ಉತ್ತಮ ಇಳುವರಿಗೆ ಮಣ್ಣು ಪರೀಕ್ಷೆ ಕಡ್ಡಾಯ

7

ಉತ್ತಮ ಇಳುವರಿಗೆ ಮಣ್ಣು ಪರೀಕ್ಷೆ ಕಡ್ಡಾಯ

Published:
Updated:

ಗೊಣಿಕೊಪ್ಪಲು: ಕಾರ್ಮಾಡು ವ್ಯಾಪ್ತಿಯ ಕಾಫಿ ತೋಟದ ಮಣ್ಣಿನಲ್ಲಿ ಶೇ.21ರಷ್ಟು ಕ್ಯಾಲ್ಸಿಯಂ ಕೊರತೆ ಇದೆ. ಕಾಫಿ ಬೆಳೆಗಾರರು ಮಣ್ಣು ಪರೀಕ್ಷೆ ಮಾಡಿಸದೆ ಅನಗತ್ಯವಾಗಿ ತೋಟಕ್ಕೆ ಸುಣ್ಣಹಾಕಿ ಇಲ್ಲದ ಸಮಸ್ಯೆಗಳನ್ನು ತಂದುಕೊಳ್ಳಬಾರದು ಎಂದು ಚೆಟ್ಟಳ್ಳಿ ಸಂಶೋಧನಾ ಕೇಂದ್ರದ ಉಪನಿರ್ದೇಶಕ ಎನ್. ರಾಮಮೂರ್ತಿ ಸೋಮವಾರ ರೈತರಿಗೆ ಸಲಹೆ ನೀಡಿದರು.ಬಾಳೆಲೆ ಸಮೀಪದ ಕಾರ್ಮಾಡುವಿನಲ್ಲಿ ಇಲ್ಲಿನ ಕಾಫಿ ವಿಸ್ತರಣಾ ಕೇಂದ್ರ ಆಯೋಜಿಸಿದ್ದ  ಬೆಳೆಗಾರರೊಂದಿಗಿನ ಸಂವಾದ ಮತ್ತು ವಿಚಾರ ಸಂಕಿರಣದಲ್ಲಿ ಕಾಫಿ ತೋಟಗಳಿಗೆ ನೀಡಬೇಕಾದ ಪೋಷಕಾಂಶ ಮತ್ತು ಮಣ್ಣು ಪರೀಕ್ಷೆ ಕುರಿತು ಮಾತನಾಡಿದ ಅವರು ಬೆಳೆಗಾರರು ಮೂರು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಬೇಕು ಎಂದು ತಿಳಿಸಿದರು.ಮಣ್ಣಿನಲ್ಲಿ 5.8 ಹಾಗೂ 6.2 ಪಿಎಚ್‌ನಷ್ಟು  ಸುಣ್ಣ ಇರಬೇಕು.ನೆರಳಿಲ್ಲದ ಕಾಫಿ ತೋಟಗಳಲ್ಲಿ ಹೆಚ್ಚಾಗಿ ಗಿಡಗಳು ಬೆಳೆದು ಕಾಫಿ ಪಸಲು ಜಾಸ್ತಿಆಗುವುದರಿಂದ ಮಣ್ಣಿನಲ್ಲಿರುವ ಪೋಷಕಾಂಶದ ಕೊರತೆಯೂ  ಎದುರಾಗುತ್ತದೆ. ಈ ವ್ಯಾಪ್ತಿಯಲ್ಲಿ ಸಾರಜನಕ, ಪೊಟ್ಯಾಷ್ ಅಂಶ ಕಡಿಮೆ ಇರುವುದರಿಂದ ಬೆಳೆಗಾರರು ಮಣ್ಣಿನ ಗುಣಮಟ್ಟದತ್ತ ಗಮನಹರಿಸಬೇಕು. ಮಣ್ಣಿನಲ್ಲಿರುವ ಪಿಎಚ್ ಅಂಶದ ಏರಿಳಿತದಿಂದ ಕಾಫಿ ಗಿಡದ ಬೇರುಗಳಲ್ಲಿ ಫಂಗಸ್ ಬಂದು ಗಿಡ ಸಾಯುವ ಸಂಭವವಿರುತ್ತದೆ ಎಂದು ಹೇಳಿದರು.ಸಾರಜನಕ ಪ್ರಮಾಣ ಹೆಚ್ಚಾದ ಗಿಡಗಳಲ್ಲಿ ಹೆಚ್ಚು ಚಿಗುರು ಬರುತ್ತದೆ.ಇದಕ್ಕೆ ಹೆಚ್ಚು ನೀರಿನ ಅಗತ್ಯವಿದೆ. ಬೇಸಿಗೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ವಿವಿಧ ರೋಗಗಳು ಹರಡಿ ರೆಕ್ಕೆ ಒಣಗಲು ಆರಂಭಿಸುತ್ತದೆ. ಈ ಸಂದರ್ಭದಲ್ಲಿ  ತೋಟಕ್ಕೆ ಸುಟ್ಟಸುಣ್ಣ ಬಳಸಬಾರದು ಎಂದು ಮಾಹಿತಿ ನೀಡಿದರು.ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ಹಿರಿಯ ಸಂಪರ್ಕಾಧಿಕಾರಿ ಜಿ.ತಿಮ್ಮರಾಜು ಮಾತನಾಡಿ ಕಾರ್ಮಾಡು ನಿಟ್ಟೂರು ವ್ಯಾಪ್ತಿಯ 152 ಕಾಫಿ ತೋಟಗಳಿಗೆ ತೆರಳಿ ಮಣ್ಣು ಪರೀಕ್ಷೆ ನಡೆಸಲಾಗಿದೆ. ಇಲ್ಲಿನ ಮಣ್ಣಿನಲ್ಲಿ ಕಡಿಮೆ ಪ್ರಮಾಣದ ಕ್ಯಾಲ್ಸಿಯಂ ಅಂಶ ಗೋಚರವಾಗಿದೆ. ಶೇ.20ರಷ್ಟು ಬೆಳೆಗಾರರು ಕಾಫಿ ಒಣಗಿಸಲು ಸಿಮೆಂಟ್ ಕಣ ಹೊಂದಿದ್ದರೆ, ಶೇ.80ರಷ್ಟು ಬೆಳೆಗಾರರು ಸಗಣಿ ನೆಲದಲ್ಲಿ ಕಾಫಿ ಒಣಗಿಸುತಿದ್ದಾರೆ. ಇದರಿಂದ ಕಾಫಿಯ ಗುಣಮಟ್ಟ ಹಾಳಾಗಲಿದೆ. ಜತೆಗೆ ಬೆರ್ರಿಬೊರರ್ ರೋಗ ಹರಡಲಿದೆ. ಇದರೆ ಬಗ್ಗೆ ಬೆಳೆಗಾರರು ಎಚ್ಚರವಹಿಸಬೇಕು ಎಂದು  ಹೇಳಿದರು.  ತಜ್ಞರಾದ ಪಿ.ರೆಹಮಾನ್, ಜಯರಾಮ್ ಬಲ್ಯ, ಎನ್.ಸದಾನಂದ, ಕೃಷಿ ವಿಜ್ಞಾನ  ಕೇಂದ್ರದ ಮುಖ್ಯಸ್ಥ ಡಾ.ನಾರಾಯಣಸ್ವಾಮಿ, ಕೆಫೆನೆಟ್ ಯೋಜನಾಧಿಕಾರಿ ಸೋಮಣ್ಣ, ಚಿಟ್ಟಿಯಪ್ಪ ವಿವಿಧ ವಿಷಯಗಳ  ಬಗ್ಗೆ ಮಾಹಿತಿ ನೀಡಿದರು. ಕಾಫಿ ಮಂಡಳಿ ಸದಸ್ಯೆ ಆದೇಂಗಡ ತಾರಾ ಅಯ್ಯಮ್ಮ ಅಧ್ಯಕ್ಷತೆ ವಹಿಸಿದ್ದರು. ಮಂಡಳಿಯ ಜಂಟಿ ನಿರ್ದೇಶಕ ಎಂ.ಸಿ.ಪೊನ್ನಣ್ಣ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಉಪನಿರ್ದೇಶಕ ರೆಟಗೇರಿ ಸ್ವಾಗತಿಸಿದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry