ಶುಕ್ರವಾರ, ಜೂನ್ 18, 2021
25 °C

ಉಡುಪಿ ನಗರಸಭೆ: ‘ಉದ್ಯಮ ಪರವಾನಗಿ ಶುಲ್ಕ ಹೆಚ್ಚಳ ಇಲ್ಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ‘ಉದ್ಯಮ ಪರವಾನಗಿ ನವೀಕರಣ ಶುಲ್ಕವನ್ನು ಹೆಚ್ಚಳ ಮಾಡುವುದಿಲ್ಲ, ಪರಿಷ್ಕ­ರಣೆಗೂ ಮೊದಲಿದ್ದ ಶುಲ್ಕವನ್ನೇ ಮುಂದು­ವರಿಸಲಾಗುತ್ತದೆ’ ಎಂದು ನಗರಸಭೆ ಅಧ್ಯಕ್ಷ ಪಿ. ಯುವರಾಜ ಹೇಳಿದರು.ನಗರಸಭೆಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಆಡಳಿತ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಪರವಾನಗಿ ನವೀಕರಣ ಶುಲ್ಕ ಹೆಚ್ಚಳ ಮಾಡಲಾಗಿದೆ. ಹೊಸ ಶುಲ್ಕಕ್ಕೆ ಬದಲಾಗಿ ಹಳೆಯ ಶುಲ್ಕವನ್ನೇ ನಾವು ಮುಂದುವರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.ವಿರೋಧ ಪಕ್ಷದ ನಾಯಕ ಡಾ. ಎಂ.ಆರ್‌. ಪೈ ಅವರು ಶುಲ್ಕ ಹೆಚ್ಚಳದ ಬಗ್ಗೆ ಪ್ರಶ್ನೆ ಕೇಳಿದರು. ಕಾಯ್ದೆಯ ಪ್ರಕಾರ 500 ರೂಪಾಯಿಗಿಂತ ಹೆಚ್ಚಳ ಮಾಡುವಂತಿಲ್ಲ, ಅಲ್ಲದೆ ಹೆಚ್ಚಿಸುವ ಅಧಿಕಾರ ಸಾಮಾನ್ಯ ಸಭೆಗೆ ಇಲ್ಲ ಎಂದರು. ಹೆಚ್ಚುವರಿ ಕಾರ್ಯಸೂಚಿ­ಯಲ್ಲಿ ಈ ವಿಷಯವನ್ನು ಸೇರಿಸಿರುವ ಬಗ್ಗೆ ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಸದಸ್ಯ ರಮೇಶ್‌ ಕಾಂಚನ್‌ ಮಾತ­ನಾಡಿ, ಜಿಲ್ಲಾಧಿಕಾರಿ ಹೆಚ್ಚಳ ಮಾಡಿದ್ದಾರೆ. ಇದನ್ನು ಕಾಂಗ್ರೆಸ್‌ ಸಹ ವಿರೋಧಿಸುತ್ತದೆ ಎಂದರು.ಅಧ್ಯಕ್ಷರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ಶುಲ್ಕ ಹೆಚ್ಚಳದಿಂದ ವ್ಯಾಪಾರಿಗಳಿಗೆ ಹೊರೆ­ಯಾಗಿದೆ ಎಂದು ಆಡಳಿತ ಪಕ್ಷದ ವಿರುದ್ಧ ಬಿಜೆಪಿ ಸದಸ್ಯರು ಭಿತ್ತಿಪತ್ರ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾರ್ಯ­ಸೂಚಿ ಪುಸ್ತಕದಲ್ಲಿ ತಪ್ಪುಗಳಿರುವುದಕ್ಕೂ ಆಕ್ಷೇಪ ವ್ಯಕ್ತಪಡಿಸಿದರು. ಕಾರ್ಯಸೂಚಿ­ಯಲ್ಲಿರುವ ವಿಷಯಗಳನ್ನು ಓದಲು ಸದಸ್ಯರು ಅಡ್ಡಿಪಡಿಸಿದ ಕಾರಣ ಸಭೆ ಗೊಂದಲದ ಗೂಡಾಯಿತು. ಆದ್ದರಿಂದ ಸಭೆಯನ್ನು ಅರ್ಧಕ್ಕೇ ನಿಲ್ಲಿಸಿ ಮುಂದೂಡ­ಲಾಯಿತು.ಇದಕ್ಕೂ ಮೊದಲು ಮಾತನಾಡಿದ ಸದಸ್ಯ ವಿಜಯ ಮಂಚಿ ಇಂದ್ರಾಳಿ ರುದ್ರಭೂಮಿ 5 ವರ್ಷಗಳಿಂದ ಸ್ಥಗಿತ ಆಗಿರುವ ಬಗ್ಗೆ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು, ಅದನ್ನು ಪುನರ್‌ಬಳಕೆ ಮಾಡುವ ಬಗ್ಗೆ ಸಮಿತಿ ರಚಿಸಲಾಗುತ್ತದೆ ಎಂದರು. ಮೂರು ವರ್ಷಗಳ ವರೆಗೆ ಯಾವುದೇ ತೆರಿಗೆ ಏರಿಸುವುದಿಲ್ಲ ಎಂದು ಪಕ್ಷದ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. ಅದರಂತೆ ನಡೆದುಕೊಳ್ಳುತ್ತೇವೆ ಎಂದು ಶಾಸಕ ಪ್ರಮೋದ್‌ ಮಧ್ವರಾಜ್‌ ಹೇಳಿದರು.ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದ ನಗರಸಭೆಯ ಉದ್ಯೋಗಿ ಶಾಮರಾಯ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು. ಉಪಾಧ್ಯಕ್ಷೆ ಅಮೃತಾ ಕೃಷ್ಣಮೂರ್ತಿ, ಪೌರಾಯುಕ್ತ ಶ್ರೀಕಾಂತ್‌ ರಾವ್‌ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.