ಉಡುಪಿ: ಚುನಾವಣೆಗಾಗಿ ನೀರಿನ ರಾಜಕೀಯ

ಉಡುಪಿ: ರಾಜ್ಯದಲ್ಲಿ ಯಾವಾಗಲಾದರೂ ಮಧ್ಯಂತರ ಚುನಾವಣೆ ಎದುರಾಗಬಹುದು ಎನ್ನುವ ಮೂಲಕ ಆಡಳಿತ ಪಕ್ಷ ಬಿಜೆಪಿಯ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಸ್ವಪಕ್ಷ ಹಾಗೂ ವಿರೋಧ ಪಕ್ಷದವರಲ್ಲಿ ಆಶ್ಚರ್ಯ ಮೂಡಿಸಿದ್ದರು.
ಪಕ್ಷದ ಅಧ್ಯಕ್ಷರು ಹೇಳಿದ ಮಾತನ್ನು ರಾಜ್ಯದ ರಾಜಕಾರಣಿಗಳು ಗಂಭೀರವಾಗಿ ಪರಿಗಣಿಸಿದ್ದಾರೋ ಇಲ್ಲವೋ? ಆದರೆ ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನದ ಆಕಾಂಕ್ಷಿಗಳು ಮಾತ್ರ ಈಶ್ವರಪ್ಪ ಅವರ ಹೇಳಿಕೆಯಿಂದ ಎಚ್ಚೆತ್ತುಕೊಂಡಿರುವಂತಿದೆ.
ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಇತ್ತೀಚಿಗೆ ಕ್ಷೇತ್ರದಲ್ಲಿ ನಡೆಸುತ್ತಿರುವ ಚಟುವಟಿಕೆಗಳು ಮುಂದಿನ ಚುನಾವಣೆಯ ತಯಾರಿ ಎಂದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಆದರೆ ಎಲ್ಲವೂ ಗುಪ್ತ್ ಗುಪ್ತ್ ಆಗಿ ನಡೆಯುತ್ತಿದೆ.
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಉಡುಪಿ ಕ್ಷೇತ್ರದಿಂದ ಸ್ಪರ್ಧಿಸುವ ಆಕಾಂಕ್ಷೆ ಹೊಂದಿರುವ ನಗರದ ಹಾಲಿ ಶಾಸಕ ಕೆ. ರಘುಪತಿ ಭಟ್ ಅವರು ಇತ್ತೀಚೆಗೆ ಕೊಂಚ ಹೆಚ್ಚಾಗಿಯೇ ಚಟುವಟಿಕೆಯಿಂದಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದೇ ಗುರುತಿಸಿಕೊಂಡಿರುವ ಮಲ್ಪೆಯ ಉದ್ಯಮಿ ಪ್ರಮೋದ್ ಮಧ್ವರಾಜ್ ಅವರೂ ಚಟುವಟಿಕೆಗಳಲ್ಲಿ ಹಿಂದೆ ಬಿದ್ದಿಲ್ಲ. ನಗರದಲ್ಲಿ ಸುಭದ್ರ ನೆಲೆ ಇಲ್ಲದಿದ್ದರೂ ಜೆಡಿಎಸ್ ಸಹ ಸಂಘಟನಾ ಕಾರ್ಯದಲ್ಲಿ ಮಗ್ನವಾಗಿದೆ.
ಎಲ್ಲ ಪಕ್ಷಗಳೂ ಚುನಾವಣಾ ತಯಾರಿಯನ್ನು ಜೋರಾಗಿಯೇ ನಡೆಸುತ್ತಿವೆ. ಆದರೆ ಪ್ರಮೋದ್ ಮತ್ತು ರಘುಪತಿ ಭಟ್ ಅವರ ನಡುವೆ ಚುನಾವಣಾ ತಯಾರಿಯಲ್ಲಿಯೂ ತುರುಸಿನ ಸ್ಪರ್ಧೆ ಇದೆ ಎಂಬುದನ್ನು ಇತ್ತಿಚಿನ ಕೆಲ ಬೆಳವಣಿಗೆಗಳು ಸಾಕ್ಷೀಕರಿಸುತ್ತವೆ.
ಉಡುಪಿ ಕ್ಷೇತ್ರ ಒಟ್ಟು 18 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಿದೆ. ಇದರಲ್ಲಿ ಸುಮಾರು 14 ಪಂಚಾಯಿತಿಯ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇದನ್ನು ಮೊದಲೇ ತಿಳಿದುಕೊಂಡಿದ್ದ ಪ್ರಮೋದ್ ಮಧ್ವರಾಜ್ ಅವರು ಹತ್ತು ದಿನಗಳ ಹಿಂದೆಯೇ ಮೂರು ಲಾರಿಗಳಲ್ಲಿ ಉಚಿತ ಕುಡಿಯುವ ನೀರಿನ ಪೂರೈಕೆ ಆರಂಭಿಸಿದರು. ನೀರು ಪೂರೈಕೆ ಮಾಡುವ ಲಾರಿಗಳ ಮೇಲೆ ಮಧ್ವರಾಜ್ ಅವರ ಛಾಯಾಚಿತ್ರವುಳ್ಳ ಬ್ಯಾನರ್ ಸಹ ಹಾಕಲಾಗಿತ್ತು.
ಏ. 16ರಂದು ಗ್ರಾಮ ಪಂಚಾಯತ್ ಅಧ್ಯಕ್ಷರು, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದ ಶಾಸಕರು ಮೂರು ಲಾರಿಗಳಲ್ಲಿ ನೀರು ಪೂರೈಕೆ ಮಾಡುವುದಾಗಿ ಅದೇ ಸಭೆಯಲ್ಲಿ ಘೋಷಿಸಿದರು. ನೀರು ಬೇಕಾದವರು ಸಂಪರ್ಕಿಸಲು ಅನುಕೂಲವಾಗುವಂತೆ ದೂರವಾಣಿ ಸಂಖ್ಯೆಯನ್ನೂ ನೀಡಿದರು.
ನೀರಿನ ಕೊರೆತೆ ಇರುವ ಹಳ್ಳಿಗಳಿಗೆ ಶಾಸಕ ಮತ್ತು ಶಾಸಕ ಸ್ಥಾನದ ಆಕಾಂಕ್ಷಿ ಇಬ್ಬರೂ ನೀರು ಪೂರೈಕೆ ಮಾಡುತ್ತಿರುವುದರಿಂದ ಜನರಿಗೆ ಅನುಕೂಲವಾಗಿದೆ. ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬ ಮಾತಿನಂತೆ ಲಾಭ ಪಡೆಯುವ ಸರದಿ ಜನರದ್ದಾಗಿದೆ.
`ನೀವು ಮಂತ್ರಿ ಸ್ಥಾನದ ಆಕಾಂಕ್ಷಿಯೇ~ ಎಂಬ ಪ್ರಶ್ನೆಗೆ ಕೆಲ ದಿನಗಳ ಹಿಂದೆ ಉತ್ತರಿಸಿದ್ದ ರಘುಪತಿ ಭಟ್ ಅವರು `ಮಂತ್ರಿಯಾದರೆ ರಾಜ್ಯವನ್ನೆಲ್ಲ ಸುತ್ತಾಡಬೇಕಾಗುತ್ತದೆ. ಇರುವ ಒಂದು ವರ್ಷದ ಅವಧಿಯಲ್ಲಿ ನಗರದಲ್ಲಿ ಬಹಳಷ್ಟು ಕೆಲಸ ಮಾಡಬೇಕಾಗಿದೆ~ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ನಗರದ ಹೊರವಲಯದ ಚಿಟ್ಪಾಡಿಯಲ್ಲಿ ಕೂಲಿ ಕಾರ್ಮಿಕರ ಗುಡಿಸಲುಗಳಿಗೆ ಬೆಂಕಿ ಬಿದ್ದಾಗ ರಘುಪತಿ ಭಟ್ ಹಾಗೂ ಪ್ರಮೋದ್ ಮಧ್ವರಾಜ್ ಇಬ್ಬರೂ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಒಂದು ಕೈ ಮುಂದೆ ಎಂಬಂತೆ ಪ್ರಮೋದ್ ಗುಡಿಸಲು ಕಳೆದುಕೊಂಡ ಬಡ ಕಾರ್ಮಿಕರಿಗೆ ಧನ ಸಹಾಯವನ್ನೂ ನೀಡಿದ್ದಾರೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಸಹ ರಘುಪತಿ ಭಟ್ ಮತ್ತು ಪ್ರಮೋದ್ ಸೆಣೆಸಿದ್ದರು. ಆ ಚುನಾಚಣೆಯಲ್ಲಿ ಪ್ರಮೋದ್ ಅವರು ಸೋತಿದ್ದರೂ ಅಂತರ ಮಾತ್ರ ಬಹಳ ಕಡಿಮೆ ಇತ್ತು. ಭಟ್ ಅವರು ಒಟ್ಟು 58,920 ಮತ್ತು ಪ್ರಮೋದ್ 56441 ಮತಗಳನ್ನು ಗಳಿಸಿದ್ದರು. ಅಂತರ ಕೇವಲ 2479 ಆಗಿತ್ತು.
ಆದ್ದರಿಂದ ಮುಂದಿನ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಪ್ರಮೋದ್ ಅವರದ್ದಾಗಿದೆ. ಇತ್ತೀಚೆಗೆ ನಡೆದ ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಜನರು ಗೆಲ್ಲಿಸಿದ ನಂತರ ಅವರ ವಿಶ್ವಾಸ ಇಮ್ಮಡಿಯಾಗಿದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.
ಚುನಾವಣೆಗಾಗಿ ಅಲ್ಲ
ಚುನಾವಣೆಗೆ ತಯಾರಿ ಮಾಡುತ್ತಿದ್ದೀರಾ, ಟಿಕೆಟ್ ಆಕಾಂಕ್ಷಿಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಮೋದ್ `ಜನರಿಗೆ ನೀರು ಕೊಡುತ್ತಿರುವುದು ಅಥವಾ ನೊಂದವರಿಗೆ ಸಹಾಯ ಮಾಡುತ್ತಿರುವುದು ಚುನಾವಣೆಯ ಉದ್ದೇಶದಿಂದಲ್ಲ. ಇದೊಂದು ಸೇವೆಯಷ್ಟೇ, ನನ್ನ ತಂದೆಯವರ ಕಾಲದಿಂದಲೂ ಈ ಜನಸೇವೆ ನಡೆದಿದ್ದು ಈಗ ಮುಂದುವರೆಯುತ್ತಿದೆ~ ಎಂದರು.
`ಟಿಕೆಟ್ ಆಕಾಂಕ್ಷಿ ಎಂದು ಹೇಳಲು ಇಚ್ಛಿಸುವುದಿಲ್ಲ. ಪಕ್ಷ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸೇರಿ ಅಭ್ಯರ್ಥಿ ಯಾರು ಎಂದು ನಿರ್ಧರಿಸುತ್ತಾರೆ~ ಎಂದು ಅವರು ಪ್ರತಿಕ್ರಿಯೆ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.