ಶುಕ್ರವಾರ, ಜೂನ್ 25, 2021
29 °C

ಉತ್ತಮ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತಮ ಬಸ್ಸುಗಳ ಸಂಚಾರಕ್ಕೆ ಅನುವು ಮಾಡಿಕೊಡಿ

ನಿಸರ್ಗ ಬಡಾವಣೆಯಿಂದ ಕೃಷ್ಣರಾಜ ಮಾರುಕಟ್ಟೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ಸು (ಕೆಎ-01-ಎಫ್ 1411 ನೋಂದಣಿ ಸಂಖ್ಯೆಯ) ಸಂಚರಿಸುತ್ತದೆ.ನಿಸರ್ಗ ಬಡಾವಣೆ, ಕೊಪ್ಪಗೇಟ್, ಬನ್ನೇರುಘಟ್ಟ, ಬನ್ನೇರುಘಟ್ಟ ಮುಖ್ಯ ರಸ್ತೆಯ ಮೂಲಕ ಡೈರಿ ಸರ್ಕಲ್, ನಿಮ್ಹಾನ್ಸ್, ಲಕ್ಕಸಂದ್ರ, ವಿಲ್ಸನ್ ಗಾರ್ಡನ್, ಲಾಲ್‌ಬಾಗ್ ಮುಖ್ಯ ದ್ವಾರ, ಮಿನರ್ವ ಸರ್ಕಲ್‌ನಿಂದ ಕೃಷ್ಣರಾಜ ಮಾರುಕಟ್ಟೆ; ಇದು ಈ ಬಸ್ಸು ಸಂಚರಿಸುವ ಮಾರ್ಗ. ಮಾರ್ಗದಲ್ಲಿ ವಾಹನದಟ್ಟಣೆಯ ಬಗ್ಗೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೂ ಗೊತ್ತಿರದ ವಿಷಯವೇನಲ್ಲ. ಈ ಮಾರ್ಗವಾಗಿ ಸಂಚರಿಸುವ ಬಸ್ಸುಗಳು ತುಂಬಾ ಹಳೆಯದಾಗಿವೆ.

ಒಮ್ಮೆ ಚಾಲಕರು ಪ್ರಯಾಸದಿಂದ ಗೇರ್ ಬದಲಿಸಲು ಪ್ರಯತ್ನಿಸಿದಾಗ ಗೇರ್ ಲಿವರ್‌ನ ಬೋಲ್ಟ್ ಕಳಚಿ, ಜಯದೇವ ನಿಲ್ದಾಣದ ಬಳಿ ಬಸ್ ಕೆಟ್ಟು ನಿಂತಿತು.ರಾಷ್ಟ್ರದಲ್ಲಿ ಅತ್ಯುತ್ತಮ ಸಾರಿಗೆ ವ್ಯವಸ್ಥೆಯೆಂದು ಹೆಮ್ಮೆಯಿಂದ ಬೀಗುವ ಸಂಸ್ಥೆ ಇಂಥ ಬಸ್ಸುಗಳಿಗೆ ವಿರಾಮ ನೀಡಬಾರದೇ? ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಪ್ರತಿಷ್ಠಿತ ಬಡಾವಣೆಗಳಿಗೆ ಮಾತ್ರ ಉತ್ತಮ ಬಸ್ಸುಗಳು ಸಂಚರಿಸುತ್ತವೆ. ಮಧ್ಯಮ ವರ್ಗದವರು, ಕಾರ್ಮಿಕರು ಸಂಚರಿಸುವ ಮಾರ್ಗಗಳಲ್ಲಿ ಇಂತಹ ಬಸ್ಸುಗಳು ಸಂಚರಿಸುತ್ತವೆ. ಐಶಾರಾಮಿ ಬಸ್ಸುಗಳನ್ನು ನೀಡದಿದ್ದರೂ ಆರಾಮದಾಯಕ ಬಸ್ಸುಗಳನ್ನು ನಿರೀಕ್ಷಿಸಬಹುದೆ? 

- ಎಸ್.ಎಚ್. ಕರಣಿಕ್ಹೊಸ ಬಸ್ ಬರಲಿ


ಹೊಸ ಕೆಂಪು ಬಣ್ಣದ ಬಸ್ಸುಗಳು ಎಲ್ಲ ಕಡೆ ಸಂಚರಿಸುತ್ತಿದೆ. ಆದರೆ ಕತ್ರಿಗುಪ್ಪೆ ಹಾಗೂ ಚನ್ನಮ್ಮಕೆರೆ ಅಚ್ಚುಕಟ್ಟು ನಿವಾಸಿಗಳಿಗೆ ಈ ಹೊಸ ಬಸ್‌ಗಳಲ್ಲಿ ಸಂಚರಿಸುವ ಅವಕಾಶ ಇನ್ನೂ ಸಿಕ್ಕಿಲ್ಲ.ಇಲ್ಲಿಂದ ಆಚರಣೆ ಆಗುತ್ತಿರುವ ಮಾರ್ಗಸಂಖ್ಯೆ 45ರ ಸಂಖ್ಯೆಯ ಬಸ್ಸುಗಳು ತುಂಬಾ ಹಳೆಯದಾಗಿದ್ದು ಸಂಖ್ಯಾಫಲಕ ಕಾಣದಷ್ಟು ಹಳತಾಗಿವೆ. (45, ಎ, ಬಿ, ಸಿ, ಡಿ, ಇ, ಎಫ್, ಜಿ) ಓಬಿರಾಯನ ಕಾಲದ ಈ ಬಸ್ಸುಗಳನ್ನು ಬದಲಿಸಿ ಕೆಂಪು ಬಣ್ಣದ ಬಸ್ಸುಗಳನ್ನು ಈ ವಿಭಾಗದ ಪ್ರಯಾಣಿಕರಿಗೂ ಸೌಲಭ್ಯ ಒದಗಿಸಲಿ ಅಂತ ಕೋರುತ್ತೇನೆ. 

 -ಬಿ.ಎಸ್. ರಮೇಶ್ಸಮಯ ಪಾಲಿಸಲಿ

ಬಸವನಗುಡಿ ವಿಧಾನಸಭಾ ಕ್ಷೇತ್ರದಿಂದ ಶಿವಾಜಿನಗರಕ್ಕೆ ಶ್ರಿನಗರ, ಗಿರಿನಗರ, ವಿವೇಕಾನಂದನಗರ, ಭುವನೇಶ್ವರನಗರದಿಂದ ಬಸ್‌ಗಳು ಸಂಚರಿಸುತ್ತವೆ. ಆದರೆ ಬೆಳಿಗ್ಗೆ 12 ರಿಂದ 3 ಗಂಟೆವರೆಗೂ ಸಮಯಕ್ಕೆ ಸರಿಯಾಗಿ ಸಂಚರಿಸುತ್ತಿಲ್ಲ.ಇದರಿಂದ ಹನುಮಂತನಗರ, ಆಶ್ರಮ, ನಾರ್ತ್ ರೋಡ್ ಬಸ್ ನಿಲ್ದಾಣದಿಂದ ಶಿವಾಜಿನಗರಕ್ಕೆ ತೆರಳಲು ತೊಂದರೆಯಾಗುತ್ತಿದೆ. ಪ್ರಯಾಣಿಕರಿಗೆ ಶಿವಾಜಿನಗರಕ್ಕೆ ಹೋಗಲು ಬೆಳಿಗ್ಗೆಯಿಂದ ರಾತ್ರಿಯವರೆಗೂ ಬಸ್‌ಗಳು ಸಮಯಕ್ಕನುಸಾರವಾಗಿ ಸಂಚರಿಸುವಂತೆ ಬಿಎಂಟಿಸಿ ಕ್ರಮಕೈಗೊಳ್ಳಲಿ.

-ಆರ್. ರಂಗರಾಮರಸ್ತೆ, ಒಳಚರಂಡಿ ಸರಿಪಡಿಸಿ

ಬನ್ನೇರುಘಟ್ಟ ರಸ್ತೆಯ ಮೀನಾಕ್ಷಿ ದೇವಸ್ಥಾನದಿಂದ ದೊಡ್ಡಕಮ್ಮನಹಳ್ಳಿಯ ಕಡೆಗೆ ಹೋಗುವ ರಸ್ತೆ ಹದಗೆಟ್ಟಿದ್ದು ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆಯಾಗಿದೆ.

ಆರು ತಿಂಗಳಿಗೊಮ್ಮೆ ತೇಪೆ ಹಚ್ಚುವ ಕಾರ್ಯ ನಡೆಯುತ್ತಿದೆಯಾದರೂ, ತಾತ್ಕಾಲಿಕವಾಗಿ ಸರಿಯಾಗಿದ್ದು ಮತ್ತೆ ಅದೇ ಹಳೆ ಸಮಸ್ಯೆ ತಲೆದೋರುತ್ತಿರುತ್ತದೆ.

 

ಜೊತೆಗೆ ರಸ್ತೆ ಮೋರಿಯ ವ್ಯವಸ್ಥೆ ಇಲ್ಲಿ ಅಸಮರ್ಪಕವಾಗಿದ್ದು, ಚರಂಡಿಯ ನೀರೆಲ್ಲಾ ರಸ್ತೆಯ ಮೇಲೆ ಹರಿಯುತ್ತದೆ.ಇದಕ್ಕೆ ಸಂಬಂಧ ಪಟ್ಟವರು ಕೂಡಲೇ ಒಳ-ಚರಂಡಿ ಹಾಗೂ ರಸ್ತೆಯ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಾಗಿ ವಿನಂತಿ.

- ಗಿರಿ ಪ್ರಸಾದ್, ದೊಡ್ಡಕಮ್ಮನಹಳ್ಳಿ,

ಬಿ.ಎಸ್.ಎನ್.ಎಲ್. ಬೇಜವಾಬ್ದಾರಿ

ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಅರಸಿನಕುಂಟೆಯಲ್ಲಿ ವಾಸವಾಗಿರುವ ನಾನು ಬಿ.ಎಸ್.ಎನ್.ಎಲ್.ನ 7722502 (ಮೊದಲಿಗೆ) ಸಂಪರ್ಕ ಪಡೆದಿದ್ದೆ. ಅದಕ್ಕೆ ಇ.ಸಿ.ಎಸ್. ಸೌಲಭ್ಯವನ್ನೂ ಪಡೆದುಕೊಂಡಿದ್ದೆ. ರಾಷ್ಟ್ರೀಯ ಹೆದ್ದಾರಿಯ ವಿಸ್ತಾರಗೊಳಿಸುವ ಸಂದರ್ಭ ಕೇಬಲ್ ಸಂಪರ್ಕ ವಿಫಲವಾಯಿತು. ಕಾರಣ 7722502 ಸಂಪರ್ಕ ನಿಲುಗಡೆಯಾಯಿತು.

 

ಆದರೂ ಇ.ಸಿ.ಎಸ್. ಮೂಲಕ ಹಣ ಪಾವತಿ ಆಗುತ್ತಿತ್ತು. ಮತ್ತೆ ಮತ್ತೆ ಮನವಿ ಮಾಡಿಕೊಂಡ ನಂತರ 7722502 ಬದಲಿಗೆ ಡಬ್ಲ್ಯೂ.ಎಲ್.ಎಲ್. 7101250 ಸಂಪರ್ಕ ನೀಡಲಾಯಿತು. ಇದಕ್ಕೆ ಉಪಯೋಗಕ್ಕೆ ಬಾರದ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಪಡೆದಿದ್ದೇನೆ. 7722502 ಇ.ಸಿ.ಎಸ್. ಸೌಲಭ್ಯವೇ ಅದಕ್ಕೂ ಮುಂದುವರಿಯಿತು.ಜನವರಿ 2011ರ ನಂತರ ನಾನು ತಿಳಿಸದಿದ್ದರೂ ಇಲಾಖೆಯವರೇ ಇ.ಸಿ.ಎಸ್. ಸೌಲಭ್ಯವನ್ನು ಬಳಸಿಕೊಳ್ಳಲಿಲ್ಲ. ಡಬ್ಲ್ಯು.ಎಲ್.ಎಲ್. ಸಂಪರ್ಕವು ಮೊಬೈಲ್ ವರ್ಗಕ್ಕೆ ಸೇರುವುದರಿಂದ ಇ.ಸಿ.ಎಸ್. ಸೌಲಭ್ಯಕ್ಕೆ ಅವಕಾಶವಿಲ್ಲ ಎಂದು ತಿಳಿಯಿತು.

 

ನನಗೆ ಯಾವ ಸೂಚನೆಯನ್ನೂ ನೀಡದೆ ಸೌಲಭ್ಯವನ್ನು ನಿರಾಕರಿಸಿದ ಇಲಾಖೆಯು ರೂ. 417ರ ಬಾಕಿಗಾಗಿ ಇ.ಸಿ.ಎಸ್. ಡಿಸ್‌ಹಾನರ್ ಆಗಿದೆ ಎಂದು ಕಳುಹಿಸಿರುವ ಪತ್ರ ನನಗೆ 17-3-2012 ರಂದು ತಲುಪಿದೆ. ಇ.ಸಿ.ಎಸ್. ಸೌಲಭ್ಯ ತಪ್ಪಿದ ನಂತರ ನಾನೇ ವಿಚಾರಿಸಿ (ಬಿಲ್ ಕಳುಹಿಸುವ ಅಥವಾ ತಿಳಿಸುವ ವ್ಯವಸ್ಥೆಯೂ ನಿಲುಗಡೆ ಆಗಿದೆ) ಈವರೆಗೆ ಪೀಣ್ಯ ಸೇವಾ ಕೇಂದ್ರದಲ್ಲಿ ಹಣ ಪಾವತಿಸುತ್ತಾ ಬಂದಿದ್ದೇನೆ.ಕೇಬಲ್ ಸಂಪರ್ಕ ಸರಿಪಡಿಸಿ, ಲ್ಯಾಂಡ್‌ಲೈನ್ ಸಂಪರ್ಕ ನೀಡಲು ಅಸಮರ್ಥವಾಗಿರುವ, ಇ.ಸಿ.ಎಸ್. ಸೌಲಭ್ಯ ಬಳಸಿಕೊಳ್ಳದ, ಬಿಲ್ ಕಳಿಸುವ ಸೌಜನ್ಯವೂ ಇಲ್ಲದ, ಈಗ ಡಿಸ್‌ಹಾನರ್, ಸಂಪರ್ಕ ನಿಲುಗಡೆ, ಕಾನೂನು ಕ್ರಮ ಇತ್ಯಾದಿ ಬೆದರಿಕೆ ಹಾಕಿರುವ, ಬಿ.ಎಸ್.ಎನ್.ಎಲ್.ನ ಬೇಜವಾಬ್ದಾರಿತನಕ್ಕೆ ಗ್ರಾಹಕರು ಹೊಣೆಗಾರರೆ?

 - ಡಾ. ಎಚ್. ಎಸ್. ಗೋಪಾಲರಾವ್ತ್ಯಾಗರಾಜನಗರಕ್ಕೆ ಹೆಚ್ಚು ಬಸ್ಸು ಬೇಕು

ಮೆಜೆಸ್ಟಿಕ್ ಹಾಗೂ ಮಾರ್ಕೆಟ್ ಕಡೆಯಿಂದ ತ್ಯಾಗರಾಜನಗರ ಮೂಲಕ ಓಡಾಡುತ್ತಿದ್ದ 210 ಪಿ, 210 ಎನ್, 210 ಎನ್‌ಎ, ಈ ಮಾರ್ಗದ ಬಸ್ಸುಗಳು ಈಗ 6-7 ತಿಂಗಳುಗಳಿಂದ ನರಸಿಂಹರಾಜ ಕಾಲೋನಿ, ತ್ಯಾಗರಾಜನಗರಕ್ಕೆ ಬರುತ್ತಿಲ್ಲ.ಈ ಎಲ್ಲ ಬಸ್ಸುಗಳು ಮಾರ್ಕೆಟ್‌ನಿಂದ ಕೆ. ಆರ್. ರಸ್ತೆ ಮೂಲಕ ಹೋಗುತ್ತಿರುತ್ತದೆ. ಆದುದರಿಂದ ತ್ಯಾಗರಾಜನಗರದ ನಿವಾಸಿಗಳು, ಶಾಲೆಗೆ ಹೋಗಿ ಬರುವ ಸಣ್ಣ - ಸಣ್ಣ ಮಕ್ಕಳಿಗೂ, ಆಸ್ಪತ್ರೆಗಳಿಗೆ ಹೋಗಿ ಬರುವ ವೃದ್ಧರಿಗೂ - ಗರ್ಭಿಣಿ ಹೆಂಗಸರಿಗೂ, ದೂರದ ಊರುಗಳಿಂದ ಬರುವ ನೆಂಟರಿಷ್ಟರಿಗೂ, ತ್ಯಾಗರಾಜ ನಗರದಲ್ಲಿರುವ ಮನೆಗಳನ್ನು ತಲುಪಲು ಬಹಳ ತೊಂದರೆ ಅನುಭವಿಸುತ್ತಿದ್ದಾರೆ.31 ಇ ಮಾರ್ಗದ ಬಸ್ಸು ಒಂದೇ ಒಂದು ಇದ್ದು ಸರಿಯಾದ ಸಮಯಕ್ಕೆ ಮನೆ ತುಲುಪಲು ಆಗುತ್ತಿಲ್ಲ.  ಬೆಂ.ಮ.ಸಾ.ಸಂಸ್ಥೆಯ ಅಧಿಕಾರಿಗಳಿಗೆ ಬಹಳಷ್ಟು ಸಲ ಅರ್ಜಿಸಲ್ಲಿಸಿದರೂ ಪ್ರಯೋಜನವಾಗಿರುವುದಿಲ್ಲ. ಸಂಬಂಧಪಟಟ್ಟ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಇತ್ತ ಗಮನ ಹರಿಸಿ, ಈ ಹಿಂದೆ ಇದ್ದಂತೆ ಎಲ್ಲ ಬಸ್ಸುಗಳನ್ನು (210 ಎನ್, 210 ಪಿ, 210 ಎನ್‌ಎ, 31 ಇ) ಓಡಾಡುವ ವ್ಯವಸ್ಥೆ ಮಾಡಿ. ಈ ಬವಣೆಯಿಂದ ಮುಕ್ತಿ ಕೊಡಿ ಹಾಗೂ 31 ಇ ಮಾರ್ಗದ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಮನವಿ.

 - ಸೌಮ್ಯ ಜಿ. ಕೃಷ್ಣಪುಂಡರ ಕಾಟ ತಪ್ಪಿಸಿ

ಬಾಪೂಜಿನಗರ ವಾರ್ಡ್ ನಂ. 134ರ ಮುನೇಶ್ವರ ದೇವಸ್ಥಾನದ ಹಿಂಭಾಗದಲ್ಲಿರುವ ರಸ್ತೆಯ ಪಕ್ಕದಲ್ಲಿ ರೈಲ್ವೆ ಇಲಾಖೆಯಿಂದ ಯಾರೂ ಒಳಗಡೆ ಬರಬಾರದೆಂದು ದೊಡ್ಡದಾಗಿ ಗೋಡೆ ನಿರ್ಮಿಸಲಾಗಿದೆ. ಆ ಗೋಡೆ ಮೇಲೆ ಪುಂಡರು ಕುಳಿತು ರಸ್ತೆಯಲ್ಲಿ ಓಡಾಡುವ ಮಹಿಳೆಯರನ್ನು ಚುಡಾಯಿಸುತ್ತಾರೆ. ಗಾಂಜಾ, ಸಿಗರೇಟು ಸೇದುತ್ತ ಕಾಲಹರಣ ಮಾಡುತ್ತಾರೆ. ಆದ್ದರಿಂದ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ವಿನಂತಿಸಲಾಗಿದೆ. ಸಂಬಂಧಪಟ್ಟ ಇಲಾಖೆ ಈ ಗೋಡೆ ಹತ್ತಲು ಅನುಕೂಲವಾಗುವಂತೆ ಇರುವ ಮಣ್ಣನ್ನು ತೆಗೆದು ಹಾಕುವರೆ? ಗೋಡೆ ಹತ್ತಲಾಗದಿದ್ದರೂ ಈ ಪುಂಡರು ಇಲ್ಲಿ ಕೂರುವುದು ತಪ್ಪುತ್ತದೆ. ಕೂಡಲೇ ಕ್ರಮಕೈಗೊಳ್ಳಲು ಕೋರಿಕೆ.

 - ಮಂಜುನಾಥ ಬಿ.ಬಸ್ ಸಂಪರ್ಕಗಳನ್ನು ಸುಧಾರಿಸಿ

ಮಾರತಹಳ್ಳಿ ಹತ್ತಿರ ಇರುವ ದೊಡ್ಡನೆಕ್ಕುಂದಿಯಲ್ಲಿ ವಾಸಿಸುತ್ತಿರುವ ನಾನು ಶಿವಾಜಿನಗರದ ಬಳಿ ಕಾಲೇಜ್‌ಗೆ ಹೋಗುತ್ತೇನೆ. ಈ ಸ್ಥಳದಿಂದ ಶಿವಾಜಿನಗರಕ್ಕೆ ನೇರ ಬಸ್ ಸೌಲಭ್ಯ ಇಲ್ಲ. ಬೇರೆ ಬಸ್‌ಗೆ ಹೋಗಲು ಸಮಯಕ್ಕೆ ಸರಿಯಾಗಿ ಬಸ್‌ಗಳು ಬರುವುದಿಲ್ಲ. ಪ್ರತಿ ಅರ್ಧಗಂಟೆಗೆ ಒಂದರಂತೆ ಬಸ್ ಬರುತ್ತವೆ.ಆ ಬಸ್‌ಗೆ ಬಂದು ಎಚ್‌ಎಎಲ್‌ನಲ್ಲಿ  ಶಿವಾಜಿನಗರದ ಕಡೆ ಹೋಗು ಬಸ್‌ಗಾಗಿ ಮತ್ತೆ ಕಾಯಬೇಕು. ಶಿವಾಜಿನಗರ ಬಸ್ ಬಂದರೂ ಸಹ ಯಾವಾಗಲೂ ತುಂಬಿಕೊಂಡೇ ಇರುತ್ತದೆ. ನಿಂತುಕೊಳ್ಳುವುದಕ್ಕೂ ಜಾಗ ಇರುವುದಿಲ್ಲ.   ಸಮಸ್ಯೆ ನಿವಾರಿಸಲು ಬಸ್ಸುಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಿ. ಜೊತೆಗೆ ದೊಡ್ಡನೆಕ್ಕುಂದಿಯಿಂದ ಶಿವಾಜಿನಗರಕ್ಕೆ ನೇರ ಬಸ್ ಸೌಲಭ್ಯ ಕಲ್ಪಿಸಿ.

 -ಲಕ್ಷ್ಮಿ

 

ಅಂಚೆ ಪೆಟ್ಟಿಗೆ ಅಳವಡಿಸಿ

ಬಿ.ಬಿ.ಎಂ.ಪಿ. ವ್ಯಾಪ್ತಿಯ ಜಂಬೂಸವಾರಿ ದಿಣ್ಣೆ, ವೆಂಕಟೇಶ್ವರ ಲೇ ಔಟ್, ಬಿ.ಡಿ.ಎ. ಲೇ ಔಟ್ ಬಡಾವಣೆಗಳಿಗೆ ಸಮೀಪದಲ್ಲಿ ಅಂಚೆ ಪೆಟ್ಟಿಗೆ ಇಲ್ಲದೇ ಅನಾನುಕೂಲವಾಗಿದೆ. ಪುಟ್ಟೇನಹಳ್ಳಿ ಉಪ ಅಂಚೆ ಕಚೇರಿ ಇಲ್ಲವೇ ಮೀನಾಕ್ಷಿ ದೇವಾಲಯದ ಮುಂಭಾಗವಿರುವ ಅಂಚೆ ಪೆಟ್ಟಿಗೆಯನ್ನು ಅವಲಂಬಿಸಬೇಕಾಗಿದೆ. ಸಾರ್ವಜನಿಕರ ಅನುಕೂಲಕ್ಕೆ ಅಂಚೆ ಇಲಾಖೆಯ ಅಧಿಕಾರಿಗಳು ಸೂಕ್ತ ಸ್ಥಳದಲ್ಲಿ ಒಂದೆರಡು ಅಂಚೆ ಪೆಟ್ಟಿಗೆಯನ್ನು ಅಳವಡಿಸಲು ಮನವಿ.

- ವಿ. ಹೇಮಂತಕುಮಾರ್ಅಂಚೆ ಕಚೇರಿ ಬೇಕು

ಕತ್ರಿಗುಪ್ಪೆಯ (ಬನಶಂಕರಿ) ಭುವನೇಶ್ವರಿ ನಗರದಲ್ಲಿ ವೃತ್ತಿನಿರತ ಲೇಖಕರು/ ಬರಹಗಾರರು/ ಪತ್ರಕರ್ತರು ಹಾಗೂ ಸಾಹಿತ್ಯಾಸಕ್ತರು ಇರುವ ಬಡಾವಣೆ. ಇಲ್ಲಿ ಎಲ್ಲ ಮೂಲ ಸೌಕರ್ಯವೂ ಇದೆ. ಆದರೆ ಇಲ್ಲಿಗೆ ಒಂದು ಅಂಚೆ ಕಚೇರಿ ಬೇಕು ಎಂಬ ನಮ್ಮ ಬಹುದಿನಗಳ (ವರ್ಷ) ಕೋರಿಕೆ ಈವರೆಗೆ ಈಡೇರಿಲ್ಲ.

 

ಪತ್ರಗಳನ್ನು ಕೊಳ್ಳಬೇಕಾದರೆ ಹಾಗೂ ಪೋಸ್ಟ್  ಮಾಡಲು ಸುಮಾರು 2 ಕಿ.ಮೀ. ದೂರದ ಹೊಸಕೆರೆಹಳ್ಳಿ ಅಥವಾ ಕತ್ರಿಗುಪ್ಪೆ ಅಂಚೆ ಕಚೇರಿಗೆ ಹೋಗಬೇಕು. ಈಗ ಸರ್ಕಾರ ನೀಡುತ್ತಿರುವ ವೃದ್ಧರ/ ಮಹಿಳೆಯರ ಪಿಂಚಣಿ ಹಣ (ಸಂಧ್ಯಾ ಸುರಕ್ಷ) ಪಡೆಯಬೇಕಾದರೆ ಹೊಸಕೆರೆಹಳ್ಳಿ ಅಂಚೆಕಚೇರಿಗೆ ಹೋಗಬೇಕು.

 

ವೃದ್ಧರಿಗೆ, ಮಹಿಳೆಯರಿಗೆ ಅಷ್ಟು ದೂರ ನಡೆಯಲು ಸಾಧ್ಯವೇ? ಇವೆಲ್ಲಾ ತೊಂದರೆಗಳನ್ನು ಪರಿಗಣಿಸಿ ಪ್ರಧಾನ ಅಂಚೆ ಕಚೇರಿಯ ವಕ್ತಾರರು ಈ ಕೂಡಲೇ ಭುವನೇಶ್ವರಿ ನಗರದಲ್ಲಿ ಅಂಚೆಕಚೇರಿ ತೆರೆಯುವ ವ್ಯವಸ್ಥೆ ಮಾಡುವರೆ?  

 - ಬಿ. ಎಸ್. ರಮೇಶ್

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.