ಭಾನುವಾರ, ಏಪ್ರಿಲ್ 18, 2021
33 °C

ಉಡುಪಿ: 817 ಕ್ರಿಯಾ ಯೋಜನೆಗಳಿಗೆ ಮಂಜೂರಾತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ರಾಜ್ಯ ಸರ್ಕಾರ ಉಡುಪಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಜಿಲ್ಲೆಯಲ್ಲಿ 2012-13ನೇ ಸಾಲಿನಲ್ಲಿ ಗ್ರಾಮೀಣ ನೀರು ಸರಬರಾಜು ಯೋಜನೆಗೆ 33.98 ಕೋಟಿ ರೂಪಾಯಿ ವೆಚ್ಚದಲ್ಲಿ 817 ಕ್ರಿಯಾ ಯೋಜನೆಗಳಿಗೆ ಮಂಜೂರಾತಿ ಸಿಕ್ಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿ ಜಿಲ್ಲಾಡಳಿತ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡಿ ಅವರು ಮಾತನಾಡಿದರು.ಈ ವರೆಗೆ 6.54 ಕೋಟಿ ರೂಪಾಯಿ ವಿನಿಯೋಗಿಸಿ 70 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಹೆಚ್ಚುವರಿ ಯಾಗಿ ತುರ್ತು ಕುಡಿಯುವ ನೀರಿನ ಕಾಮಗಾರಿಗಳಿಗೆ 4 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದು 161 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ 2012-13ನೇ ಸಾಲಿನಲ್ಲಿ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ಧಿ ಯೋಜನೆಯಡಿ 5.24 ಕೋಟಿ ರೂಪಾಯಿ ನಿಗದಿಯಾಗಿದೆ. ಒಟ್ಟು 191 ನಿರ್ವಹಣಾ ಕಾಮಗಾರಿಗಳಿಗೆ ಮಂಜೂರಾತಿ ನೀಡಲಾಗಿದೆ. 13ನೇ ಹಣಕಾಸು ಯೋಜನೆಯ ರಸ್ತೆ ನಿರ್ವಹಣಾ ವಲಯದಡಿ 6.14 ಕೋಟಿ ರೂಪಾಯಿ ವೆಚ್ಚದಲ್ಲಿ 253 ರಸ್ತೆ ನಿರ್ವಹಣಾ ಯೋಜನೆಗಳಿಗೆ ಕ್ರಿಯಾ ಯೋಜನೆ ಮಂಜೂರಾತಿ ಪಡೆಯಲಾಗಿದೆ. ವಿಶೇಷ ಅನುದಾನವಾಗಿ 38.95 ಕೋಟಿ ರೂಪಾಯಿ ಅನುದಾನ ಸಿಕ್ಕಿದ್ದು 265 ರಸ್ತೆಗಳನ್ನು ಅಭಿವೃದ್ಧಿ ಮಾಡಲಾ ಗುತ್ತದೆ ಎಂದು ಮಾಹಿತಿ ನೀಡಿದರು.ಪಶ್ಚಿಮ ಘಟ್ಟ ಅಭಿವೃದ್ಧಿ ಯೋಜನೆಯಡಿ 3.26 ಕೋಟಿ ರೂಪಾಯಿ ಕೆಲಸಗಳಿಗೆ ಮಂಜೂರಾತಿ ಸಿಕ್ಕಿದೆ. ಅಭಿವೃದ್ಧಿ ಕಾರ್ಯಗಳನ್ನು ಗ್ರಾಮ ಪಂಚಾಯಿತಿ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯಡಿ ಎರಡು ಕೋಟಿ ರೂಪಾಯಿ ಅನುದಾನ ಸಿಕ್ಕಿದ್ದು, 45 ಕಾಲುಸಂಕಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.`ವಿದೇಶಿ ಸಂಸ್ಕೃತಿಯ ಸಮೂಹ ಸನ್ನಿ ತೊಲಗಲಿ~

ಕಾರ್ಕಳ: ನಾವಿಂದು ವಿದೇಶಿ  ಸಂಸ್ಕೃತಿಯ ಸಮೂಹ ಸನ್ನಿಗೆ ಒಳಗಾಗಿ ಕನ್ನಡತನವನ್ನು ಮರೆಯುತ್ತಿದ್ದೇವೆ. ಹೀಗಾಗಿ ವಿದೇಶಿ ಸಂಸ್ಕತಿಯ ವ್ಯಾಮೋಹದ ಪೀಡೆಯನ್ನು ಮೊದಲು ತೊಲಗಿಸಬೇಕಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಕಳ ತಾಲ್ಲೂಕು ಅಧ್ಯಕ್ಷ ಬಿ.ಸಿ.ರಾವ್ ಶಿವಪುರ ಇಲ್ಲಿ ತಿಳಿಸಿದರು.ಇಲ್ಲಿನ ಮಂಜುನಾಥ ಪೈ ಸಾಂಸ್ಕತಿಕ ಸಭಾಭವನದಲ್ಲಿ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನ ಭಾಷಣಕಾರರಾಗಿ ಮಾತ ನಾಡಿದ ಅವರು ಪ್ರತಿ ಮನೆ ಮನೆಗಳಲ್ಲಿ ಕನ್ನಡಿಗರ ಮನಮನಗಳಲ್ಲಿ ರಾಜ್ಯೋ ತ್ಸವ ನಡೆಯಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಮನಃಪೂರ್ವಕ ಪ್ರಯತ್ನ ನಡೆಸಿದಾಗ ರಾಜ್ಯೋತ್ಸವ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರಶ್ಮಿ ಶೆಟ್ಟಿ ಸಮಾರಂಭ ಉದ್ಘಾಟಿಸಿ ಶುಭ ಹಾರೈಸಿದರು. ಅಧ್ಯಕ್ಷತೆ ವಹಿಸಿದ ಶಾಸಕ ಗೋಪಾಲ ಭಂಡಾರಿ ಮಾತನಾಡಿದರು.ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ತರಗತಿಗಳ ಪರೀಕ್ಷೆಯಲ್ಲಿ ಕನ್ನಡದಲ್ಲಿ ಉತ್ತರ ರೆದು ಹೆಚ್ಚು ಅಂಕಗಳಿಸಿದ ಪೂಜಾ ಭಟ್, ರಮ್ಯಾ, ತೇಜಸ್ವಿ, ಅರ್ಪಿತಾ, ಅಶ್ವಿನಿ, ಸರ್ವೋತ್ತಮ, ಅಕ್ಷಿತಾ ನಾಯಕ್, ಶ್ರೀನಿಧಿ, ಸ್ವಾತಿ, ಮನಿಷಾ, ರೆಚಲ್, ಸಂಗೀತಾ,  ವೈಷ್ಣವಿ, ಶರ್ಮಿಳಾ ಗೌತಮಿ, ರಾಜ್ಯಮಟ್ಟದ ಕಲಾಶ್ರೀ ಪ್ರಶಸ್ತಿ ವಿಜೇತೆ ತನುಶ್ರೀ, ಸೌರಭ್, ರಾಜ್ಯ ಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿಪಡೆದ ಲಕ್ಷ್ಮೀಕಾಂತ ಭಟ್, ರಾಷ್ಟ್ರಮಟ್ಟದಲ್ಲಿ  ಭಾಗವಹಿಸಿದ ಚೇತನಾ ವಿಶೇಷ ಶಾಲೆಯ  ಅಭಿಜಿತ್, ಶಮೀರ್, ಸುಜಯ್, ದೀಪಿಕಾ, ಪ್ರೀತಿ ಅವರನ್ನು ಅಭಿನಂದಿಸಲಾಯಿತು. ಬೆಳಿಗ್ಗೆ ಅನಂತಶಯನ ವೃತ್ತದಿಂದ ಗಾಂಧಿಮೈದಾನದ ತನಕ ನಡೆದ ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳಾದ ಕೀಲು ಕುದುರೆ, ಕನ್ನಡ ಭುವನೇಶ್ವರಿ ರಥ, ಸ್ವಾತಂತ್ರ್ಯ ಹೋರಾಟಗಾರರು, ಕಾವೇರಿ ನೀರು, ಜೀವವೈವಿಧ್ಯ, ಅರಣ್ಯ , ಮಕ್ಕಳ ಯಕ್ಷಗಾನ ಮುಂತಾದವು ಗಮನ ಸೆಳೆದವು. ಗಾಂಧಿ ಮೈದಾನದಲ್ಲಿ ತಹಶೀಲ್ದಾರ್ ಎಂ.ಜಗನ್ನಾಥ ರಾವ್ ಧ್ವಜಾರೋಹಣ ನಡೆಸಿದರು. ಶಾಸಕ ಗೋಪಾಲ ಭಂಡಾರಿ, ಸರ್ಕಲ್ ಇನ್ಸ್‌ಪೆಕ್ಟರ್ ವೆಲೆಂಟಿನ್ ಡಿಸೋಜಾ ಹಾಗೂ ತಹಶೀಲ್ದಾರ್ ಪಥ ಸಂಚಲನದ ಗೌರವ ರಕ್ಷೆ ಸ್ವೀಕರಿಸಿದರು. ಪಥ ಸಂಚಲನದಲ್ಲಿ ಕಾರ್ಕಳ ಪೊಲೀಸ್ ಇಲಾಖೆಯ ಸಿಬ್ಬಂದಿ, ಅಗ್ನಿಶಾಮಕ ದಳ, ಗ್ರಹರಕ್ಷಕ ದಳ, ಶಾಲಾ ಕಾಲೇಜುಗಳ ಎನ್‌ಸಿಸಿ, ಸೇವಾದಳ, ಸ್ಕೌಟ್ ಘಟಕದ ಸ್ವಯಂ ಸೇವಕರು ಭಾಗವಹಿಸಿದ್ದರು,

ಪುರಸಭಾಧ್ಯಕ್ಷೆ ಪ್ರತಿಮಾ, ಉಪಾಧ್ಯಕ್ಷೆ ಪ್ರೇಮಾ ಆಚಾರ್ಯ, ಪುರಸಭಾ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಆನಂದ ಬಂಡಿಮಠ, ಜಿಲ್ಲಾ ಪಂಚಾಯಿತಿ ಸದಸ್ಯ ಕೆದಿಂಜೆ ಸುಪ್ರೀತ್ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜೇಂದ್ ಬೇಕಲ್ ಮೊದಲಾದವರು ಸಮಾರಂಭದಲ್ಲಿ ಇದ್ದರು

ತಹಶೀಲ್ದಾರ್ ಜಗನ್ನಾಥ ರಾವ್ ಸ್ವಾಗತಿಸಿದರು. ಶಿಕ್ಷಕ  ಕೆ.ಗಣಪಯ್ಯ, ದೈಹಿಕ ಶಿಕ್ಷಣ ಅಧಿಕಾರಿ ಬಾಬು ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣಾಧಿಕಾರಿ ರವಿಶಂಕರ್ ವಂದಿಸಿದರು. 

                   

ಶಿರ್ವ: ಕನ್ನಡ ರಾಜ್ಯೋತ್ಸವ

ಶಿರ್ವ: ಪರಿಸರ, ನೆಲ, ಜಲ ಹಾಗೂ ಜಾನುವಾರುಗಳನ್ನು ಉಳಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ ಅನಿವಾರ್ಯ ಎಂದು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆಯ ರಾಜ್ಯ ಘಟಕದ ಕಟ್ಟಿಂಗೇರಿ ದೇವದಾಸ ಹೆಬ್ಬಾರ್ ತಿಳಿಸಿದರು.ಶಿರ್ವದ ಭಾರತ ನಿರ್ಮಾಣ ಸ್ವಯಂ ಸೇವಕರ ತಂಡ, ಸಮುದಾಯ ಆರೋಗ್ಯ ಕೇಂದ್ರ, ಲಯನ್ಸ್ ಕ್ಲಬ್ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ    ಗುರುವಾರ ಶಿರ್ವ ಸಾರ್ವಜನಿಕ ಶ್ರೀ ಗಣೇಶೋತ್ಸವ ವೇದಿಕೆ ಬಳಿ ನಡೆದ ಕನ್ನಡ ರಾಜ್ಯೋತ್ಸವ ಮತ್ತು ಪ್ಲಾಸ್ಟಿಕ್ ನಿರ್ಮೂಲನಾ ಜನಜಾಗೃತಿ ಜಾಥಾ ವನ್ನು ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷಾ ಪ್ರೇಮ ಕಡಿಮೆಯಾಗುತ್ತಿರುವ ಈ ಸನ್ನಿವೇಶದಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಪರಿಚಯಿಸಿ, ಅದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ  ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.ಪತ್ರಕರ್ತ ಬಿ.ಪುಂಡಲೀಕ ಮರಾಠೆ ಮಾತನಾಡಿ ಸಮೃದ್ಧ, ಇತಿಹಾಸ, ಸಾಹಿತ್ಯ, ಸಂಸ್ಕೃತಿ ಪರಂಪರೆ ಹೊಂದಿರುವ ಅತ್ಯಧಿಕ ಜ್ಞಾನಪೀಠ ಗೌರವಕ್ಕೆ ಪಾತ್ರವಾದ  ಈ ನಾಡಿನ  ಮಾತೃಭಾಷೆಯನ್ನು ಕರ್ನಾಟಕದಲ್ಲಿ ಹುಡುಕುವ ಸನ್ನಿವೇಶ ನಿರ್ಮಾಣ ಗೊಳ್ಳುತ್ತಿದೆ ಎಂದು ಅವರು ಕರ್ನಾಟಕ ರಾಜ್ಯೋತ್ಸವದ ಸಂದೇಶ ಭಾಷಣದಲ್ಲಿ ಕಳವಳ ವ್ಯಕ್ತಪಡಿಸಿದರು.ಶಿರ್ವ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ಪ್ಲಾಸ್ಟಿಕ್‌ನಿಂದಾಗುವ ಅಪಾಯಗಳು, ಪರಿಹಾರಗಳ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕು ಪಂಚಾಯಿತಿ ಸದಸ್ಯ ಕೃಷ್ಣ ಪೂಜಾರಿ ಜನಜಾಗೃತಿ ಜಾಥಾಕ್ಕೆ ಹಸಿರು ನಿಶಾನೆ ತೋರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು  ಜಿಲ್ಲಾ ಪಂಚಾಯಿತಿ  ಸದಸ್ಯೆ ಐಡಾ ಗಿಬ್ಬ ಡಿಸೋಜ ವಹಿಸಿದ್ದರು.  ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ.ಸುಂದರ ಪ್ರಭು, ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಮಾಲತಿ ಉಪಸ್ಥಿತರಿದ್ದರು.

ಭಾರತ್ ನಿರ್ಮಾಣ ಸ್ವಯಂ ಸೇವಕ ತಂಡದ ನಾಯಕ ಕೆ.ಆರ್.ಪಾಟ್ಕರ್  ಸ್ವಾಗತಿಸಿದರು.  ಉಪನ್ಯಾಸಕ ಅನಂತ ಮೂಡಿತ್ತಾಯ ಕಾರ್ಯಕ್ರಮ ನಿರೂಪಿಸಿದರು. ಗ್ರಾಮ ಆರೋಗ್ಯ ನೈರ್ಮಲ್ಯ ಸಮಿತಿ ಅಧ್ಯಕ್ಷ ವೆಂಕಟೇಶ ಪ್ರಭು ವಂದಿಸಿದರು.

`ಕನ್ನಡದ ಚಿಂತನಶೀಲರು ಕ್ರಿಯಾಶೀಲರಲ್ಲ~

ಬೈಂದೂರು: ಕನ್ನಡ ನಾಡು ಒಂದಾಗಿ ಆರು ದಶಕಗಳಾದರೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಇದಕ್ಕೆ ಇಲ್ಲಿನ ಚಿಂತನಶೀಲರು ಕ್ರಿಯಾಶೀ ಲರಾಗದಿರುವುದು ಪ್ರಮುಖ ಕಾರಣ.  ಎಂದು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷ ಯು.ಚಂದ್ರಶೇಖರ ಹೊಳ್ಳ ಹೇಳಿದರು.

ಬೈಂದೂರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಂದಾಯ ಇಲಾಖೆವತಿಯಿಂದ ಗುರುವಾರ ರಾಜ್ಯೋತ್ಸವ ಅವರು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ವಿಶೇಷ ತಹಶೀಲ್ದಾರ್ ರಾಜು ಮೊಗವೀರ ಭಾಷೆಗೂ ಬದುಕಿಗೂ ಇರುವ ಅವಿನಾಭಾವ ಸಂಬಂಧವನ್ನು ವಿಷ್ಲೇಶಿಸಿ ಬದುಕಿನ ವಿಧಾನ ಬದಲಾದಾಗ ಭಾಷೆ ಅದನ್ನು ಅನುಸರಿಸುವುದು ಒಂದು ಸಹಜ ಪ್ರಕ್ರಿಯೆ. ಅದರ ಹೊಣೆಗಾರರು ನಾವೇ ಆದ್ದರಿಂದ ಅದರ ವಿರುದ್ಧ ಮಾತನಾಡುವುದು ಅರ್ಥಹೀನ ಎಂದರು.

     ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ನಿಯೋಜಿತ ಕಾರ್ಯಾಧ್ಯಕ್ಷ ಜಯಾನಂದ ಹೋಬಳಿದಾರ್, ರೋಟರಿ ಅಧ್ಯಕ್ಷ ಎಚ್. ವಸಂತ ಹೆಗ್ಡೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮ ದೇವಾಡಿಗ ಅತಿಥಿಗಳಾಗಿದ್ದರು.

ಹಿರಿಯ ವಿಮರ್ಶಕ ಬಿ. ವಿಶ್ವೇಶ್ವರ ಅಡಿಗರನ್ನು ಸನ್ಮಾನಿಸಲಾಯಿತು. ಗಣೇಶ ಪ್ರಸನ್ನ ಮಯ್ಯ ಸನ್ಮಾನ ಪತ್ರ ಓದಿದರು. ರವೀಂದ್ರ ದೊಂಬೆ ಸ್ವಾಗತಿಸಿದರು. ಸುಮಾ ಉಪ್ಪುಂದ ವಂದಿಸಿದರು. ಯು. ಸಂದೇಶ ಭಟ್ ನಿರೂಪಿಸಿದರು. ಕಸಾಪ ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಇದ್ದರು. ಸ್ಥಳೀಯ ಕಲಾವಿದರಿಂದ `ಭೀಷ್ಮ ವಿಜಯ~ ಪ್ರಸಂಗದ ತಾಳಮದ್ದಳೆ ನಡೆಯಿತು

ಹೆಬ್ರಿಯಲ್ಲಿ ಕನ್ನಡ ರಾಜ್ಯೋತ್ಸವ

ಹೆಬ್ರಿ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ ಶೆಟ್ಟಿ ಬಣದ ವತಿಯಿಂದ ಹೆಬ್ರಿಯಲ್ಲಿ ಕನ್ನಡ ರಾಜ್ಯೋತ್ಸವ ಮತ್ತು ಕನ್ನಡ ಗೀತೆ ಗಾಯನ ಕಾರ್ಯಕ್ರಮ ಗುರುವಾರ ನಡೆಯಿತು.

ಪ್ರಾಧ್ಯಾಪಕ ಎಚ್.ಎ.ಗಣಪತಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಸಿ.ಎಂ.ಪ್ರಸನ್ನ ಕುಮಾರ್, ಉದ್ಯಮಿ ಎಚ್. ಭಾಸ್ಕರ ಜೋಯಿಸ್, ಲಯನ್ಸ್ ಬ್ಯಾಂಕಿಂಗ್ ವಿಭಾಗದ ಜಿಲ್ಲಾಧ್ಯಕ್ಷ ಟಿ.ಜಿ ಆಚಾರ್ಯ, ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾನದಿ ಚಂದ್ರಶೇಖರ ಶೆಟ್ಟಿ, ಹೆಬ್ರಿ ಜೇಸಿ ಅಧ್ಯಕ್ಷ ನಿತೀಶ್ ಎಸ್.ಪಿ, ಸುರೇಶ್ ಭಂಡಾರಿ, ರಿಕ್ಷಾ ಚಾಲಕ, ಮಾಲಕ ಸಂಘದ ಅಧ್ಯಕ್ಷ ಜಯಕರ ಅಂಬ್ಲರ್, ಬೆನಕ ಪ್ರದೀಪ್, ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.