ಉತ್ತಮ ಆರಂಭದ ನಿರೀಕ್ಷೆಯೊಂದಿಗೆ...

7

ಉತ್ತಮ ಆರಂಭದ ನಿರೀಕ್ಷೆಯೊಂದಿಗೆ...

Published:
Updated:ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ವಿರುದ್ಧದ ಅಭ್ಯಾಸ ಪಂದ್ಯದ ನಂತರ ವಿಶ್ವಾಸ ಹೆಚ್ಚಿರುವುದು ಸಹಜ. ಅದೊಂದು ಉತ್ತಮವಾದ ತಾಲೀಮು. ನಮ್ಮ ಆಟಗಾರರಲ್ಲಿ ಭರವಸೆ ಹೆಚ್ಚುವುದಕ್ಕೂ ಸಹಕಾರಿ ಆಯಿತು. ತಂಡದಲ್ಲಿನ ಕೆಲವು ಹೊಂದಾಣಿಕೆಗಳ ಬಗ್ಗೆ ಯೋಚನೆ ಮಾಡಬೇಕಿತ್ತು. ಅದು ಅಭ್ಯಾಸ ಪಂದ್ಯದಲ್ಲಿ ಸಾಧ್ಯವಾಯಿತು. ಈಗ ನಾವು ವಿಶ್ವಕಪ್‌ನಲ್ಲಿ ಹೋರಾಡಲು ಸಂಪೂರ್ಣವಾಗಿ ಸಜ್ಜಾಗಿದ್ದೇವೆ. ಉತ್ತಮ ಆರಂಭದ ನಿರೀಕ್ಷೆಯೊಂದಿಗೆ ಮೊದಲ ಹಣಾಹಣಿಯಲ್ಲಿ ಹಾಲೆಂಡ್ ತಂಡವನ್ನು ಎದುರಿಸಲು ಕಾತರದಿಂದ ಕಾಯ್ದಿದ್ದೇವೆ. ಮಂಗಳವಾರದ ಪಂದ್ಯವು ನಾಗಪುರದಲ್ಲಿ ನಡೆಯಲಿದ್ದು, ಎಲ್ಲವೂ ನಮ್ಮ ನಿರೀಕ್ಷೆಗೆ ತಕ್ಕಂತೆ ನಡೆಯುತ್ತದೆನ್ನುವ ಆಶಯವನ್ನು ಹೊಂದಿದ್ದೇವೆ. ಅಭ್ಯಾಸ ಪಂದ್ಯವನ್ನು ಬಾಂಗ್ಲಾದಲ್ಲಿ ಆಡಿದ್ದರೂ ಉಪಖಂಡದಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಅನುಕೂಲವಾಗಿದೆ. ಈ ಭಾಗದಲ್ಲಿ ಈಗ ಎಲ್ಲೆಡೆ ಒದೇ ರೀತಿಯ ವಾತಾವರಣ ಇದೆ. ಪಿಚ್ ಬಗ್ಗೆಯೂ ಈ ಮಾತು ಅನ್ವಯವಾಗುತ್ತದೆ. ಆದರೂ ಅಂಗಳದ ಗುಟ್ಟು ಸ್ಪಷ್ಟವಾಗಿ ಅರಿವಾಗುವುದು ಇಲ್ಲಿ ಆಡಿದಾಗ ಮಾತ್ರ. ಆದರೂ ಮೇಲು ನೋಟಕ್ಕೆ ಉತ್ತಮವಾದ ಪಿಚ್ ಎಂದು ಸ್ಪಷ್ಟವಾಗಿ ಹೇಳಬಹುದು.ವಿಚಿತ್ರವೆಂದರೆ ವಿಶ್ವಕಪ್ ಬಗ್ಗೆ ನಮ್ಮ ದೇಶದಲ್ಲಿ ಈಗ ಅಷ್ಟೊಂದು ಆಸಕ್ತಿ ಇಲ್ಲ. ಇನ್ನೂ ವಿಶ್ವಕಪ್ ಜ್ವರ ಏರಬೇಕು. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯಗಳ ಸರಣಿಯಲ್ಲಿನ ಸೋಲಿನ ನಂತರ ತಂಡದ ಮೇಲೆ ದೇಶದ ಕ್ರಿಕೆಟ್ ಪ್ರೇಮಿಗಳಿಗೆ ಹುಸಿಕೋಪ ಇರುವುದು ಅಚ್ಚರಿಯೇನಲ್ಲ. ಮೊದಲ ಪಂದ್ಯದಲ್ಲಿ ಯಶಸ್ಸು ಪಡೆದ ನಂತರ ತಾಯಿನಾಡಿನಲ್ಲಿನ ಪರಿಸ್ಥಿತಿ ಬದಲಾಗುತ್ತದೆಂದು ನಿರೀಕ್ಷಿಸ ಬಹುದು. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿನ ನಿರಾಸೆಯನ್ನು ಮರೆತಾಗಿದೆ. ಆ ಸೋಲಿನ ಕುರಿತು ಯೋಚನೆ ಮಾಡುತ್ತಿಲ್ಲ. ತಂಡವು ಈಗ ಹೆಚ್ಚು ಸಮತೋಲನ ಸಾಧಿಸಿದೆ. ಆಟದ ತಂತ್ರದಲ್ಲಿಯೂ ಪಕ್ವವಾಗಿದೆ. ತಂಡದಲ್ಲಿರುವ ಅನೇಕ ಆಟಗಾರರು ಭಾರತದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಕೆಲವು ಆಟಗಾರರು ಐಪಿಎಲ್ ಪಂದ್ಯಗಳಲ್ಲಿಯೂ ಆಡಿದ್ದಾರೆ. ಆದ್ದರಿಂದ ಈ ಬಾರಿಯ ವಿಶ್ವಕಪ್ ಯಶಸ್ಸಿನದಾಗಿರುತ್ತದೆಂದು ನಿರೀಕ್ಷಿಸಿದ್ದೇವೆ.ಮೇಲ್ಪಂಕ್ತಿಯ ಬ್ಯಾಟ್ಸ್‌ಮನ್ ಗಳು ಆಕ್ರಮಣಕಾರಿ ಆಟವಾಡುವ ಮೂಲಕ ತಂಡದ ರನ್ ಗತಿಗೆ ಚುರುಕು ನೀಡಬೇಕು. ನಂತರ ಇನಿಂಗ್ಸ್ ಕಟ್ಟುವ ಹೊಣೆಯನ್ನು ಮಧ್ಯಮ ಕ್ರಮಾಂಕದವರು ನಿಭಾಯಿಸಬೇಕು. ಆಗ ಎಲ್ಲವೂ ಸುಲಭ ಎನಿಸುತ್ತದೆ. ಇದೇ ಯೋಜನೆಯೊಂದಿಗೆ ಅಭ್ಯಾಸ ಪಂದ್ಯದಲ್ಲಿ ಆಡಿದ್ದೆವು. ಅದೇ ಗತಿ  ಕಾಯ್ದುಕೊಂಡು ಯಶಸ್ಸಿನ ಹಾದಿಯಲ್ಲಿ ನಡೆಯುವುದು ಗುರಿ.

 -ಗೇಮ್‌ಪ್ಲಾನ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry