ಮಂಗಳವಾರ, ಜೂನ್ 15, 2021
20 °C

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆ: ಕಾಂಗ್ರೆಸ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ವಿ.ಸುನೀಲ್ ಕುಮಾರ್ ಅವರನ್ನು 45,724 ಮತಗಳ ಅಂತರದಿಂದ ಪರಾಭವಗೊಳಿಸುವ ಮೂಲಕ ಲೋಕಸಭೆಗೆ ಪ್ರವೇಶ ಪಡೆದಿದ್ದಾರೆ. 
ಹೆಗ್ಡೆ 3,98,723 ಮತ, ಸುನೀಲ್ ಕುಮಾರ್ 3,52,999, ಜೆಡಿಎಸ್ ಅಭ್ಯರ್ಥಿ ಎಸ್.ಎಲ್.ಬೋಜೇಗೌಡ 72,080 ಮತ ಪಡೆದಿದ್ದಾರೆ. ಉಳಿದಂತೆ 11 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಕುಂಜಿಬೆಟ್ಟುವಿನ ಟಿ.ಎ.ಪೈ ಪ್ರೌಢಶಾಲೆಯಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ಮತ ಎಣಿಕೆ ಮಧ್ಯಾಹ್ನ 12 ಗಂಟೆಗೆ ಮುಕ್ತಾಯಗೊಂಡಿತು. 18 ಸುತ್ತು ಮತ ಎಣಿಕೆ ನಡೆದಿದ್ದು ಪ್ರತಿ ಎಣಿಕೆಯಲ್ಲಿಯೂ ಕನಿಷ್ಠ ಎರಡೂವರೆ ಸಾವಿರ ಮತಗಳ ಅಂತರವನ್ನು ಕಾಂಗ್ರೆಸ್ ಅಭ್ಯರ್ಥಿ ಆರಂಭದಿಂದಲೂ ಕಾಯ್ದುಕೊಂಡಿದ್ದರು.10ನೇ ಸುತ್ತಿನ ಮತ ಎಣಿಕೆ ವೇಳೆಗೆ 33 ಸಾವಿರ ಮತಗಳ ಅಂತರದಿಂದ ಮುನ್ನಡೆಯಲ್ಲಿದ್ದರು. ಹೆಗ್ಡೆ ಅವರು ಬೆಂಬಲಿಗರೊಂದಿಗೆ ಮತ ಎಣಿಕೆ ಕೇಂದ್ರದಿಂದ ಹೊರಬರುತ್ತಿದ್ದಂತೆಯೇ ಕಾರ್ಯಕರ್ತರು ಹೂಹಾರ ಹಾಕಿ ಅವರನು ಎತ್ತಿಕೊಂಡು ಕುಣಿದು ಕುಪ್ಪಳಿಸಿದರು. ನೂರಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಬ್ಯಾಂಡ್ ಬಾರಿಸಿ ಸಂಭ್ರಮಿಸಿದರು.ಜಿಲ್ಲಾ ಚುನಾವಣಾಧಿಕಾರಿ ಎಂ.ಟಿ.ರೇಜು, ಎಲ್ಲ ಸುತ್ತುಗಳ ಮತ ಎಣಿಕೆ ಬಳಿಕ ಜಯಪ್ರಕಾಶ್ ಹೆಗ್ಡೆ ವಿಜಯಿ ಎಂದು ಘೋಷಿಸಿ ಪ್ರಮಾಣಪತ್ರ ನೀಡಿದರು.2ನೇ ಯತ್ನದಲ್ಲಿ ಯಶಸ್ಸು: 2009ರ ಲೋಕಸಭಾ ಚುನಾವಣೆಯಲ್ಲಿ ಈಗಿನ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರ ವಿರುದ್ಧ 27 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಜಯಪ್ರಕಾಶ್, ಈ ಬಾರಿ ಬಿಜೆಪಿ ಅಭ್ಯರ್ಥಿಯನ್ನು ಭಾರಿ ಅಂತರದಿಂದ ಸೋಲಿಸುವ ಮೂಲಕ 2ನೇ ಯತ್ನದಲ್ಲಿ ಯಶಸ್ಸು ಕಂಡರು.

ಮುಖ್ಯಮಂತ್ರಿ ಪ್ರತಿನಿಧಿಸಿದ್ದ ಕ್ಷೇತ್ರ ಎಂಬ ಕಾರಣಕ್ಕೆ ಕುತೂಹಲ ಕೆರಳಿಸಿದ್ದ ಈ ಉಪ ಚುನಾವಣೆ ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ ಉಂಟುಮಾಡಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

 

ಮುಖ್ಯಮಂತ್ರಿ ಡಿ.ವಿ.ಎಸ್.ರಾಜೀನಾಮೆಯಿಂದ ತೆರವಾದ ಕ್ಷೇತ್ರವನ್ನು ಉಳಿಸಿಕೊಳ್ಳಲಾಗಲಿಲ್ಲ ಎನ್ನುವ ಅವಮಾನ ಒಂದೆಡೆಯಾದರೆ ಬಿಜೆಪಿ ಭದ್ರಕೋಟೆ ಕರಾವಳಿ ಭಾಗದ ಬುದ್ಧಿವಂತ ಮತದಾರ ಕಾಂಗ್ರೆಸ್‌ನತ್ತ ವಾಲಿರುವುದು ಕಮಲ ಪಾಳಯಕ್ಕೆ ಆಘಾತ ಉಂಟುಮಾಡಿದೆ.2004ರ ವಿಧಾನಸಭೆ ಚುನಾವಣೆ ಬಳಿಕ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಸರಿಯಾದ ಗೆಲುವು ಕಾಣದ ಕಾಂಗ್ರೆಸ್‌ಗೆ, ಈಗಿನ ಯಶಸ್ಸು ಭಾರಿ ಉತ್ಸಾಹ ಹಾಗೂ ಆತ್ಮವಿಶ್ವಾಸ ತಂದುಕೊಟ್ಟಿದೆ. ಇಂಥದ್ದೊಂದು ವಿಜಯಕ್ಕಾಗಿ ಕಾಯುತ್ತಿದ್ದ ಕಾಂಗ್ರೆಸ್, ಫಲಿತಾಂಶದ ಬಳಿಕ ಎಲ್ಲೆಲ್ಲೂ ವಿಜಯೋತ್ಸವ ಆಚರಿಸುತ್ತಿದೆ. ಕಾಂಗ್ರೆಸ್ ಭವನ ಕಾರ್ಯಕರ್ತರಿಂದ ತುಂಬಿ ತುಳುಕುತ್ತಿದೆ.6ರಲ್ಲಿ ಮುನ್ನಡೆ: 8 ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಿಕ್ಕಮಗಳೂರು, ಕಾರ್ಕಳದಲ್ಲಿ ಮಾತ್ರವೇ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಉಳಿದಂತೆ ಕುಂದಾಪುರ, ಉಡುಪಿ, ಕಾಪು, ಶೃಂಗೇರಿ, ಮೂಡಿಗೆರೆ ಹಾಗೂ ತರೀಕೆರೆಯಲ್ಲಿ ಜಯಪ್ರಕಾಶ್ ಹೆಗ್ಡೆ ಮುನ್ನಡೆ ಸಾಧಿಸಿದ್ದು, ಬಿಜೆಪಿ ವಿಧಾನಸಭಾ ಕ್ಷೇತ್ರಗಳಿಗೆ ಬಿಸಿ ಮುಟ್ಟಿಸಿದ್ದಾರೆ.ಉಡುಪಿ- ಜೆಡಿಎಸ್‌ಗೆ 8 ಸಾವಿರ ಮತ:
ಕರಾವಳಿ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆಯಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬಹಳ ನಿರೀಕ್ಷೆಯಿಂದ ಕಣಕ್ಕಿಳಿಸಲಾಗಿದ್ದ ಜೆಡಿಎಸ್ ಆಭ್ಯರ್ಥಿ ಎಸ್.ಎಲ್.ಬೋಜೇಗೌಡ ಅವರು ಒಟ್ಟು 72,080 ಮತಗಳನ್ನು ಪಡೆದು 3ನೇ ಸ್ಥಾನದಲ್ಲಿದ್ದಾರೆ.ಈ ಭಾಗದಲ್ಲಿ ಜೆಡಿಎಸ್ ಗಂಭೀರವಾಗಿಯೇ ಪ್ರಯತ್ನ ಮಾಡಿದರೂ 4 ವಿಧಾನಸಭಾ ಕ್ಷೇತ್ರಗಳೂ ಸೇರಿ ಜೆಡಿಎಸ್ ಆಭ್ಯರ್ಥಿ ಪಡೆದ ಮತಗಳು 8,721 ಮಾತ್ರ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವೊಂದರಲ್ಲೇ ಅವರು 23,864 ಮತ ಪಡೆದಿದ್ದಾರೆ. ಈ ನಡುವೆ ಪಕ್ಷದ ಸೋಲಿಗೆ ನೈತಿಕೆ ಹೊಣೆ ಹೊತ್ತು ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ರಾಜೀನಾಮೆ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.