿದರೂ ನಡೆಯುತ್ತದೆಂಬ ಉಡಾಫೆ ಮನೋಭಾವವೇ ಇಂತಹ ಕೃತ್ಯಗಳಿಗೆ ಕಾರಣ ಎಂಬುದು ನನ್ನ ಅನಿಸಿಕೆ. ಭಾರತೀಯ ಸಮಾಜದಲ್ಲಿ ಹೆಣ್ಣಿಗೆ ಉತ್ತಮ ಸ್ಥಾನಮಾನ ನೀಡಲಾಗಿದೆ. ಆದರೆ, ಹೆಣ್ಣೆಂದರೆ ಹೊರೆ ಎಂಬ ತಾತ್ಸಾರ ಭಾವನೆ ಇದೆ. ಹೆಣ್ಣು ಹೆತ್ತ ಮಹಿಳೆಗೆ ಕುಟುಂಬದ ಪ್ರೋತ್ಸಾಹ ಅಗತ್ಯವಾಗಿ ಬೇಕಿರುತ್ತದೆ.

 

ಎಷ್ಟೋ ಬಾರಿ ಒಂದು ಹೆಣ್ಣು ಮಗಳನ್ನು ಸರಿಯಾದ ಕುಟುಂಬದಲ್ಲಿ ಮದುವೆ ಮಾಡಲು ಬಡ ಪೋಷಕರು ಹೆಣಗಾಡುತ್ತಾರೆ. ಕುಡುಕ, ಚಾರಿತ್ರ್ಯಹೀನ ಗಂಡನನ್ನು ಕಟ್ಟಿಕೊಂಡು ಹೆಣ್ಣು ಭ್ರೂಣ ಮತ್ತು ಶಿಶು ಹತ್ಯೆಯಂತಹ ಪ್ರಕರಣದಲ್ಲಿ ಮುಗ್ಧ ಮಹಿಳೆಯರು ಬಲಿಪಶುಗಳಾಗುತ್ತಿದ್ದಾರೆ. ಮದುವೆಯ ವಿಚಾರದಲ್ಲಿ ಬಡ ಹೆಣ್ಣು ಮಕ್ಕಳು ವಿನಾಕಾರಣ ರಾಜಿಯಾಗುತ್ತಿದ್ದಾರೆ.* ಹೆಣ್ಣು ಭ್ರೂಣ ಹತ್ಯೆ ಮತ್ತು ಶಿಶು ಹತ್ಯೆ ತಡೆಗೆ ಆಯೋಗ ಯಾವ ಕ್ರಮ ತೆಗೆದುಕೊಳ್ಳಲಿದೆ?ಆಫ್ರಿನ್ ಪ್ರಕರಣವು ಬೆಳಕಿಗೆ ಬಂದಿರಬಹುದು. ಆದರೆ ಇಂದಿಗೂ ಅದೆಷ್ಟು ಆಫ್ರಿನ್‌ರು ಕ್ರೂರ ಅಪ್ಪನಿಂದ ಹತ್ಯೆಗೀಡಾಗುತ್ತಿದ್ದಾರೆ. ಇನ್ನು ಜಗತ್ತಿಗೆ ಬರುವ ಮುನ್ನವೇ ಹೆಣ್ಣು ಭ್ರೂಣ ಮಣ್ಣಾಗುತ್ತಿದೆ. ಇಂತಹ ವಿಚಾರದಲ್ಲಿ ಪತ್ನಿಯರು ಧೈರ್ಯ ವಹಿಸಬೇಕು.ಮಹಿಳೆಗೆ ಆತ್ಮಾಭಿಮಾನದ ಜತೆಗೆ ಆರ್ಥಿಕ ಸ್ವಾವಲಂಬನೆ ಅವಶ್ಯಕವಾಗಿದ್ದು, ಹೆಣ್ಣು ಭ್ರೂಣ ಮತ್ತು ಶಿಶು ಹತ್ಯೆ ನಿಲ್ಲಿಸಿ ಎಂದು ರಾಜ್ಯದ ವಿವಿಧ ಭಾಗಗಳಲ್ಲಿ ಅಭಿಯಾನ ಹಮ್ಮಿಕೊಳ್ಳಲಿದ್ದೇವೆ. ಇದರೊಂದಿಗೆ ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಿದ್ದೇವೆ.* ಈಗೀಗ ಹೆಚ್ಚುತ್ತಿರುವ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳನ್ನು ಹೇಗೆ ನಿಭಾಯಿಸಿದ್ದೀರಿ?ಮೊದಲಿಗೆ ಸ್ಪಷ್ಟೀಕರಿಸುತ್ತೇನೆ. ಆಯೋಗವು ಶಿಕ್ಷೆ ಕೊಡುವ ಅಧಿಕಾರ ಹೊಂದಿಲ್ಲ. ಇತ್ತೀಚೆಗೆ ಮೈಸೂರು ವಿ.ವಿ.ಯಲ್ಲಿ ನಡೆದ ಲೈಂಗಿಕ ಪ್ರಕರಣದಲ್ಲಿ ಆಯೋಗದ ಒತ್ತಾಸೆಯಿಂದಲೇ ವಿ.ವಿ.ಯ ಮಹಿಳಾ ದೂರು ಸಮಿತಿ ವಿಚಾರಣೆ ನಡೆಸಿತ್ತು. ಪ್ರಾಧ್ಯಾಪಕರನ್ನು ತಪ್ಪಿತಸ್ಥ ಎಂದು ಹೇಳಿತ್ತು. ಆದರೆ ವಿ.ವಿ.ಯ ಸಿಂಡಿಕೇಟ್ ಸದಸ್ಯರು ಶಿಕ್ಷೆ ಕೊಡದೇ ಸುಮ್ಮನಾದರು.

 

ಆನಂತರ ಸರ್ಕಾರದ ಮೂಲಕ ಒತ್ತಡ ಹೇರಿದ್ದರಿಂದ ಸಿಂಡಿಕೇಟ್‌ನಲ್ಲಿನ ಶಿಕ್ಷೆ ವಿಧಿಸುವ ಪ್ರಾಧಿಕಾರವು ಪ್ರಾಧ್ಯಾಪಕನ ಒಂಬತ್ತು ಇಂಕ್ರಿಮೆಂಟ್‌ಗಳನ್ನು ಕಡಿತಗೊಳಿಸಿ, ಛೀಮಾರಿ ಹಾಕಿದೆ.* ದಲಿತ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಲೈಂಗಿಕ ದೌರ್ಜನ್ಯವನ್ನು ಆಯೋಗ ಗಮನಿಸಿದೆಯೇ?ಸಮಾಜದಲ್ಲಿ ಯಾವುದೇ ಸ್ತರದಲ್ಲಿರುವ ಮಹಿಳೆಯರು ಎದುರಿಸುವ ದೌರ್ಜನ್ಯದ ಬಗ್ಗೆ ಆಯೋಗಕ್ಕೆ ದೂರು ನೀಡಿದರೆ ಅದರ ಅನ್ವಯ ಕ್ರಮ ತೆಗೆದುಕೊಳ್ಳಲು ಸದಾ ಸಿದ್ಧರಿದ್ದೇವೆ. ಮಹಿಳೆಯರು ಸಮಸ್ಯೆ ಎಂದು ಬಂದಾಗ ದಲಿತ ಮತ್ತು ಮೇಲ್ವರ್ಗ ಎಂಬ ಭೇದವಿಲ್ಲ. ಆದರೆ, ದಲಿತ ಮಹಿಳೆಯರು ಲೈಂಗಿಕ ದೌರ್ಜನ್ಯ ಸೇರಿದಂತೆ ತಮಗಾಗುವ ಶೋಷಣೆಯ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ. ಈ ಮನೋಸ್ಥಿತಿಯನ್ನು ಬದಲಾಯಿಸಬೇಕಿದೆ.* ಆಯೋಗವೆಂಬುದು ಉಳ್ಳವರ ಹೆಣ್ಣು ಮಕ್ಕಳ ಸಮಸ್ಯೆಗಳನ್ನು ಮಾತ್ರ ಆಲಿಸುತ್ತಿದೆ ಎಂಬ ದೂರಿದೆಯಲ್ಲ?ಹಾಗೇನಿಲ್ಲ. ಎಷ್ಟೋ ಬಾರಿ ದಲಿತ ಮಹಿಳೆಯರ ಸಮಸ್ಯೆಗಳಿಗಾಗಿ ಹೋರಾಡುವ ಸಂದರ್ಭವನ್ನು ಮಾಧ್ಯಮಗಳು ಬಿತ್ತರಿಸುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಸೆಲೆಬ್ರಿಟಿಗಳ ಸಮಸ್ಯೆಯನ್ನೇ ದೊಡ್ಡದು ಮಾಡುತ್ತಿವೆ. ಇದರಿಂದ ಹಾಗೇ ಅನಿಸಿರಬಹುದು. ಆದರೆ ಆಯೋಗವು ಮಹಿಳಾ ಹಕ್ಕುಗಳಿಗೆ ಚ್ಯುತಿಯುಂಟಾದಾಗ ಮಹಿಳೆಯರ ಪರ ನಿಲ್ಲುತ್ತದೆ. ನೀಡಲಾದ ಮಿತಿಯಲ್ಲಿಯೇ ಈ ಕಾರ್ಯ ಮುಂದುವರಿಸಿದ್ದೇವೆ.* `ಮಹಿಳಾ ಆಯೋಗ ಕಳೆದು ಹೋಗಿದೆ ಹುಡುಕಿ ಕೊಡಿ~ ಎಂದು ಕೆಲವು ಮಹಿಳಾ ಸಂಘಟನೆಗಳು ಈಚೆಗೆ ಪ್ರತಿಭಟನೆ ನಡೆಸಿದ್ದವು. ಈ ಬಗ್ಗೆ ಏನು ಹೇಳ್ತೀರಾ?ಇದು ಶುದ್ಧ ಸುಳ್ಳು. ವೈಯಕ್ತಿಕವಾಗಿ ಚಾರಿತ್ರ್ಯವಧೆ ಮಾಡುವ ಉದ್ದೇಶದಿಂದಲೇ ಈ ಆರೋಪ ಮಾಡಿದ್ದಾರೆ. ಪ್ರತಿಭಟನೆ ಮಾಡಿದವರು ಎಂದಿಗೂ ಮಹಿಳಾ ಸಮಸ್ಯೆಗಳನ್ನು ಇಟ್ಟುಕೊಂಡು ಆಯೋಗಕ್ಕೆ ಭೇಟಿ ನೀಡಿರಲಿಲ್ಲ. ಆಯೋಗಕ್ಕೆ ಬರುವ ದೂರಿನನ್ವಯ ಕಾರ್ಯನಿರ್ವಹಿಸುತ್ತಿದ್ದೇನೆ. ಆಯೋಗವೆಂಬುದು ನಗರಕ್ಕೆ ಮಾತ್ರ ಸೀಮಿತವಾಗಿದ್ದ ಸಂದರ್ಭದಲ್ಲಿಯೂ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ವಾಸಿಸುವ ಮಹಿಳೆಯರ ಸಮಸ್ಯೆಯನ್ನು ಆಲಿಸಿ, ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ.* ಆಯೋಗವು ತನ್ನ ಕಾರ್ಯವೈಖರಿಯಲ್ಲಿ ಇತರೆ ಮಹಿಳಾ ಸಂಘಟನೆಗಳ `ಸಾಥ್~ ಪಡೆಯಲಿದೆಯೇ?ಆಯೋಗವು ನೊಂದ ಬಡ ಹೆಣ್ಣುಮಕ್ಕಳಿಗೆ ಉದ್ಯೋಗ ಒದಗಿಸುವ ಸಲುವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹೆಸರು ಶಿಫಾರಸು ಮಾಡುತ್ತಲೇ ಇರುತ್ತದೆ.ಕೇವಲ ಸಿದ್ಧಾಂತವನ್ನೇ ಬಡಬಡಾಯಿಸುವ ಮಹಿಳಾ ಸಂಘಗಳನ್ನು ದೂರವಿಟ್ಟು, ನಿಜವಾದ ಮಹಿಳಾ ಸಮಸ್ಯೆಗಳ ಬಗ್ಗೆ ಮಾತನಾಡುವ ಮತ್ತು ಪರಿಹಾರ ನೀಡುವ ಉತ್ತಮ ಮಹಿಳಾ ಜಾಲವೊಂದನ್ನು ರೂಪಿಸಲು ಮಹಿಳಾ ಸಂಘಟನೆಗಳ ನೆರವು ಪಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.