ಉಡುಪರ ಯಂತ್ರದಾಳು

7

ಉಡುಪರ ಯಂತ್ರದಾಳು

Published:
Updated:
ಉಡುಪರ ಯಂತ್ರದಾಳು

ಕೂಲಿ ಆಳುಗಳ ಬರದಿಂದಾಗಿ ಮಲೆನಾಡಿನ ಕೃಷಿಕ ಹೈರಾಣಾಗಿದ್ದಾನೆ. ಗದ್ದೆ ಕೊಯ್ಲು, ಅಡಿಕೆ ಕೊಯ್ಲಿನ ಹಂಗಾಮಿನಲ್ಲಂತೂ ಕೃಷಿಕರ ಬವಣೆ ಹೇಳತೀರದು. ಒಳ್ಳೆ ಫಸಲಿದ್ದರೂ ಸಮಯಕ್ಕೆ ಸರಿಯಾಗಿ ಕೊಯ್ಲು ಮಾಡಿಸಲಾಗದೇ ನಷ್ಟ ಅನುಭವಿಸುವುದು ಅನಿವಾರ್ಯ ಎನ್ನುವಂತಾಗಿದೆ.ಕೂಲಿ ಕಾರ್ಮಿಕರ ಬರದೊಂದಿಗೆ ಕೂಲಿ ದರವೂ ದುಪ್ಪಟ್ಟಾಗಿದೆ. ಇನ್ನು ಅಡಿಕೆ ಕೊಯ್ಲಿನಲ್ಲಿ ಕೊನೆಗಾರ ಕೆಲಸಕ್ಕೆ ಬಂದ ದಿನ ಕೊನೆ ಹಿಡಿಯುವವನಿಲ್ಲ. ಇವರಿಬ್ಬರೂ ಬಂದರೆ ಕೊನೆ (ಗೊನೆ) ಹೊರುವವರಿಲ್ಲ. ಎಲ್ಲರೂ ಬಂದು ಅಡಿಕೆ ಕೊನೆಯನ್ನು ಮನೆ ಅಂಗಳಕ್ಕೆ ತಂದರೆ ಅಡಿಕೆ ಸುಲಿಯುವವರಿಲ್ಲ.ಹಾಗಂತ ಎಲ್ಲಾ ಕೆಲಸಗಳನ್ನೂ ಮನೆ ಮಂದಿಯೇ ಮಾಡಿ ಮುಗಿಸೋಕಾಗಲ್ಲ. ಹೀಗಾಗಿ ರೈತರ ಬದುಕು ಬಿಸಿ ತುಪ್ಪದಂತಾಗಿದೆ. ನುಂಗಲೂ ಆಗದೆ, ಉಗಿಯಲೂ ಆಗದೆ ವಿಲವಿಲ ಒದ್ದಾಟ.ಇದರ ನಡುವೆಯೇ ಕೆಲ ರೈತರು ಯಾಂತ್ರೀಕರಣದತ್ತ ವಾಲಿದ್ದಾರೆ. ಜತೆಗೆ ಕೃಷಿಕರ ಸಮಸ್ಯೆಗಳಿಗೆ ಕೃಷಿಕರಿಂದಲೇ ಪರಿಹಾರದ ಹುಡುಕಾಟ ನಡೆದಿದೆ.  ಮುಖ್ಯವಾಗಿ ಕೂಲಿಆಳುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ದಿಸೆಯಲ್ಲಿ ಹೊಸ ಹೊಸ ಯಂತ್ರಗಳು ರೂಪುಗೊಳ್ಳುತ್ತಿವೆ. ಅಡಿಕೆ ಸುಲಿಯುವ ಯಂತ್ರ, ಕಾಳುಮೆಣಸು ಬಿಡಿಸುವ ಯಂತ್ರ, ಕಳೆ ಕಟಾವು ಯಂತ್ರ ಇತ್ಯಾದಿಗಳಿಂದ ಕೂಲಿಯಾಳುಗಳ ಮರ್ಜಿ ಕಾಯುವುದು ಕೆಲಮಟ್ಟಿಗೆ ಕಡಿಮೆಯಾಗಿದೆ.ಹೀಗೆ ಕೂಲಿಯಾಳಿಲ್ಲದೆ ಅಡಿಕೆ ಕೊನೆ ಸಾಗಣೆ ಮಾಡಲು ಕೃಷಿಕರೊಬ್ಬರು ಮೋಟಾರು ಚಾಲಿತ ಕೇಬಲ್ ಗಾಡಿ ಅಭಿವೃದ್ಧಿಪಡಿಸಿದ್ದಾರೆ. ಅವರೇ ತೀರ್ಥಹಳ್ಳಿ ಪಕ್ಕದ ಭಾರತೀಪುರದ ಪ್ರಕಾಶ ಉಡುಪ.ಅವರ ಮನೆ ಮತ್ತು ತೋಟದ ನಡುವೆ ಸರಿಸುಮಾರು ಇನ್ನೂರು ಮೀಟರ್ ಅಂತರ. ಕೆಳಗೆ ತಗ್ಗಿನಲ್ಲಿ ತೋಟ, ಬೆಟ್ಟದ ಮೇಲೆ ಮನೆ. ತೋಟದಿಂದ ಮನೆ ಅಂಗಳ ತಲುಪುವ ದಾರಿ ಸಂಪೂರ್ಣ ಏರಿನದು. ಅಲ್ಲಿಂದ ಅಡಿಕೆ ಗೊನೆ ಹೊತ್ತು ಮನೆಯಂಗಳಕ್ಕೆ ಸಾಗಿಸಲು ಕೂಲಿ ಆಳುಗಳೇ ಬರುತ್ತಿರಲಿಲ್ಲ. ಅವರ ಮನವೊಲಿಕೆಗೆ ಹರಸಾಹಸ ಮಾಡಬೇಕಾಗುತ್ತಿತ್ತು. ತೋಟದಿಂದ ಕೊನೆ ಹೆಡಿಗೆಯನ್ನು ಕಡಿದಾದ ಏರಿನಲ್ಲಿ ಹೊತ್ತು ಸಾಗಿಸುವಷ್ಟರಲ್ಲಿ ಕಾರ್ಮಿಕರು ಸುಸ್ತೋ ಸುಸ್ತು.ಒಂದು ದಿನ ಕೊನೆ ಹೊತ್ತ ಶ್ರಮದ ದಣಿವಾರಿಸಿಕೊಳ್ಳಲು ಎರಡು ದಿನ ರಜೆ ಪಡೆಯಬೇಕಾಗುತ್ತಿತ್ತು. ಒಂದು ದಿನದ ಕೂಲಿಗೆ ಎರಡು ದಿನದ ಕೂಲಿ ಕಳೆದುಕೊಳ್ಳಬೇಕಾಗುತ್ತಿತ್ತು. ಉಡುಪರು ಇದಕ್ಕೊಂದು ಪರಿಹಾರ ಹುಡುಕತೊಡಗಿದರು. ಬಾಲ್ಯದಿಂದಲೂ ಚಿಕ್ಕಪುಟ್ಟ ಯಂತ್ರಗಳ ರಿಪೇರಿ, ಮರುಜೋಡಣೆ, ತಾವೇ ಬಿಡಿಭಾಗಗಳನ್ನು ಸಂಗ್ರಹಿಸಿ ಹೊಸ ಯಂತ್ರ ತಯಾರಿಸುವ ಗೀಳು ಅಂಟಿತ್ತು. ಅದು ಇಲ್ಲಿ ಉಪಯೋಗಕ್ಕೆ ಬಂತು.

 

ಎರಡು ವರ್ಷದ ಹಿಂದೆ ತಮ್ಮದೇ ತಂತ್ರಜ್ಞಾನ ಬಳಸಿಕೊಂಡು ಮೋಟಾರ್ ಚಾಲಿತ ಕೇಬಲ್ ಗಾಡಿ ನಿರ್ಮಿಸಿದರು. ಅಲ್ಲಿಂದ ಈಚೆ ಅಡಿಕೆ ಹಂಗಾಮಿನಲ್ಲಿ ಕೊನೆ ಹೊರಲು ಒಬ್ಬನೇ ಒಬ್ಬ ಕೂಲಿ ಆಳನ್ನು ಅವರು ಕರೆಸಿಕೊಂಡಿಲ್ಲ.ಕಬ್ಬಿಣದ ಆಂಗ್ಲರ್‌ನಲ್ಲಿ ಒಂದು ಸ್ಟ್ಯಾಂಡ್ ನಿರ್ಮಿಸಿ ಮನೆಯಂಗಳದಲ್ಲಿ ಒಂದು ಅಡಿ ಆಳಕ್ಕೆ ಹುಗಿದಿದ್ದಾರೆ.  ಸ್ಟ್ಯಾಂಡಿನ ಮೊದಲ ಹಂತದಲ್ಲಿ ಎರಡು ಅಶ್ವಶಕ್ತಿಯ ವಿದ್ಯುತ್ ಮೋಟಾರ್ ಇದೆ. ಸ್ಟ್ಯಾಂಡಿನ ಮೇಲ್ಭಾಗಕ್ಕೆ ಕೇಬಲ್ ಸುತ್ತಿಕೊಳ್ಳಲು ಒಂದು ತಿರುಗಣೆ ರಾಟೆ ಜೋಡಿಸಲಾಗಿದೆ. ಇನ್ನೂರು ಮೀಟರ್ ಉದ್ದದ ಉಕ್ಕಿನ ಕೇಬಲ್‌ನ ಒಂದು ತುದಿಯನ್ನು ರಾಟೆಗೆ ಕಟ್ಟಿದ್ದಾರೆ.  ಕೇಬಲ್‌ನ ಇನ್ನೊಂದು ತುದಿಗೆ ಒಂದು ಉಕ್ಕಿನ ಕೊಕ್ಕೆ ಇದೆ.  ಈ ಕೊಕ್ಕೆಯನ್ನು ತಳ್ಳುಗಾಡಿಯೊಂದರ ಹಿಂಭಾಗಕ್ಕೆ ಸಿಕ್ಕಿಸಲಾಗಿದೆ.  ಕೇಬಲ್ ಸುತ್ತಿಕೊಳ್ಳುವ ಹಾಗೂ ಬಿಚ್ಚಿಕೊಳ್ಳುವ ಎರಡೂ ಕೆಲಸಗಳೂ ಮೋಟಾರ್ ಚಾಲನೆಯಿಂದಲೇ ನಡೆಯುತ್ತದೆ.  ಕೇಬಲ್‌ನ ಕೊಕ್ಕೆ ಸಿಕ್ಕಿಸಿದ ಕೈಗಾಡಿಯನ್ನು ತೋಟಕ್ಕೆ ತಂದು ಬೇಕಾದ ಜಾಗದಲ್ಲಿ ನಿಲ್ಲಿಸಿಕೊಂಡು ಅಡಿಕೆ ಕೊನೆ ತುಂಬಿಸಿದ ಮೇಲೆ ಮನೆಗೊಂದು ಮಿಸ್‌ಕಾಲ್ ಕೊಟ್ಟರಾಯಿತು. ಯಾರಾದರೊಬ್ಬರು ಮೋಟಾರ್ ಸ್ವಿಚ್ ಹಾಕ್ತಾರೆ.ಕೊನೆ ತುಂಬಿದ ಗಾಡಿ ನಿಧಾನವಾಗಿ ಮನೆಯ ಏರಿನ ದಾರಿಯಲ್ಲಿ ಸಾಗುತ್ತದೆ.  ಅಂಗಳಕ್ಕೆ ಬಂದ ಮೇಲೆ ಮೋಟಾರ್ ಆಫ್ ಮಾಡಿ ಕೊನೆ ಖಾಲಿ ಮಾಡಿದರಾಯಿತು.

ಆದರೆ ಗಾಡಿ ಬಳಕೆಯಲ್ಲಿರುವಾಗ ಜೊತೆಗೊಬ್ಬರು ಇರಲೇಬೇಕು. ಕಾರಣವಿಷ್ಟೆ. ಇದು ಓರೆ ಕೋರೆಯ ದಾರಿಯಲ್ಲಿ ಸಾಗಬೇಕಾದ್ದರಿಂದ ಹ್ಯಾಂಡಲ್ ಹಿಡಿದು ಹಿಂದಿನಿಂದ ನಡೆದು ಬರಬೇಕು. ಸಾಮಾನ್ಯ ನಡಿಗೆಯ ವೇಗದಲ್ಲಿಯೇ ಗಾಡಿ ಸಾಗುವುದರಿಂದ ಯಾವುದೇ ಅಪಾಯವಿಲ್ಲ.  ಹೀಗಾಗಿ ಈ ಕೆಲಸವನ್ನು ಮಕ್ಕಳು, ಮಹಿಳೆಯರು, ವೃದ್ಧರು ಯಾರು ಬೇಕಾದರೂ ಮಾಡಬಹುದು. ಗಾಡಿ ಒಂದು ಕಲ್ಲು ಸೇತುವೆಯನ್ನೂ ದಾಟಿಕೊಂಡು ಬರುತ್ತದೆ. ಒಂದು ಸಲಕ್ಕೆ 75 ಕೊನೆ ತುಂಬಿಸುತ್ತಾರೆ.ಮೋಟಾರಿನ ಚಕ್ರ ಮತ್ತು ರಾಟೆಯ ಚಕ್ರಗಳ ವ್ಯಾಸವನ್ನು ವ್ಯತ್ಯಾಸ ಮಾಡುವ ಮೂಲಕ ಕೇಬಲ್ ಸುತ್ತಿ ಕೊಳ್ಳುವ ವೇಗವನ್ನು ತಗ್ಗಿಸಿದ್ದಾರೆ.  ಈಗ ಮೋಟಾರ್‌ನ ರಾಟೆ ನಲವತ್ತು ಸುತ್ತು ತಿರುಗಿದರೆ ಕೇಬಲ್ ರಾಟೆ ಒಂದು ಸುತ್ತು ಸುತ್ತಿಕೊಳ್ಳುತ್ತದೆ.ಒಂದು ಸೆಕೆಂಡ್‌ಗೆ ಒಂದು ಸುತ್ತು ತಿರುಗುತ್ತದೆ.  ಇನ್ನೊಂದು ಕೇಬಲ್ ಗಾಡಿ ತಯಾರಿಸುವ ಅವಕಾಶ ಸಿಕ್ಕರೆ ಇದರಲ್ಲಿನ ನ್ಯೂನತೆ ಸರಿಪಡಿಸಿ ಇನ್ನಷ್ಟು ಸುಧಾರಣೆ ಮಾಡಬಹುದು ಎನ್ನುತ್ತಾರೆ ಉಡುಪರು. ಅವರ ಮೊಬೈಲ್ 98808 09001.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry