ಮಂಗಳವಾರ, ನವೆಂಬರ್ 12, 2019
28 °C
ಜಿಲ್ಲೆಯಲ್ಲಿ ಶೇ 7.89 ಮಂದಿಗೆ ಅಧಿಕ ರಕ್ತದೊತ್ತಡ

`ಉತ್ತಮ ಜೀವನ ಶೈಲಿ ರೂಢಿಸಿಕೊಳ್ಳಿ'

Published:
Updated:

ಉಡುಪಿ: `ರಕ್ತದೊತ್ತಡ ಹೆಚ್ಚಾಗಲು ಮನುಷ್ಯನ ಆಧುನಿಕ ಜೀವನ ಶೈಲಿ ಕಾರಣ' ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮಚಂದ್ರ ಬಾಯರಿ ಹೇಳಿದರು.ಕರ್ನಾಟಕ ರಾಜ್ಯದ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರ ಉಡುಪಿ ಜಿಲ್ಲಾ ಶಾಖೆಯ ವತಿಯಿಂದ ಭಾನು ವಾರ ನಗರದಲ್ಲಿ ಏರ್ಪಡಿಸಿದ್ದ ವಿಶ್ವ ಆರೋಗ್ಯ ದಿನಾಚರಣೆ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿಶ್ವ ಆರೋಗ್ಯ ದಿನಾಚರಣೆ `ರಕ್ತದೊತ್ತಡ ನಿಯಂತ್ರಿಸಿಕೊಳ್ಳಿ'ಎಂಬ ಈ ವರ್ಷದ ಧ್ಯೇಯವಾಕ್ಯದಂತೆ ಕಾಯಿಲೆಗಳ ನಿಯಂತ್ರಣಕ್ಕೆ ಮಾನವ ಜೀವನ ಶೈಲಿಯನ್ನು ಬದಲಾಯಿಸಿ ಕೊಳ್ಳುವುದು ಉತ್ತಮ. 30ವರ್ಷ ಮೀರಿದ ಪ್ರತಿಯೊಬ್ಬರಲ್ಲಿಯೂ ರಕ್ತದೊತ್ತಡ ಹೆಚ್ಚುತ್ತಿದೆ. ರಕ್ತದೊತ್ತಡ ನಿಯಂತ್ರಣಕ್ಕೆ ಉಪ್ಪಿನಂಶದ ಆಹಾರ ವನ್ನು ಕಡಿಮೆ ಮಾಡಿ ವ್ಯಾಯಾಮಕ್ಕೆ ಒತ್ತು ನೀಡಬೇಕು ಎಂದರು.2008ರ ವರದಿಯಂತೆ ಏಷ್ಯಾದಲ್ಲಿ 1.5ಮಿಲಿಯನ್ ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ದೇಶದಲ್ಲಿ ಇದರ ಪ್ರಮಾಣ ಶೇ 20ರಷ್ಟಿದ್ದು, ಜಿಲ್ಲೆಯಲ್ಲಿ 7.89 ಶೇಕಡ ಆಗಿದೆ. ರಕ್ತದೊತ್ತಡದಿಂದ ಹೃದಯ, ಕಿಡ್ನಿ ಸಂಬಂಧಿಸಿದ ಕಾಯಿಲೆಗಳ ಕೊತೆಗೆ ಮೆದುಳಿನ ರಕ್ತಸ್ರಾವ, ಪಾರ್ಶ್ವವಾಯು ಕಾಯಿಲೆಗೂ ತುತ್ತಾಗಬಹುದು. ಕಾಯಿಲೆ ನಿಯಂತ್ರಣಕ್ಕೆ ಹೆಚ್ಚಾಗಿ ಹಣ್ಣು, ತರಕಾರಿ ಸೇವನೆ ಮಾಡಿದರೆ ಉತ್ತಮ ಎಂದು ಅವರು ಮಾಹಿತಿ ನೀಡಿದರು.ಉಡುಪಿ ಜಿಲ್ಲೆಯಲ್ಲಿ 2011- 12ರಲ್ಲಿ 132 ಶಿಶುಗಳು ಮರಣ ಹೊಂದುವ ಮೂಲಕ 8.20 ಶೇಕಡಾ ದಾಖಲಾಗಿತ್ತು. 2012-13ನೆ ಸಾಲಿನಲ್ಲಿ 107 ಶಿಶುಗಳು ಸಾವನ್ನಪ್ಪುವ ಮೂಲಕ ಅದರ ಪ್ರಮಾಣ 6.88 ಶೇಕಡಾಗೆ ಇಳಿದಿದೆ ಎಂದು ಅವರು ಹೇಳಿದರು.ರಾಜ್ಯದ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರ ಸಂಘದ ಅಧ್ಯಕ್ಷ ಉಡುಪಿ ಜಿಲ್ಲಾ ಅಧ್ಯಕ್ಷ ಆನಂದ ಗೌಡ ಅಧ್ಯಕ್ಷತೆ ವಹಿಸಿದ್ದರು.

ಕರ್ನಾಟಕ ರಾಜ್ಯದ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರ ಕೇಂದ್ರ ಸಂಘದ ಅಧ್ಯಕ್ಷ ಬಿ.ಎಚ್ ಗಂಗಯ್ಯ, ಬಳ್ಳಾರಿ ಜಿಲ್ಲಾ ಅಧ್ಯಕ್ಷ ತಿಮ್ಮಪ್ಪ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ  ಸುಬ್ರಹ್ಮಣ್ಯ ಶೇರಿಗಾರ್,ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸತ್ಯನಾರಾಯಣ,  ತಾಲ್ಲೂಕು ಆರೋಗ್ಯ ಅಧಿಕಾರಿಗಳಾದ ಕುಂದಾಪುರದ ಡಾ.ರಾಮ ರಾವ್, ಉಡುಪಿಯ ಡಾ.ನಾಗರತ್ನ, ಕಾರ್ಕಳದ ಡಾ.ಕೃಷ್ಣಾನಂದ ಉಪಸ್ಥಿತರಿದ್ದರು. ಶ್ರೀಧರ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರು.

ಪ್ರತಿಕ್ರಿಯಿಸಿ (+)