ಉಣಕಲ್ ಕೆರೆ ಎದುರು ಜಾನಪದ ಲೋಕ

7

ಉಣಕಲ್ ಕೆರೆ ಎದುರು ಜಾನಪದ ಲೋಕ

Published:
Updated:

ಹುಬ್ಬಳ್ಳಿ: ನಗರದ ಉಣಕಲ್ ಕೆರೆ ಎದುರಿನ ಚರ್ಚ್ ಹಿಂದೆ ಆರು ಎಕರೆ ಜಾಗೆಯಲ್ಲಿ ಜಾನಪದ ಲೋಕ ಅನಾವರಣಗೊಳ್ಳಲಿದೆ. ‘ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರೂ. 50 ಲಕ್ಷ ಮೊತ್ತವನ್ನು ಜಾನಪದ ಲೋಕಕ್ಕೆ ಮೀಸಲಿಟ್ಟಿದೆ’ ಎಂದು ಜಿಲ್ಲಾಧಿಕಾರಿ ದರ್ಪಣ್ ಜೈನ್ ಗುರುವಾರ ನಗರದ ಮಿನಿ ವಿಧಾನಸೌಧದಲ್ಲಿ ಪತ್ರಕರ್ತರಿಗೆ ತಿಳಿಸಿದರು. ಪ್ರತಿ ಗುರುವಾರ ಮಿನಿವಿಧಾನಸೌಧದಲ್ಲಿ ತಾವು ಲಭ್ಯವಿರುವ ಕುರಿತು ಪ್ರಕಟಿಸಿದಂತೆ ಅವರು ಹಾಜರಿದ್ದು, ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.‘ಜಾನಪದ ಲೋಕಕ್ಕೆ ಸಂಬಂಧಿಸಿ ಜಾನಪದ ತಜ್ಞರ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ. ಉತ್ತರ ಕರ್ನಾಟಕದ ಜಾನಪದ ಜಗತ್ತಿನ ಅನಾವರಣ ಇಲ್ಲಾಗಲಿದೆ. ಈಗಾಗಲೇ ರಾಮನಗರದಲ್ಲಿ ಎಚ್.ಎಲ್. ನಾಗೇಗೌಡರು ಕಟ್ಟಿದ ಜಾನಪದ ಲೋಕವಿದೆ. ಇದೇ ಮಾದರಿಯಲ್ಲಿ ಮತ್ತು ಇದನ್ನು ವಿಸ್ತರಿಸಿ ನಿರ್ಮಿಸಲಾಗುತ್ತದೆ. ಮುಖ್ಯವಾಗಿ ಇದು ಜಾನಪದ ಜೀವನ ವೈವಿಧ್ಯವನ್ನು ಬಿಂಬಿಸುವ ತಾಣವಾಗಲಿದೆ’ ಎಂದು ಅವರು ಹೇಳಿದರು.‘ಈಗಾಗಲೇ ಅಲ್ಲಿ ಬಣವೆ ಹಾಕಲಾಗುತ್ತಿದೆ, ದನಕರುಗಳನ್ನು ಕಟ್ಟಲಾಗುತ್ತಿದೆ. ಇವೆಲ್ಲವನ್ನು ಒಕ್ಕಲೆಬ್ಬಿಸಲ್ಲ. ಮುಂದುವರಿಸಿಕೊಂಡು ಹೋಗಲಾಗುತ್ತದೆ. ದೊಡ್ಡಾಟ, ಸಣ್ಣಾಟ, ಗೀಗೀಪದ, ಭಜನೆ, ಕೋಲಾಟ ಮೊದಲಾದ ಜಾನಪದ ಹಾಡುಗಳ ಪ್ರದರ್ಶನ, ಹಸ್ತಪ್ರತಿಗಳ ಸಂಗ್ರಹ, ಜಾನಪದ ಪ್ರದರ್ಶನಗಳ ಕುರಿತ ಸಾಕ್ಷ್ಯಚಿತ್ರ, ಸಿ.ಡಿ ಸಂಗ್ರಹ ಹಾಗೂ ಪುಸ್ತಕಗಳನ್ನು ಗ್ರಂಥಾಲಯದಲ್ಲಿ ಕಾದಿಡಲಾಗುತ್ತದೆ. ಜೊತೆಗೆ ಜಾನಪದ ವಾದ್ಯಗಳನ್ನು ಸಂಗ್ರಹಿಸಲಾಗುತ್ತದೆ.ಜೊತೆಗೆ ಬಯಲು ರಂಗಮಂದಿರ, ದೇಸಿ ಆಹಾರ ಪದ್ಧತಿಯ ಊಟದ ಕ್ಯಾಂಟೀನ್, ಜಾನಪದ ಕಲೆಗಳನ್ನು ತರಬೇತಿ ನೀಡುವ ಕೇಂದ್ರ, ಆಡಳಿತ ಕಚೇರಿ, ಕಲಾವಿದರು, ವಿದ್ಯಾರ್ಥಿಗಳು, ಸಂಶೋಧಕರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಈಗಾಗಲೇ ಅಲ್ಲಿರುವ ಸಣ್ಣ ಕೆರೆ ಅಭಿವೃದ್ಧಿ ಜೊತೆಗೆ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯಾಗುತ್ತದೆ’ ಎಂದರು.‘ಮೊದಲ ಹಂತದ ಕಾಮಗಾರಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಿರುವ ರೂ. 50 ಲಕ್ಷ ಮೊತ್ತದಲ್ಲಿ ಮಾರ್ಚ್ ಒಳಗೆ ಕಂಪೌಂಡ್, ರಸ್ತೆ, ಆಡಳಿತ ಕಚೇರಿ ಸಿದ್ಧಗೊಳ್ಳಲಿವೆ. ಒಟ್ಟು ರೂ. 2-3 ಕೋಟಿ ವೆಚ್ಚದಲ್ಲಿ ಜಾನಪದ ಲೋಕ ನಿರ್ಮಾಣಗೊಳ್ಳಲಿದೆ’ ಎಂದರು.‘ಜಾನಪದ ಲೋಕದ ಪಕ್ಕದಲ್ಲಿ ಉಣಕಲ್ ಕೆರೆಯಿದೆ, ಆಚೆ ಕಡೆ ಗುರುಕುಲವಿದೆ. ಅದರ ಹತ್ತಿರ ನೃಪತುಂಗ ಬೆಟ್ಟವಿದೆ. ಈ ಬೆಟ್ಟದಿಂದ ನಿರ್ಮಿಸಲಾಗುವ ರೋಪ್‌ವೇ ಮೂಲಕ ಜಾನಪದ ಲೋಕಕ್ಕೆ ಬಂದು, ಉಣಕಲ್ ಕೆರೆಗೆ ಹೋಗುವ ವ್ಯವಸ್ಥೆ ಮಾಡಲಾಗುತ್ತದೆ. ಇದರೊಂದಿಗೆ ಉಣಕಲ್ ಚಂದ್ರಮೌಳೇಶ್ವರ ದೇವಸ್ಥಾನವನ್ನು ರೂ. 14 ಕೋಟಿ ವೆಚ್ಚದಲ್ಲಿ ಸಂರಕ್ಷಿಸುವ ಕೆಲಸ ನಡೆಯಲಿದೆ. ಆ ದೇವಸ್ಥಾನದ ಪಕ್ಕದಲ್ಲಿರುವ ಮನೆಗಳನ್ನು ಬೇರೆಡೆ ಸ್ಥಳಾಂತರಗೊಳಿಸುವ ಕಾರ್ಯ ನಡೆಯಬೇಕಿದೆ ’ ಎಂದರು.‘ಇಂದಿರಾ ಗಾಜಿನಮನೆ ಐದಾರು ಕೋಟಿ ರೂಪಾಯಿ ವೆಚ್ಚದಲ್ಲಿ ಸುಂದರಗೊಳ್ಳುತ್ತಿದೆ. ಇನ್ನು 2-3 ತಿಂಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಗಾಜಿನಮನೆ ತೆರೆಯಲಿದೆ’ ಎಂದರು.

ಮಹಾನಗರ ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ, ತಹಸೀಲ್ದಾರ ಎಸ್.ಎಸ್. ಬಿರಾದಾರ ಹಾಗೂ ಇತರ ಅಧಿಕಾರಿಗಳು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry