ಶನಿವಾರ, ಜೂನ್ 19, 2021
21 °C

ಉಣ್ತೀನಂದ ಮಾವ, ಹೋಗೇ ಬಿಟ್ಟ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಣ್ತೀನಂದ ಮಾವ, ಹೋಗೇ ಬಿಟ್ಟ!

ಮುದ್ದೇಬಿಹಾಳ: ಯವ್ವಾ, ಯಕ್ಕಾ ನಾ ಏನ್ ಮಾಡ್ಲಿ, ಹೋಳಿಗಿ ಮಾಡಿಡು ಅಂತ ಹೋದ ಮಾಮಾ ಹೀಂಗ ಮೋಸಾ ಮಾಡ್ತಾನಂತ ಗೊತ್ತಿದ್ದಿಲಬೇ ಎಕ್ಕಾ, ನನ್ನ ಹೀಂಗ ನಡು ನೀರಾಗ ಕೈ ಬಿಟ್ಟ ಹೋದರ ನಾ ಯಾರ ಮುಂದ ಹೇಳ್ಳೆಬಿ ಎಕ್ಕಾ, ಎವ್ವಾ ಎಂದು ಸೆರಗು ಮುಚ್ಚಿಕೊಂಡು ಅಳುತ್ತ ನಡೆದ ಅಣುಕು ಶವಯಾತ್ರೆ. ಇದನ್ನು ನೋಡಲು ಪಟ್ಟಣದ ಪ್ರತಿ ಮನೆಯಿಂದ ಮಹಿಳೆಯರು ಅಂಗಳಕ್ಕೆ, ಮನೆಯ ಮಾಳಿಗೆಯ ಮೇಲೆ ಏರಿ ನಿಂತು ನೋಡಿದರು. ಅಳುವವರನ್ನು ನೋಡಿ ನಕ್ಕು ನಕ್ಕು ಸುಸ್ತಾದ ಮಹಿಳೆಯರು, ಅತ್ತ್ರ ಹೀಂಗ್ ಕೋಳೂರ ಬಸುನಂಗ ಅಳಬೇಕ ನೋಡ್ರಿ ಅನ್ನುವ ಮಾತೂ ಆಡಿದರು.ಸತ್ತವನ ಹೆಂಡತಿ ಪಾತ್ರ ಮಾಡಿದ್ದ ಪುರಸಭೆಯ ನೌಕರ ಬಸು ಕೋಳೂರ, ನಿಂತು ನೋಡುವವರು ಹೆಚ್ಚಿದ್ದರೆ ಇವನ ರಾಗವೂ, ಅಳುವ ಧ್ವನಿಯೂ ಜೋರಾಗುತ್ತ ನಡೆಯುತ್ತಿತ್ತು. ಸೋನಿ ಮಾಲಾಕರ ಅಂಗಡ್ಯಾಗ ಬೋರಮಳ ಮಾಡಸ್ತಿನಿ ಅಂದಿದ್ದ ಮಾಮಾ, ಮನಿಗೆ ಬಂದ ಕೂಡ್ಲೇ ಮುತ್ತು ಕೊಡ್ತಿದ್ದ ಮಾಮಾ, ಹೋಳಗಿ ಮಾಡು, ತುಪ್ಪಾ ತರ್ತಿನಿ ಅಂದ ಮಾಮಾ, ಇಂಥಾ ಪಾಡು ಯಾರಿಗೂ ಬರಬಾರದಬೇ ಎವ್ವಾ, ನನ್ನ ನಡು ನೀರಾಗ ಕೈ ಬಿಟ್ಟ ಹೋದನಬೇ ಎವ್ವಾ, ನಾ ಇನ್ನ ಹ್ಯಾಂಗ್ ಮಾಡಲಬೇ ಎವ್ವಾ ಎಂದು ಅಳುತ್ತ, ಸಂದರ್ಭ ಬಂದರೆ ಬೊಬ್ಬೆ ಹಾಕುತ್ತ, ಸೆರಗಿನಿಂದಲೇ ಸಿಂಬಳ ಒರೆಸಿಕೊಳ್ಳುತ್ತ ಅಳುವ ಕಾಯಕ ನಡೆಸಿದ್ದ.ಬಣ್ಣದಾಟ ಆಡಿ ದಣಿದಿದ್ದ ನೂರಾರು ಯುವಕರು ಮಧ್ಯಾಹ್ನ ಇಳಿ ಹೊತ್ತಿನಲ್ಲಿ ಹೊಸಮಠದ ಆವರಣದಿಂದ ಅಣುಕು ಶವಯಾತ್ರೆ ಶುರು ಮಾಡಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಎಂಟು ಗಡಗಡೆ ಬಾವಿಯ ಹತ್ತಿರ ಹೋಗಿ ಸಮಾಪ್ತಿಯಾಯಿತು. ಸತ್ತವನ ಸೋಗಿನ ಪಾತ್ರ ಅಶೋಕ ನಾಲತವಾಡ ಮಾಡಿದ್ದು, ಹೆಂಡತಿಯ ಪಾತ್ರ ಮಾಡಿದ್ದ ಬಸು ಮಾತು ಮಾತಿಗೂ ಶವದ ಮುಖಕ್ಕೆ ತಿವಿ ತಿವಿದು ಅಳುತ್ತಿದ್ದರೂ ಮೆರವಣಿಗೆಯುದ್ದಕ್ಕೂ ತುಟಿ ಪಿಟಕ್ಕೆನ್ನದೇ ಕುಳಿತಿದ್ದು ಗ್ರೇಟ್ ಎನಿಸಿಕೊಂಡಿತು.ಮೆರವಣಿಗೆಯ ಮುಂದೆ ಎಲ್ಲ ಸಮಾಜದ ಯುವಕರು ಕುಣಿಯುತ್ತ ಸಂಭ್ರಮದ ಶವ ಯಾತ್ರೆ ಮುಗಿಸಿದರು.ಸಂಭ್ರಮದ ಹೋಳಿ

ಚಡಚಣ
: ಪಟ್ಟಣವನ್ನು ಹೊರತು ಪಡಿಸಿ ಸುತ್ತಲಿನ ಕರ್ನಾಟಕ– ಮಹಾರಾಷ್ಟ್ರ ಗಡಿಭಾಗದ ಬಹುತೇಕ ಹಳ್ಳಿಗಳಲ್ಲಿ ಸೋಮವಾರ ಹೋಳಿ ಹಬ್ಬದ ಬಣ್ಣದಾಟದ ಸಂಭ್ರಮವಿತ್ತು. ಮಕ್ಕಳು, ಮಹಿಳೆಯರೂ ಸೇರಿದಂತೆ ಗ್ರಾಮಸ್ಥರು ಪರಸ್ಪರ ಬಣ್ಣ ಎರಚಿ ಹಬ್ಬವನ್ನು ಆಚರಿಸಿದರು.

ಕಾಮದಹನ, ಬಣ್ಣದಾಟದ ನಂತರ ಮನೆಗಳಲ್ಲಿ ಹೋಳಿಗೆ– ತುಪ್ಪದೂಟ ಸವಿಯುಂಡರು. ಚಡಚಣ ಸೇರಿ ಹಲವು ಗ್ರಾಮಗಳಲ್ಲಿ ಸಾಮೂಹಿಕ ಕಾಮದಹನ ನಡೆದರೆ, ಕೆಲವರು ಮನೆಯ ಮುಂಭಾಗದಲ್ಲಿ ಐದು ಬೆರಣೆಗಳನ್ನು ಸುಟ್ಟು ಸಾಂಪ್ರದಾಯಿಕ­ವಾಗಿ ಹಬ್ಬ ಆಚರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.