ಗುರುವಾರ , ಜನವರಿ 23, 2020
19 °C

ಉಡುಗೆರೆ ಗ್ರಾಮಕ್ಕೆ ಉಡುಗೊರೆಯಾದ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡೂರು: ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳು ಸ್ವಸಾಮರ್ಥ್ಯದಿಂದ ರಾಷ್ಟ್ರೀಯ ಪಂದ್ಯಾವಳಿಗೆ ಆಯ್ಕೆಯಾಗಿ ತಾಲ್ಲೂಕಿನ ಉಡುಗೆರೆ ಗ್ರಾಮಕ್ಕೆ ಸಂತಸ ತರುವ ಉಡುಗೊರೆಯಾಗಿ ಹೆಮ್ಮೆ ತಂದಿದ್ದಾರೆ.ಯಗಟಿ ಹೋಬಳಿ ಉಡುಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಂಡು ಮಕ್ಕಳು ಥ್ರೋಬಾಲ್‌ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿ ಛತ್ತೀಸ್‌ಘರ್‌ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಥ್ರೋಬಾಲ್‌ ಪಂದ್ಯಾವಳಿಗೆ ಆಯ್ಕೆಯಾಗಿದ್ದು 2010ರಿಂದ ಉತ್ತಮ ಸಾಧನೆ ತೋರುತ್ತಿರುವ ಇಲ್ಲಿನ ಗ್ರಾಮೀಣ ಪ್ರತಿಭೆಗಳ ಕೌಶಲ್ಯಕ್ಕೆ ಕೈಗನ್ನಡಿಯಾಗಿದೆ.ಇದೇ ಶಾಲೆಯ ವಿದ್ಯಾರ್ಥಿನಿಯರೂ ಹುಡುಗರಿಗಿಂತ ತಾವೇನೂ ಕಡಿಮೆ ಇಲ್ಲ ಎಂದು ಸಾಧನೆಗೈದು ರಾಜ್ಯಮಟ್ಟದ ಗ್ರಾಮೀಣ ಕ್ರೀಡಾಕೂಟದಲ್ಲಿ ನಾಲ್ವರು ರಾಷ್ಟ್ರೀಯ ಕಬಡ್್ಡಿ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಗ್ರಾಮದ ಹಿರಿಮೆ ಹೆಚ್ಚಿಸಿದರೆ 14ರ ವಯೋಮಾನದ ಒಳಗಿನ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸುವ ಮೂಲಕ ಸದ್ಯದಲ್ಲಿಯೇ ಮಧ್ಯಪ್ರದೇಶದ ಸಾತ್ನಾದಲ್ಲಿ ನಡೆಯಲಿರುವ 59ನೇ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಗೆ ಆಯ್ಕೆಯಾದ ಬಾಲಕಿಯರು ತಾವು ಭವಿಷ್ಯದ ಕ್ರೀಡಾ ತಾರೆಯರು ಎಂಬ ಹೆಮ್ಮೆಯ ಗರಿಯನ್ನು ಮೂಡಿಸಿದ್ದಾರೆ.ಶಾಲೆಯ ವಿದ್ಯಾರ್ಥಿಗಳಾದ ಕಲ್ಲೇಶ್‌, ಕಿರಣ್‌, ಶಿವಕುಮಾರ್‌, ಮಂಜುನಾಥ್‌, ಸುನಿಲ್‌ ಮತ್ತು ಹರ್ಷಿತ್‌ ಥ್ರೋಬಾಲ್‌ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದರೆ, ಯು.ಆರ್‌.ವಿನುತಾ, ಕೆ.ಎಂ.ಕವನ, ಯು.ಪಿ.ಕಾವ್ಯ, ಭೂಮಿಕಾ, ರಕ್ಷಿತಾ, ಯು.ಎಸ್‌.ಮೇಘನಾ, ಪ್ರೀತಿ, ಯು.ಒ.ಮೇಘನಾ ಮತ್ತು ದೀಪಾ ಯು.ಎಸ್‌. ಕಬಡ್ಡಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವರು.ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಸೂಕ್ತ ತರಬೇತಿ, ಸೌಲಭ್ಯಗಳಿಲ್ಲದೆ ಉತ್ತಮ ಸಾಧನೆ ಮಾಡುತ್ತಿರುವ ಪ್ರತಿಭೆಗಳಿಗೆ ಸೂಕ್ತ ಸಹಕಾರ ದೊರೆತಲ್ಲಿ ರಾಜ್ಯಕ್ಕೆ ಮತ್ತು ಜಿಲ್ಲೆಗೆ ಹೆಮ್ಮೆಯಾಗಬಲ್ಲರು ಎಂದು ನುಡಿಯುವ ಗ್ರಾಮಸ್ಥರು ಮಕ್ಕಳು ರಾಷ್ಟ್ರೀಯ ಕ್ರೀಡಾಕೂಟದಲ್ಲಿಯೂ ಉತ್ತಮ ಸಾಧನೆ ತೋರಲಿ ಎಂದು ಹಾರೈಸುತ್ತಾರೆ.

ಪ್ರತಿಕ್ರಿಯಿಸಿ (+)