ಉಡುಪಿ ಜಿ.ಪಂ: ಶಂಕರ ಪೂಜಾರಿ ಅಧ್ಯಕ್ಷ, ಜ್ಯೋತಿ ಉಪಾಧ್ಯಕ್ಷೆ

7

ಉಡುಪಿ ಜಿ.ಪಂ: ಶಂಕರ ಪೂಜಾರಿ ಅಧ್ಯಕ್ಷ, ಜ್ಯೋತಿ ಉಪಾಧ್ಯಕ್ಷೆ

Published:
Updated:

ಉಡುಪಿ: ಜಿಲ್ಲಾ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಪು ಜಿ.ಪಂ.ಕ್ಷೇತ್ರದ ಸದಸ್ಯ ಕಟಪಾಡಿ ಶಂಕರ ಪೂಜಾರಿ, ಉಪಾಧ್ಯಕ್ಷರಾಗಿ ಮಂದಾರ್ತಿ ಕ್ಷೇತ್ರದ ಜ್ಯೋತಿ ಎಸ್.ಶೆಟ್ಟಿ ಬುಧವಾರ ಆಯ್ಕೆಯಾದರು. ಇದರೊಂದಿಗೆ ಬಿಜೆಪಿ ಮೊದಲ ಬಾರಿ ಜಿ.ಪಂ. ಆಡಳಿತದ ಚುಕ್ಕಾಣಿ ಹಿಡಿದಂತಾಗಿದೆ.ಇಲ್ಲಿನ ಜಿ.ಪಂ. ಸಭಾಂಗಣದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೆ.ಶಂಕರ ಪೂಜಾರಿ ಎರಡು ನಾಮಪತ್ರ ಸಲ್ಲಿಸಿದ್ದರು. ಒಂದರಲ್ಲಿ ಜಿ.ಪಂ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಆಗಿದ್ದ ಹಿರಿಯಡಕ ಕ್ಷೇತ್ರದ ಉಪೇಂದ್ರ ನಾಯಕ್ ಹಾಗೂ ಇನ್ನೊಂದರಲ್ಲಿ ಬಾಬು ಶೆಟ್ಟಿ ಅವರು ಶಂಕರ ಪೂಜಾರಿ ಹೆಸರು ಸೂಚಿಸಿದ್ದರು.ಕಾಂಗ್ರೆಸ್‌ನಿಂದ ದಿವಾಕರ ಕುಂದರ್ ಸಲ್ಲಿಸಿದ್ದು, ಮಂಜುನಾಥ್ ಪೂಜಾರಿ ಹಾಗೂ ಸುಪ್ರೀತಾ ಶೆಟ್ಟಿ ಅವರ ಹೆಸರನ್ನು ಸೂಚಿಸಿದ್ದರು.ಬಿಜೆಪಿಯ ಎಲ್ಲ 16 ಮಂದಿ ಸದಸ್ಯರು ಕೈ ಎತ್ತುವ ಮೂಲಕ ಶಂಕರ ಪೂಜಾರಿ ಅವರ ಆಯ್ಕೆಯನ್ನು ಬೆಂಬಲಿಸಿ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕೇವಲ 9 ಮತ ಗಳಿಸಿದ ಕಾರಣ, ಚುನಾವಣಾಧಿಕಾರಿಯಾಗಿದ್ದ ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಯಂತಿ ಅವರು ಶಂಕರ ಪೂಜಾರಿ ಜಿಂ.ಪಂ. ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.2012ರ ಅಕ್ಟೋಬರ್ 8ರವರೆಗೆ ಅಧಿಕಾರದಲ್ಲಿರುತ್ತಾರೆ ಎಂದು ಅವರು ತಿಳಿಸಿದರು.ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ಎಸ್.ಶೆಟ್ಟಿ ಅವರ ಹೆಸರನ್ನು ಸವಿತಾ ಎಸ್.ಕೋಟ್ಯಾನ್,  ಸುನೀತಾ ರಾಜಾರಾಮ್ ಸೂಚಿಸಿದ್ದರು. ಕಾಂಗ್ರೆಸ್‌ನ ಮಲ್ಲಿಕಾ ಬಾಲಕೃಷ್ಣ ಅವರ ಹೆಸರನ್ನು ಅನಂತ ಮೋವಾಡಿ ಹಾಗೂ ಸುಪ್ರೀತಾ ದೀಪಕ್ ಶೆಟ್ಟಿ ಸೂಚಿಸಿದ್ದರು. 16 ಮತ ಪಡೆದ ಬಿಜೆಪಿಯ ಜ್ಯೋತಿ ಎಸ್.ಶೆಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.ಆತಂಕ ದೂರ: ಉಪೇಂದ್ರ ನಾಯಕ್ ಅವರಿಗೆ ಅಧ್ಯಕ್ಷ ಸ್ಥಾನ ನಿಡಬೇಕು ಎಂದು ಆಗ್ರಹಿಸಿ ಅವರ ಬೆಂಬಲಿಗರು ಬೆಳಿಗ್ಗೆ ಪಕ್ಷದ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ಅಧ್ಯಕ್ಷರ ಆಯ್ಕೆ ಕುತೂಹಲಕ್ಕೆ ಕಾರಣವಾಗಿತ್ತು. ಬಿಜೆಪಿಯೊಳಗೆ ಭಿನ್ನಮತ ಮತದಾನದ ವೇಳೆ ವ್ಯಕ್ತವಾಗಬಹುದು ಎಂಬ ಆತಂಕವೂ ಪಕ್ಷದ ವಲಯದಲ್ಲಿತ್ತು. ಶಂಕರ ಪೂಜಾರಿ ಅವರ ಆಯ್ಕೆ ಖಚಿತವಾಗುತ್ತಿದ್ದಂತೆ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸಭಾಂಗಣ ಪ್ರವೇಶಿಸಿ ಅಭಿನಂದಿಸಿದರು.ಬಳಿಕ ನಡೆದ ಅಭಿನಂದನಾ ಸಭೆಯಲ್ಲಿ ಶಾಸಕ ಲಾಲಾಜಿ ಆರ್.ಮೆಂಡನ್, ರಘುಪತಿ ಭಟ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಭಾಗವಹಿಸಿದರುಬಹುಗ್ರಾಮ ಕುಡಿಯುವ ನೀರು: ಕನಸಿನ ಯೋಜನೆ

‘ಬಹುಗ್ರಾಮ ಕುಡಿಯುವ ನೀರು ಪೂರೈಕೆ, ಗ್ರಾಮೀಣ ರಸ್ತೆ ಅಭಿವೃದ್ಧಿ ಹಾಗೂ ಗ್ರಾಮ ನೈರ್ಮಲ್ಯ ಆದ್ಯತೆಯ ಯೋಜನೆಗಳು’ ಎಂದು ಶಂಕರ ಪೂಜಾರಿ ಸುದ್ದಿಗಾರರಿಗೆ ತಿಳಿಸಿದರು.ಜಿ.ಪಂ.ಗೆ ಅಧಿಕಾರ ಇಲ್ಲ ಎಂಬ ಕೂಗು ಸದ್ಯದಲ್ಲೇ ಕೊನೆಗೊಳ್ಳಲಿದೆ. ಎ.ಜಿ.ಕೊಡ್ಗಿ ನೇತೃತ್ವದ 3ನೇ ಹಣಕಾಸು ಆಯೋಗದ ವರದಿಯನ್ನು ಸರ್ಕಾರ ಸ್ವೀಕರಿಸಿದ್ದು, ಅದನ್ನು ಜಾರಿಗೊಳಿಸುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಏಪ್ರಿಲ್‌ನಿಂದ ಅದು ಜಾರಿಗೆ ಬರುವ ಭರವಸೆ ಇದೆ. ಅದರಿಂದ ಜಿ.ಪಂ. ಅಭಿವೃದ್ಧಿ ಸುಗಮ ಆಗಬಹುದು ಎಂಬ ನಿರೀಕ್ಷೆ ಇದೆ’ ಎಂದರು.‘ಜಿ.ಪಂ. ತೀರ್ಮಾನ ಪಾರದರ್ಶಕವಾಗಿರುತ್ತವೆ ಮತ್ತು ಸಾಮೂಹಿಕ ನೆಲೆಯಲ್ಲಿರುತ್ತವೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ಪಡೆದು ಪಕ್ಷಭೇದವಿಲ್ಲದೆ ಕಾರ್ಯನಿರ್ವಹಿಸುತ್ತೇನೆ.ಪಕ್ಷದೊಳಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಉಪೇಂದ್ರ ನಾಯಕ್ ಅವರು ಬಿಜೆಪಿಯ ಎಲ್ಲ ಸದಸ್ಯರಿಗೆ ನಾಯಕರಾಗಿರುತ್ತಾರೆ. ಎಲ್ಲರ ಸಹಕಾರದಿಂದ ಉಡುಪಿಯನ್ನು ಮಾದರಿ ಜಿಲ್ಲಾ ಪಂಚಾಯಿತಿಯನ್ನಾಗಿ ರೂಪಿಸುತ್ತೇನೆ’ ಎಂದು ತಿಳಿಸಿದರು.ಉಪಾಧ್ಯಕ್ಷೆ ಜ್ಯೋತಿ ಎಸ್. ಶೆಟ್ಟಿ ಮಾತನಾಡಿ, ‘ಗ್ರಾಮೀಣ ಅಭಿವೃದ್ಧಿಗೆ ಹಾಗೂ ಜನರ ಸಂಕಷ್ಟ ನಿವಾರಿಸಲು ಪಕ್ಷದ ವರಿಷ್ಠರ ಸಲಹೆ ಪಡೆದು ಶ್ರಮವಹಿಸಿ ಕೆಲಸ ಮಾಡುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry