ಉತ್ತಮ ಆರೋಗ್ಯ ಸೇವೆ ನೀಡಲು ಕರೆ

7

ಉತ್ತಮ ಆರೋಗ್ಯ ಸೇವೆ ನೀಡಲು ಕರೆ

Published:
Updated:

ಬೆಂಗಳೂರು: ‘ವೈದ್ಯರು ಹಣ ಗಳಿಕೆಗೆ ಆದ್ಯತೆ ನೀಡದೆ ಸೇವಾ ಮನೋಭಾವದಿಂದ ಕಾರ್ಯ ನಿರ್ವಹಿಸಬೇಕು. ಆಗ ಮಾತ್ರ ಎಲ್ಲ ವರ್ಗದ ಜನರಿಗೂ ಉತ್ತಮ ಆರೋಗ್ಯ ಸೇವೆ ಒದಗಿಸಲು ಸಾಧ್ಯ’ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹೇಳಿದರು.ನಗರದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಶನಿವಾರ ನಡೆದ 50ನೇ ಘಟಿಕೋತ್ಸವ ಸಮಾರಂಭದಲ್ಲಿ ಪದವಿ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.‘ಹಣವನ್ನು ಹೇಗಾದರೂ ಸಂಪಾದಿಸಬಹುದು. ಹಣದ ಬಗ್ಗೆ ಹೆಚ್ಚಿನ ವ್ಯಾಮೋಹ ಬೆಳೆಸಿಕೊಳ್ಳಬಾರದು. ಹಣದ ದಾಹ ಭ್ರಷ್ಟಾಚಾರಕ್ಕೆ ಪ್ರೇರಣೆ ನೀಡುತ್ತದೆ. ಅಂತಿಮವಾಗಿ ಒಂದಲ್ಲ ಒಂದು ದಿನ ಜೈಲುವಾಸ ಅನುಭವಿಸಬೇಕಾಗಬಹುದು. ಹಾಗಾಗಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಸೇವೆ ಸಲ್ಲಿಸಬೇಕು’ ಎಂದರು.ಮಣಿಪಾಲ ವಿ.ವಿಯ ವಿಶ್ರಾಂತ ಕುಲಪತಿ ಡಾ.ಬಿ.ಎಂ. ಹೆಗ್ಡೆ ಮಾತನಾಡಿ, ‘ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕು. ಸದ್ಯ ಮಂಡನೆಯಾಗುತ್ತಿರುವ ಬಹುತೇಕ ಸಂಶೋಧನಾ ಪ್ರಬಂಧಗಳಲ್ಲಿ ಬೇರೊಂದು ಪ್ರಬಂಧದ ಅಂಶಗಳೇ ಪುನರಾವರ್ತನೆಯಾಗಿರುತ್ತವೆ. ಈ ರೀತಿಯ ಸಂಶೋಧನಾ ಪ್ರಬಂಧಗಳಿಂದ ಯಾವುದೇ ಪ್ರಯೋಜನವಾಗುವುದಿಲ್ಲ’ ಎಂದು ಹೇಳಿದರು.ಕರುಣಾ ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್. ಸುದರ್ಶನ್ ಮಾತನಾಡಿ, ‘ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಹೊಸ ಸಂಶೋಧನೆಗಳನ್ನು ಅಳವಡಿಸಿಕೊಂಡು ಗುಣಮಟ್ಟದ ಚಿಕಿತ್ಸೆ ನೀಡಬೇಕಿದೆ. ಖಾಸಗಿಯಾಗಿ ವೈದ್ಯ ಸೇವೆ ಸಲ್ಲಿಸುವ ಬದಲಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸಬೇಕು. ವೈದ್ಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವಂತೆ ಮಾಡಲು ಕೇಂದ್ರ ಸರ್ಕಾರದ 6ನೇ ವೇತನ ಆಯೋಗದ ಸೌಲಭ್ಯಗಳು ಈ ವೈದ್ಯರಿಗೂ ದೊರೆಯುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಐ.ಎಂ. ವಿಠಲಮೂರ್ತಿ, ಮಾತನಾಡಿದರು. ಒಟ್ಟು 150 ಮಂದಿಗೆ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. 10 ಮಂದಿ ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ವಿತರಿಸಲಾಯಿತು. ಸಂಸ್ಥೆಯ ನಿರ್ದೇಶಕರಾದ ಡೀನ್ ಡಾ.ಒ.ಎಸ್. ಸಿದ್ದಪ್ಪ, ಘಟಿಕೋತ್ಸವ ಆಚರಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಡಾ.ಕೆ. ಜಗದೀಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry