ಭಾನುವಾರ, ಫೆಬ್ರವರಿ 28, 2021
23 °C

ಉಡುಪಿ ಜಿಲ್ಲೆ: ಮುಂಗಾರು ಚುರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ ಜಿಲ್ಲೆ: ಮುಂಗಾರು ಚುರುಕು

ಉಡುಪಿ: ಒಂದು ವಾರದ ಬಳಿಕ ಮತ್ತೆ ಮುಂಗಾರು ಮಳೆ ತನ್ನ ಲಯ ಕಂಡುಕೊಂಡಿದ್ದು ಜಿಲ್ಲೆಯಾದ್ಯಂತ ಮಂಗಳವಾರ ಮಳೆ ಚುರುಕುಗೊಂಡಿದೆ. ಬೆಳಿಗ್ಗೆಯಿಂದಲೇ ದಟ್ಟ ಮೋಡಕವಿದ ವಾತಾವರಣವಿದ್ದು ಧಾರಾಕಾರ ಮಳೆ ಸುರಿದಿದೆ. ಹಾನಿಯಾದ ಬಗ್ಗೆ ವರದಿಯಾಗಿಲ್ಲ.ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 43 ಮಿ.ಮೀ. ಮಳೆಯಾಗಿದ್ದು ಉಡುಪಿ 32.4 ಮಿ.ಮೀ., ಕುಂದಾಪುರ 40.8 ಮಿ.ಮೀ. ಹಾಗೂ ಕಾರ್ಕಳ 54.2 ಮಿ.ಮೀ. ಮಳೆಯಾಗಿದೆ. ಕೆಲವೆಡೆ ಮಳೆಯೊಂದಿಗೆ ಗಾಳಿಯೂ ರಭಸವಾಗಿತ್ತು. ಧಾರಾಕಾರ ಮಳೆಯಿಂದಾಗಿ ಬಹಳಷ್ಟು ಪ್ರದೇಶಗಳಲ್ಲಿ ನೀರು ತುಂಬಿ ಹರಿದಿದೆ. ಕೆರೆಕೊಳ್ಳಗಳು ತುಂಬಿಕೊಳ್ಳುತ್ತಿವೆ. ಕಲ್ಸಂಕ ತೋಡು ಮಳೆ ನೀರಿನಿಂದಾಗಿ ತುಂಬಿಕೊಂಡಿದ್ದು ಕೆಸರು ನೀರಿನಿಂದ ದೊಡ್ಡ ಹೊಳೆಯಂತಾಗಿದೆ. ಬಹಳಷ್ಟು ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ.ಗರಿಗೆದರಿದ ಕೃಷಿ ಚಟುವಟಿಕೆ: ಕರಾವಳಿ ಭಾಗದಲ್ಲಿ ಕೃಷಿ ಚಟುವಟಿಕೆ ಪ್ರಾರಂಭವಾಗಿದೆ. ಆದರೆ ಸರಿಯಾದ ಮಳೆಯಿಲ್ಲದೇ ನೇಜಿಕಾರ್ಯಕ್ಕೆ ಅಡಚಣೆಯಾಗಿತ್ತು. ಈಗ ಪ್ರಾರಂಭವಾಗಿರುವ ಮಳೆಗೆ ಕೃಷಿ ಚಟುವಟಿಕೆ ಇನ್ನಷ್ಟು ವೇಗವನ್ನು ಕಂಡುಕೊಂಡಿದೆ.ಬೈಂದೂರು: ಬಿರುಸುಗೊಂಡ ಮಳೆ

ಬೈಂದೂರು: ಬೈಂದೂರು ಪರಿಸರದಲ್ಲಿ  ಮಳೆ ಬಿರುಸುಗೊಂಡಿದೆ. ಸೋಮವಾರ ರಾತ್ರಿ ತೀವ್ರಗೊಂಡ ಮಳೆ ಮಂಗಳವಾರ ಹಗಲಿಡೀ ಸುರಿದಿದೆ.ಕೆಲವು ರೈತರು ನಾಟಿಕಾರ್ಯದಲ್ಲಿ ತೊಡಗಿಕೊಂಡಿದ್ದು, ಜೂನ್ ಆರಂಭದ ಮಳೆಗೆ ಬಿತ್ತನೆ ಮಾಡಿದ ಗದ್ದೆಗಳ ಬೀಜಕ್ಕೆ ಒಂದೇ ಬಾರಿಗೆ ಬಿದ್ದ ಮಳೆಯಿಂದ ತೊಂದರೆ ಆಗಿದೆ.ಬ್ರಹ್ಮಾವರ: ಜನಜೀವನ ಅಸ್ತವ್ಯಸ್ತ

ಬ್ರಹ್ಮಾವರ:
ಪರಿಸರದಲ್ಲಿ  ಮುಂಜಾನೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ಅಲ್ಲಲ್ಲಿ ಚರಂಡಿಯ ನೀರು ರಸ್ತೆ ಮೇಲೆ ಹರಿದು ಸಂಚಾರ ಅಸ್ತವ್ಯಸ್ತಗೊಂಡಿತು.

ಜನಜೀವನವೂ ಕೆಲಕಾಲ ಅಸ್ತವ್ಯಸ್ತಗೊಂಡಿತ್ತು.ಚಾಂತಾರಿನಲ್ಲಿ ರೈಲ್ವೆ ಮೇಲ್ಸೇತುವೆ ಬಳಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿಲ್ಲದೆ ಇರುವುದರಿಂದ ರಸ್ತೆಯಲ್ಲಿ ಸುಮಾರು 2 ಅಡಿ ನೀರು ನಿಂತು ಬ್ರಹ್ಮಾವರ- ಹೆಬ್ರಿ ರಾಜ್ಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಅಧಿಕ ಕಾಲ ವಾಹನ ಸಂಚಾರದಲ್ಲಿ  ವ್ಯತ್ಯಯವಾಯಿತು.ನಗರದಲ್ಲಿ ಚತುಷ್ಪಥ ಕಾಮಗಾರಿ ಕಾರಣ ಕೆಲವೆಡೆ ಚರಂಡಿ ಇಲ್ಲದೇ ಹೆದ್ದಾರಿಯ ಮೇಲೆ ನೀರು ನಿಂತು ದ್ವಿಚಕ್ರ ವಾಹನ ಸವಾರರು ಪರದಾಡುವಂತಾಗಿತ್ತು. ಉಪ್ಪೂರು ಬಸ್‌ನಿಲ್ದಾಣದ  ಅನೇಕ ಮನೆಗಳಿಗೆ ಮಂಗಳವಾರ ನೀರು ನುಗ್ಗಿತ್ತು.  ಸಾಸ್ತಾನ, ಸಾಲಿಗ್ರಾಮ, ಬಾರ್ಕೂರಿನ ಕೆಲ ಪ್ರದೇಶಗಳಲ್ಲೂ ಭಾರಿ ಮಳೆ ಆಗಿದೆ.ಹೆಬ್ರಿ ಪರಿಸರ: ಜನಸಂಚಾರ ವಿರಳ

ಹೆಬ್ರಿ:
ಹೆಬ್ರಿ ಮತ್ತು ಸುತ್ತಮುತ್ತಲ ಪರಿಸರದಲ್ಲಿ  ಮುಂಜಾನೆಯಿಂದಲೇ ಭಾರಿ ಮಳೆಯಾಗಿದೆ.

ಬೆಳಿಗ್ಗಿನಿಂದಲೇ ಮೋಡ ಕವಿದ ವಾತಾವರಣವಿದ್ದು ಎಡೆಬಿಡದೆ ಮಳೆ ಸುರಿಯಿತು. ಹೆಬ್ರಿ ಪೇಟೆಯಲ್ಲಿ ಮಧ್ಯಾಹ್ನ ವೇಳೆ ಜನ ಸಂಚಾರ ವಿರಳವಾಗಿತ್ತು.ನಾಡ್ಪಾಲು, ಕಬ್ಬಿನಾಲೆ ಸೇರಿದಂತೆ ಅರಣ್ಯ ಪರಿಸರದ ಸುತ್ತಮುತ್ತಲಿ ಊರುಗಳಲ್ಲಿ ಸೋಮವಾರ ರಾತ್ರಿಯಿಂದಲೇ ಭಾರಿ ಮಳೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.