ಉಡುಪಿ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

7

ಉಡುಪಿ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

Published:
Updated:
ಉಡುಪಿ: ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಉಡುಪಿ: ಪ್ರಬಲ ಲೋಕಪಾಲ ಮಸೂದೆಗಾಗಿ ಆಗ್ರಹಿಸಿ ರಾಮಲೀಲಾ ಮೈದಾನದಲ್ಲಿ ಅಣ್ಣಾ ಹಜಾರೆ ನಡೆಸುತ್ತಿರುವ ನಿರಶನ ಬೆಂಬಲಿಸಿ ನಗರದಲ್ಲಿ ಮಂಗಳವಾರ ಮತ್ತೆ ಕೆಲವು ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಜೆಡಿಎಸ್, ಸಿಪಿಐ/ಸಿಪಿಎಂ ಪಕ್ಷಗಳು ಕ್ಲಾಕ್ ಟವರ್ ಎದುರುಗಡೆ ಪ್ರತಿಭಟನೆ ನಡೆಸಿದರೆ, ಜಿಲ್ಲಾ ವರ್ತಕರ ಸಂಘ ಹಾಗೂ ಉಡುಪಿ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆಯೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ.  ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಒಟ್ಟಾಗಿ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಆರೋಪಿಸಿದರು. ಅಣ್ಣಾ ಅವರನ್ನು ಬೆಂಬಲಿಸಿ ದೇಶವ್ಯಾಪಿ ಹೋರಾಟ ನಡೆಯುತ್ತಿದ್ದರೂ ಸರ್ಕಾರ ಇನ್ನೂ ನಿದ್ದೆಯಲ್ಲಿದೆ. ನಮ್ಮನ್ನು ಆಳುವ ಸರ್ಕಾರಗಳು ಹೀಗೆ ಭ್ರಷ್ಟಾಚಾರ ಮುಂದುವರೆಸುತ್ತಲೇ ಹೋದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ. ಜನ ಲೋಕಪಾಲ ಮಸೂದೆ ಜಾರಿಗೊಳಿಸದೇ ಇದ್ದಲ್ಲಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.ಸಿಐಟಿಯು ಮುಖಂಡರಾದ ವಿಶ್ವನಾಥ್ ರೈ, ವಿಶ್ವನಾಥ ಶೆಟ್ಟಿ ಹಾಗೂ ಜೆಡಿಎಸ್ ಮುಖಂಡರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಂದ ಪ್ರತಿಭಟನೆ: ನಗರದ ವಿದ್ಯೋದಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ವಿವಿಧ ಭಿತ್ತಿ ಫಲಕ ಎತ್ತಿಹಿಡಿದು ಭ್ರಷ್ಟಾಚಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನಾ ಜಾಥಾ ನಡೆಸಿದರು.ಜಿಲ್ಲಾ ವರ್ತಕರ ಸಂಘ ಮೆರವಣಿಗೆಯೊಂದಿಗೆ ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ವಿದ್ಯಾರ್ಥಿಗಳಿಗೆ ಸಾಥ್ ನೀಡಿದರು. ಬಳಿಕ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry