ಭಾನುವಾರ, ಜೂನ್ 20, 2021
28 °C

ಉಡುಪಿ: ಚೊಚ್ಚಲ ಚುನಾವಣೆಯಲ್ಲೇ ಜಾಣ್ಮೆಯ ಕುರುಹು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ:ಎರಡನೇ ಲೋಕಸಭಾ ಮಹಾ ಚುನಾವಣೆ ವೇಳೆಗೆ (1957) ಉಡುಪಿ ಲೋಕಸಭಾ ಕ್ಷೇತ್ರ ಉದಯಿಸಿತ್ತು. ಇಲ್ಲಿನ ಮತದಾರರು ಜಾಣ್ಮೆಯ ನಿಲುವು ತೆಗೆದುಕೊಳ್ಳುತ್ತಾರೆ ಎಂಬುದು ಉಡುಪಿಯು ಸ್ವತಂತ್ರ ಕ್ಷೇತ್ರವಾದ ಬಳಿಕ ನಡೆದ ಚೊಚ್ಚಲ ಚುನಾವಣೆಯಲ್ಲೇ ಸಾಬೀತಾಗಿತ್ತು.ಮಂಗಳೂರಿನ ಬಂಟ್ವಾಳ, ಸುರತ್ಕಲ್‌, ಮೂಲ್ಕಿ– ಮೂಡುಬಿದಿರೆ ಹಾಗೂ ಉಡುಪಿ ಜಿಲ್ಲೆಯ ಕಾಪು, ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು ಕ್ಷೇತ್ರಗಳು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದವು. ಒಟ್ಟಾರೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರದೇಶಗಳನ್ನೇ ಒಟ್ಟುಗೂಡಿಸಿ ಉಡುಪಿ ಕ್ಷೇತ್ರ ರಚಿಸಲಾಗಿತ್ತು.ಈ ಕ್ಷೇತ್ರದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ ಯು. ಶ್ರೀನಿವಾಸ ಮಲ್ಯ ಮತ್ತು ಪ್ರಜಾ ಸೋಷಿಯಲಿಸ್ಟ್‌ ಪಕ್ಷದ ಡಿ. ಮೋಹನ್‌ ರಾವ್‌ ಕಣದಲ್ಲಿದ್ದರು. ಶ್ರೀನಿವಾಸ ಮಲ್ಯ ಅವರು 29,303 ಮತಗಳ ಅಂತರದಿಂದ ಮೋಹನ್ ರಾವ್‌ ಅವರನ್ನು ಮಣಿಸಿದ್ದರು. ಕ್ಷೇತ್ರದ ಅಂದಿನ ಮತದಾರರ ಸಂಖ್ಯೆ 4,12,748. ಇವರಲ್ಲಿ 2,16,205 ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು. ಮಲ್ಯ ಅವರು 1,22, 754 ಮತ್ತು ಮೋಹನ್‌ ಅವರು 93,451 ಮತ ಪಡೆದಿದ್ದರು. ಕ್ರಮವಾಗಿ ಶೇ 56.78 ಮತ್ತು ಮೋಹನ್‌ ರಾವ್‌ ಅವರು 43.22ರಷ್ಟು ಮತ ಗಳಿಸಿದ್ದರು. ಕಾಂಗ್ರೆಸ್‌ನಂತಹ ದೈತ್ಯ ಪಕ್ಷಕ್ಕೆ ಪ್ರಜಾ ಸೋಷಿಯಲಿಸ್ಟ್ ಪಕ್ಷ ಅತ್ಯುತ್ತಮ ಸ್ಪರ್ಧೆ ನೀಡಿದ್ದನ್ನು ಗಮನಿಸಬಹುದು. ಮೊದಲ ಚುನಾವಣೆಯೇ ಭಾರಿ ಪೈಪೋಟಿಯಿಂದ ಕೂಡಿದ್ದು ವಿಶೇಷತೆಯಾಗಿದೆ. ಉಡುಪಿ ಕ್ಷೇತ್ರದ ಜನರು ಯೋಚಿಸಿ ಮತ ಚಲಾವಣೆ ಮಾಡುತ್ತಿದ್ದರು ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ.ಮಲ್ಯ ಅವರಿಗೆ ಇದು ಎರಡನೇ ಗೆಲುವಾಗಿತ್ತು. 1952ರ ಮೊದಲ ಮಹಾ ಚುನಾವಣೆಯಲ್ಲಿ ಅವರು ದಕ್ಷಿಣ ಕನ್ನಡ ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿ ಗೆಲವು ಸಾಧಿಸಿದ್ದರು.‘ಆ ಕಾಲದಲ್ಲಿ ರಾಜಕೀಯ ನೋಡಿದವರು ಮತ್ತು ಸಕ್ರಿಯರಾಗಿದ್ದವರಲ್ಲಿ ಕುಳಿತು ಮಾತನಾಡುವಾಗ ಅವರು ಕೆಲವು ವಿಷಯಗಳನ್ನು ಹೇಳುತ್ತಿದ್ದರು. ಈಗಿನ ಹಾಗೆ ಆಗೆಲ್ಲ ಅಬ್ಬರದ ಪ್ರಚಾರ ಇರಲಿಲ್ಲ. ಮನೆ ಮನೆಗೆ ಭೇಟಿ ನೀಡುವುದು, ಅಲ್ಲಲ್ಲಿ ಜನರನ್ನು ಕೂಡಿಸಿ ಸಭೆ ನಡೆಸುವುದು ಸಾಮಾನ್ಯವಾಗಿತ್ತು. ಈಗಿನ ಹಾಗೆ ಪಕ್ಷಗಳ ಕಾರ್ಯಕರ್ತರ ದಂಡು ಇರುತ್ತಿರಲಿಲ್ಲ. ಬ್ರಿಟೀಷರ ಆಡಳಿತ ಅವಧಿಯಲ್ಲಿದ್ದ ಪಟೇಲರೇ ತಮ್ಮ ವ್ಯಾಪ್ತಿಯಲ್ಲಿ ಬೇಕಾದ ಪಕ್ಷಕ್ಕೆ ಪ್ರಚಾರ ಕಾರ್ಯ ಮಾಡಿಸುತ್ತಿದ್ದರು. ಭಿತ್ತಿಪತ್ರ ನೀಡಿ ಅಂಟಿಸಲು ಹೇಳುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಬಿ. ನರಸಿಂಹಮೂರ್ತಿ.‘80ರ ದಶಕದವರೆಗೂ ಜನ ಮತ್ತು ಕಾರ್ಯಕರ್ತರೇ ಅಭ್ಯರ್ಥಿಗೆ ಹಣ ಹೊಂದಿಸಿ ಕೊಡುವ ಪದ್ಧತಿ ಇತ್ತು. ಬಹುಶಃ ಅದಕ್ಕೂ ಹಿಂದೆಯೂ ಇಂತಹುದೇ ಪದ್ಧತಿ ಇತ್ತು ಎಂದು ಕೇಳಿದ್ದೇವೆ’ ಎಂದು ಅವರು ಹೇಳಿದರು.‘ಜನರು ಮತ್ತು ಪಕ್ಷದ ಕಾರ್ಯಕರ್ತರಿಗೆ ನಾಯಕನ ಬಗ್ಗೆ ನಂಬಿಕೆ ಇದ್ದ ಕಾಲವದು. ಜನರಂತೂ ಪ್ರತಿನಿಧಿಗಳ ಮೇಲೆ ಅಪಾರ ವಿಶ್ವಾಸ ಹೊಂದಿದ್ದರು. ಪಕ್ಷದ ಪರವಾಗಿ ಕಾರ್ಯಕರ್ತರು ಮನೆ ಮನೆ ಭೇಟಿ ನೀಡಿ ಪ್ರಚಾರ ಮಾಡುತ್ತಿದ್ದರು. ಅಲ್ಲಲ್ಲಿ ಸಭೆಗಳನ್ನೂ ನಡೆಸುತ್ತಿದ್ದರು’ ಎನ್ನುತ್ತಾರೆ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್‌.ಎಲ್‌. ಡಯಾಸ್‌.1957ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದ ಮತದಾರರ ಸಂಖ್ಯೆ 4,12,748

ಚುನಾವಣೆಯಲ್ಲಿ ಚಲಾವಣೆಯಾದ ಮತ 2,16,205

ಶೇಕಡವಾರು  52,38

ಅಭ್ಯರ್ಥಿಗಳು     ಪಕ್ಷ  ಪಡೆದ ಮತ  ಶೇಕಡವಾರು

ಯು. ಶ್ರೀನಿವಾಸ ಮಲ್ಯ   ಐಎನ್‌ಸಿ 1,22,754  56.78

ಡಿ. ಮೋಹನ್‌ ರಾವ್‌   ಪಿಎಸ್‌ಪಿ 93,451  43.22

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.