ಶನಿವಾರ, ನವೆಂಬರ್ 23, 2019
17 °C
ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಕರೆ

`ಉತ್ತಮ ಆಡಳಿತಕ್ಕೆ ಮತ ಚಲಾಯಿಸಿ'

Published:
Updated:

ಬೆಂಗಳೂರು: `ಉತ್ತಮ ಆಡಳಿತಕ್ಕಾಗಿ ಎಲ್ಲರೂ ಮತ ಚಲಾಯಿಸಬೇಕು. ಇಂದು ಯುವ ಜನತೆಯು ನಾಡಿನ ಭವಿಷ್ಯವನ್ನು ನಿರ್ಧರಿಸುವಂತಾಗಬೇಕು' ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಕರೆ ನೀಡಿದರು.ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ (ಬಿ.ಪ್ಯಾಕ್) ಸಂಸ್ಥೆಯು ಶನಿವಾರ ನಗರದ ಕಂಠೀರವ ಕ್ರೀಡಾಂಗಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ಆಯೋಜಿಸಿದ್ದ `ಉತ್ತಮ ಬೆಂಗಳೂರಿಗಾಗಿ ನಿಮ್ಮ ಮತ ಚಲಾಯಿಸಿ' ಎಂಬ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ನಮ್ಮ ಮತ ಅಮೂಲ್ಯವಾದುದು. ಉತ್ತಮ ಬೆಂಗಳೂರಿಗಾಗಿ ಯಾರ ಪ್ರಭಾವಕ್ಕೂ ಒಳಗಾಗದೆ, ಯಾರ ಭಯಕ್ಕೂ ಒಳಗಾಗದೆ, ನಿರ್ಭಯವಾಗಿ ಮತ ಚಲಾಯಿಸಬೇಕು. ಉತ್ತಮ ಆಡಳಿತಕ್ಕಾಗಿ ನಮ್ಮ ಮತವನ್ನು ಚಲಾಯಿಸಿ ಉತ್ತಮ ಆಡಳಿತವನ್ನು ಜಾರಿಗೆ ಬರುವಂತೆ ಮಾಡಬೇಕು. ಮತದಾನ ನಮ್ಮೆಲ್ಲರ ಕರ್ತವ್ಯ, ಅದಕ್ಕೆ ನಾವು ಬದ್ಧರಾಗಿರಬೇಕು' ಎಂದು ಹೇಳಿದರು.ಬಿ.ಪ್ಯಾಕ್ ಸಂಸ್ಥೆಯ ಉಪಾಧ್ಯಕ್ಷ ಮೋಹನ್‌ದಾಸ್ ಪೈ ಮಾತನಾಡಿ, `ಉತ್ತಮ ಬೆಂಗಳೂರು ನಿರ್ಮಾಣಕ್ಕೆ ಎಲ್ಲರೂ ಮತ ಚಲಾಯಿಸಬೇಕು. ಎಲ್ಲರೂ ಮತ ಚಲಾಯಿಸುವುದರಿಂದ ಬದಲಾವಣೆ ಮಾಡಬಹುದಾಗಿದೆ. ಈ ಜಾಗೃತಿ ಜಾಥಾ ಮೊದಲ ಹೆಜ್ಜೆಯಾಗಿದೆ' ಎಂದರು.ಬಿ.ಪ್ಯಾಕ್ ಆಡಳಿತ ಸಮಿತಿಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಮಾತನಾಡಿ, `ನಮ್ಮ ಪ್ರತಿನಿಧಿಗಳ ಆಯ್ಕೆಯನ್ನು ನಮ್ಮ ಮತಗಳು ನಿರ್ಧರಿಸುತ್ತವೆ. ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದರೆ ನಮಗೆ ಉತ್ತಮ ಆಡಳಿತವು ದೊರೆಯುತ್ತದೆ. ಇದರಿಂದ ಭ್ರಷ್ಟಾಚಾರ ಕಡಿಮೆಯಾಗುತ್ತದೆ' ಎಂದರು.ಬಿ.ಪ್ಯಾಕ್ ಕಾರ್ಯದರ್ಶಿ ಕೆ.ಜೈರಾಜ್ ಮಾತನಾಡಿ, `ಬಿ.ಪ್ಯಾಕ್ ಸಂಸ್ಥೆಯು ಯಾವುದೇ ರಾಜಕೀಯದಿಂದ ಪ್ರೇರಿತವಾಗಿಲ್ಲ. ನಮ್ಮ ಪ್ರಜಾಪ್ರಭುತ್ವ ದೇಶದಲ್ಲಿ ಎಲ್ಲರಿಗೂ ಮತ ಚಲಾವಣೆಯ ಹಕ್ಕಿದೆ. ಅದನ್ನು ಚಲಾಯಿಸಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂಬ ಘೋಷಣೆ ನಮ್ಮದಾಗಿದೆ' ಎಂದರು.ಕ್ರಿಕೆಟ್ ವೀಕ್ಷಕ ವಿವರಣೆಗಾರ ಚಾರು ಶರ್ಮಾ ಮಾತನಾಡಿ, `ಮನೆಯಲ್ಲಿ ಕುಳಿತು ಅದು ಸರಿಯಿಲ್ಲ, ಇದು ಸರಿಯಿಲ್ಲವೆಂದು ಆಪಾದಿಸಬಹುದು. ಆದರೆ, ಮತ ಚಲಾಯಿಸಿ ಆಪಾದಿಸಿದರೆ ಅದಕ್ಕೆ ಒಂದು ಅರ್ಥವಿರುತ್ತದೆ. ಎಲ್ಲರೂ ಮತ ಚಲಾವಣೆ ಮಾಡಿದರೆ ನಾಡಿನಲ್ಲಿ ಉತ್ತಮ ಆಡಳಿತ ಬರುತ್ತದೆ. ಅಲ್ಲದೇ, ನಮಗೆ ಪ್ರಶ್ನಿಸುವ ಹಕ್ಕು ಇರುತ್ತದೆ' ಎಂದರು.

ಪ್ರತಿಕ್ರಿಯಿಸಿ (+)